ETV Bharat / state

ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮರೀಚಿಕೆ ಆರೋಪ; ಅಧೀಕ್ಷಕರು ಹೇಳಿದ್ದೇನು?

author img

By ETV Bharat Karnataka Team

Published : Feb 19, 2024, 10:48 PM IST

Paramesh injured in the accident
ಅಪಘಾತದಲ್ಲಿ ಗಾಯಗೊಂಡ ಪರಮೇಶ್, ಆತನ ಸಂಬಂಧಿಕರು

ದಾವಣಗೆರೆ ಚಿಗಟೇರಿ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸೌಲಭ್ಯ ಇದ್ದರೂ ರೋಗಿಗೆ ಚಿಕಿತ್ಸೆ ಒದಗಿಸುವ ಬದಲು ಇಲ್ಲಿನ ವೈದ್ಯರು ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ ಎಂಬ ಆರೋಪವನ್ನು ರೋಗಿ ಸಂಬಂಧಿಕರು ಮಾಡಿದ್ದಾರೆ. ಇದಕ್ಕೆ ಜಿಲ್ಲಾಸ್ಪತ್ರೆಯ ಅಧೀಕ್ಷಕರು ಸ್ಪಷ್ಟನೆ ನೀಡಿದ್ದಾರೆ.

ದಾವಣಗೆರೆ: ನಗರದ ಚಿಗಟೇರಿ ಜಿಲ್ಲಾಸ್ಪತ್ರೆಗೆ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ಜನರು ನಾನಾ ಚಿಕಿತ್ಸೆಗೆ ಹೆಚ್ಚಾಗಿ ಆಗಮಿಸುತ್ತಾರೆ. ಆದರೆ ಈ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸೌಲಭ್ಯ ಇದ್ದರೂ ರೋಗಿಗೆ ಚಿಕಿತ್ಸೆ ಒದಗಿಸುವ ಬದಲು ಇಲ್ಲಿನ ವೈದ್ಯರು ಖಾಸಗಿ ಆಸ್ಪತ್ರೆಗೆ ಹೋಗುವಂತೆ ಹೇಳಿರುವ ಆರೋಪ ಕೇಳಿಬಂದಿದೆ.

ಘಟನೆ ಏನೂ? ಪಕ್ಕದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಿಕ್ಕಹರಹಳ್ಳಿ ಗ್ರಾಮದ ಪರಮೇಶ್ ಲಂಬಾಣಿ, ಚಂದ್ರಪ್ಪ ಎಂಬುವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೂ ತೀವ್ರ ಗಾಯಗಳಾಗಿದ್ದವು. ಚಿಕಿತ್ಸೆಗಾಗಿ ತಕ್ಷಣ ಆ ಇಬ್ಬರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಇವರಿಬ್ಬರಲ್ಲಿ ಕಾಲಿನ ಮಂಡಿಚಿಪ್ಪಿಗೆ ತೀವ್ರ ಪೆಟ್ಟಾಗಿದ್ದ ಪರಮೇಶ್ ಅವರನ್ನು ಮೂಳೆ ಶಸ್ತ್ರ ಚಿಕಿತ್ಸೆ ಘಟಕಕ್ಕೆ ದಾಖಲಿಸಲಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಮೂಳೆ ಶಸ್ತ್ರಚಿಕಿತ್ಸೆ ಮಾಡುವ ಸೌಲಭ್ಯ ಇದ್ರು ಕೂಡ ಇದ್ದಕ್ಕಿದ್ದಂತೆ ಗಾಯಾಳು ಪರಮೇಶ್​ಗೆ ಇಲ್ಲಿ ಸೌಲಭ್ಯ ಇಲ್ಲ. ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸರ್ಕಾರಿ ವೈದ್ಯರು ಸಲಹೆ ನೀಡಿದರು. ರೋಗಿಯ ಸಂಬಂಧಿಕರು ದೂರಿದ್ದಾರೆ. ಅಲ್ಲದೆ, ತಾವು ಮಂಗಳೂರಿಗೆ ಹೋಗುತ್ತೇವೆ ಎಂದು ಹೇಳಿದಾಗ ರೆಫರ್ ವರದಿಯಲ್ಲಿ DAMA ಎಂದು ಬರೆದು ಡಿಸ್ಚಾರ್ಜ್ ಮಾಡಿದ್ದರು ಎಂದು ದೂರಿದ್ದಾರೆ.

ಮಂಗಳೂರು ಆಸ್ಪತ್ರೆಯಲ್ಲೂ ದಾಖಲು ಮಾಡಿಕೊಳ್ಳಲು ಹಿಂದೇಟು: ಡಿಸ್ಚಾರ್ಜ್ ಕಾರ್ಡ್​ನಲ್ಲಿ (DISCHARGE AGAINST MEDICAL ADVISE ) ಡಾಮಾ ಅಂತ ಬರೆದಿದ್ದಕ್ಕೆ ಮಂಗಳೂರಿನ ಆಸ್ಪತ್ರೆಯಲ್ಲಿ ರೋಗಿಯನ್ನು ಅಡ್ಮಿಟ್ ಮಾಡಿಕೊಂಡಿಲ್ಲ. ಮತ್ತೆ ಗಾಯಾಳು ಪರಮೇಶ್​ರನ್ನು ಆತನ ಸಂಬಂಧಿಕರು ದಾವಣಗೆರೆ ಜಿಲ್ಲಾಸ್ಪತ್ರೆಗೆ ವಾಪಸ್​ ಕರೆತಂದಿದ್ದಾರೆ.

ಈ ವೇಳೆ ದಾವಣಗೆರೆ ಜಿಲ್ಲಾಸ್ಪತ್ರೆ ಅಧೀಕ್ಷಕರು ಆಗಮಿಸಿ, ಚಿಕಿತ್ಸೆ ನೀಡದೆ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಿದ್ದ ವೈದ್ಯರನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೊಮ್ಮೆ ತಪ್ಪು ಆಗದಂತೆ ಎಚ್ಚರ ವಹಿಸಿ, ರೋಗಿಗೆ ಇಲ್ಲಿಯೇ ಅಡ್ಮಿಟ್ ಮಾಡಿಕೊಂಡು ಆಪರೇಷನ್ ಮಾಡುವಂತೆ ಸೂಚನೆ ನೀಡಿದರು.

ರೋಗಿ ಸಂಬಂಧಿಕರಿಂದ ಆಕ್ರೋಶ: ರೋಗಿ ಸಂಬಂಧಿ ಸಂತೋಷ್ ಪ್ರತಿಕ್ರಿಯಿಸಿ, ''ಅಪಘಾತದಿಂದಾಗಿ ಪರಮೇಶ್ ಕಾಲಿನ ಚಿಪ್ಪು ಮುರಿದಿದೆ. ಅವರು ಬಡವರು, ಅವರಲ್ಲಿ ಹಣ ಇಲ್ಲವೆಂದರೂ, ಸರ್ಕಾರಿ ವೈದ್ಯರು ದಾವಣಗೆರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದರು. ಇದನ್ನು ಬಿಟ್ಟು ಚಿಕಿತ್ಸೆಗೆ ಹಣ ಕಡಿಮೆ ಆಗಬಹುದೆಂದು ಮಂಗಳೂರಿಗೆ ಕರೆದುಕೊಂಡು ಹೋಗಿದ್ದೆವು'' ಎಂದರು.

ದಾವಣಗೆರೆ ಸರ್ಕಾರಿ ವೈದ್ಯರು ರೆಫರ್ ಲೆಟರ್ ನಲ್ಲಿ ಡಿಸ್ಚಾರ್ಜ್ ಕಾರ್ಡ್ ನಲ್ಲಿ (DISCHARGE AGAINST MEDICAL ADVISE) ಡಾಮಾ ಅಂತ ಬರೆದಿದ್ದಕ್ಕೆ ಮಂಗಳೂರಿನ ಆಸ್ಪತ್ರೆ ಸೇರಿದಂತೆ ಯಾವ ಆಸ್ಪತ್ರೆಯಲ್ಲೂ ರೋಗಿಯನ್ನು ಅಡ್ಮಿಟ್ ಮಾಡಿಕೊಳ್ಳಲಿಲ್ಲ. ಅಲ್ಲಿಂದ ಮತ್ತೆ ದಾವಣಗೆರೆ ಜಿಲ್ಲಾಸ್ಪತ್ರೆ ವಾಪಸ್​ ಬಂದೆವು, ಇಲ್ಲಿ ಚಿಕಿತ್ಸೆ ನೀಡಲು ಎಲ್ಲ ಸೌಲಭ್ಯ ಇದ್ರು ವೈದ್ಯರು ಈ ರೀತಿ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಸ್ಪತ್ರೆ ಅಧೀಕ್ಷಕ ಡಿಎಸ್ ನಾಗೇಂದ್ರಪ್ಪ ಹೇಳಿದ್ದೇನು: ಜಿಲ್ಲಾಸ್ಪತ್ರೆ ಡಿಎಸ್ ನಾಗೇಂದ್ರಪ್ಪ ಅವರು ಮಾತನಾಡಿ, ರಾಣೆಬೆನ್ನೂರು ಮೂಲದ ಇಬ್ಬರು ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಹಾಗೂ ರೋಗಿಯ ಸಂಬಂಧಿಕರ ನಡುವೆ ಗೊಂದಲ ಆಗಿದೆ. ವೈದ್ಯರು ಡಾಮಾ ಎಂದು ಬರೆದಿದ್ದರಿಂದ ರೋಗಿಗೆ ಎಲ್ಲಿಯೂ ಚಿಕಿತ್ಸೆ ಸಿಗದೆ ಮತ್ತೆ ದಾವಣಗೆರೆ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಚಿಕಿತ್ಸೆ ನೀಡುವ ಸೌಲಭ್ಯ ಇದ್ದರೂ, ಇಲ್ಲಿನ ವೈದ್ಯರ ಹಾಗೂ ರೋಗಿ ಸಂಬಂಧಿಕರ ನಡುವೆ ಗೊಂದಲ ಉಂಟಾಗಿ ಈ ರೀತಿ ಆಗಿದೆ. ರೋಗಿಯನ್ನು ಮರು ದಾಖಲು ಮಾಡಿಕೊಂಡು ಶಸ್ತ್ರ ಚಿಕಿತ್ಸೆ ಮಾಡಿಸಲು ಸೂಚಿಸಿದ್ದೇನೆ. ಇನ್ನು ಖಾಸಗಿ ಆಸ್ಪತ್ರೆಗೆ ರೆಫರ್ ಮಾಡುವುದು ಗಮನಕ್ಕೆ ಬಂದಿದೆ. ಅವರಿಗೆ ಕರೆದು ಎಚ್ಚರಿಕೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಡಾಕ್ಟರ್ ಮೇಲಿನ ಹಲ್ಲೆ ಆರೋಪ: ಭಾರತೀಯ ವೈದ್ಯಕೀಯ ಸಂಘದಿಂದ ಪ್ರತಿಭಟನಾ ಜಾಥಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.