ETV Bharat / state

ಬೆಳಗಾವಿ ಡಾಕ್ಟರ್ ಮೇಲಿನ ಹಲ್ಲೆ ಆರೋಪ: ಭಾರತೀಯ ವೈದ್ಯಕೀಯ ಸಂಘದಿಂದ ಪ್ರತಿಭಟನಾ ಜಾಥಾ

author img

By ETV Bharat Karnataka Team

Published : Feb 19, 2024, 7:22 PM IST

Updated : Feb 19, 2024, 10:51 PM IST

ವೈದ್ಯನ ಮೇಲೆ ಕಾಂಗ್ರೆಸ್​ ಮುಖಂಡರೊಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿತು.

ಭಾರತೀಯ ವೈದ್ಯಕೀಯ ಸಂಘದಿಂದ ಪ್ರತಿಭಟನಾ ರ್ಯಾಲಿ
ಭಾರತೀಯ ವೈದ್ಯಕೀಯ ಸಂಘದಿಂದ ಪ್ರತಿಭಟನಾ ರ್ಯಾಲಿ

ಭಾರತೀಯ ವೈದ್ಯಕೀಯ ಸಂಘದಿಂದ ಪ್ರತಿಭಟನಾ ಜಾಥಾ

ಬೆಳಗಾವಿ: ಬೆಳಗಾವಿಯ ಸದಾಶಿವ ನಗರದಲ್ಲಿ ಇತ್ತೀಚೆಗೆ ಡಾ. ಪ್ರದೀಪ ಗೌಡರ ಎಂಬ ವೈದ್ಯರ ಮೇಲೆ ಕಾಂಗ್ರೆಸ್ ಮುಖಂಡ ಆರೀಫ್ ದೇಸಾಯಿ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದಿಂದ ನಗರ ಪೊಲೀಸ್ ಆಯುಕ್ತರ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.

ಡಾ. ಪ್ರದೀಪ ಗೌಡರ ಅವರ ಮನೆಯ ಮುಂದೆ ಕಾರ್ ಪಾರ್ಕಿಂಗ್ ಮಾಡುವ ವೇಳೆ ಕಾಂಗ್ರೆಸ್ ಮುಖಂಡ ಆರೀಫ್, ಅವರ ಮನೆಯ ಕುಟುಂಬಸ್ಥರ ಮುಂದೆಯೇ ಹಲ್ಲೆ ಮಾಡಿದ್ದಾರೆ‌. ಅಷ್ಟೇ ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಗೂಂಡಾವರ್ತನೆ ಪ್ರದರ್ಶಿಸಿದ್ದಾರೆ. ಪೊಲೀಸ್ ಠಾಣೆಗೆ ದೂರು ಕೊಡಲು ಹೋದರೂ ಪೊಲೀಸರು ಸರಿಯಾಗಿ ಸ್ಪಂದಿಸಲಿಲ್ಲ. ವೈದ್ಯರ ಮೇಲೆ ಈ ರೀತಿ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಪದೇ ಪದೇ ಇಂಥ ಘಟನೆಗಳು ಮರುಕಳಿಸುತ್ತವೆ. ಆದ್ದರಿಂದ ಹಲ್ಲೆ ಮಾಡಿದ ಆರೀಫ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಮಾಜದಲ್ಲಿ ಜನರ ಆರೋಗ್ಯ ಕಾಪಾಡುವ ವೈದ್ಯರ ಮೇಲೆ ಈ ರೀತಿ ಹಲ್ಲೆ ಖಂಡನೀಯ. ಘಟನೆಯಿಂದ ಎಲ್ಲ ವೈದ್ಯರು ಭೀತಿಗೊಂಡಿದ್ದಾರೆ. ಬೆಳಗಾವಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ವೈದ್ಯರು, ವೈದ್ಯ ವಿದ್ಯಾರ್ಥಿಗಳಿದ್ದಾರೆ. ಹಾಗಾಗಿ, ಆರೋಪಿ ಆರೀಫ್ ವಿರುದ್ಧ ಕಠಿಣ ಕ್ರಮ ಕೈಗೊಂಡು ವೈದ್ಯರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಡಿಸಿಪಿ ಪಿ.ವ್ಹಿ. ಸ್ನೇಹಾ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಡಾ. ಆರ್.ಬಿ. ಅನಗೋಳ ಮಾತನಾಡಿ, ಡಾ. ಪ್ರದೀಪ್ ಗೌಡರ ಮೇಲೆ ಹಲ್ಲೆ ಮಾಡಿರುವ ಆರೋಪಿ ಆರೀಫ್ ದೇಸಾಯಿಯನ್ನು ತಕ್ಷಣವೇ ಬಂಧಿಸಬೇಕು. ಘಟನೆಯಿಂದ ಎಲ್ಲ ವೈದ್ಯರು ಆತಂಕಿತರಾಗಿದ್ದಾರೆ ಎಂದು ತಿಳಿಸಿದರು. ಮನವಿ ಸ್ವೀಕರಿಸಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಸಿಪಿ ಪಿ.ವ್ಹಿ. ಸ್ನೇಹಾ, ಆದಷ್ಟು ಬೇಗ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಹಾಗೂ ಹೆಚ್ಚಿನ ಮಾಹಿತಿಯನ್ನು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮತ್ತು ಕಮಿಷನರ್ ಅವರು ಕೊಡುತ್ತಾರೆ. ಇದರ ಬಗ್ಗೆ ತನಿಖೆ ಮಾಡುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ಡಾ.ರವಿ ಪಾಟೀಲ, ಡಾ.ಸುಶಾರ್ತ ಕಾಮೋಜಿ, ಡಾ.ಸೋಮಶೇಖರ ಗುರನ್ನವರ, ಡಾ.ಮೀನಾ ಪಾಟೀಲ, ಡಾ. ರೂಪಾಲಿ ಸೇರಿದಂತೆ ಮತ್ತಿತರರು ಇದ್ದರು.

ಇದನ್ನೂ ಓದಿ: ಶಾಸಕರು, ಹಿಂದೂ ಮುಖಂಡರ ವಿರುದ್ಧ ಪ್ರಕರಣ ಖಂಡಿಸಿ ಪ್ರತಿಭಟನೆ; ವಿಎಚ್​ಪಿ, ಬಜರಂಗದಳ ಕಾರ್ಯಕರ್ತರು ಪೊಲೀಸ್ ವಶಕ್ಕೆ

Last Updated : Feb 19, 2024, 10:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.