ETV Bharat / state

ಶಾಸಕರು, ಹಿಂದೂ ಮುಖಂಡರ ವಿರುದ್ಧ ಪ್ರಕರಣ ಖಂಡಿಸಿ ಪ್ರತಿಭಟನೆ; ವಿಎಚ್​ಪಿ, ಬಜರಂಗದಳ ಕಾರ್ಯಕರ್ತರು ಪೊಲೀಸ್ ವಶಕ್ಕೆ

author img

By ETV Bharat Karnataka Team

Published : Feb 19, 2024, 3:55 PM IST

Updated : Feb 19, 2024, 4:41 PM IST

ಮಂಗಳೂರಿನಲ್ಲಿ ಶಾಸಕರು ಮತ್ತು ಹಿಂದೂ ಮುಖಂಡರ ಮೇಲಿನ ಪ್ರಕರಣ ಖಂಡಿಸಿ ವಿಶ್ವ ಹಿಂದೂ ಪರಿಷತ್​ ಮತ್ತು ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ವಿಎಚ್​ಪಿ, ಬಜರಂಗದಳದ ಕಾರ್ಯಕರ್ತರು ಪೊಲೀಸ್ ವಶಕ್ಕೆ
ವಿಎಚ್​ಪಿ, ಬಜರಂಗದಳದ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಹಿಂದೂ ಕಾರ್ಯಕರ್ತರ ಪ್ರತಿಭಟನೆ

ಮಂಗಳೂರು : ಜೆರೋಸಾ ಶಾಲೆಯಲ್ಲಿ ಧಾರ್ಮಿಕ ನಿಂದನೆಯ ಆರೋಪದ ನಂತರದ ಬೆಳವಣಿಗೆಯಲ್ಲಿ ಶಾಸಕರು, ಕಾರ್ಪೊರೇಟರ್​ಗಳು, ಹಿಂದೂ ಮುಖಂಡರುಗಳ ಮೇಲೆ ಸುಳ್ಳು ಕೇಸು ದಾಖಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ ವಿಶ್ವ ಹಿಂದೂ ಪರಿಷತ್​ ಮತ್ತು ​ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.

ಜೆರೋಸಾ ಶಾಲೆಯ ಶಿಕ್ಷಕಿಯಿಂದ ಧಾರ್ಮಿಕ ನಿಂದನೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಾಲೆಯ ಮುಂಭಾಗ ಇತ್ತೀಚಿಗೆ ಪ್ರತಿಭಟನೆ ನಡೆದಿತ್ತು. ಈ ವೇಳೆ ಪ್ರತಿಭಟನೆ ಮಾಡಿದ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಹಾಗೂ ಹಿಂದು ಸಂಘಟನೆಗಳ ಮುಖಂಡರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸುಳ್ಳು ಕೇಸು ದಾಖಲಿಸಲಾಗಿದೆ ಎಂದು ಇಂದು ನಗರದ ಕ್ಲಾಕ್ ಟವರ್ ಮುಂಭಾಗ ಪ್ರತಿಭಟನೆ ನಡೆದಿತ್ತು. ಬಳಿಕ ಸುಳ್ಳು ಕೇಸನ್ನು ತೆಗೆದುಹಾಕಲು ಪೊಲೀಸ್ ಕಮಿಷನರ್​ಗೆ ಮನವಿ ಮಾಡುತ್ತೇವೆಂದು ಹಿಂದೂ ಕಾರ್ಯಕರ್ತರು ಕಮಿಷನರ್ ಕಚೇರಿಯತ್ತ ಹೊರಟಿದ್ದಾರೆ. ಈ ವೇಳೆ ಮೊದಲೇ ಸನ್ನದ್ಧರಾಗಿದ್ದ ಪೊಲೀಸರು ಅಲ್ಲಿಯೇ ಬ್ಯಾರಿಕೇಡ್ ಹಾಕಿ ಪ್ರತಿಭಟನಾ ನಿರತರನ್ನು ತಡೆದಿದ್ದಾರೆ.

ಆಕ್ರೋಶಿತ ಹಿಂದೂ ಕಾರ್ಯಕರ್ತರು ಬ್ಯಾರಿಕೇಡ್ ಅನ್ನು ತಳ್ಳಿ ಮುಂದೆ ಹೋಗಲು ಯತ್ನಿಸಿದ್ದಾರೆ. ಆಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ ನೂಕಾಟ ನಡೆದಿದೆ. ರಸ್ತೆಗೆ ಬಿದ್ದವರನ್ನು ಪೊಲೀಸರು ಬಲವಂತವಾಗಿ ಪೊಲೀಸ್ ವ್ಯಾನ್​ಗೆ ಎತ್ತಿ ಹಾಕಿದ್ದಾರೆ. ವಶಕ್ಕೆ ತೆಗೆದುಕೊಂಡ ಹಿಂದೂ ಕಾರ್ಯಕರ್ತರನ್ನು ನಾಲ್ಕು ಪೊಲೀಸ್ ವ್ಯಾನ್​ಗಳು, ಮೂರ್ನಾಲ್ಕು ಪೊಲೀಸ್ ಜೀಪ್​ಗಳಲ್ಲಿ ಕೊಂಡೊಯ್ದಿದ್ದಾರೆ. ಉಳಿದ ಕಾರ್ಯಕರ್ತರನ್ನು ಪೊಲೀಸರು ಮನೆಗೆ ಕಳುಹಿಸಿದ್ದಾರೆ.

ವಿಶೇಷ ತನಿಖೆ ನಡೆಸಲು ಕ್ರಮ : ಇನ್ನು ಈ ಜೆರೋಸಾ ಶಾಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.17 ರಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವರಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ಈ ಘಟನೆಯ ನಂತರ ಆದ ಬೆಳವಣಿಗೆ ಕುರಿತು ವಿಶೇಷ ತನಿಖೆ ನಡೆಸಲು ಐಎಎಸ್ ಅಧಿಕಾರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗದ ಅಪರ ಆಯುಕ್ತ ಆಕಾಶ್ ಶಂಕರ್​ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೆ ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಶಾಸಕ ವೇದವ್ಯಾಸ್ ಕಾಮತ್ ಅವರು ನಡೆದುಕೊಂಡ ರೀತಿಯಿಂದ ಜಿಲ್ಲೆಯ ಜನ ತಲೆತಗ್ಗಿಸುವಂತೆ ಆಗಿದೆ.

ಮಕ್ಕಳನ್ನು, ಶಿಕ್ಷಕರನ್ನು ಬೀದಿಯಲ್ಲಿ ನಿಲ್ಲಿಸಿರುವುದು ಒಳ್ಳೆಯದಲ್ಲ. ಎಫ್ಐಆರ್ ಹಿಂತೆಗೆಯಲು ಆಗಲ್ಲ. ದೂರಿನ ಬಗ್ಗೆ ತನಿಖೆ ಆಗುತ್ತದೆ. ತಪ್ಪು ಸಾಬೀತಾದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಶಿಕ್ಷಕಿಯ ವಿರುದ್ಧವೂ ಶಿಕ್ಷಣ ಇಲಾಖೆ ತನಿಖೆ ಮಾಡುತ್ತದೆ. ಈ ತನಿಖೆಯನ್ನು ಪೊಲೀಸರು ಮಾಡುವುದಕ್ಕೆ ಆಗಲ್ಲ. ಹಾಗಾಗಿ ಎಫ್ಐಆರ್ ದಾಖಲು ಮಾಡಿಲ್ಲ. ಯಾರು ತಪ್ಪು ಮಾಡಿದರೂ ತನಿಖೆಯಲ್ಲಿ ತಿಳಿದು ಬರುತ್ತದೆ ಎಂದು ಹೇಳಿದರು.

ಇದನ್ನೂ ಓದಿ : ಮಂಗಳೂರು: ಜೆರೋಸಾ ಶಾಲೆಯ ವಿವಾದದ ಬೆನ್ನಲ್ಲೇ ಡಿಡಿಪಿಐ ವರ್ಗಾವಣೆ

Last Updated : Feb 19, 2024, 4:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.