ETV Bharat / state

ಟಿಕೆಟ್ ನೀಡದಿದ್ದರೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಉತ್ತರ ಕನ್ನಡದಿಂದ ಸ್ಪರ್ಧೆ: ಶಾಮಸುಂದರ್ ಗಾಯಕ್ವಾಡ್​

author img

By ETV Bharat Karnataka Team

Published : Mar 18, 2024, 7:20 PM IST

ಬಿಜೆಪಿ ಮುಖಂಡ ಶಾಮಸುಂದರ್ ಗಾಯಕ್ ವಾಡ್
ಬಿಜೆಪಿ ಮುಖಂಡ ಶಾಮಸುಂದರ್ ಗಾಯಕ್ ವಾಡ್

ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರುಗಳು ಮರಾಠ ಸಮುದಾಯವನ್ನು ನಿರ್ಲಕ್ಷಿಸಿದ್ದಾರೆ ಎಂದು ಬಿಜೆಪಿ ಮುಖಂಡ ಶಾಮಸುಂದರ್ ಗಾಯಕ್ವಾಡ್​ ಆರೋಪಿಸಿದ್ದಾರೆ.

ಬೆಂಗಳೂರು : ಟಿಕೆಟ್ ನೀಡದಿದ್ದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಬಿಜೆಪಿ ಮುಖಂಡ ಶಾಮಸುಂದರ್ ಗಾಯಕ್ವಾಡ್​ ಹೇಳಿದರು. ನಗರದ ಪ್ರೆಸ್​ಕ್ಲಬ್ ಸಭಾಂಗಣದಲ್ಲಿ ರಾಷ್ಟ್ರೀಯ ಮರಾಠ ಪಾರ್ಟಿ ವತಿಯಿಂದ ಬಿಜೆಪಿ ಮುಖಂಡ, ಕರ್ನಾಟಕ ಕ್ಷತ್ರಿಯ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಶಾಮಸುಂದರ್ ಗಾಯಕ್ವಾಡ್​ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು. ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮರಾಠ ಸಮುದಾಯವನ್ನು ನಿರ್ಲಕ್ಷಿಸಿದ್ದಾರೆ ಎಂದರು.

50 ಲಕ್ಷ ಮರಾಠರು ಕರ್ನಾಟಕದಲ್ಲಿ ಇದ್ದಾರೆ ಎನ್ನುವುದನ್ನು ಮರೆತಿದ್ದಾರೆ. ಹಿಂದುಳಿದ ವರ್ಗದ ಕುರುಬರು, ನೇಕಾರರು, ಗೊಲ್ಲರು, ಮೀನುಗಾರರು, ತಿಗಳರು, ಗಾಣಿಗರು, ಕುಂಬಾರರು, ಮಡಿವಾಳ, ದೇವಾಡಿಗರನ್ನು ಸೇರಿಸಿದರೆ ಶೇಕಡಾ 52 ರಷ್ಟು ಜನಸಂಖ್ಯೆ ರಾಜ್ಯದಲ್ಲಿದೆ. ಈ ಸಮುದಾಯದವರಿಗೆ ಟಿಕೆಟ್​ ನೀಡದೇ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ದೂರಿದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಿರಂತರ ಜನಸಂಪರ್ಕ ಮಾಡಿಕೊಂಡು ಪಕ್ಷದ ಟಿಕೆಟ್​ ನೀಡಿ ಎಂದು ವರಿಷ್ಠರಿಗೆ ಮನವಿ ಮಾಡಿದ್ದೆ. ಈ ಕ್ಷೇತ್ರದಲ್ಲಿ ನಾಲ್ಕು ಲಕ್ಷ ಮರಾಠ ಮತದಾರರು ಇದ್ದಾರೆ. ಬಿಜೆಪಿ ಪಕ್ಷ ಮರಾಠ ಸಮುದಾಯಕ್ಕೆ ಮೋಸ ಮಾಡಿರುವ ಕಾರಣದಿಂದ, ಬಿಜೆಪಿ ಪಕ್ಷ ತೊರೆದು ರಾಷ್ಟ್ರೀಯ ಮರಾಠ ಪಾರ್ಟಿ ವತಿಯಿಂದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದರು.

ಮರಾಠ ಸಮುದಾಯವನ್ನು 3ಬಿ, 2ಎ ವರ್ಗಕ್ಕೆ ಸೇರ್ಪಡೆ ಮಾಡುತ್ತೇವೆ ಎಂದು ಬಿಜೆಪಿ ಭರವಸೆ ನೀಡಿ ವಂಚನೆ ಮಾಡಿದೆ. ಸುಮಾರು 8 ಲೋಕಸಭಾ ಕ್ಷೇತ್ರಗಳಲ್ಲಿ ಮರಾಠ ಸಮುದಾಯದವರು 2 ರಿಂದ 4 ಲಕ್ಷದವರೆಗೆ ಮತದಾರರಿದ್ದಾರೆ. ಈ ಕಾರಣದಿಂದ 10 ಲೋಕಸಭಾ ಕ್ಷೇತ್ರದಲ್ಲಿ ಮರಾಠ ಪಾರ್ಟಿ ಬೆಂಬಲ ಘೋಷಣೆ ಮಾಡಿದೆ ಎಂದು ಹೇಳಿದರು.

ಇಡೀ ಮರಾಠ ಸಮಾಜ ಹಿಂದುಳಿದ ಸಮಾಜ. ನೊಂದು, ಬೇಸತ್ತು ಮುಂಬರುವ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡಬಾರದು ಎಂದು ರಾಷ್ಟ್ರೀಯ ಮರಾಠ ಪಾರ್ಟಿಯ ಪಕ್ಷವು ಕರ್ನಾಟಕದಲ್ಲಿ ಹತ್ತು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಮರಾಠ ಮತ್ತು ಹಿಂದುಳಿದ ವರ್ಗ, ದಲಿತರು, ಅಲ್ಪಸಂಖ್ಯಾತರನ್ನೊಳಗೊಂಡ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ ಎಂದು ಮಾಹಿತಿ ನೀಡಿದರು.

ನಾನು 25 ವರ್ಷಗಳಿಂದ ಪಕ್ಷಕ್ಕೆ ದುಡಿದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಶ್ರಮಿಸಿದೆ. ನನ್ನಂತೆ ರಾಜ್ಯದಲ್ಲಿ ಹಲವು ಮರಾಠ ಮುಖಂಡರಿಗೆ ಅನ್ಯಾಯ ಮಾಡಲಾಗಿದೆ. ಇದರಿಂದ ನಾನು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದೇನೆ. ಗೆದ್ದು ನರೇಂದ್ರಮೋದಿ ಅವರ ಕೈಬಲಪಡಿಸುತ್ತೇನೆ ಎಂದು ಹೇಳಿದರು.

ರಾಷ್ಟ್ರೀಯ ಮರಾಠ ಪಾರ್ಟಿ ಅಧ್ಯಕ್ಷ ಮನೋಹರ್ ರಾವ್ ಜಾಧವ್, ಉಪಾಧ್ಯಕ್ಷರಾದ ಚಂದ್ರಶೇಖರ್ ಭೋಜಗಡ್, ಈಶ್ವರ್ ರಾವ್ ಸಿಂಧೆ, ಪ್ರಧಾನ ಕಾರ್ಯದರ್ಶಿ ಕುನಾಲ್ ಗೋವಿಂದ್, ಸಹ ಕಾರ್ಯದರ್ಶಿ ವೆಂಕಟೇಶ್ವರ ರಾವ್, ಕಾರ್ಯದರ್ಶಿ ತಿಲಕ್ ಚಂದನ್ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು.

ರಾಷ್ಟ್ರೀಯ ಮರಾಠ ಪಾರ್ಟಿ ಬೆಂಬಲ ಘೋಷಣೆ ಮಾಡಿರುವ ಅಭ್ಯರ್ಥಿಗಳು:

1) ಉತ್ತರ ಕನ್ನಡ- ಶಾಮಸುಂದರ್ ಗಾಯಕ್ವಾಡ್​

2) ಧಾರವಾಡ- ಜಿ. ಡಿ ಘೋರ್ಪಡೆ

3) ಹಾವೇರಿ-ನಾರಾಯಣ್ ರಾವ್ ಗಾಯಕ್ವಾಡ್​

4) ಬೆಳಗಾಂ - ಈಶ್ವರ್ ರುದ್ದಪ್ಪ ಗಾಡಿ

5) ಚಿಕ್ಕೋಡಿ- ವಿನೋದ್ ಸಾಳುಂಕೆ

6) ಬೀದರ್-ವಿಜಯಕುಮಾರ್ ಪಾಟೀಲ್

7) ಬಾಗಲಕೋಟೆ- ಶ್ರೀಕಾಂತ್ ಮುಧೋಳ

8) ಶಿವಮೊಗ್ಗ- ಎಂ. ಡಿ ದೇವರಾಜ್ ಸಿಂಧೆ

9/10) ಬಿಜಾಪುರ ಮತ್ತು ಗುಲ್ಬರ್ಗಕ್ಕೆ ಎಸ್. ಸಿ ಅಭ್ಯರ್ಥಿಗಳು

ಇದನ್ನೂ ಓದಿ : ಕಾಂಗ್ರೆಸ್​ಗೆ ಬಹಳ ಕಡೆ ಅಭ್ಯರ್ಥಿಗಳೇ ಇಲ್ಲ ಕಾರ್ಯಕರ್ತರು ಹತಾಶೆಗೊಂಡಿದ್ದಾರೆ: ಜೋಶಿ ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.