ETV Bharat / bharat

ದೆಹಲಿ ಮದ್ಯ ಹಗರಣ ಕೇಸ್​: ಬಿಆರ್‌ಎಸ್ ಎಂಎಲ್‌ಸಿ ಕವಿತಾ ಬಂಧಿಸಿದ ಇಡಿ

author img

By ETV Bharat Karnataka Team

Published : Mar 15, 2024, 5:23 PM IST

Updated : Mar 15, 2024, 6:51 PM IST

ಬಿಆರ್‌ಎಸ್ ಎಂಎಲ್‌ಸಿ ಕವಿತಾ
ಬಿಆರ್‌ಎಸ್ ಎಂಎಲ್‌ಸಿ ಕವಿತಾ

ದೆಹಲಿ ಮದ್ಯ ಹಗರಣ ಪ್ರಕರಣದ ಹಿನ್ನೆಲೆಯಲ್ಲಿ ಬಿಆರ್‌ಎಸ್ ಎಂಎಲ್‌ಸಿ ಕವಿತಾ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅದಕ್ಕೂ ಮುನ್ನ ಅವರ ನಿವಾಸದಲ್ಲಿ ಇಡಿ ಮತ್ತು ಐಟಿ ಅಧಿಕಾರಿಗಳು ಜಂಟಿಯಾಗಿ ಶೋಧ ನಡೆಸಿದ್ದಾರೆ. ಅಲ್ಲದೇ ಅವರ ನಿವಾಸದಿಂದ ಹಲವು ಮಹತ್ವದ ದಾಖಲೆಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ತೆಲಂಗಾಣ: ದೆಹಲಿ ಮದ್ಯ ಹಗರಣ ಪ್ರಕರಣದ ಹಿನ್ನೆಲೆ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರ ಪುತ್ರಿ ಹಾಗೂ ಬಿಆರ್‌ಎಸ್‌ ಪಕ್ಷದ ಎಂಎಲ್‌ಸಿ ಕವಿತಾ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅದಕ್ಕೂ ಮುನ್ನ ಅವರ ನಿವಾಸದಲ್ಲಿ ಶುಕ್ರವಾರ ಇಡಿ ಮತ್ತು ಐಟಿ ಅಧಿಕಾರಿಗಳು ಜಂಟಿಯಾಗಿ ಶೋಧ ನಡೆಸಿದ್ದಾರೆ. ಸದ್ಯ ಕವಿತಾ ಅವರನ್ನು ಇಡಿ ಅಧಿಕಾರಿಗಳು ದೆಹಲಿಗೆ ಕರೆತರುತ್ತಿದ್ದು, ಅಲ್ಲಿ ಮತ್ತಷ್ಟು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ. ದಾಳಿ ವೇಳೆ ಅವರ ನಿವಾಸದಲ್ಲಿ ಇಡಿ ಮತ್ತು ಬಿಆರ್‌ಎಸ್ ನಾಯಕ ಕೆಟಿಆರ್ ರಾವ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು ಆ ದೃಶ್ಯಗಳು ಜಾಲತಾಣದಲ್ಲಿ ಜಾಗ ಪಡೆದಿವೆ.

ಇದಕ್ಕೂ ಮುನ್ನ ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕರ ನಿರ್ದೇಶನದ ಮೇರೆಗೆ ಬಂಜಾರಾ ಹಿಲ್ಸ್‌ನಲ್ಲಿರುವ ಅವರ ನಿವಾಸದಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳು ಮತ್ತು ಐಟಿ ಅಧಿಕಾರಿಗಳು ಸೇರಿದಂತೆ ಒಟ್ಟು ಎಂಟು ಅಧಿಕಾರಿಗಳ ತಂಡ ಜಂಟಿಯಾಗಿ ತಪಾಸಣೆ ನಡೆಸಿತು. ಶೋಧದ ವೇಳೆ ಇಡಿ ಅಧಿಕಾರಿಗಳು ಮನೆಯ ಎಲ್ಲ ಸದಸ್ಯರ ಸೆಲ್‌ಫೋನ್‌ಗಳನ್ನು ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಶಕ್ಕೂ ಮುನ್ನ ಕವಿತಾ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

ದಾಳಿ ವಿಷಯ ತಿಳಿಯುತ್ತಿದ್ದಂತೆ ಪಕ್ಷದ ಕಾನೂನು ಸಂಚಾಲಕ ಸೋಮ ಭರತ್ ಮತ್ತು ವಕೀಲರು ಕವಿತಾ ಅವರ ನಿವಾಸಕ್ಕೆ ಆಗಮಿಸಿದರು. ಆದರೆ, ಅಧಿಕಾರಿಗಳು ಯಾರಿಗೂ ಅವರ ಮನೆಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಮತ್ತೊಂದೆಡೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕವಿತಾ ನಿವಾಸದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕವಿತಾ ಅವರ ನಿವಾಸದ ಮೇಲೆ ಇಡಿ ದಾಳಿ ನಡೆಸಿರುವುದನ್ನು ಖಂಡಿಸಿ ಬಿಆರ್‌ಎಸ್ ಕಾರ್ಯಕರ್ತರು ಪ್ರತಿಭಟನೆ ಸಹ ನಡೆಸಿದ್ದಾರೆ.

ದೇಶಾದ್ಯಂತ ಸಂಚಲನ ಮೂಡಿಸಿದ್ದ ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ವಿಚಾರಣೆಗೆ ಬರುವಂತೆ ಜಾರಿ ನಿರ್ದೇಶನಾಲಯ ಈ ಹಿಂದೆ ನೀಡಿದ್ದ ನೋಟಿಸ್‌ಗಳನ್ನು ಪ್ರಶ್ನಿಸಿ ಎಂಎಲ್‌ಸಿ ಕವಿತಾ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ತನಿಖೆಯಲ್ಲಿ ಮಹಿಳೆಯರ ಸಿಆರ್‌ಪಿಸಿಯ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಇಡಿಗೆ ನಿರ್ದೇಶನ ನೀಡಬೇಕು ಎಂದು ಸಹ ಅದರಲ್ಲಿ ಕೋರಿದ್ದಾರೆ. ಈ ಅರ್ಜಿಯನ್ನು ಈಗಾಗಲೇ ಹಲವು ಬಾರಿ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್, ಈ ತಿಂಗಳ 19ಕ್ಕೆ ವಿಚಾರಣೆ ಮುಂದೂಡಿದೆ. ಈ ನಡುವೆ ಇಂದು ಮಧ್ಯಾಹ್ನ ಇಡಿ ಮತ್ತು ಐಟಿ ಅಧಿಕಾರಿಗಳು ಜಂಟಿ ದಾಳಿ ನಡೆಸಿದ್ದಾರೆ.

ಕೆಸಿಆರ್ ಸಭೆ: ದಾಳಿ ವಿಷಯ ಗೊತ್ತಾಗುತ್ತಿದ್ದಂತೆ ಪಕ್ಷದ ಪ್ರಮುಖ ನಾಯಕರೊಂದಿಗೆ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಸಭೆ ನಡೆಸಿದರು. ಕೆಟಿಆರ್, ಹರೀಶ್ ರಾವ್, ಸಂತೋಷ್ ಕುಮಾರ್, ಮತ್ತು ಪ್ರಶಾಂತ್ ರೆಡ್ಡಿ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಭೇಟಿ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ: 7ನೇ ಸಮನ್ಸ್‌ ಬಳಿಕವೂ ವಿಚಾರಣೆಗೆ ಹಾಜರಾಗದ ದೆಹಲಿ ಸಿಎಂ ಕೇಜ್ರಿವಾಲ್​

Last Updated :Mar 15, 2024, 6:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.