ETV Bharat / state

ನಾನು ಆ ಅರ್ಥದಲ್ಲಿ ಹೇಳಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ: ಸಚಿವ ಶಿವಾನಂದ ಪಾಟೀಲ್‌

author img

By ETV Bharat Karnataka Team

Published : Dec 26, 2023, 6:37 PM IST

Updated : Dec 26, 2023, 8:58 PM IST

ನನಗೆ ಮದ ಏರಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ. ನನಗೆ ಮದ ಏರಿಲ್ಲ, ರೈತರನ್ನು ತುಳಿಯುವಂತಹ ಜನರಿಗೆ ಮದ ಏರಿದೆ ಎಂದು ಸಚಿವ ಶಿವಾನಂದ ಪಾಟೀಲ್‌ ಹೇಳಿದರು.

minister-shivanand-patil-clarified-his-statement-about-farmers
ನಾನು ಆ ಅರ್ಥದಲ್ಲಿ ಹೇಳಿಲ್ಲ; ನನ್ನ ಹೇಳಿಕೆ ತಿರುಚಿ ಪ್ರಸಾರ ಮಾಡಲಾಗಿದೆ ಎಂದ ಸಚಿವ ಶಿವಾನಂದ ಪಾಟೀಲ್‌

ನಾನು ಆ ಅರ್ಥದಲ್ಲಿ ಹೇಳಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ: ಸಚಿವ ಶಿವಾನಂದ ಪಾಟೀಲ್‌

ವಿಜಯಪುರ: "ರೈತರು ಬರಗಾಲ ಬರಲಿ ಎಂದು ಬಯಸುತ್ತಾರೆ" ಎಂಬ ರೀತಿಯಲ್ಲಿ ನನ್ನ ಹೇಳಿಕೆಯನ್ನು ತಿರುಚಿ ಪ್ರಸಾರ ಮಾಡಲಾಗಿದೆ. ಆದರೆ, ನಾನು ಆ ಅರ್ಥದಲ್ಲಿ ಹೇಳಿಲ್ಲ. ಸರ್ಕಾರಗಳ ನೀತಿಗಳು ರೈತರಿಗೆ ಮಾರಕವಾಗುತ್ತಿವೆ. ಇದರಿಂದ ರೈತರ ಬೆಳೆಗಳಿಗೆ ಮೂರು ವರ್ಷಗಳಿಗೊಮ್ಮೆ ಧಾರಣೆ (ಬೆಲೆ) ಬರುತ್ತದೆ. ಅದಕ್ಕೆ ಮೇಲಿಂದ ಮೇಲೆ ಬರಗಾಲ ಬಿದ್ದರೆ, ಸಾಲ ಮನ್ನಾವಾಗಬೇಕೆಂಬ ಬೇಡಿಕೆ ಸ್ವಾಭಾವಿಕವಾಗಿ ಬರುತ್ತದೆ. ಇದರ ಬದಲಿಗೆ ರೈತರೇ ಸರ್ಕಾರಕ್ಕೆ ಸಾಲ ಕೊಡುವಂತಹ ಶಕ್ತಿ ಬರಬೇಕೆಂಬ ನಿಟ್ಟಿನಲ್ಲಿ ನಾನು ಮಾತನಾಡಿದ್ದೇನೆ ಎಂದು ಸಚಿವ ಶಿವಾನಂದ ಪಾಟೀಲ್‌ ಸ್ಪಷ್ಟನೆ ನೀಡಿದ್ದಾರೆ.

ನಗರದ ತಮ್ಮ ಗೃಹಕಚೇರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ರೈತರು ಸ್ವಾವಲಂಬಿಗಳಾಗಿ ಬದುಕಬೇಕು. ಯಾವುದೇ ಸರ್ಕಾರದ ಯೋಜನೆಗಳ ಮೇಲೆ ಅವಲಂಬಿತರಾಗಿ ಬದುಕಬಾರದು. ಇದು ನನ್ನ ಹೇಳಿಕೆಯಾಗಿತ್ತು. ಇದರಂತೆ ಸರ್ಕಾರಗಳ ನೀತಿ ನಿರೂಪಣೆ ಇರಬೇಕು. ಆ ರೀತಿ ಕರ್ನಾಟಕ ಸರ್ಕಾರದ ಎಲ್ಲ ಮುಖ್ಯಮಂತ್ರಿಗಳು ಈ ರಾಜ್ಯಕ್ಕೆ ಕೊಡುಗೆ ಕೊಟ್ಟಿದಾರೆ. ರೈತರಿಗೆ ನೀರು, ವಿದ್ಯುತ್, ರಸಗೊಬ್ಬರ, ಬೀಜದ ಸೌಲಭ್ಯಗಳನ್ನು ಮಾಡಿಕೊಟ್ಟಿದ್ದಾರೆ. ಆದರೆ, ದುರ್ದೈವವಶಾತ್‌ ಕೇಂದ್ರ ಸರ್ಕಾರದ ಇತ್ತೀಚಿನ ನೀತಿಗಳು ರೈತರಿಗೆ ಮಾರಕವಾಗಿವೆ'' ಎಂದು ಟೀಕಿಸಿದರು.

''ಉದಾಹರಣೆಗೆ, ಎಪಿಎಂಸಿ ತಿದ್ದುಪಡಿ ಕಾಯ್ದೆ. ಇದರ ವಿರುದ್ಧ ಇಡೀ ದೇಶದಲ್ಲಿ ರೈತರು ಪ್ರತಿಭಟನೆ ಮಾಡಿದರು. ಕರ್ನಾಟಕದಲ್ಲಿ ಈ ಕಾಯ್ದೆಯನ್ನು ಬಿಜೆಪಿಯವರು ಯಾಕೆ ತಂದಿದ್ದರು'' ಎಂದ ಪ್ರಶ್ನಿಸಿದ ಅವರು, ''ವಿರೋಧ ಪಕ್ಷದ ನಾಯಕರು ನನಗೆ ಮದ ಏರಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ನನಗೆ ಮದ ಏರಿಲ್ಲ, ರೈತರನ್ನು ತುಳಿಯುವಂತಹ ಜನರಿಗೆ ಏರಿದೆ'' ಎಂದು ಕಿಡಿಕಾರಿದರು.

''ಇವತ್ತು ಕೇಂದ್ರ ಸರ್ಕಾರ ಸಕ್ಕರೆ ರಫ್ತು ಬ್ಯಾನ್‌ ಮಾಡಿದೆ. ಕೊಬ್ಬರಿಗೆ ಬೆಲೆ ಇಲ್ಲ, ದೇವೇಗೌಡರೇ ಒಂದು ಮನವಿ ಹಿಡ್ಕೊಂಡು ಪ್ರಧಾನಮಂತ್ರಿಗಳ ಬಳಿ ಹೋಗಿದ್ದಾರೆ. ರೈತ ಇಂದು ಅಕ್ಕಿ ಬೆಳೆದರೆ, ಅಕ್ಕಿ ರಫ್ತು ಆಗುತ್ತಿಲ್ಲ. ಅಲ್ಲದೇ, ಎಥೆನಾಲ್‌ ನೀತಿ ತಂದಿದ್ದಾರೆ. ಇದರಿಂದ ಕೆಲವರು 400–500 ಕೋಟಿ ರೂ. ಸಾಲ ತೆಗೆದು ಕಾರ್ಖಾನೆ ಆರಂಭಿಸಿದ್ದಾರೆ. ಆದರೆ, ಮೊನ್ನೆ ಎಥೆನಾಲ್‌ ಬ್ಯಾನ್‌ ಎಂಬ ಆದೇಶ ಬಂದಿದೆ. ಇವತ್ತು ಈರುಳ್ಳಿ ರಫ್ತು ಬ್ಯಾನ್‌ ಮಾಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಉಳ್ಳಾಗಡ್ಡಿ ಹೆಚ್ಚಾಗಿ ಬೆಳೆಯುತ್ತೇವೆ. ಈ ಈರುಳ್ಳಿ ರಫ್ತು ಮಾಡಿದರೆ ನಾಲ್ಕು ದುಡ್ಡು ಸಿಗ್ತಿತ್ತಿಲ್ಲೋ?, ಇಂಥವೆಲ್ಲಾ ನೀತಿಗಳಿಂದ ರೈತರಿಗೆ ಮೂರು ವರ್ಷಕ್ಕೊಮ್ಮೆ ಧಾರಣೆ ಬರುತ್ತದೆ. ಯಾವುದೇ ಬೆಳೆಗೆ ಧಾರಣೆ ಬಂದಾಗ ನಾಲ್ಕು ದುಡ್ಡು ರೈತರು ಗಳಿಸಿಕೊಳ್ಳುತ್ತಾರೆ. ಆದರೆ, ಅಕ್ಕಿ ಬ್ಯಾನ್‌, ಶುಗರ್‌ ಬ್ಯಾನ್ ಅಂತಾ ಮಾಡಿದರೆ, ಮತ್ತೆ ರೈತರು ಯಾವಾಗ ದುಡ್ಡು ಗಳಿಸುತ್ತಾರೆ?. ಇಂತಹ ನೀತಿಗಳನ್ನು ತರುವವರು ರೈತರ ಪರ ಚಿಂತನೆ ಮಾಡುವಂಥವರಲ್ಲ'' ಎಂದು ಹೇಳಿದ್ದೇನೆ ಎಂದು ವಾಗ್ದಾಳಿ ನಡೆಸಿದರು.

''ರಾಜ್ಯದ ವಿರೋಧ ಪಕ್ಷದವರಿಗೆ ಕೆಲಸ ಇಲ್ಲ. ರೈತರ ಮನವೊಲಿಸಿ ಬೇರೆ, ಬೇರೆ ಹೇಳಿಕೆ ಕೊಟ್ಟು. ನನ್ನ ವಿರುದ್ಧ ರೈತರನ್ನು ಎತ್ತಿಕಟ್ಟುವಂತಹದ್ದು, ಕಾಂಗ್ರೆಸ್ ಸರ್ಕಾರದ ವಿರೋಧ ಕಟ್ಟುವಂತಹದ್ದು‌ ನಿರಂತರವಾಗಿ ಮಾಡುತ್ತಿದ್ದಾರೆ. ಇದನ್ನು ಮಾಡುವ ಬದಲಿಗೆ ರೈತರ ಬಗ್ಗೆ ಕಾಳಜಿ ಇದ್ದರೆ, ಕೇಂದ್ರರಿಂದ ನೀರಾವರಿಗೆ ದುಡ್ಡು ಕೊಡಿಸಲಿ. ದೇವೇಗೌಡರು ಮಾಡಿದ ಎಐಪಿಪಿ ಯೋಜನೆ ಯಾಕೆ ಬಂದ್ ಮಾಡಿದ್ರು?. ಕಬ್ಬಿನ ಬೆಲೆ ಇವತ್ತು 3,500 ರೂ. ಮೇಲೆ ಇರಬೇಕಿತ್ತು. ಅವರಿಗೆ ಸಹಾಯ ಮಾಡಲು ಆಗುತ್ತಿಲ್ಲ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುವ ಯೋಜನೆಯನ್ನು ನಮ್ಮ ಡಿಸಿಸಿ ಬ್ಯಾಂಕ್​ ಮಾಡಿದೆ. ನನಗೆ ರೈತರ ಬಗ್ಗೆ ಕಾಳಜಿ ಇದೆ. ಸಣ್ಣ ವಿಚಾರ ದೊಡ್ಡದು ಮಾಡೋದು, ಇದನ್ನೇ ಮಾಧ್ಯಮದವರು ಪರಾಮರ್ಶೆ ಮಾಡೋದು ಸರಿಯಲ್ಲ'' ಎಂದು ಅಸಮಾಧಾನ ಹೊರಹಾಕಿದರು.

ಎಂ.ಬಿ.ಪಾಟೀಲ್ ಪ್ರತಿಕ್ರಿಯೆ: ಇದೇ ವಿಚಾರವಾಗಿ ಸಚಿವ ಎಂ.ಬಿ.ಪಾಟೀಲ್​ ಪ್ರತಿಕ್ರಿಯಿಸಿ, ''ಅವರು (ಶಿವಾನಂದ ಪಾಟೀಲ್‌) ಏನು ಹೇಳಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ‌‌. ಯಾವ ಅರ್ಥ, ಸಂದರ್ಭದಲ್ಲಿ ಹೇಳಿದ್ದಾರೆ ಎಂಬುವುದನ್ನು ಅವರನ್ನೇ ಕೇಳಿದ್ರೆ ಸೂಕ್ತ. ಅವರು ಹೇಳಿದ್ದು ನನ್ನ ಗಮನಕ್ಕೆ ಇಲ್ಲ'' ಎಂದು ಹೇಳಿದರು.

ಯತ್ನಾಳ್ 3ನೇ ಟಿಪ್ಪು ಸುಲ್ತಾನ್-ಎಂ.ಬಿ.ಪಾಟೀಲ್: ಇದೇ ವೇಳೆ, ''ಹಿಜಾಬ್​ ವಿಚಾರ ಕೋರ್ಟ್​ನಲ್ಲಿದೆ. ಈ ಮುಂಚೆ ಸೌಹಾರ್ದಯುತವಾಗಿ ಪರಸ್ಪರ ವಿಶ್ವಾಸ, ಹೊಂದಾಣಿಕೆಯ ಪರಿಸರ ಇತ್ತು. ಅದನ್ನು ಕದಡಿಸಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಜಾತಿ, ಧರ್ಮ, ಪಕ್ಷ ಎಂಬ ವೈಮನಸ್ಸು ಮೂಡಿಸಿದ್ದಾರೆ'' ಎಂದರು. ಅಲ್ಲದೇ, ''ಸಿಎಂ ಸಿದ್ದರಾಮಯ್ಯ ಎರಡನೇ ಟಿಪ್ಪು ಸುಲ್ತಾನ್ ಎಂದಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ‌ಈ ಹಿಂದೆ ಟಿಪ್ಪು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫೋಟೋ ತೋರಿಸುವೆ. ನಾವು ಯತ್ನಾಳರನ್ನು ಮೂರನೇ ಟಿಪ್ಪು ಸುಲ್ತಾನ್ ಎಂದು ಕರೆಯುತ್ತೇವೆ'' ಎಂದು ಟಾಂಗ್​ ನೀಡಿದರು.

ಇದನ್ನೂ ಓದಿ: ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಕೊರೊನಾ ಹೆಸರಲ್ಲಿ ₹40 ಸಾವಿರ ಕೋಟಿ ಅವ್ಯವಹಾರ: ಯತ್ನಾಳ್

Last Updated :Dec 26, 2023, 8:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.