ETV Bharat / state

ಹಿಂದಿನ ಸರ್ಕಾರದಲ್ಲಿ ಕೊರೊನಾ ವೇಳೆ ₹40 ಸಾವಿರ ಕೋಟಿ ಅವ್ಯವಹಾರ: ಯತ್ನಾಳ್ ಗಂಭೀರ ಆರೋಪ

author img

By ETV Bharat Karnataka Team

Published : Dec 26, 2023, 4:26 PM IST

Updated : Dec 26, 2023, 9:32 PM IST

Rs 40 thousand crores were misappropriated during  Earlier Corona says BJP MLA Yatnal
ಈ ಹಿಂದೆ ಕೊರೊನಾ ಸಮಯದಲ್ಲಿ ₹ 40 ಸಾವಿರ ಕೋಟಿ ಅವ್ಯವಹಾರ ಮಾಡಿದ್ದಾರೆ: ಯತ್ನಾಳ್ ಗಂಭೀರ ಆರೋಪ

ಎಲ್ಲರೂ ಕಳ್ಳರಾದರೆ ರಾಜ್ಯ ಮತ್ತು ದೇಶವನ್ನು ಯಾರು ಉಳಿಸುತ್ತಾರೆ. ನಾವು ಪ್ರಧಾನಿ ಮೋದಿ ಅವರಿಗಾಗಿ ಕೆಲಸ ಮಾಡುತ್ತಿದ್ದೇವೆ ಹೊರತು ಬೇರೆ ಯಾರಿಗೂ ಅಲ್ಲ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್​ ಹೇಳಿದರು.

ಕೊರೊನಾ ಸಮಯದಲ್ಲಿ ₹40 ಸಾವಿರ ಕೋಟಿ ಅವ್ಯವಹಾರ - ಯತ್ನಾಳ್ ಆರೋಪ

ವಿಜಯಪುರ: "ಹಿಂದಿನ ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಕೊರೊನಾ ವೇಳೆ 40 ಸಾವಿರ ಕೋಟಿ ರೂ.ಗಳ ಅವ್ಯವಹಾರ ನಡೆದಿದೆ. ಒಬೊಬ್ಬ ರೋಗಿಗಳಿಗೆ 8ರಿಂದ 10 ಲಕ್ಷ ರೂ. ಬಿಲ್ ಮಾಡಿದ್ದಾರೆ. ಆಗ ನಮ್ಮ ಸರ್ಕಾರವಿದ್ದರೇನು?, ಕಳ್ಳರು ಕಳ್ಳರೇ ಅಲ್ಲವಾ?, ನನಗೂ ಆಸ್ಪತ್ರೆಗೆ ಅಡ್ಮಿಟ್​ ಆಗಿದ್ದಾಗ 5.80 ಲಕ್ಷ ರೂ. ಬಿಲ್​ ಮಾಡಿದ್ದರು'' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್​ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನನಗೆ ನೋಟಿಸ್​ ಕೊಡಲಿ. ಪಕ್ಷದಿಂದ ಹೊರ ಹಾಕಲು ನೋಡಲಿ. ನಾನು ಇವರೆಲ್ಲರ ಬಣ್ಣ ಕಳಚುವೆ'' ಎಂದು ಕಿಡಿಕಾರಿದರು.

''ನನ್ನ ಕೈಯಲ್ಲಿ ರಾಜ್ಯ ಕೊಟ್ಟರೆ ಮಾದರಿ ಕರ್ನಾಟಕವನ್ನಾಗಿ ಮಾಡುತ್ತೇನೆ. ಹಣ ತಿನ್ನುವ ಚಟ ನನಗಿಲ್ಲ. ಲೂಟಿ ಮಾಡಬೇಕೆಂಬುದಿಲ್ಲ. ನಾವು ರೈತರ ಮಕ್ಕಳೆಂದು ಇವರೆಲ್ಲರೂ ಭಾಷಣ ಹೊಡೆಯುತ್ತಾರೆ. ಮೊದಲ ಕೃಷಿ ಬಜೆಟ್ ಎನ್ನುತ್ತಾರೆ. ಹಾಗಾದರೆ ದುಬೈನಲ್ಲಿ ಆಸ್ತಿ ಮಾಡಿದ್ದೇಕೆ?. ನೀವು ರೈತನ ಮಕ್ಕಳಾಗಿ ಅಮೆರಿಕದಲ್ಲಿ ಮನೆ ಯಾಕೆ ತೆಗೆದುಕೊಂಡಿದ್ದು?, ಯಾರ್ಯಾರು ಲೂಟಿ ಮಾಡಿ, ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ ಎಂಬುದನ್ನು ಹೊರ ತೆಗೆಯುವೆ'' ಎಂದರು.

''ಜನವರಿ 5ರಂದು ಡಿ.ಕೆ.ಶಿವಕುಮಾರ್​ ವಿರುದ್ಧದ ಪ್ರಕರಣದ ವಿಚಾರಣೆ ಹೈಕೋರ್ಟ್​ನಲ್ಲಿ ನಡೆಯಲಿದೆ. ನಂತರ ಎರಡನೆಯದ್ದು 'ಅಪ್ಪಾಜಿ'ಯವರದ್ದೇ ಇದೆ. ಕೊರೊನಾ ವೇಳೆ 45 ರೂ. ಇದ್ದ ಮಾಸ್ಕ್​ಗೆ ಸರ್ಕಾರದಲ್ಲಿ ಎಷ್ಟು ಖರ್ಚು ಹಾಕಿದ್ದಾರೆ ಎಂಬುದು ಗೊತ್ತಿದೆ. ಒಂದು ಮಾಸ್ಕ್​ಗೆ 485 ರೂ. ಬಿಲ್​ ಹಾಕಿದ್ದಾರೆ. ಬೆಂಗಳೂರಲ್ಲಿ 10 ಸಾವಿರ ಬೆಡ್ ಮಾಡಿದ್ದಾಗಿ ಹೇಳಿದ್ದರು. ಆ 10 ಸಾವಿರ ಬೆಡ್​ಗಳನ್ನು ಬಾಡಿಗೆ ಪಡೆದಿದ್ದರು. ಈ ಬಾಡಿಗೆ ಹಣದಲ್ಲಿ ಬೆಡ್​ಗಳನ್ನು ಖರೀದಿ ಮಾಡಿದ್ದರೆ, ಎರಡೆರಡು ಬೆಡ್​ಗಳು ಬರುತ್ತಿದ್ದವು. ಇದರಲ್ಲಿ ಎಷ್ಟು ಸಾವಿರ ಕೋಟಿ ರೂ. ಕೊಳ್ಳೆ ಹೊಡೆದಿದ್ದಾರೆ?, ಕೊರೊನಾ ವೇಳೆಯೇ 40 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ'' ಎಂದು ಯತ್ನಾಳ್ ಆರೋಪಿಸಿದರು.

''ಕೊರೊನಾ ವೇಳೆ ಒಬೊಬ್ಬ ರೋಗಿಗಳಿಗೆ 8ರಿಂದ 10 ಲಕ್ಷ ರೂ. ಬಿಲ್ ಮಾಡಿದ್ದಾರೆ. ನನಗೆ 5.80 ಲಕ್ಷ ರೂ. ತೆಗೆದುಕೊಂಡಿದ್ದರು. ಇಷ್ಟೊಂದು ಹಣವನ್ನು ಬಡವರಾದವರು ಎಲ್ಲಿಂದ ಕೊಡಬೇಕು ಎಂದು ವಿಧಾನಸೌಧದಲ್ಲಿ ಮಾತನಾಡಿದ್ದೆ. ಇದುವರೆಗೆ ಆರೋಗ್ಯ ವಿಚಾರದಲ್ಲಿ ಸರ್ಕಾರದಿಂದ ನಾನು ಯಾವುದೇ ರೀತಿಯ ಹಣ ಪಡೆದಿಲ್ಲ. ಶಾಸಕರಿಗೆ 2 ಲಕ್ಷ ರೂ. ಸಂಬಳವಿದೆ, ನಾನು ಕಮಿಟಿ ಮೀಟಿಂಗಿಗೆ ಹೋಗಿ ಬಂದರೆ, 65 ಸಾವಿರ ರೂ. ಸಿಗುತ್ತದೆ. ಇದನ್ನು ತೆಗೆದುಕೊಂಡರೆ ನಾವು ಮನುಷ್ಯರಾ?. ಸತ್ಯ ಹೇಳಿದರೆ ಎಲ್ಲರಿಗೂ ಭಯವಾಗುತ್ತದೆ'' ಎಂದು ತಿಳಿಸಿದರು.

ಮೋದಿಗಾಗಿ ನನ್ನ ಕೆಲಸ: ಮುಂದುವರೆದು ಮಾತನಾಡಿದ ಯತ್ನಾಳ್, ''ಎಲ್ಲರೂ ಕಳ್ಳರಾದರೆ ರಾಜ್ಯ ಮತ್ತು ದೇಶವನ್ನು ಯಾರು ಉಳಿಸುತ್ತಾರೆ?. ಪ್ರಧಾನಿ ಮೋದಿ ಇದ್ದಾರೆ ಎಂಬ ಕಾರಣಕ್ಕೆ ದೇಶ ಉಳಿದಿದೆ. ಈ ದೇಶದಲ್ಲಿ ಹಿಂದೆ ಬಹಳ ಹಗರಣಗಳಾಗಿವೆ. ಕಲ್ಲಿದ್ದಲು ಹಗರಣ, 2ಜಿ ಹಗರಣಗಳನ್ನು ಕೇಳಿದ್ದೇವೆ. ಮೋದಿ ಕಾಲದಲ್ಲಿ ಒಂದಾದರೂ ಹಗರಣ ನೋಡಿದ್ದೀರಾ?, ಮೋದಿ ಬಗ್ಗೆ ಕೇವಲ ಟೀಕೆ ಮಾಡುತ್ತಾರೆ. ಆದರೆ, ಮೋದಿಯವರು ಭ್ರಷ್ಟಾಚಾರದಲ್ಲಿ ಇದ್ದಾರೆ ಎಂಬ ಹೇಳುವ ತಾಕತ್ತು ದೇಶದಲ್ಲಿ ಯಾರಿಗಾದರೂ ಇದೆಯಾ?. ಅವರಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ ಹೊರತು ಬೇರೆ ಯಾರಿಗೂ ಅಲ್ಲ ಎಂದರು.

ವೀರಶೈವ-ಲಿಂಗಾಯತ ಮಹಾಸಭಾದ ಬಗ್ಗೆ ಯತ್ನಾಳ್ ಪ್ರತಿಕ್ರಿಯೆ

ಇದೇ ವೇಳೆ, ಯತ್ನಾಳ್ ಅವರನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬ ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ''ಅವರೆಲ್ಲ ರಾಜ್ಯದ ಉಪಾಧ್ಯಕ್ಷ ಹೇಗೆ ಆಗುತ್ತಾರೆ, ಅಲ್ಲಿ ಐತಿ (ಮಾಲ್) ಬಂಡವಾಳ ಹಾಗೂ ಇತರೆ''.. ಎಂದು ಕುಟುಕಿದರು. ಅಲ್ಲದೇ, ಯತ್ನಾಳ ಹಾಗೂ ಬಿ.ಕೆ.ಹರಿಪ್ರಸಾದ್ ಸೇರಿ ಒಂದು ಹೊಸ ಪಕ್ಷ ಕಟ್ಟಲಿ ಎಂದ ಮಾಜಿ ಸಚಿವ ಬಿ.ಸಿ.ಪಾಟೀಲ್ ವಿರುದ್ದವೂ ಯತ್ನಾಳ್ ವಾಗ್ದಾಳಿ ನಡೆಸಿದರು.

''ಬಿ.ಸಿ.ಪಾಟೀಲ್ ಕೃಷಿ ಮಂತ್ರಿಯಾಗಿ ಹೇಗಿದ್ದರು ಎಂದು ಆ ಇಲಾಖೆ ಅಧಿಕಾರಿಗಳನ್ನೇ ಕೇಳಿ. ಅವರು ಎಷ್ಟು ಪ್ರಾಮಾಣಿಕರಿದ್ದರು ಎಂದೂ ಹೇಳುತ್ತಾರೆ. ಇವರಂತಹ ಕೃಷಿ ಮಂತ್ರಿಗಳೇ ಕರ್ನಾಟಕದಲ್ಲಿ ಎಂದು ಇರಲಿಲ್ಲ. ಕೃಷಿ ಇಲಾಖೆಯಲ್ಲಿ ನಕಲಿ ಔಷಧಿಗಳನ್ನು ಇಟ್ಟಿದ್ದರು. ಆ ಔಷಧಿಗಳಿಂದ ಕೀಟಗಳು ಸಾಯುತ್ತಿರಲಿಲ್ಲ, ಬದಲಾಗಿ ಅವು ದಪ್ಪವಾಗುತ್ತಿದ್ದವು. ಅವನ್ನೆಲ್ಲಾ ತೆಗೆದರೆ ಬಹಳ ಇವೆ. ಇವರೇನು ನನಗೆ ನೈತಿಕತೆ ಪಾಠ ಹೇಳುತ್ತಾರೆ. ಬಿಎಸ್​ವೈ ಹಾಗೂ ಬಿ.ಸಿ.ಪಾಟೀಲ್ ಅಕ್ಕಪಕ್ಕದ ಕ್ಷೇತ್ರದವರು. ಬಿಜೆಪಿಯಲ್ಲಿ ಪ್ರಾಮಾಣಿಕರಾಗಿದ್ದ ಬಣಕಾರ್ ಕುಟುಂಬದವರನ್ನು ಹಿರೆಕೇರೂರ ಕ್ಷೇತ್ರದಲ್ಲಿ ಬಲಿ ಕೊಟ್ಟರು'' ಎಂದು ಆರೋಪಿಸಿದರು.

ಮಹಾಸಭಾ ಕೆಲವೇ ಕುಟುಂಬಗಳ ಆಸ್ತಿ: ಇತ್ತೀಚೆಗೆ ವೀರಶೈವ-ಲಿಂಗಾಯತ ಮಹಾಸಭಾ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ''ವೀರಶೈವ-ಲಿಂಗಾಯತ ಮಹಾಸಭಾ ಕೆಲ ಕುಟುಂಬಗಳ ಆಸ್ತಿಯಾಗಿದೆ. ಅದು 'ಬಿಎಸ್​ವೈ' ಆಗಿ ಕೆಲಸ ಮಾಡುತ್ತಿದೆ. ಇದರಲ್ಲಿ 'ಬಿ' ಎಂದರೆ ಭೀಮಣ್ಣ‌ ಖಂಡ್ರೆ, 'ಎಸ್' ಅಂದರೆ ಶಾಮನೂರು ಶಿವಶಂಕರಪ್ಪ, 'ವೈ' ಅಂದರೆ ಯಡಿಯೂರಪ್ಪ ಪರಿವಾರವಾಗಿದೆ. ಅವರೆಲ್ಲ ಬೀಗರು ಎಂದು ಟಾಂಗ್ ನೀಡಿದರು.

''ಹಿಂದೂ' ಬಳಕೆ ಬೇಡ ಎನ್ನುವ ಇವರೆಲ್ಲ ತಮ್ಮ ಜಾತಿ ಕಾಲಂನಲ್ಲಿ ಏನು ಬರೆಸಿದ್ದಾರೆ ಎಂಬುದನ್ನು ಹೇಳಲಿ, ಅವರ ಜಾತಿ ಕಾಲಂದಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಿಲ್ವಾ?, ಈಗ ಪಂಚಮಸಾಲಿ ಸೇರಿದಂತೆ ಇತರ ಜನಾಂಗದವರಿಗೆ ವೀರಶೈವ ಲಿಂಗಾಯತ ಎಂದು ಬರೆಸಲು ಹೇಳುತ್ತಿದ್ದಾರೆ. ಹೀಗೆ ಮಾಡಿದರೆ ನಮಗೆ ಹಿಂದುಳಿದ ವರ್ಗದ ಯಾವುದೇ ಸೌಲಭ್ಯಗಳು ಸಿಗಲ್ಲ. ಈ ವಿಚಾರದಲ್ಲಿ ಕೂಡಲಸಂಗಮ ಸ್ವಾಮೀಜಿ ಸೇರಿದಂತೆ ಇತರರು ಸೇರಿ ನಿರ್ಧಾರ ಮಾಡುತ್ತೇವೆ. ನಾವು ಜಾತಿ ಕಾಲಂ‌ನಲ್ಲಿ ಹಿಂದೂ ಪಂಚಮಸಾಲಿ ಬರೆಸಬೇಕೋ, ಹಿಂದೂ ಲಿಂಗಾಯತ ಎಂದು ಬರೆಸಬೇಕೆಂಬುದನ್ನು ಶೀಘ್ರವಾಗಿ ಚರ್ಚೆ ಮಾಡುತ್ತೇವೆ. ಉಪಜಾತಿಗಳನ್ನು ಜಾತಿ ಕಾಲಂನಲ್ಲಿ ನಮೂದಿಸಿದರೆ ಮೀಸಲಾತಿಯಲ್ಲಿ ನಮಗೆ ಸೌಲಭ್ಯ ಸಿಗುತ್ತದೆ" ಎಂದು ಯತ್ನಾಳ್ ತಿಳಿಸಿದರು.

ಇದನ್ನೂ ಓದಿ: ಲಿಂಗಾಯತರು ಹಿಂದೂಗಳಲ್ಲ ಎಂಬ ನಿರ್ಣಯಕ್ಕೆ ಬಿಎಸ್​ವೈ, ಪಂಚಾಚಾರ್ಯರ ನಿಲುವೇನು?: ಜಾಮದಾರ್

Last Updated :Dec 26, 2023, 9:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.