ETV Bharat / entertainment

'ತುಂಬಾ ಮಿಸ್ ಮಾಡಿಕೊಳ್ಳುತ್ತಿರುವೆ': ಆಪ್ತಮಿತ್ರ ವಿಜಯಕಾಂತ್ ಬಗ್ಗೆ ಸೂಪರ್​ಸ್ಟಾರ್ ರಜಿನಿ ಭಾವನಾತ್ಮಕ ಮಾತು! - RAJINIKANTH VIDEO

author img

By ETV Bharat Karnataka Team

Published : May 16, 2024, 5:00 PM IST

ತಮ್ಮ ಆಪ್ತ ಸ್ನೇಹಿತ, ನಟ ದಿವಂಗತ ವಿಜಯಕಾಂತ್ ಅವರ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಭಾವನಾತ್ಮಕ ವೀಡಿಯೊ ಒಂದನ್ನು ಶೇರ್ ಮಾಡಿದ್ದಾರೆ.

ಆಪ್ತಮಿತ್ರ ವಿಜಯಕಾಂತ್ ಬಗ್ಗೆ ಸೂಪರ್​ಸ್ಟಾರ್ ರಜಿನಿ ಭಾವನಾತ್ಮಕ ಮಾತು!
ಆಪ್ತಮಿತ್ರ ವಿಜಯಕಾಂತ್ ಬಗ್ಗೆ ಸೂಪರ್​ಸ್ಟಾರ್ ರಜಿನಿ ಭಾವನಾತ್ಮಕ ಮಾತು! (ians)

ಹೈದರಾಬಾದ್: ನಟ-ರಾಜಕಾರಣಿ ವಿಜಯಕಾಂತ್ ಅವರಿಗೆ ಮರಣೋತ್ತರ ಪದ್ಮಭೂಷಣ ಪ್ರಶಸ್ತಿಯ ಗೌರವ ಸಂದಿರುವುದರ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಭಾವನಾತ್ಮಕ ವಿಡಿಯೋ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ತಮಗೆ ಆಪ್ತ ಸ್ನೇಹಿತರಾಗಿದ್ದ ವಿಜಯಕಾಂತ್​ ಅವರ ಸಾಧನೆಗಳನ್ನು ರಜನಿಕಾಂತ್ ಸ್ಮರಿಸಿಕೊಂಡಿದ್ದು, ಆತ್ಮೀಯ ಸ್ನೇಹಿತನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಕಳೆದ ವರ್ಷ ಜನವರಿಯಲ್ಲಿ ಕೇಂದ್ರ ಸರ್ಕಾರವು 2024 ರ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಹೀಗಾಗಿ ದಿವಂಗತ ನಟ ವಿಜಯಕಾಂತ್ ಅವರಿಗೆ ಮೇ 9, 2024 ರಂದು ಮರಣೋತ್ತರವಾಗಿ ಪದ್ಮಭೂಷಣ ಗೌರವವನ್ನು ನೀಡಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಜಯಕಾಂತ್ ಅವರ ಪತ್ನಿ ಪ್ರೇಮಲತಾ ವಿಜಯಕಾಂತ್ ಅವರಿಗೆ ಗೌರವಾನ್ವಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ನಟ ವಿಜಯಕಾಂತ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿರುವುದಕ್ಕೆ ಅನೇಕ ಸೆಲೆಬ್ರಿಟಿಗಳು ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಈ ಸಂದರ್ಭದಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

"ಕೇಂದ್ರ ಸರ್ಕಾರವು ದಿವಂಗತ ನಟ ಮತ್ತು ನನ್ನ ಸ್ನೇಹಿತ ವಿಜಯಕಾಂತ್ ಅವರಿಗೆ ಪದ್ಮಭೂಷಣ ನೀಡಿ ಗೌರವಿಸಿದೆ. ಇದು ಸಂತೋಷದ ಕ್ಷಣ. ವಿಜಯಕಾಂತ್​ ಅವರ ಇತಿಹಾಸವು 2024ರ ಪದ್ಮ ಪ್ರಶಸ್ತಿಯ ದಾಖಲೆಗಳಲ್ಲಿ ಸೇರ್ಪಡೆಯಾಗುತ್ತಿದೆ. ಇದು ಅವರಿಗೂ ದೊಡ್ಡ ಗೌರವವಾಗಿದೆ" ಎಂದು ರಜನಿಕಾಂತ್ ವಿಡಿಯೋದಲ್ಲಿ ಹೇಳಿದ್ದಾರೆ.

"ವಿಜಯಕಾಂತ್ ನಮ್ಮೊಂದಿಗಿಲ್ಲ ಎಂಬುದು ನನ್ನ ಮನಸ್ಸಿಗೆ ಅತೀವ ನೋವಿನ ಸಂಗತಿ. ಅವರು ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಿ ನಮ್ಮೆಲ್ಲರಿಂದ ದೂರವಾದರು. ಅವರಂಥ ಮತ್ತೊಬ್ಬ ವ್ಯಕ್ತಿ ಸಿಗಲಾರರು. ನಾನು ಅವನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರು ನಿಜವಾದ ಮಧುರೈ ವೀರನ್." ಎಂದು ವಿಡಿಯೋದಲ್ಲಿ ತಮಿಳು ಭಾಷೆಯಲ್ಲಿ ಆಪ್ತ ಸ್ನೇಹಿತನ ಸಾಧನೆಗಳನ್ನು ರಜನಿಕಾಂತ್ ಕೊಂಡಾಡಿದ್ದಾರೆ.

ವಿಜಯಕಾಂತ್ ಅವರ ಪತ್ನಿ ಪ್ರೇಮಲತಾ ಮತ್ತು ಅವರ ಮಗ ವಿಜಯಕಾಂತ್ ಇಬ್ಬರೂ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ಮೇ 9 ರಂದು ನವದೆಹಲಿಗೆ ತೆರಳಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮ ಗೌರವವನ್ನು ಪ್ರದಾನ ಮಾಡಿದರು.

ರಜನಿಕಾಂತ್ ಅವರ ವೀಡಿಯೊ ವೈರಲ್ ಆದ ನಂತರ ಅಭಿಮಾನಿಗಳು ರಜನಿಕಾಂತ್ ಮತ್ತು ವಿಜಯಕಾಂತ್ ಅವರ ಹಳೆಯ ಫೋಟೋಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ರಜನಿಕಾಂತ್ ಕೆಲ ದಿನಗಳ ಹಿಂದೆ ತಮ್ಮ ಮುಂದಿನ ಚಿತ್ರ ವೆಟ್ಟೈಯನ್ ಚಿತ್ರೀಕರಣವನ್ನು ಮುಗಿಸಿದ ನಂತರ ಸದ್ಯ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ. ಶೀಘ್ರದಲ್ಲೇ ರಜನಿಕಾಂತ್ ಅವರು ಲೋಕೇಶ್ ಕನಗರಾಜ್ ನಿರ್ದೇಶನದ ಕೂಲಿ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದು, ಇದು ಜೂನ್ ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆಕ್ಷನ್ ಡ್ರಾಮಾ ಕಥಾಹಂದರದ ಈ ಚಿತ್ರ ಪ್ರಸ್ತುತ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ ಮತ್ತು ಶೀಘ್ರದಲ್ಲೇ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ : 26 ವರ್ಷಗಳ ಬಳಿಕ ನಾಳೆ 'A' ರೀ ರಿಲೀಸ್: ಇದು ನನ್ನ ಬದುಕು ಬದಲಿಸಿದ ಸಿನಿಮಾ ಎಂದ ನಟಿ ಚಾಂದಿನಿ - A Movie Re Release

ETV Bharat Logo

Copyright © 2024 Ushodaya Enterprises Pvt. Ltd., All Rights Reserved.