ETV Bharat / state

ಎರಡು ಗಂಟೆ ಬಂದ್, ಇದ್ಯಾವ ಸೀಮೆ ಬಂದ್ : ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯ

author img

By

Published : Mar 7, 2023, 4:01 PM IST

ಕಾಂಗ್ರೆಸ್​ ಪಕ್ಷದವರ ’ಕೈ‘ ಭ್ರಷ್ಟಾಚಾರದಿಂದ ಕಪ್ಪಾಗಿದೆ. ಅವರಿಗೆ ನಮ್ಮ ವಿರುದ್ಧ ಬಂದ್​ ಮಾಡುವ ನೈತಿಕತೆ ಇದೆಯೇ? ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ಮೈಸೂರು : ಮಾರ್ಚ್ 9 ರಂದು ಕಾಂಗ್ರೆಸ್ ಕರೆ ನೀಡಿರುವ ಬಂದ್, ಯಾವ ಸೀಮೆಯ ಬಂದ್. ಎಲ್ಲಾದರೂ ಎರಡು ಗಂಟೆ ಬಂದ್ ಮಾಡುವುದನ್ನ ಜಗತ್ತಿನಲ್ಲಿ ಕೇಳಿದ್ದೀರಾ?. ಯಾವ ಕಾರಣಕ್ಕೂ ಬಂದ್​ಗೆ ಜನ ಬೆಂಬಲ ಇಲ್ಲ. ಬಂದ್ ಯಶಸ್ವಿ ಆಗುವುದಿಲ್ಲ ಎಂದು ಮೈಸೂರಿನಲ್ಲಿ ಸಿ ಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾರ್ಚ್ 9 ರಂದು ಕಾಂಗ್ರೆಸ್​ಗೆ ಕರೆ ನೀಡಿರುವ ಎರಡು ಗಂಟೆ ಬಂದ್​ಗೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಎರಡು ಗಂಟೆ ಬಂದ್ ಅದ್ಯಾವ ಸೀಮೆಯ ಬಂದ್, ಎರಡು ಗಂಟೆ ಬಂದ್ ಮಾಡುವುದನ್ನ ಎಲ್ಲಾದರೂ ಕೇಳಿದ್ದೀರಾ. ಈ ಬಂದ್ ಅನ್ನು ಕಾಂಗ್ರೆಸ್ ಏಕೆ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದವರ ಕೈ ಭ್ರಷ್ಟಾಚಾರದಿಂದ ಕೆಸರಾಗಿದೆ. ಅವರಿಗೆ ನಮ್ಮ ವಿರುದ್ಧ ಬಂದ್ ಮಾಡುವ ನೈತಿಕತೆ ಇದೆಯೇ ಎಂದು ಸಿಎಂ ವಾಗ್ದಾಳಿ ನಡೆಸಿದರು.

ಮಾರ್ಚ್ 9 ರಂದು ಪಿಯುಸಿ ಪರೀಕ್ಷೆ ಸೇರಿದಂತೆ ಇತರ ಪರೀಕ್ಷೆಗಳು ಇವೆ. ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಸುಪ್ರೀಂಕೋರ್ಟ್ ಕೂಡ ಬಂದ್ ಮಾಡಬಾರದು ಎಂದು ಹೇಳಿದೆ. ಯಾವ ಕಾರಣಕ್ಕೂ ಬಂದ್​ಗೆ ಜನ ಬೆಂಬಲ ಇಲ್ಲ, ಬಂದ್ ಯಶಸ್ವಿ ಆಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿದರು.

ಜಾಮೀನು ವಿಚಾರ ನನ್ನ ಗಮನಕ್ಕೆ ಬಂದಿಲ್ಲ : ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ಜಾಮೀನು ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನಾನು ಹೈಕೋರ್ಟ್ ತೀರ್ಮಾನವನ್ನ ವಿಶ್ಲೇಷಣೆ ಮಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದ ಸಿಎಂ, ನಾನು ಲೋಕಾಯುಕ್ತ ಬಂದ್ ಮಾಡಿದ್ದರೆ ರಾಜಿನಾಮೆ ಕೋಡುತ್ತೇನೆ ಎಂಬ ಸಿದ್ದರಾಮಯ್ಯ ಸವಾಲಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಲೋಕಾಯುಕ್ತವನ್ನ ಬಂದ್ ಮಾಡಲಿಲ್ಲ, ಆದರೆ ಲೋಕಾಯುಕ್ತದ ಎಲ್ಲ ಹಲ್ಲುಗಳನ್ನು ಕಿತ್ತು ಹಾಕಿದರು. ಹಲ್ಲು ಕಿತ್ತ ಮೇಲೆ ಲೋಕಾಯುಕ್ತ ಇದ್ದರೆಷ್ಟು, ಇಲ್ಲದಿದ್ದರೆಷ್ಟು. ಲೋಕಾಯುಕ್ತ ಇದ್ದಿದ್ದರೆ ಎಸಿಬಿಗೆ ಏಕೆ ವರ್ಗವಾಗುತ್ತಿತ್ತು ಎಂದು ತಿರುಗೇಟು ನೀಡಿದರು.

ಬಿಜೆಪಿಯ ವಿಜಯಸಂಕಲ್ಪ ಯಾತ್ರೆ ಶೇ40 ರಷ್ಟು ಕಮಿಷನ್​​ನ ಸಂಕಲ್ಪ ಯಾತ್ರೆ ಎಂಬ ಸಿದ್ದರಾಮಯ್ಯ ಟೀಕೆಗೆ ತಿರುಗೇಟು ನೀಡಿದ ಸಿಎಂ, ಕಾಂಗ್ರೆಸ್ ನವರು ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆ ಶೇ 100 ಪರ್ಸೆಂಟ್ ಕಮಿಷನ್ ಯಾತ್ರೆ. ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್​​​ಗೆ ಮಾತನಾಡುವ ನೈತಿಕತೆ ಇಲ್ಲ. ಈಗಾಗಲೇ ಭ್ರಷ್ಟಾಚಾರದಿಂದ ಕಾಂಗ್ರೆಸ್ ಕೈಗಳು ಕಪ್ಪಾಗಿವೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಎಚ್ಚರಿಕೆ ತೆಗೆದುಕೊಳ್ಳಿ ಎಂದು ಹೇಳಿದೆ: ಹೆಚ್3 ಎನ್2 ವೈರಸ್ ಭೀತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದೆ. ಇಡೀ ರಾಜ್ಯಕ್ಕೆ ಗೈಡ್ ಲೈನ್ಸ್ ಅನ್ನು ಶೀಘ್ರದಲ್ಲಿ ನೀಡಲಿದ್ದೂ, ಅದಕ್ಕಾಗಿ ಅಗತ್ಯ ಔಷಧಗಳನ್ನು ಸಂಗ್ರಹ ಮಾಡುವಂತೆ ಸೂಚನೆ ನೀಡಿದ್ದು, ಸದ್ಯ ಕರ್ನಾಟಕದಲ್ಲಿ ಅಂತಹ ತೊಂದರೆ ಏನೂ ಇಲ್ಲ. ಎಚ್ಚರಿಕೆ ವಹಿಸಬೇಕು, ಮಾಸ್ಕ್ ಕಡ್ಡಾಯವಲ್ಲ. ಇವತ್ತು ಉನ್ನತ ಮಟ್ಟದ ಸಭೆ ನಡೆಸಿ, ಮುನ್ನೆಚ್ಚರಿಕೆಯಾಗಿ ಕೆಲವು ತೀರ್ಮಾನಗಳನ್ನು ‌ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.

ಸಿದ್ದರಾಮಯ್ಯ ಪರೀಕ್ಷೆ ಮಾಡಲಿ : ಬೆಂಗಳೂರು ಮೈಸೂರು ದಶಪಥ ರಸ್ತೆಯನ್ನು ಮಾರ್ಚ್ 9 ರಂದು ಸಿದ್ದರಾಮಯ್ಯ ಪರಿಶೀಲನೆ ನಡೆಸಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಹೈವೇಯನ್ನ ಸಿದ್ದರಾಮಯ್ಯ ಪರಿಶೀಲನೆ ಮಾಡಲಿ, ನಮ್ಮದೇನು ತಕರಾರಿಲ್ಲ. ಈಗಾಗಲೇ ಸಾವಿರಾರು ಜನ ಹೈವೇಯಲ್ಲಿ ಓಡಾಡುತ್ತಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಒಬ್ಬರು ಎಂದು ಹೇಳಿದ ಸಿಎಂ, ದಶಪಥ ರಸ್ತೆ ಕಾಂಗ್ರೆಸ್ ಕಾಲದಲ್ಲೇ ಯೋಜನೆ ಜಾರಿಯಾಗಿತ್ತು. ಇದರ ಕ್ರೆಡಿಟ್ ಕಾಂಗ್ರೆಸ್ ಸರ್ಕಾರಕ್ಕೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಕೆಲಸ ಮಾಡಿದ್ದು ಯಾರು? ಹಣ ಬಿಡುಗಡೆ ಮಾಡಿದ್ದು ಯಾರು? ಇದು ಕೇಂದ್ರ ಸರ್ಕಾರದ ಯೋಜನೆ? ಸಿದ್ದರಾಮಯ್ಯನವರಿಗೆ ಗೊತ್ತಿಲ್ಲವೆ? ಎಂದು ಟೀಕಿಸಿದರು.

ಇದನ್ನೂ ಓದಿ : ಕೆಲವರು ಶರ್ಟ್, ಪ್ಯಾಂಟ್ ಹೊಲಿಸಿ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ: ಕಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.