ETV Bharat / state

ಮೈಸೂರು ಆಯ್ತು ಇದೀಗ ಸಕ್ಕರೆ ನಾಡಲ್ಲೂ ಟಿಪ್ಪು ನಿಜಕನಸುಗಳ ನಾಟಕ ಪ್ರದರ್ಶನ

author img

By

Published : Jan 13, 2023, 9:33 PM IST

ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಟಿಪ್ಪು ನಿಜ ಕನಸುಗಳು ನಾಟಕ 24 ಬಾರಿ ಯಶಸ್ವಿ ಪ್ರದರ್ಶನ ಕಂಡಿದೆ. ಇದೀಗ ಮಂಡ್ಯದಲ್ಲಿ ನಾಟಕದ 25ನೇ ಪ್ರದರ್ಶನವನ್ನು ಮಾಡುತ್ತಿದ್ದೇವೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ತಿಳಿಸಿದ್ದಾರೆ.

ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ
ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ

ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಮಾತನಾಡಿದರು

ಮಂಡ್ಯ: ಮೈಸೂರಿನ ರಂಗಾಯಣದ ವತಿಯಿಂದ ಜನವರಿ 14-15ರಂದು ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಟಿಪ್ಪು ನಿಜ ಕನಸುಗಳು ಎಂಬ ನಾಟಕದ 25ನೇ ಪ್ರದರ್ಶನ ಮಾಡುತ್ತಿದ್ದೇವೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ನಾಟಕ 24 ಬಾರಿ ಯಶಸ್ವಿ ಪ್ರದರ್ಶನ ಕಂಡಿದೆ. ಇದೀಗ ಮಂಡ್ಯದಲ್ಲಿ ನಾಟಕದ 25ನೇ ಪ್ರದರ್ಶನವನ್ನು ಮಾಡುತ್ತಿದ್ದೇವೆ. ಟಿಪ್ಪು ನಿಜ ಕನಸುಗಳು ನಾಟಕ ಮಂಡ್ಯದಲ್ಲಿ ಪ್ರದರ್ಶನವಾಗುತ್ತಿರುವುದಕ್ಕೆ ಮಹತ್ವವಿದೆ ಎಂದರು.

ಈ ಮಣ್ಣಿನ ಮಕ್ಕಳಾದ ಉರಿಗೌಡ ಮತ್ತು ದೊಡ್ಡನಂಜೇಗೌಡ ಇವರು ಕೃಷಿಕರು, ಪಾರ್ಟ್​ ಟೈಮ್ ಯೋದರು. ಬಿಡುವಿನ ವೇಳೆಯಲ್ಲಿ ಯುದ್ಧಕ್ಕೆ ಕರೆದರೆ ಹೋಗುವಂತಹ ನಾಯಕರು ಅವರು. ಅವರು ಟಿಪ್ಪುವನ್ನು 1799 ಮೇ 4ರಂದು ಆತನ ಕೋಟೆಗೆ ನುಗ್ಗಿ ಆತನನ್ನು ಅಟ್ಟಾಡಿಸಿ ಕೊಲ್ಲುತ್ತಾರೆ. ಶ್ರೀರಂಗಪಟ್ಟಣದ ವಾಟರ್​ಗೇಟ್ ದ್ವಾರದೊಳಗೆ ಈ ಘಟನೆ ನಡೆಯುತ್ತದೆ ಎಂದು ಅವರು ವಿವರಿಸಿದರು.

ಟಿಪ್ಪು ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟೀಷರಿಂದ ಹತನಾದ ಎಂಬ ಸುಳ್ಳು ಚರಿತ್ರೆ ಪ್ರಚಲಿತವಿದೆ. ಆದರೆ, ಅನೇಕ ದಾಖಲೆಗಳಿಂದ ಈ ಸುದ್ದಿ ಸುಳ್ಳು ಎಂಬುದು ಸಾಬೀತಾಗಿದೆ. ಬ್ರಿಟೀಷರು ಕೋಟೆ ಬಾಗಿಲನ್ನು ಒಡೆದು ಒಳನುಗ್ಗುವ ಮೊದಲೇ ಟಿಪ್ಪು ಹತನಾಗಿದ್ದ ಎಂದರು.

ಟಿಪ್ಪುವಿನಿಂದ ರೈತ ವಿರೋಧಿ ನೀತಿ: ಉರಿಗೌಡ ಮತ್ತು ದೊಡ್ಡನಂಜೇಗೌಡ ಇವರು ಮಳವಳ್ಳಿಯವರಾಗಿದ್ದು, ಇವರು ಕೃಷಿಕರಾಗಿದ್ದರು. ಇವರು ಟಿಪ್ಪು ರೈತರಿಗೆ ತೆರಿಗೆ ವಿಧಿಸಿದ್ದನ್ನು ವಿರೋಧಿಸಿದ್ದರು. ಟಿಪ್ಪು 3ನೇ ಆಂಗ್ಲೋ ಮೈಸೂರು ಯುದ್ದದ ಸಂದರ್ಭದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದ. ಖಜಾನೆ ಖಾಲಿಯಾಗಿತ್ತು. ಹೀಗಾಗಿ ರೈತರಿಗೆ ತೆರಿಗೆ ವಿಧಿಸಿದ್ದ. ಆದರೆ, ಮತಾಂತರಗೊಂಡ ಮುಸ್ಲೀಂರಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತು. ಹೀಗಾಗಿ ಅವರು ಟಿಪ್ಪುವಿನ ವಿರುದ್ಧ ತಿರುಗಿಬಿದ್ದಿದ್ದರು ಎಂದು ಹೇಳಿದರು.

ಟಿಪ್ಪು ನಿಜ ಕನಸುಗಳು ಕೃತಿ ಮಾರಾಟಕ್ಕೆ ತಾತ್ಕಾಲಿಕ ನಿರ್ಬಂಧ( ಬೆಂಗಳೂರು): ಇನ್ನೊಂದೆಡೆ, ಟಿಪ್ಪು ನಿಜ ಕನಸುಗಳು ಕೃತಿ ಮಾರಾಟಕ್ಕೆ ಮಾತ್ರ ನ್ಯಾಯಾಲಯ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ಆದರೆ, ನಾಟಕ ಪ್ರದರ್ಶನಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಹಾಗಾಗಿ ಪೂರ್ವ ನಿಗದಿತ ದಿನಾಂಕಗಳಂದು ಮೈಸೂರಿನ ರಂಗಾಯಣದಿಂದ ಮೈಸೂರು ರಂಗಮಂದಿರದಲ್ಲಿ ನಾಟಕ ಪ್ರದರ್ಶನ ಆಗಲಿದೆ ಎಂದು ರಂಗಾಯಣದ ನಿರ್ದೇಶಕ, ಲೇಖಕ ಅಡ್ಡಂಡ ಕಾರ್ಯಪ್ಪ ಸ್ಪಷ್ಟಪಡಿಸಿದ್ದರು.

ಟಿಪ್ಪು ನಿಜಕನಸುಗಳು ಕೃತಿ ಮಾರಾಟಕ್ಕೆ ನ್ಯಾಯಾಲಯ ತಾತ್ಕಾಲಿಕ ನಿರ್ಬಂಧ ವಿಧಿಸಿದ್ದ ಹಿನ್ನೆಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರನ್ನು ಲೇಖಕ ಅಡ್ಡಂಡ ಕಾರ್ಯಪ್ಪ ಭೇಟಿಯಾಗಿದ್ದರು. ವಿಧಾನ ಸೌಧದಲ್ಲಿರುವ ಸಚಿವರ ಕಚೇರಿಯಲ್ಲಿ ಭೇಟಿ ಮಾಡಿ ಕೆಲ ಕಾಲ ಮಾತುಕತೆ ನಡೆಸಿದ್ದರು.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಅವರು, ಟಿಪ್ಪು ನಿಜ ಕನಸುಗಳು ಕೃತಿ ಮಾರಾಟಕ್ಕೆ ತಡೆಯಾಜ್ಞೆ ವಿಧಿಸಿರುವ ನೋಟಿಸ್ ನನಗೆ ಬಂದಿಲ್ಲ. ಸ್ನೇಹಿತರು ನೀಡಿದ ವಿವರಣೆ ಪ್ರಕಾರ, ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಾನು ಬರೆದಿರುವ ಟಿಪ್ಪು ನಿಜಕನಸುಗಳು ಕೃತಿ ಮಾರಾಟಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆಯಂತೆ. ನ್ಯಾಯಾಲಯದ ಆದೇಶಕ್ಕೆ ನಾವು ತಲೆ ಬಾಗುತ್ತೇವೆ. ನೋಟಿಸ್ ತಲುಪಿದ ನಂತರ ನೋಡಿ ಅದನ್ನು ಪಾಲಿಸಲಿದ್ದೇವೆ ಎಂದು ಹೇಳಿದ್ದರು.

ನಾಟಕ ಪ್ರದರ್ಶನಕ್ಕೆ ತೊಂದರೆಯಿಲ್ಲ: ಈ ಪ್ರಕರಣದಲ್ಲಿ ದೂರುದಾರರು ನಾಲ್ಕು ಜನರನ್ನು ಪ್ರತಿ ವಾದಿಯನ್ನಾಗಿ ಮಾಡಿದ್ದಾರೆ. ನಾಟಕ ಬರೆದ ನನ್ನನ್ನು (ಲೇಖಕ ಅಡ್ಡಂಡ ಕಾರ್ಯಪ್ಪ), ಪ್ರಕಾಶಕರು, ಮುದ್ರಣಗಾರರು ಮತ್ತು ನಾಲ್ಕನೆಯದಾಗಿ ರಂಗಾಯಣ ನಿರ್ದೇಶಕರನ್ನು (ಅಡ್ಡಂಡ ಕಾರ್ಯಪ್ಪ) ಪ್ರತಿವಾದಿಯನ್ನಾಗಿಸಿದ್ದಾರೆ. ಈ ನಾಟಕದ ಕೃತಿ ಮಾರಾಟ ಮಾಡಬೇಡಿ ಎಂದು ಕೋರ್ಟ್ ನಿರ್ಬಂಧಿಸಿದೆ.

ಆದರೆ, ಕೃತಿ ಸಂಗ್ರಹ ಮಾಡಬಹುದು. ಈಗಾಗಲೇ ಕೃತಿಯ ಮುದ್ರಣವಾಗಿದೆ, ಎರಡನೇ ಮುದ್ರಣವೂ ಆಗಿದೆ. ನಿರ್ಬಂಧವನ್ನು ಮೊದಲ ಮೂವರು ಪ್ರತಿವಾದಿಗಳನ್ನು ಉಲ್ಲೇಖಿಸಿ ಮಾತ್ರ ಮಾಡಲಾಗಿದೆ. ನಾಲ್ಕನೇ ಪ್ರತಿವಾದಿಯಾಗಿರುವ ರಂಗಾಯಣ ನಿರ್ದೇಶಕರಿಗೆ ಯಾವುದೇ ನಿರ್ದೇಶನ ನೀಡಿಲ್ಲ, ನಾಟಕ ನಿರ್ಬಂಧ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹಾಗಾಗಿ ನಮ್ಮ ನಾಟಕ ಪ್ರದರ್ಶನಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

ಓದಿ: 'ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನಗೊಳ್ಳಲಿದೆ': ಅಡ್ಡಂಡ ಕಾರ್ಯಪ್ಪ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.