ETV Bharat / entertainment

'ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನಗೊಳ್ಳಲಿದೆ': ಅಡ್ಡಂಡ ಕಾರ್ಯಪ್ಪ ಸ್ಪಷ್ಟನೆ

author img

By

Published : Nov 23, 2022, 3:56 PM IST

Updated : Nov 23, 2022, 4:30 PM IST

addanda karyappa on tippu nija kanasugalu drama
ಲೇಖಕ ಅಡ್ಡಂಡ ಕಾರ್ಯಪ್ಪ

ಪೂರ್ವ ನಿಗದಿತ ದಿನಾಂಕಗಳಂದು ಮೈಸೂರಿನ ರಂಗಾಯಣದಿಂದ ಮೈಸೂರು ರಂಗಮಂದಿರದಲ್ಲಿ ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ ನಡೆಯಲಿದೆ ಎಂದು ಲೇಖಕ ಅಡ್ಡಂಡ ಕಾರ್ಯಪ್ಪ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು: ಟಿಪ್ಪು ನಿಜ ಕನಸುಗಳು ಕೃತಿ ಮಾರಾಟಕ್ಕೆ ಮಾತ್ರ ನ್ಯಾಯಾಲಯ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ಆದರೆ ನಾಟಕ ಪ್ರದರ್ಶನಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಹಾಗಾಗಿ ಪೂರ್ವ ನಿಗದಿತ ದಿನಾಂಕಗಳಂದು ಮೈಸೂರಿನ ರಂಗಾಯಣದಿಂದ ಮೈಸೂರು ರಂಗಮಂದಿರದಲ್ಲಿ ನಾಟಕ ಪ್ರದರ್ಶನ ಆಗಲಿದೆ ಎಂದು ರಂಗಾಯಣದ ನಿರ್ದೇಶಕ, ಲೇಖಕ ಅಡ್ಡಂಡ ಕಾರ್ಯಪ್ಪ ಸ್ಪಷ್ಟಪಡಿಸಿದ್ದಾರೆ.

ಟಿಪ್ಪು ನಿಜಕನಸುಗಳು ಕೃತಿ ಮಾರಾಟಕ್ಕೆ ನ್ಯಾಯಾಲಯ ತಾತ್ಕಾಲಿಕ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರನ್ನು ಲೇಖಕ ಅಡ್ಡಂಡ ಕಾರ್ಯಪ್ಪ ಭೇಟಿಯಾದರು. ವಿಧಾನ ಸೌಧದಲ್ಲಿರುವ ಸಚಿವರ ಕಚೇರಿಯಲ್ಲಿ ಭೇಟಿ ಮಾಡಿ ಕೆಲ ಕಾಲ ಮಾತುಕತೆ ನಡೆಸಿದರು.

ಲೇಖಕ ಅಡ್ಡಂಡ ಕಾರ್ಯಪ್ಪ

ನೋಟಿಸ್ ನನಗೆ ಬಂದಿಲ್ಲ: ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪು ನಿಜ ಕನಸುಗಳು ಕೃತಿ ಮಾರಾಟಕ್ಕೆ ತಡೆಯಾಜ್ಞೆ ವಿಧಿಸಿರುವ ನೋಟಿಸ್ ನನಗೆ ಬಂದಿಲ್ಲ. ಸ್ನೇಹಿತರು ನೀಡಿದ ವಿವರಣೆ ಪ್ರಕಾರ, ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಾನು ಬರೆದಿರುವ ಟಿಪ್ಪು ನಿಜಕನಸುಗಳು ಕೃತಿ ಮಾರಾಟಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆಯಂತೆ. ನ್ಯಾಯಾಲಯದ ಆದೇಶಕ್ಕೆ ನಾವು ತಲೆ ಬಾಗುತ್ತೇವೆ. ನೋಟಿಸ್ ತಲುಪಿದ ನಂತರ ನೋಡಿ ಅದನ್ನು ಪಾಲಿಸಲಿದ್ದೇವೆ ಎಂದು ಹೇಳಿದರು.

ನಾಟಕ ಪ್ರದರ್ಶನಕ್ಕೆ ತೊಂದರೆಯಿಲ್ಲ: ಈ ಪ್ರಕರಣದಲ್ಲಿ ದೂರುದಾರರು ನಾಲ್ಕು ಜನರನ್ನು ಪ್ರತಿವಾದಿಯನ್ನಾಗಿ ಮಾಡಿದ್ದಾರೆ. ನಾಟಕ ಬರೆದ ನನ್ನನ್ನು (ಲೇಖಕ ಅಡ್ಡಂಡ ಕಾರ್ಯಪ್ಪ), ಪ್ರಕಾಶಕರು, ಮುದ್ರಣಗಾರರು ಮತ್ತು ನಾಲ್ಕನೆಯದಾಗಿ ರಂಗಾಯಣ ನಿರ್ದೇಶಕರನ್ನು (ಅಡ್ಡಂಡ ಕಾರ್ಯಪ್ಪ) ಪ್ರತಿವಾದಿಯನ್ನಾಗಿಸಿದ್ದಾರೆ. ಈ ನಾಟಕದ ಕೃತಿ ಮಾರಾಟ ಮಾಡಬೇಡಿ ಎಂದು ಕೋರ್ಟ್ ನಿರ್ಬಂಧಿಸಿದೆ. ಆದರೆ ಕೃತಿ ಸಂಗ್ರಹ ಮಾಡಬಹುದು. ಈಗಾಗಲೇ ಕೃತಿಯ ಮುದ್ರಣವಾಗಿದೆ, ಎರಡನೇ ಮುದ್ರಣವೂ ಆಗಿದೆ. ನಿರ್ಬಂಧವನ್ನು ಮೊದಲ ಮೂವರು ಪ್ರತಿವಾದಿಗಳನ್ನು ಉಲ್ಲೇಖಿಸಿ ಮಾತ್ರ ಮಾಡಲಾಗಿದೆ. ನಾಲ್ಕನೇ ಪ್ರತಿವಾದಿಯಾಗಿರುವ ರಂಗಾಯಣ ನಿರ್ದೇಶಕರಿಗೆ ಯಾವುದೇ ನಿರ್ದೇಶನ ನೀಡಿಲ್ಲ, ನಾಟಕ ನಿರ್ಬಂಧ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹಾಗಾಗಿ ನಮ್ಮ ನಾಟಕ ಪ್ರದರ್ಶನಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: 'ಟಿಪ್ಪು ನಿಜ ಕನಸುಗಳು' ಕೃತಿ ತಡೆಗೆ ಕಾನೂನು ಹೋರಾಟ ಮಾಡುತ್ತೇವೆ: ಶಾಸಕ ತನ್ವಿರ್ ಸೇಠ್

ನಾಟಕ ಪ್ರದರ್ಶನಗೊಳ್ಳಲಿದೆ: ರಂಗಾಯಣದ ಕೆಲಸ ರಂಗಾಯಣದಲ್ಲಿನ ಚಟುವಟಿಕೆ ನಡೆಸುವುದಾಗಿದೆ. ಅದಕ್ಕಾಗಿಯೇ ನಿರ್ದೇಶಕರನ್ನು ಸರ್ಕಾರ ನೇಮಿಸಿದೆ. ಅದರಂತೆ ಅವರು ರಂಗಾಯಣದ ಚಟುವಟಿಕೆ ನಡೆಸಲಿದ್ದಾರೆ. ನಮ್ಮ ನಾಟಕ ಪ್ರದರ್ಶನಕ್ಕೆ ಯಾವುದೇ ತಡೆಯಾಜ್ಞೆ ಬಂದಿಲ್ಲ. ಹಾಗಾಗಿ ಮೈಸೂರಿನಲ್ಲಿ ಈ ಮೊದಲೇ ನಿಗದಿಯಾದ ದಿನಾಂಕಗಳಂದು ಟಿಪ್ಪು ನಿಜಕನಸುಗಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಇದನ್ನೂ ಓದಿ: ಪೊಲೀಸ್ ಭದ್ರತೆ ನಡುವೆ ಪ್ರದರ್ಶನಗೊಂಡ 'ಟಿಪ್ಪು ನಿಜ ಕನಸುಗಳು' ನಾಟಕ

ಕಾನೂನು ಹೋರಾಟ: ಇನ್ನು, ನ್ಯಾಯಾಲಯದ ನೋಟಿಸ್ ಲಭ್ಯವಾಗುತ್ತಿದ್ದಂತೆ ಕೃತಿ ಮಾರಾಟಕ್ಕೆ ವಿಧಿಸಿರುವ ತಡೆಯಾಜ್ಞೆ ತೆರವು ಮಾಡಿಸುವ ಕುರಿತು ಕಾನೂನು ಹೋರಾಟ ನಡೆಸಲಾಗುತ್ತದೆ ಎಂದು ಅಡ್ಡಂಡ ಕಾರ್ಯಪ್ಪ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

Last Updated :Nov 23, 2022, 4:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.