ETV Bharat / international

ನೌಕರಿ ಆಸೆಯಿಂದ ಲಾವೋಸ್​ನಲ್ಲಿ ವಂಚಕರ ಬಲೆಗೆ ಸಿಲುಕಿದ್ದ 13 ಭಾರತೀಯರ ರಕ್ಷಣೆ - Indians Rescued from Laos

author img

By ETV Bharat Karnataka Team

Published : May 26, 2024, 7:29 PM IST

ನಕಲಿ ನೌಕರಿ ಆಫರ್​ಗಳಿಗೆ ಮರುಳಾಗಿ ಲಾವೋಸ್​ಗೆ ಹೋಗಿ ವಂಚಕರ ಬಲೆಗೆ ಸಿಲುಕಿದ್ದ 13 ಭಾರತೀಯರನ್ನು ರಕ್ಷಿಸಿ ವಾಪಸ್ ಕರೆತರಲಾಗಿದೆ.

ನೌಕರಿ ಆಸೆಯಿಂದ ಲಾವೋಸ್​ನಲ್ಲಿ ವಂಚಕರ ಬಲೆಗೆ ಸಿಲುಕಿದ್ದ 13 ಭಾರತೀಯರ ರಕ್ಷಣೆ
ನೌಕರಿ ಆಸೆಯಿಂದ ಲಾವೋಸ್​ನಲ್ಲಿ ವಂಚಕರ ಬಲೆಗೆ ಸಿಲುಕಿದ್ದ 13 ಭಾರತೀಯರ ರಕ್ಷಣೆ (IANS image)

ವಿಯೆಂಟಿಯಾನ್ (ಲಾವೋಸ್): ಉದ್ಯೋಗದ ಆಸೆಯಿಂದ ಲಾವೋಸ್​ಗೆ ಹೋಗಿ ವಂಚಕರ ಬಲೆಗೆ ಸಿಲುಕಿದ್ದ 13 ಭಾರತೀಯರನ್ನು ಯಶಸ್ವಿಯಾಗಿ ರಕ್ಷಿಸಿ ಸ್ವದೇಶಕ್ಕೆ ಕರೆತರಲಾಗಿದೆ ಎಂದು ಲಾವೋಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾನುವಾರ ತಿಳಿಸಿದೆ.

ಆಗ್ನೇಯ ಏಷ್ಯಾ ದೇಶವಾದ ಲಾವೋಸ್​ನ ಅಟ್ಟಾಪೆಯು ಪ್ರಾಂತ್ಯದ ಮರದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಏಳು ಒಡಿಯಾ ಕಾರ್ಮಿಕರು ಮತ್ತು ಬೊಕಿಯೊ ಪ್ರಾಂತ್ಯದ ಗೋಲ್ಡನ್ ಟ್ರಯಾಂಗಲ್ ವಿಶೇಷ ಆರ್ಥಿಕ ವಲಯದಲ್ಲಿ ಕೆಲಸ ಮಾಡುತ್ತಿದ್ದ ಆರು ಯುವಕರು ಸೇರಿದಂತೆ 13 ಭಾರತೀಯರನ್ನು ರಕ್ಷಿಸಿ ಕರೆತರಲಾಗಿದೆ.

ಭಾರತೀಯರ ಸುರಕ್ಷತೆ ಮತ್ತು ಯೋಗಕ್ಷೇಮ ಕಾಪಾಡುವುದು ತನ್ನ ಮೊದಲ ಆದ್ಯತೆಯಾಗಿದೆ ಎಂದು ಹೇಳಿರುವ ರಾಯಭಾರ ಕಚೇರಿ, ಲಾವೋಸ್ ಅಥವಾ ಲಾವೋ ಪಿಡಿಆರ್​ಗೆ ಬರುವ ಭಾರತೀಯ ಕಾರ್ಮಿಕರು ನಕಲಿ ಅಥವಾ ಕಾನೂನುಬಾಹಿರ ಉದ್ಯೋಗ ಆಫರ್​ಗಳಿಂದ ಮೋಸಹೋಗದಂತೆ ಸಲಹೆ ನೀಡಿದೆ.

ಈ ತಿಂಗಳ ಆರಂಭದಲ್ಲಿ ಥೈಲ್ಯಾಂಡ್ ಮೂಲಕ ಲಾವೋಸ್​ಗೆ ಉದ್ಯೋಗಕ್ಕಾಗಿ ಭಾರತೀಯ ಪ್ರಜೆಗಳನ್ನು ಕರೆತಂದ ಇತ್ತೀಚಿನ ನಿದರ್ಶನಗಳನ್ನು ವಿವರಿಸಿ ಭಾರತೀಯ ಉದ್ಯೋಗಾಕಾಂಕ್ಷಿಗಳಿಗೆ ರಾಯಭಾರ ಕಚೇರಿ ಕೆಲ ಮುಂಜಾಗ್ರತಾ ಸಲಹೆಗಳನ್ನು ನೀಡಿದೆ.

ಲಾವೋಸ್​ನ ಗೋಲ್ಡನ್ ಟ್ರಯಾಂಗಲ್ ವಿಶೇಷ ಆರ್ಥಿಕ ವಲಯದಲ್ಲಿ ಕಾಲ್-ಸೆಂಟರ್ ಹಗರಣಗಳು ಮತ್ತು ಕ್ರಿಪ್ಟೋ-ಕರೆನ್ಸಿ ವಂಚನೆಯಲ್ಲಿ ಭಾಗಿಯಾಗಿರುವ ಅನುಮಾನಾಸ್ಪದ ಕಂಪನಿಗಳು 'ಡಿಜಿಟಲ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ಸ್' ಅಥವಾ 'ಗ್ರಾಹಕ ಬೆಂಬಲ ಸೇವೆ' ಯಂಥ ನಕಲಿ ಉದ್ಯೋಗಗಳನ್ನು ಆಫರ್ ಮಾಡುತ್ತವೆ.

ಈ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುವ ದುಬೈ, ಬ್ಯಾಂಕಾಕ್, ಸಿಂಗಾಪುರ್ ಮತ್ತು ಭಾರತದಂತಹ ಸ್ಥಳಗಳಲ್ಲಿನ ಏಜೆಂಟರು ಅತ್ಯಂತ ಸುಲಭವಾದ ಇಂಟರ್ ವ್ಯೂ ಮತ್ತು ಟೈಪಿಂಗ್ ಪರೀಕ್ಷೆ ನಡೆಸುವ ಮೂಲಕ ಭಾರತೀಯ ಪ್ರಜೆಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಹೆಚ್ಚಿನ ಸಂಬಳ, ವಾಸಿಸಲು ಹೋಟೆಲ್ ಬುಕಿಂಗ್ ಜೊತೆಗೆ ಹಿಂದಿರುಗುವ ವಿಮಾನ ಟಿಕೆಟ್​ಗಳು ಮತ್ತು ವೀಸಾ ಸೌಲಭ್ಯದ ಆಮಿಷಗಳನ್ನು ಈ ಕಂಪನಿಗಳು ಒಡ್ಡುತ್ತಿವೆ ಎಂದು ರಾಯಭಾರ ಕಚೇರಿ ತಿಳಿಸಿದೆ.

ನೌಕರಿ ಬಯಸಿ ಬರುವ ಅಮಾಯಕರನ್ನು ಥೈಲ್ಯಾಂಡ್​ನಿಂದ ಲಾವೋಸ್​ಗೆ ಅಕ್ರಮವಾಗಿ ಕರೆದೊಯ್ಯಲಾಗುತ್ತದೆ. ನಂತರ ಅತ್ಯಂತ ಕಠಿಣ ಮತ್ತು ದುರ್ಭರ ಪರಿಸ್ಥಿತಿಗಳಲ್ಲಿ ಲಾವೋಸ್​ನ ಗೋಲ್ಡನ್ ಟ್ರಯಾಂಗಲ್ ವಿಶೇಷ ಆರ್ಥಿಕ ವಲಯದಲ್ಲಿ ಅವರನ್ನು ಬಂಧಿಯಾಗಿಸಿ ಕೆಲಸ ಮಾಡಿಸಲಾಗುತ್ತದೆ ಎಂದು ಅದು ಹೇಳಿದೆ.

"ಕೆಲವೊಮ್ಮೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಕ್ರಿಮಿನಲ್ ಗ್ಯಾಂಗ್​ಗಳು ಅವರನ್ನು ಒತ್ತೆಯಾಳುಗಳಾಗಿ ಇಟ್ಟುಕೊಳ್ಳುತ್ತವೆ ಮತ್ತು ನಿರಂತರ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ ನೀಡುತ್ತ ಕಠಿಣ ಪರಿಸ್ಥಿತಿಗಳಲ್ಲಿ ಕೆಲಸ ಮಾಡಲು ಒತ್ತಾಯಿಸಲಾಗುತ್ತದೆ. ಇತರ ಕೆಲ ಸಂದರ್ಭಗಳಲ್ಲಿ ಗಣಿಗಾರಿಕೆ, ಮರದ ಕಾರ್ಖಾನೆಗಳು ಮುಂತಾದ ಕಡಿಮೆ ಸಂಬಳದ ಉದ್ಯೋಗಗಳಿಗೆ ಇವರನ್ನು ನೇಮಿಸಲಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ಈ ನೌಕರರನ್ನು ಅವರ ಹ್ಯಾಂಡ್ಲರ್​ಗಳು ಶೋಷಿಸುತ್ತಾರೆ ಮತ್ತು ಕಾನೂನುಬಾಹಿರ ಕೆಲಸಕ್ಕೆ ನೇಮಿಸಿ ಅಪಾಯಕ್ಕೆ ತಳ್ಳುತ್ತಾರೆ" ರಾಯಭಾರ ಕಚೇರಿಯ ಸಲಹೆಯಲ್ಲಿ ಉಲ್ಲೇಖಿಸಲಾಗಿದೆ.

ಮೋಸದ ಅಥವಾ ಶೋಷಣೆಯ ಉದ್ಯೋಗ ಆಫರ್​ಗಳಿಂದ ಪ್ರಲೋಭನೆಗೆ ಒಳಗಾಗದಂತೆ ಮತ್ತು ವಂಚಕರ ಬಲೆಗೆ ಬೀಳದಂತೆ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಿರುವ ರಾಯಭಾರ ಕಚೇರಿ, ಲಾವೋಸ್​ನಲ್ಲಿ ಯಾವುದೇ ಉದ್ಯೋಗವನ್ನು ಒಪ್ಪಿಕೊಳ್ಳುವ ಮೊದಲು ತೀವ್ರ ಎಚ್ಚರಿಕೆ ವಹಿಸುವಂತೆ ಮತ್ತು ನೇಮಕಾತಿ ಏಜೆಂಟರು ಮತ್ತು ಕಂಪನಿಗಳ ಪೂರ್ವಾಪರಗಳನ್ನು ಪರಿಶೀಲಿಸುವಂತೆ ವಿನಂತಿಸಿದೆ.

"ಥೈಲ್ಯಾಂಡ್ ಅಥವಾ ಲಾವೋಸ್​ಗೆ ವೀಸಾ ಆನ್ ಅರೈವಲ್ ಮೇಲೆ ಬಂದವರು ಆ ದೇಶಗಳಲ್ಲಿ ಉದ್ಯೋಗಕ್ಕೆ ಸೇರುವಂತಿಲ್ಲ. ಲಾವೋ ಅಧಿಕಾರಿಗಳು ಅಂತಹ ವೀಸಾ ಮೇಲೆ ಲಾವೋಸ್​ಗೆ ಬರುವ ಭಾರತೀಯ ಪ್ರಜೆಗಳಿಗೆ ಕೆಲಸದ ಪರವಾನಗಿ ನೀಡುವುದಿಲ್ಲ. ಇಂಥ ಪ್ರಕರಣಗಳನ್ನು ಮಾನವ ಕಳ್ಳಸಾಗಣೆ ಅಪರಾಧವೆಂದು ಪರಿಗಣಿಸಿ ಅಪರಾಧಿಗಳಿಗೆ 18 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ" ಎಂದು ಸಲಹೆಯಲ್ಲಿ ಎಚ್ಚರಿಸಲಾಗಿದೆ.

ಇದನ್ನೂ ಓದಿ : ಉದ್ಯೋಗದ ಹೆಸರಲ್ಲಿ ಮಹಾ ವಂಚನೆ! ಕಾಂಬೋಡಿಯಾದಲ್ಲಿ 60 ಮಂದಿ ಭಾರತೀಯರ ರಕ್ಷಣೆ - Job Scam In Cambodia

ETV Bharat Logo

Copyright © 2024 Ushodaya Enterprises Pvt. Ltd., All Rights Reserved.