ETV Bharat / state

ಕೊಪ್ಪಳ ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಹೆಚ್ಚು.. ಜಿಲ್ಲೆಯಿಂದ ಶಾಸಕರಾಗಿದ್ದು ಕೇವಲ ಒಬ್ಬ ಮಹಿಳೆ ಮಾತ್ರ..

author img

By

Published : Apr 6, 2023, 10:17 AM IST

ಕೊಪ್ಪಳ ಜಿಲ್ಲಾಧಿಕಾರಿಗಳು ವಿಧಾನಸಭಾ ಚುನಾವಣೆ ಹಿನ್ನೆಲೆ ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಜಿಲ್ಲೆಯಲ್ಲಿನ ಮತದಾರರ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೊಪ್ಪಳ ಜಿಲ್ಲಾಧಿಕಾರಿ
ಕೊಪ್ಪಳ ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಮಾಧ್ಯಮಗೋಷ್ಟಿ

ಕೊಪ್ಪಳ: ಬಿಸಿಲನಾಡು ಕೊಪ್ಪಳದಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತದಾರರ ಅಂತಿಮ ಪಟ್ಟಿ ಸಿದ್ಧಗೊಂಡಿದ್ದು, ನೂತನ ವಿಧಾನಸಭಾ ಸದಸ್ಯರ ಆಯ್ಕೆಗೆ ಮತದಾರರು ಸಜ್ಜಾಗಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿರುವ ಒಟ್ಟು ಮತದಾರರ ಪೈಕಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಅಧಿಕವಾಗಿದ್ದಾರೆ. ಆದರೂ, ಇಲ್ಲಿಯವರೆಗೂ ಜಿಲ್ಲೆಯಿಂದ ಶಾಸಕರಾಗಿದ್ದು, ಕೇವಲ ಒಬ್ಬ ಮಹಿಳೆ ಮಾತ್ರ ಅನ್ನೋ ಮಾಹಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

5,66,341 ಮಹಿಳಾ ಮತದಾರರು: ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 11,28,764 ಮತದಾರರಿದ್ದು ಈ ಪೈಕಿ 5,62,376 ಪುರುಷ ಮತದಾರರು ಹಾಗೂ 5,66,341 ಮಹಿಳಾ ಮತದಾರರು ಇದ್ದಾರೆ. ಅಂದರೆ ಪುರುಷ ಮತದಾರರಿಗಿಂತ ಒಟ್ಟು 3,965 ಮಹಿಳಾ ಮತದಾರರು ಅಧಿಕವಾಗಿದ್ದಾರೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಗಂಗಾವತಿ, ಕೊಪ್ಪಳ ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರಗಳಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರು ಅಧಿಕವಾಗಿದ್ದಾರೆ.

ಕ್ಷೇತ್ರವಾರು ಮತದಾರರ ಅಂಕಿ ಸಂಖ್ಯೆ: ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 1,25,208 ಪುರುಷ ಮತದಾರರು ಇದ್ದರೆ 1,27,185 ಮಹಿಳಾ ಮತದಾರರು ಇದ್ದಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 99,497 ಪುರಷ ಮತದಾರರಿದ್ದರೆ 1,01,089 ಮಹಿಳಾ ಮತದಾರರು ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 1,09,744 ಪುರುಷ‌ ಮತದಾರರು ಇದ್ದರೆ 1,12,583 ಮಹಿಳಾ ಮತದಾರರು ಇದ್ದಾರೆ. ಈ ಮೂರೂ ವಿಧಾನಸಭಾ ಕ್ಷೇತ್ರಗಳ ಪೈಕಿ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿಯೇ ಮಹಿಳಾ ಮತದಾರರ ಸಂಖ್ಯೆ ಅಧಿಕವಾಗಿದೆ.

26,867 ಯುವ ಮತದಾರರು: ಕೊಪ್ಪಳ ಜಿಲ್ಲೆಯಲ್ಲಿ ಮಹಿಳಾ ಮತದಾರರು ಅಧಿಕವಾಗಿರುವುದು ಒಂದು ಕಡೆಯಾದರೆ ಯುವ ಮತದಾರರು ಹಾಗೂ 80 ವರ್ಷ ವಯೋಮಾನ ಮೀರಿದ ಮತದಾರರ ಪಟ್ಟಿಯನ್ನ ಜಿಲ್ಲಾಡಳಿತ ಸಿದ್ದಪಡಿಸಿದೆ. 80 ವರ್ಷ ದಾಟಿದ ವಯೋಮಾನದ 18,301 ಮತದಾರರಿದ್ದಾರೆ. ಹಾಗೇ ಜಿಲ್ಲೆಯಲ್ಲಿ 26,867 ಯುವ ಮತದಾರರು ಮೊದಲ ಬಾರಿಗೆ ಮತ ಚಲಾಯಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಏಕೈಕ ಮಹಿಳಾ ಶಾಸಕಿ: ಅಖಂಡ ರಾಯಚೂರು ಜಿಲ್ಲೆಯಾಗಿದ್ದಾಗ ಪ್ರಥಮ ಚುನಾವಣೆಯಲ್ಲಿ ಕೊಪ್ಪಳ ವಿಧಾನಸಭೆಯಿಂದ 1952 ರಲ್ಲಿ ಲೋಕಸೇವಾ ಸಂಘದಿಂದ ಮಹಾದೇವಮ್ಮ ಸಿರವಾರ ಎಂಬುವವರು ಆಯ್ಕೆಯಾಗಿದ್ದು ಬಿಟ್ಟರೇ ಇಲ್ಲಿಯವರೆಗೂ ಮತ್ತೆ ಯಾರೂ ಆಯ್ಕೆಯಾಗಿಲ್ಲ. ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಈಗ 16ನೇ ಚುನಾವಣೆ ನಡೆಯುತ್ತಿದೆ. ಇಲ್ಲಿಯವರೆಗೂ ಐದು ಕ್ಷೇತ್ರಗಳಿಂದ ಕೇವಲ 8 ಜನ ಮಾತ್ರ ಆಯ್ಕೆ ಬಯಸಿ ಸ್ಪರ್ಧಿಸಿದ್ದರು. ಆದರೆ ಅವರಾರು ಆಯ್ಕೆಯಾಗಿಲ್ಲ. ಪ್ರಮುಖ ಪಕ್ಷಗಳು ಸಹ ಮಹಿಳೆಗೆ ಟಿಕೆಟ್ ನೀಡಿಲ್ಲ. ಈಗ ವಿಧಾನಪರಿಷತ್​ಗೆ ಶ್ರೀಮತಿ ಹೇಮಲತಾ ನಾಯಕರನ್ನು ಬಿಜೆಪಿ ನೇಮಕ ಮಾಡಿದೆ. ಮಹಿಳೆ ಆಡಳಿತ ನಡೆಸಲು ಎಲ್ಲಾ ಅರ್ಹತೆ ಇದೆ. ಆದರೆ ಅವಕಾಶ ಸಿಗಬೇಕೆಂದು ಮಹಿಳಾ ಮುಖಂಡರು ಹೇಳಿದ್ದಾರೆ.

ಮೇಲ್ಮನೆಗೆ ಆಯ್ಕೆಯಾದ ಹೇಮಲತಾ ನಾಯಕ್: ಕೊಪ್ಪಳ ಜಿಲ್ಲೆಯಿಂದ ಮೊದಲ ಮಹಿಳಾ ವಿಧಾನ ಪರಿಷತ್ ಸದಸ್ಯೆಯಾಗಿ ಬಿಜೆಪಿಯಿಂದ ಸಾಮಾನ್ಯ ಕಾರ್ಯಕರ್ತೆ ಕೊಪ್ಪಳದ ಹೇಮಲತಾ ನಾಯಕ ಆಯ್ಕೆಯಾಗಿದ್ದು ವಿಶೇಷವಾಗಿದೆ. ಆದರೆ, ಇದು ಜನರಿಂದ ಆಯ್ಕೆಯಾಗುವ ಪ್ರಕ್ರಿಯೆ ಅಲ್ಲವಾದ್ದರಿಂದ ಮಹಿಳೆಯರಿಗೆ ನೇರವಾಗಿ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗುವಂತ ಅವಕಾಶ ನೀಡಬೇಕಿದೆ. ಕೊಪ್ಪಳ ಜಿಲ್ಲೆಯಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರೆಲ್ಲ ಕೇವಲ ಮತ ಹಾಕಲು ಮಾತ್ರ ಸೀಮಿತವಾಗಿದ್ದಾರೆ. ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಬೇಕೆಂಬ ಬೇಡಿಕೆಯೂ ಹೆಚ್ಚಿದೆ.

ಇದನ್ನೂ ಓದಿ: ಮಂಗಳೂರು ಕ್ಷೇತ್ರದಲ್ಲಿ ಕೈ-ಕಮಲ ಫೈಟ್: ಖಾದರ್‌ಗೆ ಸವಾಲೊಡ್ಡುವುದೇ ಬಿಜೆಪಿ? ರೇಸ್‌ನಲ್ಲಿ ಎಸ್​ಡಿಪಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.