ETV Bharat / entertainment

'ಸ್ಟಾರ್ ಹೀರೋಗಳ ಮೇಲೆ ಒತ್ತಡ ಹಾಕಬೇಡಿ, ಕಲಾವಿದರಿಗೆ ಅವರದ್ದೇ ಆದ ಬ್ರ್ಯಾಂಡ್‍ ಇದೆ' - Ravichandran

author img

By ETV Bharat Karnataka Team

Published : May 27, 2024, 2:32 PM IST

ಸ್ಟಾರ್ ಹೀರೋಗಳ ಮೇಲೆ ಒತ್ತಡ ಹಾಕಬೇಡಿ ಎಂದು ಕ್ರೇಜಿಸ್ಟಾರ್ ರವಿಚಂದ್ರನ್​ ಹೇಳಿದ್ದಾರೆ.

PRESSURE ON STAR HEROE  ARTISTS HAVE THEIR OWN BRAND  SANDALWOOD STAR  BENGALURU
ಕ್ರೇಜಿಸ್ಟಾರ್ ರವಿಚಂದ್ರನ್​ (ETV Bharat)

ಕನ್ನಡ ಚಿತ್ರರಂಗದಲ್ಲಿ ಸ್ಟಾರ್​ ಹೀರೋಗಳು ವರ್ಷಕ್ಕೆ ಅಥವಾ ಎರಡು ವರ್ಷಕ್ಕೊಮ್ಮೆ ಸಿನಿಮಾ ಮಾಡುವುದರಿಂದ ಚಿತ್ರಮಂದಿರಗಳಿಗೆ ಸಿನಿಮಾ ಪ್ರೇಕ್ಷಕರು ಬರ್ತಿಲ್ಲ. ಹಾಗಾಗಿ ಚಿತ್ರರಂಗ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆಗಳಾಗುತ್ತಿವೆ. ಸ್ಟಾರ್ ನಟರು ವರ್ಷಕ್ಕೆ‌ ಒಂದು ಅಥವಾ ಎರಡು ಸಿನಿಮಾಗಳನ್ನು ಮಾಡುವಂತೆ ಕಲಾವಿದರ ಮನವೊಲಿಸಲು ವಾಣಿಜ್ಯ ಮಂಡಳಿ ಮುಂದಾಗುತ್ತಿದೆ.

ಈ ವಿಚಾರವಾಗಿ ಇತ್ತೀಚೆಗೆ ಪ್ರತಿಕ್ರಿಯಿಸಿರುವ ಕ್ರೇಜಿಸ್ಟಾರ್ ರವಿಚಂದ್ರನ್, ಕಲಾವಿದರ ಮೇಲೆ ಒತ್ತಡ ಹಾಕಬೇಡಿ. ಕಲಾವಿದರಿಗೆ ಅವರದ್ದೇ ಆದ ಬ್ರಾಂಡ್‍ ಇರುತ್ತದೆ. ಹೀಗಾಗಿ, ಯಾರನ್ನೂ ದೂಷಿಸಬೇಡಿ ಅಂತಾ ಹೇಳಿದ್ದಾರೆ‌. ದಿ ಜಡ್ಜ್ಮೆಂಟ್‍ ಚಿತ್ರದ ಸುದ್ದಿಗೋಷ್ಠಿಯ ನಂತರ ರವಿಚಂದ್ರನ್, ಚಿತ್ರರಂಗಕ್ಕೆ ಸಂಬಂಧಪಟ್ಟ ಹಲವು ವಿಷಯಗಳ ಬಗ್ಗೆ ಮಾತನಾಡಿದರು.

ಚಿತ್ರಮಂದಿರದವರಿಗೆ ಒಳ್ಳೆಯ ಸಿನಿಮಾಗಳು ಬೇಕು. ಮಾತೆತ್ತಿದರೆ ಮಲಯಾಳಂ ಸಿನಿಮಾ ನೋಡಿ ಅಂತಾರೆ. ಹೋಗಿ ಮಲಯಾಳಂ ಬರಹಗಾರರ ಹತ್ತಿರ, ಕಥೆ ಬರೆಸಿಕೊಂಡು ಬನ್ನಿ. ಯಾರು ಬೇಡ ಎನ್ನುತ್ತಾರೆ?. ಕಥೆ ಮುಖ್ಯ. ಎಲ್ಲಿ ಸಿಕ್ಕರೆ ಏನು? ಅಲ್ಲಿಂದ ಕಥೆ ಮಾಡಿಸಿಕೊಂಡು ಬಂದು ಇಲ್ಲಿ ಚಿತ್ರ ಮಾಡಿ. ಜನ ಸಿನಿಮಾಗೆ ಬರುತ್ತಿಲ್ಲ ಎನ್ನುವುದು ತಪ್ಪು. ಮೊದಲು ಕಂಟೆಂಟ್ ಇರುವ ಸಿನಿಮಾ ಮಾಡಿ. ಸಿನಿಮಾ ಮಾಡದೇ ಬನ್ನಿ ಬನ್ನಿ ಎಂದರೆ ಏನು ಪ್ರಯೋಜನ?. ಜನ ಚೆನ್ನಾಗಿರುವ ಸಿನಿಮಾಗೆ ಯಾವತ್ತೂ ಕೈ ಬಿಟ್ಟಿಲ್ಲ ಎಂದು ರವಿಚಂದ್ರನ್​ ಹೇಳಿದರು.

ನಾನು 10 ಸಿನಿಮಾ ಮಾಡೋಕೆ ರೆಡಿ. ಎಲ್ಲರಿಗೂ ಯಶ್‍ ಬೇಕು, ದರ್ಶನ್‍ ಬೇಕು ಎಂದರೆ ಅದು ಅವರ ಆಯ್ಕೆ. ಆದರೆ, ಕಥೆ ಓಕೆ ಆಗೋದು ಬೇಡ್ವಾ?. ಎಲ್ಲರಿಗೂ ಅವರದೇ ಆದ ಬ್ರಾಂಡ್‍, ಕಥೆ, ಬಜೆಟ್‍, ತಾಕತ್ತು ಇರುತ್ತದೆ. ಸಿನಿಮಾನ ಫೋರ್ಸ್ ಮಾಡೋಕೆ ಆಗಲ್ಲ. ಇಷ್ಟೇ ಸಿನಿಮಾ ಮಾಡಬೇಕು, ಅಷ್ಟೇ ಸಿನಿಮಾ ಮಾಡಬೇಕು ಅನ್ನುವುದು ಸರಿಯಲ್ಲ ಎಂದರು.

ಇನ್ನು ಚಿತ್ರರಂಗವನ್ನು ಬಂದ್‍ ಮಾಡೋದೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಅಲ್ಲ. ಚಿತ್ರರಂಗ ಏನೇನು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದನ್ನು ಹೇಳಲಿ. ಇಂಥವರೇ ಸಮಸ್ಯೆ ಎಂದು ಹೇಳಲಿ. ಆ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಬೇಕು. ಸಮಸ್ಯೆ ಯಾರ ಮನೇಲಿ ಇಲ್ಲ?. ಸ್ಟ್ರೈಕ್‍ ಅನ್ನೋದು ಫ್ಯಾಕ್ಟರಿಗಳಲ್ಲಿ ನಡೆಯುತ್ತೆ. ಕೆಲಸಗಾರರು ಸ್ಟ್ರೈಕ್‍ ಮಾಡಿದರೆ ಮಾಲೀಕರಿಗೆ ಹೊಟ್ಟೆ ನೋವು ಬರುತ್ತದೆ. ಆಗ ಪರಿಹಾರ ಹುಡುಕಲು ಮುಂದಾಗುತ್ತಾರೆ. ಇಲ್ಲಿ ಬಂದ್‍ ಮಾಡಿದರೆ ಯಾರಿಗೆ ಹೊಟ್ಟೆ ನೋವು ಬರುತ್ತದೆ?. ಇಲ್ಲಿ ಶೂಟಿಂಗ್ ನಿಲ್ಲಿಸುವುದು, ಚಿತ್ರಮಂದಿರಗಳ ಪ್ರದರ್ಶನ ನಿಲ್ಲಿಸುವುದು ಪರಿಹಾರವಲ್ಲ. ನೀವು ಶೂಟಿಂಗ್ ಹಾಗು ಚಿತ್ರಮಂದಿರಗಳ ಶೋ ರದ್ದು ಮಾಡಿದ್ರೆ ಸಾವಿರಾರು ಕಾರ್ಮಿಕರು ಕೆಲಸ ಇಲ್ಲದೆ ಜನ ಒದ್ದಾಡುತ್ತಾರೆ. ಹಾಗಿರುವಾಗ ಕೆಲಸ ನಿಲ್ಲಿಸಿ ಏನು ಮಾಡುತ್ತೀರಾ ಎಂದು ರವಿಚಂದ್ರನ್ ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಕನ್ನಡದ ಮೊದಲ ಮಹಿಳಾ ಕ್ರಿಕೆಟ್ ಕಥೆಯಾಧಾರಿತ 'ಸಹಾರಾ' ಚಿತ್ರದ ಟ್ರೇಲರ್ ರಿಲೀಸ್ - Sahara Trailer

ETV Bharat Logo

Copyright © 2024 Ushodaya Enterprises Pvt. Ltd., All Rights Reserved.