ETV Bharat / state

ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ: ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ - Davanagere Protest

author img

By ETV Bharat Karnataka Team

Published : May 27, 2024, 2:23 PM IST

ಚನ್ನಗಿರಿ ಪೊಲೀಸ್​ ಠಾಣೆ ಮೇಲೆ ನಡೆದ ಕಲ್ಲು ತೂರಾಟ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗು ಭಜರಂಗದಳ ಸಂಘಟನೆಗಳು ಇಂದು ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದವು.

ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಿಂದೂಪರ ಸಂಘಟನೆಗಳ ಪ್ರತಿಭಟನೆ (ETV Bharat)

ದಾವಣಗೆರೆ: ಆದಿಲ್ ಎಂಬಾತನ ಸಾವು ಖಂಡಿಸಿ ಕೆಲವು ಕಿಡಿಗೇಡಿಗಳು ಇತ್ತೀಚಿಗೆ ಚೆನ್ನಗಿರಿ ಪೊಲೀಸ್​ ಠಾಣೆಗೆ ಕಲ್ಲು ತೂರಿ ವಾಹನಗಳನ್ನು ಧ್ವಂಸಗೊಳಿಸಿದ್ದರು. ಇದನ್ನು ಖಂಡಿಸಿ ಚನ್ನಗಿರಿಯಲ್ಲಿ ಇಂದು ವಿಶ್ವ ಹಿಂದೂ ಪರಿಷತ್ ಹಾಗು ಭಜರಂಗದಳ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು.

ಚನ್ನಗಿರಿ ಪಟ್ಟಣದ ಕೋಟೆ ಆಂಜನೇಯ ದೇವಾಲಯದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ತಾಲೂಕು ಕಚೇರಿ ತಲುಪಿತು. ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ಹಾಗು ದಾವಣಗೆರೆ ಜಿಲ್ಲಾ ಕೋಶಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.‌

ನಂತರ ಪ್ರತಿಕ್ರಿಯಿಸಿದ ಸತೀಶ್ ಪೂಜಾರಿ, "ನಾವು ಈ ಘಟನೆಯನ್ನು ಖಂಡಿಸುತ್ತೇವೆ. ಒಬ್ಬ ಜೂಜುಕೋರ ಸಾವನಪ್ಪಿದ್ದಕ್ಕೆ ಕಾನೂನು ಕೈಗೆತ್ತಿಕೊಂಡಿದ್ದಾರೆ. ಮಟ್ಕಾ ದಂಧೆ ಮಾಡುವ ವ್ಯಕ್ತಿ ಸಾವನ್ನಪ್ಪಿದ್ದರಿಂದ ಠಾಣೆ ಧ್ವಂಸಗೊಳಿಸಿ ವಾಹನಗಳನ್ನು ಹಾಳು ಮಾಡಿದ್ದಾರೆ. ಇಂಥವರನ್ನು ರಾಷ್ಟ್ರ ದ್ರೋಹದಡಿ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು" ಎಂದು ಆಗ್ರಹಿಸಿದರು.

ಈ ಕುರಿತು ತಾಲೂಕು ದಂಡಾಧಿಕಾರಿಗೆ ಮನವಿ ಸಲ್ಲಿಸಿದ ಬಳಿಕ ಪ್ರತಿಕ್ರಿಯಿಸಿದ ದಾವಣಗೆರೆ ಜಿಲ್ಲಾ ಕೋಶಾಧ್ಯಕ್ಷ ಮಂಜುನಾಥ್ ಪ್ರತಿಕ್ರಿಯಿಸಿ, "ಗಲಾಟೆ ಮಾಡಿ ಕಲ್ಲು ತೂರಾಟ ನಡೆಸಿ ಠಾಣೆ ಧ್ವಂಸ ಮಾಡಿದವರ ವಿರುದ್ಧ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದೇವೆ. ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನದ ಪ್ರಕಾರ ದೇಶದಲ್ಲಿ ಕಾನೂನು ನಡೆಯುತ್ತಿದೆ. ಇದನ್ನು ವಿರೋಧಿಸಿ ಕಾನೂನು ಕೈಗೆತ್ತಿಕೊಂಡಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಚನ್ನಗಿರಿ ಪೊಲೀಸ್​ ಠಾಣೆ ಧ್ವಂಸ ಪ್ರಕರಣ: 25 ಆರೋಪಿಗಳನ್ನು ಬಂಧಿಸಿದ ಪೊಲೀಸರು - police station vandalism case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.