ETV Bharat / state

'ನಮ್ಮ ಜನಪರ ಕಾರ್ಯಗಳನ್ನು ಬಿಜೆಪಿ, ಕಾಂಗ್ರೆಸ್ ಕಾಪಿ ಹೊಡೆಯುತ್ತಿದೆ': ಮುಖ್ಯಮಂತ್ರಿ ಚಂದ್ರು

author img

By

Published : Feb 26, 2023, 9:13 AM IST

Updated : Feb 26, 2023, 9:26 AM IST

chandru
ಮುಖ್ಯಮಂತ್ರಿ ಚಂದ್ರು

ಕೊಪ್ಪಳದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಪ್​ ಮುಖಂಡ 'ಮುಖ್ಯಮಂತ್ರಿ' ಚಂದ್ರು ಬಿಜೆಪಿ, ಕಾಂಗ್ರೆಸ್‌ ಹಾಗು ಜೆಡಿಎಸ್‌ ಪಕ್ಷಗಳನ್ನು ಟೀಕಿಸಿದರು.

ಆಪ್ ಮುಖಂಡ ಮುಖ್ಯಮಂತ್ರಿ ಚಂದ್ರು ಮಾತು

ಕೊಪ್ಪಳ: "ಮುಖ್ಯಮಂತ್ರಿ ಚಂದ್ರು ಬಣ್ಣ ಹಾಕಿ ಅಭಿನಯಿಸುವುದು ವಾಸ್ತವದಲ್ಲಿ. ಆದರೆ ನಮ್ಮ ರಾಜ್ಯದಲ್ಲಿ ರಾಜಕಾರಣಿಗಳು ಬಣ್ಣ ಹಾಕದೇ ಅಭಿನಯಿಸುತ್ತಿದ್ದಾರೆ" ಎಂದು ಆಮ್ ಆದ್ಮಿ ಪಕ್ಷದ(ಆಪ್) ಮುಖಂಡ ಮುಖ್ಯಮಂತ್ರಿ ಚಂದ್ರು ಹೇಳಿದರು. ಕೊಪ್ಪಳದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ನಾನು ಚುನಾವಣೆಗೆ ನಿಲ್ಲೋದಿಲ್ಲ. ಈಗಾಗಲೇ ಒಮ್ಮೆ ಎಂಎಲ್​ಎ ಮತ್ತು ಎಂಎಲ್​ಸಿ ಆಗಿದ್ದೇನೆ. ನಾನು ರಾಜಕಾರಣದಿಂದ ದೂರವಿಲ್ಲ, ಆದರೆ ಚುನಾವಣಾ ರಾಜಕಾರಣದಿಂದ ದೂರವಿದ್ದೇನೆ" ಎಂದರು. ಇದೇ ವೇಳೆ, "ಕಾಂಗ್ರೆಸ್ ಮತ್ತು ಬಿಜೆಪಿ ನಮ್ಮ ಪಕ್ಷದ ಜನಪರ ಕಾರ್ಯಗಳನ್ನು ನಕಲಿ ಮಾಡುತ್ತಿವೆ" ಎಂದು ದೂರಿದರು.

"ರಾಜ್ಯದಲ್ಲಿ ಎಲ್ಲಾ ಪಕ್ಷಗಳು ಚುನಾವಣೆ ಮುನ್ನ ಪ್ರಣಾಳಿಕೆ ಘೋಷಿಸಿ ಅವುಗಳನ್ನು ಅನುಷ್ಠಾನಕ್ಕೆ ತರುವುದಿಲ್ಲ. ಸರ್ವರಿಗೂ ಸಮಪಾಲು, ಸಮಬಾಳು ಎನ್ನುತ್ತಾರೆ. ಆದರೆ ರಾಜಕೀಯ ಸ್ವಂತಕ್ಕೆ ಬಳಕೆಯಾಗುತ್ತಿದೆ ಮತ್ತು ಕೆಲವರ ಹಿತಕ್ಕಾಗಿಯೇ ಇದೆ. ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಮೂರು ಪಕ್ಷದ ಬಗ್ಗೆ ಜನರಿಗೆ ಬೇಸರವಿದೆ. ಕಾಂಗ್ರೆಸ್ ಪಕ್ಷದಲ್ಲಿ ಖದೀಮರು, ದರೋಡೆಕೋರರು, ಬಿಜೆಪಿಯಲ್ಲಿ ಭ್ರಷ್ಟರು, ಭಂಡರು ಇದ್ದಾರೆ" ಎಂದು ಕಿಡಿಕಾರಿದರು.

"ಸದ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇನ್ನೊಬ್ಬರ ಹಿಡಿತದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ರಿಮೋಟ್ ಕಂಟ್ರೋಲ್ ಮೂಲಕ ಕೆಲವರು ನಿಯಂತ್ರಿಸುತ್ತಿದ್ದಾರೆ. ಮೋದಿ, ಅಮಿತ್ ಶಾ, ಆರ್​ಎಸ್ಎಸ್, ಸಂತೋಷ್​ ಜಿ, ಯಡಿಯೂರಪ್ಪ ಇವರೆಲ್ಲರ ಹಿಡಿತದಲ್ಲಿ ಅವರಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಯಾರೊಂದಿಗೋ ಅಧಿಕಾರದ ಚುಕ್ಕಾಣಿ ಹಿಡಿಯಲು ಚಿಂತಿಸುತ್ತಿದ್ದಾರೆ. ಉತ್ತರ ಭಾರತದಲ್ಲಿ ಎಎಪಿ, ಪಂಜಾಬಿನಲ್ಲಿ ಎಎಪಿ ಅಧಿಕಾರದಲ್ಲಿದೆ‌. ಕರ್ನಾಟಕ ದಕ್ಷಿಣ ಭಾರತದ ಹೆಬ್ಬಾಗಿಲಾಗಿದ್ದು ಇಲ್ಲಿಂದಲೇ ಎಎಪಿ ಅಧಿಕಾರ ಹಿಡಿಯಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಭಾವನಾತ್ಮಕ ಸಂಬಂಧಗಳಿಗಿಂತ ಪಕ್ಷದ ಹಿತ ಮುಖ್ಯ: ಹೆಚ್.ಡಿ.ಕುಮಾರಸ್ವಾಮಿ

"ಮಾರ್ಚ್​ 4ರಂದು ಡಾವಣಗೇರಿಯ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಆಪ್ ಸಮಾವೇಶ ಹಮ್ಮಿಕೊಂಡಿದೆ. 50 ಸಾವಿರ ಜನ ಸೇರಲಿದ್ದು ಅರವಿಂದ ಕೇಜ್ರಿವಾಲ್ ಹಾಗು ಪಂಜಾಬ್ ಸಿಎಂ ಭಗವಂತ್ ಮಾನ್ ಭಾಗವಹಿಸಲಿದ್ದಾರೆ. ರಾಜಕೀಯ ಶುದ್ಧೀಕರಣಕ್ಕಾಗಿ ಆಪ್ ಕೆಲಸ ಮಾಡುತ್ತಿದೆ. ಈಗ ಅಧಿಕಾರಕ್ಕೆ ಬಂದು ಹೋದವರಲ್ಲಿ ಕಾಂಗ್ರೆಸ್ ಅಕ್ಕಿ ಕೊಡ್ತೀವಿ, ಬಿಜೆಪಿಯವರು ಗೃಹಿಣಿಯರಿಗೆ 2,000 ರೂಪಾಯಿ ನೀಡುತ್ತೇವೆ ಎನ್ನುತ್ತಿದ್ದಾರೆ. ಇವೆಲ್ಲ ಆಪ್ ಪಕ್ಷದ ಜನಪರ ಕಾರ್ಯಗಳು. ಇವುಗಳನ್ನೇ ಕಾಪಿ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.

"ನಾವು ರಾಜ್ಯದ 224 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದೇವೆ. ಹಣ ಬಲ, ತೋಳ್ಬಲ, ಜಾತಿ ಬಲ ಪ್ರಭಾವದ ಕಾಲದಲ್ಲಿ ಕೇಂದ್ರದವರು ಹೇಗಾದರೂ ಮಾಡಿ ಅಧಿಕಾರಕ್ಕೇರಲು ಸಿದ್ಧವಾಗಿದ್ದಾರೆ. ಬಿಜೆಪಿಗರು ರಾಮಮಂದಿರ ಅಭಿವೃದ್ದಿ ಮಾಡೋದು ಸರಿ. ಆದರೆ ನಮ್ಮೂರಿನ ದೇವ ಮಂದಿರವನ್ನು ಯಾರು ಸರಿ ಮಾಡುತ್ತಾರೆ? ನಮಗೆ ರಾಮಮಂದಿರ ಅಲ್ಲ, ರಾಮರಾಜ್ಯ ಬೇಕು. ಮೂರು ಪಕ್ಷಗಳು ಕುಟುಂಬಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ದುಡ್ಡು ಯಾರು ಕೊಟ್ಟರೂ ತೆಗೆದುಕೊಳ್ಳಿ. ಆದರೆ, ಅವರು ಕೊಡುವ ಹಣ ಐದು ವರ್ಷಕ್ಕೆ ಆಗುತ್ತಾ? ಇದನ್ನು ಮತದಾರರು ವಿಚಾರ ಮಾಡಬೇಕು" ಎಂದರು.

"ಕೋಡಿಹಳ್ಳಿ ಚಂದ್ರಶೇಖರ್ ಮೇಲೆ ಭ್ರಷ್ಟಾಚಾರದ ಆರೋಪವಿದೆ. ಅವರು ಆರೋಪ ಮುಕ್ತರಾದರೆ ನಮ್ಮೊಂದಿಗೆ ಬನ್ನಿ ಎಂದಿದ್ದೇವೆ. ರೈತ ಸಂಘಗಳು ನಮ್ಮ ಸಿದ್ದಾಂತಕ್ಕೆ ಹೊಂದಾಣಿಕೆಯಾದರೆ ಅವರಿಗೂ ನಮ್ಮೊಂದಿಗೆ ಕೈ ಜೋಡಿಸಲು ಹೇಳಿದ್ದೇವೆ. ರಾಜ್ಯದಲ್ಲಿ ಸಿಎಂ ಆಗಲು 8 ಜನ ತಯಾರಾಗಿದ್ದಾರೆ. ಸಿಎಂ ಆಗಬೇಕಾದರೆ 2500 ಕೋಟಿ ರೂಪಾಯಿ ನೀಡಬೇಕು. ಇಷ್ಟಿದ್ದರೂ ಕೆಲವರು ಸೂಟ್​ಕೇಸ್​ ಹಿಡಿದು ನಿಂತಿದ್ದಾರೆ" ಎಂದು ವ್ಯಂಗ್ಯವಾಡಿದರು.

"ದೇವೇಗೌಡರು ಕಿಂಗ್ ಮೇಕರ್ ಆಗಲು ಹೊರಟಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಫಲಿತಾಂಶ ಅತಂತ್ರವಾಗಲಿ ಎಂದು ಬಯಸುತ್ತಾರೆ. ರೇವಣ್ಣ ಅವರು ಉಪಮುಖ್ಯಮಂತ್ರಿ ಆಗಲಿ ಎಂಬುದು ಭವಾನಿ ಅವರಿಗಿದೆ. ಈಗಾಗಲೇ ಯಡಿಯೂರಪ್ಪ ಕಣ್ಣಲ್ಲಿ ನೀರು ಹಾಕಿ ನಿವೃತ್ತಿ ಆಗಿದ್ದಾರೆ. ದೇವೇಗೌಡರು ನೂರು ವರ್ಷವಿರಲಿ, ಆದರೆ ರಾಜಕೀಯ ನಿವೃತ್ತಿ ಪಡೆಯಲಿ" ಎಂದು ಹೇಳಿದರು.

ಇದನ್ನೂ ಓದಿ: ದಾವಣಗೆರೆಯಲ್ಲಿ ಬಿಜೆಪಿ ಯುವ ಸಮಾವೇಶ: ಜಿಲ್ಲೆಯ ಎಲ್ಲ 8 ಸ್ಥಾನ ಗೆಲ್ಲಲು ಪಣ

Last Updated :Feb 26, 2023, 9:26 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.