ETV Bharat / state

ದಾವಣಗೆರೆಯಲ್ಲಿ ಬಿಜೆಪಿ ಯುವ ಸಮಾವೇಶ: ಜಿಲ್ಲೆಯ ಎಲ್ಲ 8 ಸ್ಥಾನ ಗೆಲ್ಲಲು ಪಣ

author img

By

Published : Feb 26, 2023, 8:08 AM IST

ದಾವಣಗೆರೆಯ ಮಾಗನೂರು ಬಸಪ್ಪ ಮೈದಾನದಲ್ಲಿ ಶನಿವಾರ ಬಿಜೆಪಿ ಯುವ ಸಮಾವೇಶ ನಡೆಯಿತು. ಜಗಳೂರಿನ ಶಾಸಕ ಎಸ್.ವಿ.ರಾಮಚಂದ್ರ, ಎಂ.ಪಿ.ರೇಣುಕಾಚಾರ್ಯ ಹಾಗು ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿದರು.

davanagere
ದಾವಣಗೆರೆಯಲ್ಲಿ ಯುವ ಸಮಾವೇಶ

ದಾವಣಗೆರೆಯಲ್ಲಿ ಬಿಜೆಪಿ ಯುವ ಸಮಾವೇಶ

ದಾವಣಗೆರೆ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿದಾಯದ ಬೆನ್ನಲ್ಲೇ ಅವರು ಜಗಳೂರಿಗೆ ನೀಡಿದ ಕೊಡುಗೆ ನೆನೆದು ಬಿಜೆಪಿ ಜಗಳೂರಿನ ಶಾಸಕ ಎಸ್.ವಿ.ರಾಮಚಂದ್ರ ಭಾವುಕರಾದರು. ದಾವಣಗೆರೆಯ ಮಾಗನೂರು ಬಸಪ್ಪ ಮೈದಾನದಲ್ಲಿ ಶನಿವಾರ ಯುವ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, "ಯಡಿಯೂರಪ್ಪನವರು ಮಾಸ್ ಲೀಡರ್ ಆಗಿದ್ದವರು. ಸಿಎಂ ಆಗಿ ಕೆಲ ವರ್ಷ ಸಿರಿಗೆರೆ ಶ್ರೀಯವರ ಆಶೀರ್ವಾದದಿಂದ ಜಗಳೂರಿನಲ್ಲಿ ನೀರಾವರಿ ವ್ಯವಸ್ಥೆ ಬರಲು ಅವರೇ ಕಾರಣಕರ್ತರು" ಎಂದರು. ಇದೇ ವೇಳೆ ಪಕ್ಷದ ನಾಯಕರು ಜಿಲ್ಲೆಯ ಎಲ್ಲ ಎಂಟು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

"ನಮ್ಮ ಜಗಳೂರಿನಲ್ಲಿ ಜಮೀನು ಬೆಲೆ ಕಳೆದುಕೊಂಡಿತ್ತು. ಇದೀಗ ಭದ್ರಾ ನೀರು ಬಂದಾಗಿನಿಂದ ಒಂದು ಎಕರೆಯ ಬೆಲೆ 50 ಸಾವಿರ ರೂಪಾಯಿಯಾಗಿದೆ. 1,900 ಕೋಟಿ ರೂಪಾಯಿ ವೆಚ್ಚದಲ್ಲಿ 54,000 ಎಕರೆಗೆ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ. ಯಡಿಯೂರಪ್ಪ ಸಾಹೇಬ್ರು ವಿಧಾನಸೌಧಕ್ಕೆ ಬರಲ್ಲ ಎಂಬುದನ್ನು ಕೇಳಿ ನಿಜಕ್ಕೂ ಬಹಳ ನೋವು ಅನಿಸಿತು. ಆದರೆ ಅವರ ಪುತ್ರ ಬಿ.ವೈ.ವಿಜಯೇಂದ್ರರವರು ವಿಧಾನಸೌಧಕ್ಕೆ ಬರಲಿದ್ದಾರೆ. ಯಾವ ಕಾರಣಕ್ಕೂ ಕೂಡ ಕಾಂಗ್ರೆಸ್​ಗೆ ಮಾತ್ರ ವಿಧಾನಸೌಧದಿಂದ ಕುರ್ಚಿ ಬಿಟ್ಟುಕೊಡುವ ಮಾತೇ ಇಲ್ಲ. ನಮ್ಮ ಎಲ್ಲಾ ಕಾರ್ಯಕರ್ತರು ಜನರನ್ನು ಹುರಿದುಂಬಿಸಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಬೇಕಿದೆ" ಎಂದು ಹೇಳಿದರು.

'ಹೊನ್ನಾಳಿ ಹುಲಿ ಅಲ್ಲ, ಸೇವಕ..': ಬಳಿಕ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ, "ನಾನು ಹೊನ್ನಾಳಿ ಹುಲಿ ಅಲ್ವೇ ಅಲ್ಲ, ನಾನು ಸೇವಕ" ಎಂದು ಹೇಳಿದರು. "ಬಿಜೆಪಿ ಕಾರ್ಯಕರ್ತರು ಸಿಂಹದ ಮರಿಗಳು. ಕೈ ನಾಯಕರು ಸಿಎಂ ಆಗಲು ಹಗಲು ಕನಸು ಕಾಣ್ತಿದ್ದಾರೆ. ಡಿಕೆಶಿಯಂತೂ ಭಗ್ನಪ್ರೇಮಿಗಳ ಕನಸು ಕಾಣ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ 40 ಸ್ಥಾನ ಗೆಲ್ಲಲೂ ಸುಸ್ತು ಹೊಡೆಯುವುದು ಖಚಿತ. ನಾವಂತೂ ಪಕ್ಕ 70ರಿಂದ 140 ಸ್ಥಾನಗಳನ್ನು ಗೆಲ್ಲುತ್ತೇವೆ. ದಾವಣಗೆರೆಯಲ್ಲಿ ಎಂಟಕ್ಕೆ ಎಂಟು ಸ್ಥಾನಗಳನ್ನು ಗೆಲ್ಲಲಿದ್ದೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ನಾನೇ ಸ್ವಯಂ ಪ್ರೇರಿತವಾಗಿ ನಿವೃತ್ತಿಯಾಗಿದ್ದೇನೆ, ವೀರಶೈವ ಲಿಂಗಾಯತರು ಅಪಾರ್ಥ ಮಾಡಿಕೊಳ್ಳಬೇಡಿ: ಬಿಎಸ್​ವೈ

"ನಾವು ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬುದು ಸುಳ್ಳು ಸಮೀಕ್ಷೆಯಾಗಿದೆ. ರಾಹುಲ್​ ಗಾಂಧಿ ಹಿಂದೆ ಓಡುವ ಸಿದ್ದರಾಮಯ್ಯನವರೇ, ನಿಮ್ಮ ಹಿರಿತನಕ್ಕೆ ಬೆಲೆ ಎಲ್ರೀ? ರಾಜಕೀಯ ಪ್ರಬುದ್ಧತೆ ಇಲ್ಲದ ನಾಯಕ ರಾಹುಲ್ ಗಾಂಧಿ, ನಿಮ್ಮ ಸಿಎಂ ಕನಸನ್ನು ನನಸಾಗಿಸುವುದಿಲ್ಲ, ನಿಮ್ಮದು ಭಗ್ನ ಪ್ರೇಮಿಗಳ ಕನಸಾಗುತ್ತದೆ" ಎಂದು ಟೀಕಿಸಿದರು. "ಬಿಎಸ್​ವೈ, ಬೊಮ್ಮಾಯಿ ನೀಡಿದ ಕೊಡುಗೆಗಳನ್ನು ಜನರ ಮನೆಗೆ ತಲುಪಿಸೋಣ. ಕೇಂದ್ರ ಮತ್ತು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ ಹಿಡಿಯುವುದು ಖಚಿತ" ಎಂದರು.

'ಮೋದಿ ಮಹಾನ್ ನಾಯಕ': ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ್, ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದರು. "ಕೊರೊನಾ ಕಷ್ಟ ಕಾಲದಲ್ಲಿ ವ್ಯಾಕ್ಸಿನ್ ಕೊಡಿಸಿದ ಮಹಾನ್ ನಾಯಕ ಅವರು. ಭಾರತ ದೇಶದಲ್ಲಿ ನಾವು ಸುರಕ್ಷಿತವಾಗಿದ್ದೇವೆ ಅಂದ್ರೆ ಅದಕ್ಕೆ ಕಾರಣ ಪ್ರಧಾನಿಯವರು. ಇಂದು ನಾವು ಮಾಸ್ಕ್ ಹಾಕದೆ ಧೈರ್ಯವಾಗಿ ಎಲ್ಲಿಯೂ ಸಂಚರಿಸುತ್ತಿದ್ದೇವೆ ಎಂದರೇ ಅದಕ್ಕೂ ಮೋದಿಯವರೇ ಕಾರಣ" ಎಂದು ಮೋದಿ ಸಾಧನೆಯನ್ನು ಕೊಂಡಾಡಿದರು.

"ಕಾಂಗ್ರೆಸ್​ನವರು ಪ್ರತಿ ಬಾರಿಯೂ ಮೋದಿಯವರು ಏನ್ ಮಾಡಿದ್ದಾರೆ? ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರವಾಗಿ ಯುವಕರು, ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ಜನರ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಬೇಕು. ರಾಜ್ಯದಲ್ಲಿ ಸಿಎಂ ಬೊಮ್ಮಾಯಿಯವರು ಕೂಡ ಜನತೆಯ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ನಮ್ಮ ಡಬಲ್ ಇಂಜಿನ್ ಸರ್ಕಾರವು ಎಲ್ಲಾ ರೀತಿಯ ಕೆಲಸಗಳನ್ನು ಮಾಡುತ್ತಿದೆ. ನಾವು ಕಳೆದ ಬಾರಿ ದಾವಣಗೆರೆ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಆರು ಸ್ಥಾನಗಳನ್ನು ಗೆದ್ದಿದ್ದೆವು. ಆದರೆ ಈ ಬಾರಿ ಎಂಟು ಕ್ಷೇತ್ರಗಳನ್ನು ಗೆಲ್ಲಬೇಕಿದ್ದು, ಇದಕ್ಕಾಗಿ ಯುವಕರು ಶ್ರಮಿಸಬೇಕಿದೆ" ಎಂದರು.

ಮಾರ್ಚ್ ತಿಂಗಳಿನಲ್ಲಿ ಮೋದಿ ದಾವಣಗೆರೆಗೆ ಬರಲಿದ್ದಾರೆ. ನಾಲ್ಕು ದಿಕ್ಕುಗಳಿಂದ ಆರಂಭವಾಗುವ ರಥಯಾತ್ರೆಗಳು ದಾವಣಗೆರೆಗೆ ಬಂದು ಸೇರಲಿವೆ. ದಾವಣಗೆರೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಮೋದಿ ಭಾಗಿಯಾಗಲಿದ್ದಾರೆ. ನಾವು ಜಿಲ್ಲೆಯ 8 ಸ್ಥಾನ ಮಾತ್ರವಲ್ಲ, ರಾಜ್ಯದ 150 ಸ್ಥಾನಗಳನ್ನು ಗೆಲ್ಲಬೇಕಿದೆ" ಎಂದು ಯುವ ಕಾರ್ಯಕರ್ತರಿಗೆ ಕರೆ ನೀಡಿದರು.

ಇದನ್ನೂ ಓದಿ: ಕಾಂಗ್ರೆಸ್‌ನ 40% ಕಮಿಷನ್, ಪೇ ಸಿಎಂ ಅಸ್ತ್ರಕ್ಕೆ ಬಿಜೆಪಿಯಿಂದ ರಿ-ಡೂ, ಎಸಿಬಿ ಪ್ರತ್ಯಾಸ್ತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.