ಕಾಂಗ್ರೆಸ್‌ನ 40% ಕಮಿಷನ್, ಪೇ ಸಿಎಂ ಅಸ್ತ್ರಕ್ಕೆ ಬಿಜೆಪಿಯಿಂದ ರಿ-ಡೂ, ಎಸಿಬಿ ಪ್ರತ್ಯಾಸ್ತ್ರ

author img

By

Published : Feb 26, 2023, 6:46 AM IST

BJP and Congress Campaign for Assembly Elections

ಕಾಂಗ್ರೆಸ್ಸಿಗರು ಬಿಜೆಪಿ ಮೇಲೆ ಮಾಡುತ್ತಿರುವ ಆರೋಪಗಳಿಗೆ ಪ್ರತ್ಯುತ್ತರವಾಗಿ ರಿ-ಡೂ ಹಾಗು ಎಸಿಬಿ ವಿಚಾರದಲ್ಲಿ ಸಿದ್ದರಾಮಯ್ಯ ಆಡಳಿತದ ಲೋಪಗಳನ್ನು ಬಳಸಿಕೊಳ್ಳಲು ಕಮಲ ಪಾಳಯ ಸಿದ್ಧತೆ ನಡೆಸುತ್ತಿದೆ.

ಬೆಂಗಳೂರು: ಮುಂಬರುವ ಚುನಾವಣಾ ರಣಕಣದಲ್ಲಿ ಶೇ 40 ಕಮಿಷನ್, ಪೇ ಸಿಎಂ ಆರೋಪಗಳ ಮೂಲಕ ಬಿಜೆಪಿ ಸರ್ಕಾರವನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿರ್ಧರಿಸಿದೆ. ಬಿಜೆಪಿಯೂ ಇದೀಗ ಪ್ರತಿತಂತ್ರ ರೂಪಿಸುತ್ತಿದೆ. ಕೈ ಪಕ್ಷ, ಅದರಲ್ಲೂ ಸಿದ್ದರಾಮಯ್ಯ ಅವಧಿಯಲ್ಲಿನ ಹಗರಣಗಳನ್ನು ಕೆದಕಲು ಸಜ್ಜಾಗಿದೆ.

ಕಾಂಟ್ರಾಕ್ಟರ್ ಕೆಂಪಣ್ಣ ಅವರ ಕಮಿಷನ್ ಆರೋಪಕ್ಕೆ ಬಿಜೆಪಿ ಜಸ್ಟೀಸ್ ಕೆಂಪಣ್ಣ ಆಯೋಗದ ಅರ್ಕಾವತಿ ರಿ-ಡೂ ಅಕ್ರಮವನ್ನು ಮುಂದಿಟ್ಟಿದೆ. ಅರ್ಕಾವತಿ ಡಿನೋಟಿಫಿಕೇಷನ್ ಹಗರಣ ಆರೋಪ ಸಂಬಂಧ ಆಯೋಗದ ವರದಿಯಲ್ಲಿನ ಅಂಶಗಳನ್ನು ಇದೇ ಮೊದಲ ಬಾರಿಗೆ ಸಿಎಂ ಬೊಮ್ಮಾಯಿ‌ ಅಧಿವೇಶನದಲ್ಲಿ ಉಲ್ಲೇಖಿಸಿದ್ದರು. ಅರ್ಕಾವತಿ ಬಡಾವಣೆಯಲ್ಲಿ ಸುಮಾರು 858 ಎಕರೆ ಭೂ ಪ್ರದೇಶವನ್ನು ಡಿನೋಟಿಫೈ ಮಾಡಿರುವ ಬಗ್ಗೆ ಕೆಂಪಣ್ಣ ಆಯೋಗದ ವರದಿಯ ಅಂಶವನ್ನು ಸಿದ್ದರಾಮಯ್ಯ ವಿರುದ್ಧ ಬಳಸಲು ಕಮಲ ಪಕ್ಷ ನಿರ್ಧರಿಸಿದೆ. ಹೈ ಕೋರ್ಟ್, ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಭೂ ಮಾಲೀಕರಿಗೆ ಲಾಭ ಮಾಡುವ ಉದ್ದೇಶದಿಂದ ಭೂ ಸ್ವಾಧೀನದಿಂದ ಭೂಮಿ ಕೈಬಿಡಲಾಗಿದೆ ಎಂಬ ವರದಿಯ ಅಂಶವನ್ನು ಜನರ ಮುಂದಿಡಲು ಮುಂದಾಗಿದೆ. 8,000 ಕೋಟಿ ರೂ. ಹಗರಣ ನಡೆದಿದೆ ಎಂಬ ಬ್ರಹ್ಮಾಸ್ತ್ರ ಹೂಡಲು ಸಜ್ಜಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿಯೂ ಸಿಎಂ ಬೊಮ್ಮಾಯಿ‌ ಎಚ್ಚರಿಸಿದ್ದಾರೆ.

ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಕಾಂಗ್ರೆಸ್ ಹೇಗೆ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಎಸಿಬಿ ರಚಿಸುವ ಮೂಲಕ ತಮ್ಮ ನಾಯಕರ ಮೇಲಿನ ಭ್ರಷ್ಟಾಚಾರ ಮುಚ್ಚುವ ಕೆಲಸ ಮಾಡಿತು ಎಂಬ ಬಗ್ಗೆ ಅಂಕಿಅಂಶ ಸಮೇತ ಪ್ರತ್ಯಾಮ್ಲೀಯ ಹೂಡಲು ಬಿಜೆಪಿ ಮುಂದಾಗಿದೆ. ಲೋಕಾಯುಕ್ತ ಮುಚ್ಚುವ ಮೂಲಕ ಸಿದ್ದರಾಮಯ್ಯ ಸರ್ಕಾರ ಇಡೀ ವ್ಯವಸ್ಥೆಯನ್ನು ಭ್ರಷ್ಟಾಚಾರವನ್ನಾಗಿ ಬದಲಾವಣೆ ಮಾಡಿತು ಎಂಬ ಅಂಶದೊಂದಿಗೆ ಕೌಂಟರ್ ‌ನೀಡುತ್ತಿದೆ. ಹೈ ಕೋರ್ಟ್ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆ ಮರುಸ್ಥಾಪನೆ ಮಾಡಿದ ಆದೇಶದಲ್ಲಿನ ಅಂಶವನ್ನು ಜನರಿಗೆ ಮನವರಿಕೆ ಮಾಡಲು ಮುಂದಾಗಿದೆ.

ಕಾಂಗ್ರೆಸ್ ಎಲ್ಲ ಅಧಿಕಾರವನ್ನು ಎಸಿಬಿಗೆ ಕೊಟ್ಟು, ತಮ್ಮ ಮೇಲಿನ ಆರೋಪಗಳನ್ನು ಕವರ್‌ಅಪ್ ಮಾಡಿದೆ. ಎಸಿಬಿ ಮೂಲಕ ತನಿಖೆ ಮಾಡಿಸಿ ಕಾಂಗ್ರೆಸ್ ನಾಯಕರ ವಿರುದ್ಧದ 59 ಭ್ರಷ್ಟಾಚಾರ ಪ್ರಕರಣಗಳಿಗೆ ಎಸಿಬಿ ತನಿಖೆ ಬಿ ರಿಪೋರ್ಟ್ ನೀಡಿದೆ ಎಂಬ ಬಗ್ಗೆ ಕೌಂಡರ್ ಅಟ್ಯಾಕ್ ಮಾಡಲು ಮುಂದಾಗಿದೆ. ಕಾಂಗ್ರೆಸ್ ವಿರುದ್ಧದ ಲಂಚದ ಆರೋಪಗಳ ಬಗ್ಗೆ ಎಸಿಬಿ ನೀಡಿದ ಬಿ ರಿಪೋರ್ಟ್ ಬಗ್ಗೆ ಅಂಕಿಅಂಶ ಸಮೇತ ತಿರುಗೇಟು ನೀಡಲು ವೇದಿಕೆ ಸಜ್ಜುಗೊಳಿಸಿದೆ. ಕಾಂಗ್ರೆಸ್ ಪಕ್ಷವು ಬಿಜೆಪಿ ಸರ್ಕಾರದ ವಿರುದ್ಧ ಮಾಡಿರುವ ತರಾತುರಿಯಲ್ಲಿನ ಟೆಂಡರ್ ಪ್ರಕ್ರಿಯೆ ಆರೋಪಕ್ಕೆ ತಿರುಗೇಟು ನೀಡಲು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿನ ತರಾತುರಿ ಟೆಂಡರ್ ಬಗ್ಗೆ ತಿರುಗೇಟು ನೀಡಲು ಮುಂದಾಗಿದೆ.

ಸಿದ್ದರಾಮಯ್ಯ ಸರ್ಕಾರದ ಕೊನೆ ಅವಧಿ 2017 ಮಾರ್ಚ್‌ನಲ್ಲಿ 11,832 ಕೋಟಿ ಮೌಲ್ಯದ ಟೆಂಡರ್ ಕೊಟ್ಟಿರುವ ಅಂಕಿಅಂಶವನ್ನು ಬಹಿರಂಗಪಡಿಸಿ ಟಕ್ಕರ್ ನೀಡಲು ನಿರ್ಧರಿಸಿದೆ. ಕಾಂಗ್ರೆಸ್ ಸರ್ಕಾರದ ಕೊನೆಯ ಮೂರು ತಿಂಗಳಲ್ಲಿ ದೊಡ್ಡ ಪ್ರಮಾಣದ ಟೆಂಡರ್ ಕರೆದಿದ್ದರೆ, ಬಿಜೆಪಿ ಬರೇ 4,000 ಕೋಟಿ ರೂ. ಟೆಂಡರ್ ಕರೆದಿರುವ ಅಂಶವನ್ನು ಛೂ ಬಿಡಲು ಮುಂದಾಗಿದೆ. ಅವರ ಕಾಲದಲ್ಲಿ ತರಾತುರಿಯಲ್ಲಿ ಟೆಂಡರ್ ಕರೆದು ಹೇಗೆ ಅಕ್ರಮ ಮಾಡಲಾಗಿದೆ ಎಂಬ ಆರೋಪದೊಂದಿಗೆ ಕಾಂಗ್ರೆಸ್​ಗೆ ತಿರುಗೇಟು ನೀಡಲಿದ್ದಾರೆ.

ಇದರ ಜೊತೆಗೆ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿನ ದೊಡ್ಡ ಹಗರಣಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್​ಗೆ ಬಲವಾದ ಟಾಂಗ್ ಕೊಡಲು ಈಗಾಗಲೇ ಬಿಜೆಪಿ ಸಭೆಯಲ್ಲಿ ಸೂಚಿಸಲಾಗಿದೆ. ಆ ಮೂಲಕ ಕಾಂಗ್ರೆಸ್​ನ ಭ್ರಷ್ಟಾಚಾರ ಆರೋಪವನ್ನು ಅವರ ವಿರುದ್ಧವೇ ಬಳಸಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕನ್ನಡ ಭಾಷೆ ಸುಂದರ, ಸಾಹಿತ್ಯ ಸಮೃದ್ಧ: ಬಾರಿಸು ಕನ್ನಡ ಡಿಂಡಿಮವದಲ್ಲಿ ಮೋದಿ ಭಾಷಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.