ETV Bharat / state

ಬಿಜೆಪಿ ಬಯ್ಯಲ್ಲ, ಅಲ್ಲಿದ್ದವರ ಬಗ್ಗೆ ಬೇಸರವಿದೆ: ಜಗದೀಶ್​ ಶೆಟ್ಟರ್​

author img

By

Published : Apr 17, 2023, 2:31 PM IST

Updated : Apr 17, 2023, 3:30 PM IST

ಜಗದೀಶ್​ ಶೆಟ್ಟರ್​
ಜಗದೀಶ್​ ಶೆಟ್ಟರ್​

ಕಾಂಗ್ರೆಸ್​ ಸೇರಿದ ಬಳಿಕ ಹುಬ್ಬಳ್ಳಿಗೆ ಆಗಮಿಸಿದ ಮಾಜಿ ಸಿಎಂ ಜಗದೀಶ್​ ಶೆಟ್ಟರ್​, ಬಿಜೆಪಿ ಬಿಡಲು ಕಾರಣವಾದವರ ಬಗ್ಗೆ ಖಾರವಾಗಿ ಟೀಕಿಸಿದರು. ಪಕ್ಷ ತಮ್ಮೊಂದಿಗಿನ ನಡವಳಿಕೆ ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಜಗದೀಶ್​ ಶೆಟ್ಟರ್​ ಹೇಳಿಕೆ

ಹುಬ್ಬಳ್ಳಿ: ರಾಜ್ಯ ವಿಧಾನಸಭೆ ಚುನಾವಣೆಗೆ ಟಿಕೆಟ್​ ನೀಡದ್ದಕ್ಕೆ ಮುನಿಸಿಕೊಂಡು ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿರುವ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಅವರು, "ಬಿಜೆಪಿಯನ್ನು ಟೀಕಿಸುವುದಿಲ್ಲ. ಅಲ್ಲಿಯ ಕೆಲವರಿಂದ ನನಗೆ ಅನ್ಯಾಯವಾಗಿದೆ. ಆ ಬಗ್ಗೆ ಬೇಸರವಿದೆ" ಎಂದು ಹೇಳಿಕೆ ನೀಡಿದರು. ಕಾಂಗ್ರೆಸ್​ ಸೇರಿದ ಬಳಿಕ ಹುಬ್ಬಳ್ಳಿಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, "ಬೆಂಗಳೂರಿನಲ್ಲಿ ಇಂದು ನಾನು ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದೇನೆ. ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​, ಮಾಜಿ ಸಿಎಂ ಸಿದ್ದರಾಮಯ್ಯ, ಸುರ್ಜೇವಾಲಾ ಅವರ ಸಮ್ಮುಖದಲ್ಲಿ ಕೈ ಹಿಡಿದಿದ್ದೇನೆ" ಎಂದು ಹೇಳಿದರು.

ಬಿಜೆಪಿ ಬಗ್ಗೆ ಮೃಧು ಧೋರಣೆ: ಕಾಂಗ್ರೆಸ್​ ಸೇರಿದ ಬಳಿಕ ನಾನು ಬಿಜೆಪಿ ಟೀಕಿಸಬೇಕಿಂದಿಲ್ಲ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ನಾಯಕರಲ್ಲಿ ನಾನೂ ಒಬ್ಬ. ಅಲ್ಲಿ ನನಗೆ ಉಸಿರುಗಟ್ಟಿದ ವಾತಾವರಣ ನಿರ್ಮಾಣ ಮಾಡಿದರು. ಕೆಲವರ ಷಡ್ಯಂತ್ರದಿಂದಾಗಿ ಪಕ್ಷ ಬಿಡಬೇಕಾಗಿ ಬಂತು. ಅವರ ಬಗ್ಗೆ ನನಗೆ ಅಸಮಾಧಾನವಿದೆ ಎಂದರು. ನಾನು ಅಧಿಕಾರಕ್ಕೆ ಅಂಟಿಕೊಂಡಿರಲಿಲ್ಲ. ರಾಜಕೀಯ ಸನ್ಯಾಸಕ್ಕೂ ಸಿದ್ಧನಿದ್ದೆ. ಆದರೆ, ಪಕ್ಷ ನನ್ನೊಂದಿಗೆ ಸಕಾರಾತ್ಮಕವಾಗಿ ನಡೆದುಕೊಳ್ಳಲಿಲ್ಲ. ಜನರ ವಿಶ್ವಾಸ ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ. ನನ್ನ ಬೆಂಬಲಿಗರನ್ನು ಎಷ್ಟು ದಿನ ಬೆದರಿಸಿ ಅಲ್ಲಿಯೇ ಇಟ್ಟುಕೊಳ್ಳಲು ಸಾಧ್ಯ. ಅವರು ದೈಹಿಕವಾಗಿ ಅಲ್ಲಿರಬಹುದು, ಮಾನಸಿಕವಾಗಿ ನಮ್ಮ ಜೊತೆಗೇ ಇದ್ದಾರೆ. ಬಲವಂತವಾಗಿ ಯಾರನ್ನೂ ಹಿಡಿದಿಟ್ಟಿಕೊಳ್ಳಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ‌ ಹೊರಗೆ ಬರ್ತಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಶೆಟ್ಟರ್​ಗೆ ಕಾಂಗ್ರೆಸ್​ ಅದ್ದೂರಿ ಸ್ವಾಗತ: ಕಾಂಗ್ರೆಸ್ ಸೇರ್ಪಡೆಗೊಂಡು ಹುಬ್ಬಳ್ಳಿಗೆ ಮೊದಲ ಬಾರಿಗೆ ಆಗಮಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿ, ಅಭಿನಂದನೆ ಸಲ್ಲಿಸಿದರು. ಬೆಂಗಳೂರಿನಿಂದ ವಿಮಾನದ ಮ‌ೂಲಕ ಹುಬ್ಬಳ್ಳಿಗೆ ಆಗಮಿಸಿದ ಜಗದೀಶ್ ಶೆಟ್ಟರ್ ಅವರಿಗೆ ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು. ಈ ವೇಳೆ, ಕಾರ್ಯಕರ್ತರು ಘೋಷಣೆ ಕೂಡ ಕೂಗಿದರು. ಬಿಜೆಪಿ ಕಟ್ಟಿ ಬೆಳೆಸಿದ ಹಿರಿಯ ನಾಯಕ ಶೆಟ್ಟರ್ ಅವರು ಈಗ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ಗುಣಗಾನ ಮಾಡಿದರು.

ಶೆಟ್ಟರ್​ ವಿರುದ್ಧ ಸಚಿವ ಪಾಟೀಲ್​​ ಟೀಕೆ: ಶೆಟ್ಟರ್​ ಅವರು ಕಾಂಗ್ರೆಸ್​ ಸೇರಿದ್ದನ್ನು ಕೃಷಿ ಸಚಿವ ಬಿಸಿ ಪಾಟೀಲ್​​ ಟೀಕಿಸಿದರು. ಮುಖ್ಯಮಂತ್ರಿ, ಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರು ಸಹಿತ ಜಗದೀಶ್​ ಶೆಟ್ಟರ್ ಅವರು ಬಿಜೆಪಿ ತೊರೆದಿರುವುದು ಖಂಡನೀಯ ಎಂದರು. ಮಾಧ್ಯಮದವರೊಂದಿಗೆ ಮಾತನಾಡಿ, ಪಕ್ಷದಲ್ಲಿ ಉನ್ನತ ಮುಖಂಡರ ಮನವೊಲಿಕೆಗೂ ಅವರು ಸ್ಪಂದಿಸಿಲ್ಲ. ಪಕ್ಷದಲ್ಲಿ ಶೆಟ್ಟರ್​ಗೆ ಉನ್ನತ ಸ್ಥಾನಮಾನ ನೀಡಲಾಗಿತ್ತು. ಆದರೂ ಅವರು ಕಾಂಗ್ರೆಸ್ ಸೇರಿದ್ದಾರೆ. ಅವರನ್ನು ಮುಖ್ಯಮಂತ್ರಿ, ಪ್ರಧಾನಿ ಮಾಡ್ತೀವಿ ಅಂತ ಕಾಂಗ್ರೆಸ್​ ಭರವಸೆ ನೀಡಿರಬೇಕು. ಹೀಗಾಗಿ ಅವರು ಅಲ್ಲಿಗೆ ಹೋಗಿದ್ದಾರೆ ಎಂದು ಲೇವಡಿ ಮಾಡಿದರು.

ಓದಿ: ಕಮಲ ತೊರೆದು 'ಕೈ' ಹಿಡಿದ​ ಸೋಲಿಲ್ಲದ ಸರದಾರ: ಜಗದೀಶ್ ಶೆಟ್ಟರ್ ರಾಜಕೀಯ ಹಾದಿ..

Last Updated :Apr 17, 2023, 3:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.