ETV Bharat / state

ಎಂಎಲ್​ಸಿ ಸಿ ಪಿ ಯೋಗೇಶ್ವರ್​ ಬಾವ ಶವವಾಗಿ ಪತ್ತೆ: ಕೊಲೆ ಶಂಕೆ

author img

By ETV Bharat Karnataka Team

Published : Dec 4, 2023, 4:46 PM IST

Updated : Dec 4, 2023, 8:20 PM IST

cp-yogeshwar-brother-in-law-who-was-missing-found-dead
ಎಂಎಲ್​ಸಿ ಸಿ ಪಿ ಯೋಗೇಶ್ವರ್​ ಭಾವ ಶವವಾಗಿ ಪತ್ತೆ

ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಎಂಎಲ್​ಸಿ ಸಿ ಪಿ ಯೋಗೇಶ್ವರ್ ಅವರ ಬಾವ ಮಹಾದೇವಯ್ಯ ಅವರ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಎಂಎಲ್​ಸಿ ಸಿ ಪಿ ಯೋಗೇಶ್ವರ್​ ಬಾವ ಶವವಾಗಿ ಪತ್ತೆ

ಚಾಮರಾಜನಗರ: ಎಂಎಲ್​ಸಿ ಸಿ ಪಿ ಯೋಗೇಶ್ವರ್ ಅವರ ಬಾವ ಮಹಾದೇವಯ್ಯ ಅವರ ಮೃತದೇಹ ರಾಮಾಪುರದ ಬಳಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದುಷ್ಕರ್ಮಿಗಳು ಬಲವಾದ ಆಯುಧ ಬಳಸಿ ಮಹಾದೇವಯ್ಯ ಅವರ ತಲೆಗೆ ಹೊಡೆದು ಕೊಲೆ ಮಾಡಿ 60 ಅಡಿ ಆಳದ ಕಂದಕ್ಕೆ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಚಾಮರಾಜನಗರ ಪೊಲೀಸರು, ಬೆರಳಚ್ಚು ತಜ್ಞರು, ವಿಧಿ ವಿಜ್ಞಾನ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇಂದು ಮಹಾದೇವಯ್ಯ ಅವರ ಪತ್ತೆಗಾಗಿ ರಾಮನಗರ ಮತ್ತು ಕೊಳ್ಳೇಗಾಲ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಸಿ ಪಿ ಯೋಗೇಶ್ವರ್ ಬಾವನ ಪತ್ತೆಗಾಗಿ ರಾಮಾಪುರದಲ್ಲೇ ಮೊಕ್ಕಾಂ ಹೂಡಿದ್ದರು.

cp-yogeshwar-brother-in-law-who-was-missing-found-dead
60 ಅಡಿ ಆಳದ ಕಂದದಲ್ಲಿ ಪತ್ತೆಯಾದ ಮಹಾದೇವಯ್ಯ ಅವರ ಶವ

ಡಿಸೆಂಬರ್​ 2ರಂದು ಯೋಗೇಶ್ವರ್ ಬಾವ ಮಹಾದೇವಯ್ಯ ನಾಪತ್ತೆ ಆಗಿದ್ದರು. ಅವರು ಕಿಡ್ನಾಪ್ ಆಗಿರುವ ಶಂಕೆ ವ್ಯಕ್ತವಾಗಿತ್ತು. ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತೋಟದಲ್ಲಿ ವಾಸವಾಗಿದ್ದ ಮಹದೇವಯ್ಯ ಏಕಾಏಕಿ ನಾಪತ್ತೆಯಾಗಿದ್ದರಿಂದ ಕುಟುಂಬಸ್ಥರು ಆತಂಕಗೊಂಡಿದ್ದರು. ಮಹಾದೇವಯ್ಯ ಮನೆಯ ಕೋಣೆಯಲ್ಲಿನ ಬೀರು ಬಾಗಿಲುಗಳು ತೆರೆದ ಸ್ಥಿತಿಯಲ್ಲಿ ಕಂಡುಬಂದಿತ್ತಲ್ಲದೆ, ಮಹದೇಶ್ವರ ಬೆಟ್ಟದಲ್ಲಿ ಅವರ ಮೊಬೈಲ್​ ಲೋಕೇಶನ್ ಪತ್ತೆಯಾಗಿತ್ತು. ಮಹಾದೇವಯ್ಯ ಕಾಣೆಯಾಗಿರುವ ಬಗ್ಗೆ ಚನ್ನಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿತ್ತು.

cp-yogeshwar-brother-in-law-who-was-missing-found-dead
ಮಹಾದೇವಯ್ಯ ಅವರ ಮೃತದೇಹ ರಾಮಾಪುರದ ಬಳಿ ಪತ್ತೆ

ಇದರ ನಡುವೆ ಭಾನುವಾರ ತಡರಾತ್ರಿ ಮಹಾದೇವಯ್ಯ ಅವರ ಕಾರು ಪತ್ತೆಯಾಗಿತ್ತು. ಮಹಾದೇವಯ್ಯ ಕಾರು ಪತ್ತೆಯಾದ ಮಾಹಿತಿ ತಿಳಿಯುತ್ತಿದ್ದಂತೆ ಹನೂರು ತಾಲೂಕಿನ ರಾಮಾಪುರಕ್ಕೆ ಸಿ‌.ಪಿ. ಯೋಗೇಶ್ವರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದರು. ಚನ್ನಪಟ್ಟಣ ಪೊಲೀಸರು, ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದರು. ಕಾರಿನ ಗಾಜು ಒಡೆದಿದ್ದು ರಕ್ತದ ಕಲೆಗಳು ಕೂಡ ಪತ್ತೆಯಾಗಿತ್ತು.

ಈ ಹಿಂದೆ ನಾಪತ್ತೆ ಸಂಬಂಧ ರಾಮನಗರ ಎಸ್​ಪಿ ಕಾರ್ತಿಕ್ ರೆಡ್ಡಿ ಮಾತನಾಡಿ, "ಮಹಾದೇವಯ್ಯ ನಾಪತ್ತೆಯಾಗಿರುವ ಬಗ್ಗೆ ಅವರ ಮಗ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಾಲ್ಕು ತಂಡಗಳನ್ನು ರಚಿಸಿ ಹುಡುಕಾಟ ನಡೆಸಿದ್ದೇವೆ. ಸದ್ಯ ಅವರು ಬಳಸುತ್ತಿದ್ದ ಬ್ರೀಜಾ ಕಾರು ಚಾಮರಾಜನಗರದಲ್ಲಿ ಪತ್ತೆಯಾಗಿದೆ. ತನಿಖೆ ಮುಂದುವರಿದಿದೆ" ಎಂದು ತಿಳಿಸಿದ್ದರು.

ಇದನ್ನೂ ಓದಿ: ಎಂಎಲ್​ಸಿ ಸಿ.ಪಿ ಯೋಗೇಶ್ವರ್ ಭಾವ ನಾಪತ್ತೆ ಪ್ರಕರಣ: ಪೊಲೀಸರಿಂದ ಮುಂದುವರಿದ ಶೋಧ ಕಾರ್ಯಾಚರಣೆ

Last Updated :Dec 4, 2023, 8:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.