ETV Bharat / state

ಬೀದರ್ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: ₹1.18 ಕೋಟಿ ಮೌಲ್ಯದ ಗಾಂಜಾ ಜಪ್ತಿ

author img

By ETV Bharat Karnataka Team

Published : Aug 23, 2023, 8:19 PM IST

more-then-1-crore-rupees-worth-ganja-seized-in-bidar
ಬೀದರ್ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: ₹1.18 ಕೋಟಿ ಮೌಲ್ಯದ ಗಾಂಜಾ ಜಪ್ತಿ

ಅಕ್ರಮವಾಗಿ ಸಾಗಿಸುತ್ತಿದ್ದ 1.18 ಕೋಟಿ ಮೌಲ್ಯದ 118 ಕೆ.ಜಿ. ಗಾಂಜಾವನ್ನು ಬೀದರ್​ ಪೊಲೀಸರು ಜಪ್ತಿ ಮಾಡಿದ್ದಾರೆ.

ಬೀದರ್ ಪೊಲೀಸರಿಂದ ₹1.18 ಕೋಟಿ ಮೌಲ್ಯದ ಗಾಂಜಾ ಜಪ್ತಿ

ಬೀದರ್​: ಬೀದರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ 1.18 ಕೋಟಿ ಮೌಲ್ಯದ 118 ಕೆ.ಜಿ. ಗಾಂಜಾ ಮತ್ತು ಅದನ್ನು ಸಾಗಿಸುತ್ತಿದ್ದ ಕಾರನ್ನು ಜಪ್ತಿ ಮಾಡಿದ್ದಾರೆ.

ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಮಾಹಿತಿ ನೀಡಿ, "ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಮಾದಕ ವಸ್ತು, ಗಾಂಜಾ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಮಂಗಳವಾರ ಖಚಿತ ಮಾಹಿತಿ ಮೇರೆಗೆ ಮಂಗಲಗಿ ಟೋಲ್ ಪ್ಲಾಜಾ ಬಳಿ ತೆಲಂಗಾಣ ಕಡೆಯಿಂದ ಬರುತ್ತಿದ್ದ ಕಾರು ನಿಲುಗಡೆ ಮಾಡುವಂತೆ ಪೊಲೀಸರು ಕೈಸನ್ನೆ ಮಾಡಿದ್ದಾರೆ. ಚಾಲಕ ಕಾರನ್ನು ನಿಲ್ಲಿಸಿದಂತೆ ಮಾಡಿ ಯೂಟರ್ನ್ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಮನ್ನಾಏಖೇಳ್ಳಿ ಪಿಎಸ್​ಐ ಬಸವರಾಜ ಚಿತಕೋಟೆ ನೇತೃತ್ವದ ತಂಡವು ಬೆನ್ನಟ್ಟಿದಾಗ, ಆರೋಪಿಗಳು ಕಾರನ್ನು ಮನ್ನಾಏಖೇಳ್ಳಿಯ ಎಂಆರ್​ಎಫ್​ ಟೈರ್ ಶೋ ರೂಮ್ ಹತ್ತಿರ ನಿಲ್ಲಿಸಿ ಪರಾರಿಯಾಗಿದ್ದಾರೆ" ಎಂದರು.

"ಕಾರಿನಲ್ಲಿದ್ದ 1.18 ಕೋಟಿ ಮೌಲ್ಯದ 118 ಕೆ.ಜಿ. ಗಾಂಜಾ ಮತ್ತು 8 ಲಕ್ಷ ಮೌಲ್ಯದ ಕಾರನ್ನು ಜಪ್ತಿ ಮಾಡಲಾಗಿದೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಶೋಧಕಾರ್ಯ ನಡೆಸಲಾಗುತ್ತಿದೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಂಡಕ್ಕೆ ಪ್ರಶಂಸಾ ಪತ್ರ ಮತ್ತು ಬಹುಮಾನವನ್ನು ನೀಡುತ್ತಿದ್ದೇನೆ. ಬೀದರ್​ ಜಿಲ್ಲೆಯ ಮಾರ್ಗವಾಗಿ ಅಂತರ ರಾಜ್ಯಕ್ಕೆ ಮಾದಕ ವಸ್ತುಗಳ ಸಾಗಾಣಿಕೆ ತಡೆಗೆ ವಿವಿಧ ಚೆಕ್‌ಪೋಸ್ಟ್​ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಜೊತೆಗೆ, ಗುಪ್ತಚರ ಇಲಾಖೆಯಿಂದ ಹದ್ದಿನ ಕಣ್ಣಿಡಲಾಗಿದ್ದು, ಅಕ್ರಮವಾಗಿ ಮಾದಕ ವಸ್ತುಗಳ ಸಾಗಾಣಿಕೆ ತಡೆಯಲು ಇದು ಸಹಕಾರಿಯಾಗಲಿದೆ" ಎಂದು ತಿಳಿದರು.

ಈ ವೇಳೆ ಹುಮನಾಬಾದ ಸಹಾಯಕ ಪೊಲೀಸ್ ಅಧೀಕ್ಷಕ ಶಿವಾಂಶು ರಜಪೂತ, ಚಿಟಗುಪ್ಪ ಸಿಪಿಐ ಮಹೇಶಗೌಡ ಪಾಟೀಲ, ಪಿಎಸ್‌ಐ ತಸ್ಲೀಮಾ ಪರವಿನ್, ಸಿಬ್ಬಂದಿ ಉಪಸ್ಥಿತರಿದ್ದರು.

ಮಹಿಳೆಯನ್ನು ಹತ್ಯೆಗೈದಿದ್ದ ಇಬ್ಬರು ಆರೋಪಿಗಳ ಬಂಧನ: ಮತ್ತೊಂದೆಡೆ, "ನಗರದ ನ್ಯೂ ಹೌಸಿಂಗ್ ಕಾಲೋನಿಯಲ್ಲಿ ಆ.21 ರಂದು ನಡೆದ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿತರು ಕೊಲೆಯಾದ ಮಹಿಳೆಯ ಮಾವ ಹಾಗೂ ಮೈದುನರಾಗಿದ್ದಾರೆಂದು ತನಿಖೆಯಲ್ಲಿ ತಿಳಿದುಬಂದಿದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

"ಕೊಲೆಯಾದ ಮಹಿಳೆ ಲಕ್ಷ್ಮಿ ಬೀದರ್​ ತಾಲೂಕಿನ ಮಾಳೆಗಾಂವ ಗ್ರಾಮದ ನಿವಾಸಿಯಾಗಿದ್ದು, ಅದೇ ಗ್ರಾಮದ ವ್ಯಕ್ತಿಯೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿರುವ ಶಂಕೆಯ ಮೇರೆಗೆ ಆರೋಪಿಗಳಾದ ಶಿವಕುಮಾರ್​, ಮಾರುತಿ ರೆವಣಗೆ, ಯಲ್ಲಪ್ಪ ರೆವಣಗೆ ಎಂಬುವವರು ಸೇರಿಕೊಂಡು ಮಹಿಳೆಯ ಹಿಂದೆ ಸಹಚರರನ್ನು ಬಿಟ್ಟು, ಸಹಚರರು ನೀಡಿದ ಮಾಹಿತಿ ಮೇರೆಗೆ ಆರೋಪಿತರು ಸ್ಥಳಕ್ಕೆ ತೆರಳಿ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇನ್ನು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಬ್ಯಾಗ್​ನಲ್ಲಿ ಹೆಬ್ಬಾವು, ಕಾಂಗರೂ ಸೇರಿ ಕಾಡು ಪ್ರಾಣಿಗಳ ಕಳ್ಳಸಾಗಣೆ: ಕಸ್ಟಮ್ಸ್​​ನಿಂದ 234 ವನ್ಯಜೀವಿಗಳ ರಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.