ETV Bharat / state

ಮೀನುಗಾರರ ಸಂಕಷ್ಟ ಕೇಳದ ಸರ್ಕಾರ ನಿದ್ದೆ ಮಾಡುತ್ತಿದೆಯೇ?: ಸಿದ್ದರಾಮಯ್ಯ ಗರಂ

author img

By

Published : Dec 26, 2022, 5:50 PM IST

ಸಿದ್ದರಾಮಯ್ಯ
ಸಿದ್ದರಾಮಯ್ಯ

ಮೀನುಗಾರರಿಗೆ ಸರ್ಕಾರ ಸೀಮೆ ಎಣ್ಣೆ ನೀಡಬೇಕು ಎಂಬ ನಿಯಮವಿದೆ. ಆದರೆ ನೀಡುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗರಂ ಆದರು.

ಬೆಳಗಾವಿ: ನಾಡದೋಣಿ ಮೀನುಗಾರರು ಸಂಕಷ್ಟದಲ್ಲಿದ್ದು, ಪರವಾನಗಿ ಇರುವವರಿಗೆ ತಕ್ಷಣವೇ ಸೀಮೆ ಎಣ್ಣೆ ಬಿಡುಗಡೆ ಮಾಡಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಆಗ್ರಹಿಸಿದರು. ಪ್ರಶ್ನೋತ್ತರ ವೇಳೆ ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಅವರ ಪರವಾಗಿ ಸಂಜೀವ್ ಮಠಂದೂರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್. ಅಂಗಾರ ಅವರು, ಕೇಂದ್ರ ಸರ್ಕಾರ ನಮಗೆ ಸಬ್ಸಿಡಿ ರೂಪದಲ್ಲಿ ಸೀಮೆ ಎಣ್ಣೆ ನೀಡುವಲ್ಲಿ ವಿಳಂಬವಾಗಿದೆ. ಶೀಘ್ರವಾಗಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಆಗ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕಳೆದ 10 ತಿಂಗಳಿನಿಂದ ನಾಡದೋಣಿ ಮೀನುಗಾರಿಕೆ ಮಾಡುವವರಿಗೆ ಸರ್ಕಾರ ಸೀಮೆ ಎಣ್ಣೆ ನೀಡಿಲ್ಲ. ಸರ್ಕಾರ ನಿದ್ದೆ ಮಾಡುತ್ತಿದೆಯೇ? ಮೀನುಗಾರರು ಏನು ಆತ್ಮಹತ್ಯೆ ಮಾಡಿಕೊಳ್ಳಬೇಕೆ? ಆಗಲಿಲ್ಲ ಎಂದರೆ ಮನೆಗೆ ಹೋಗಿ ಎಂದು ಗರಂ ಆದರು. ಕರಾವಳಿ ಪ್ರದೇಶದಲ್ಲಿ ಜನರು ಮೀನುಗಾರಿಕೆ ನಂಬಿ ಜೀವನ ನಡೆಸುತ್ತಿದ್ದಾರೆ. ಅವರಿಗೆ 10 ತಿಂಗಳಿನಿಂದ ಸೀಮೆ ಎಣ್ಣೆ ನೀಡಿಲ್ಲ ಎಂದರೆ ಹೇಗೆ? ಕೇಂದ್ರ ಸಚಿವರ ಜೊತೆಗೆ ನೀವು ಮಾತುಕತೆ ಆದರೂ ನಡೆಸಿ, ಇನ್ನೇನಾದರೂ ಮಾಡಿ ಪರಿಹಾರ ಕೊಡಿ ಎಂದು ಆಗ್ರಹಿಸಿದರು.

ಪ್ರತಿ ತಿಂಗಳು 300 ಲೀಟರ್ ಸೀಮೆ ಎಣ್ಣೆ ನೀಡಬೇಕು ಎಂಬ ನಿಯಮವಿದೆ. ಆದರೆ, ಹತ್ತು ತಿಂಗಳಿಂದ ಸೀಮೆ ಎಣ್ಣೆ ಪೂರೈಸಿಲ್ಲ. ಕೇಂದ್ರ ಸರ್ಕಾರದಿಂದ 5,472 ಲೀಟರ್ ಸೀಮೆ ಎಣ್ಣೆ ಬಿಡುಗಡೆಯಾಗಿದೆ. ಉಳಿದ 18,618 ಲೀಟರ್ ಸೀಮೆ ಎಣ್ಣೆ ಬಂದಿಲ್ಲ ಎಂದರೆ ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. 4,514 ನಾಡದೋಣಿಗಳಿಗೆ ಕೇವಲ 2,472 ಲೀಟರ್ ಬಿಡುಗಡೆ ಮಾಡಲಾಗಿದೆ. ಪ್ರತಿ ತಿಂಗಳು 300 ಲೀಟರ್ ಸೀಮೆ ಎಣ್ಣೆ ಕೊಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಇದಕ್ಕೆ ದನಿಗೂಡಿಸಿದ ಉಪ ನಾಯಕ ಯು.ಟಿ.ಖಾದರ್, ಕೇಂದ್ರ ಸರ್ಕಾರ ಸೀಮೆ ಎಣ್ಣೆಗೆ ಸಬ್ಸಿಡಿ ಕೊಡುತ್ತಿಲ್ಲ. ಕೊಡುವುದೂ ಇಲ್ಲ. ಸಚಿವರು ಸದನಕ್ಕೆ ಸುಳ್ಳು ಮಾಹಿತಿ ನೀಡಬಾರದು. ಇದಕ್ಕೆ ಹೆಚ್ಚು ಎಂದರೆ 50 ಕೋಟಿ ರೂ. ಅನುದಾನ ಬೇಕು. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಲಿ ಎಂದು ಒತ್ತಾಯಿಸಿದರು. ಆಗ ಸಚಿವ ಅಂಗಾರ ಅವರು, ಈಗಾಗಲೇ ಇಲಾಖೆ ವತಿಯಿಂದಲೇ ಸೀಮೆ ಎಣ್ಣೆಯನ್ನು ವಿತರಣೆ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಜೊತೆಗೆ ರಾಜ್ಯಕ್ಕೆ ಬೇಕಾಗಿರುವ ಸೀಮೆ ಎಣ್ಣೆಯನ್ನು ವಿತರಿಸಲು ಕೇಂದ್ರಕ್ಕೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು.

ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಅಂಗಾರ, ಮೀನುಗಾರರಿಗೆ ಮನೆ ಕಟ್ಟಲು 1.20 ಲಕ್ಷ ರೂ. ಹಣವನ್ನು ನೀಡುತ್ತಿದ್ದೇವೆ. ಇದನ್ನು ಹೆಚ್ಚಳ ಮಾಡಬೇಕು ಎಂದು ಸದಸ್ಯರು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಭರವಸೆ ನೀಡಿದರು.

ದೇವಸ್ಥಾನಗಳಿಗೆ ಅನುದಾನ ನೀಡಲು ಸಿಎಂ ಜೊತೆ ಚರ್ಚೆ: ಮುಜರಾಯಿ ವ್ಯಾಪ್ತಿಗೆ ಬರುವ ದೇವಸ್ಥಾನಗಳಿಗೆ ತಸ್ತಿಕ್ ಮತ್ತು ವರ್ಷಾಸನ ಯೋಜನೆಯಡಿ ನೀಡುತ್ತಿರುವ ಅನುದಾನವನ್ನು ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಸಚಿವೆ ಶಶಿಕಲಾ ಜೊಲ್ಲೆ ಅವರು, ಶಾಸಕ ಹೊಲಗೇರಿ.ಬಿ.ಎಸ್. ಅವರ ಪರವಾಗಿ ಅಮರೇಗೌಡ ಬಯ್ಯಾಪುರ ಅವರು ಹೇಳಿದ ಪ್ರಶ್ನೆಗೆ ಉತ್ತರಿಸಿದರು.

ತಸ್ತಿಕ್ ಮತ್ತು ವರ್ಷಾಸನ ಯೋಜನೆಯಡಿ ಪ್ರತಿ ವರ್ಷ ದೇವಸ್ಥಾನಗಳಿಗೆ 1.20 ಲಕ್ಷ ವಾರ್ಷಿಕ ಅನುದಾನ ನೀಡುತ್ತೇವೆ. ಇದು ನಿರ್ವಹಣೆಗೆ ಸಾಕಾಗುವುದಿಲ್ಲ ಎಂಬ ಅಭಿಪ್ರಾಯ ಶಾಸಕರಿಂದ ಕೇಳಿ ಬಂದಿದೆ. ಅನುದಾನ ಹೆಚ್ಚಳ ಕುರಿತಂತೆ ಅಧಿಕಾರಿಗಳು ಮತ್ತು ಸಿಎಂ ಜೊತೆ ಚರ್ಚಿಸಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅಲ್ಲದೇ ಹೆಚ್ಚಳ ಮಾಡುವ ಬಗ್ಗೆಯೂ ಸಹ ಚಿಂತನೆ ನಡೆಸುವುದಾಗಿ ಹೇಳಿದರು.

ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನಲ್ಲಿ ದೇವಸ್ಥಾನ ಮತ್ತು ಜೀರ್ಣೋದ್ಧಾರ ಮಾಡಲು ಸರ್ಕಾರ ಬದ್ಧವಿದೆ ಎಂದರು. ಉತ್ತರ ಇಂಗ್ಲೀಷ್​ನಲ್ಲಿ ನೀಡಲಾಗಿದೆ ಎಂಬ ಶಾಸಕರ ಆಕ್ಷೇಪಕ್ಕೆ ಉತ್ತರಿಸಿದ ಸಚಿವರು, ಮುಂದೆ ಈ ರೀತಿ ಆಗದಂತೆ ಸೂಚನೆ ನೀಡುವುದಾಗಿ ಹೇಳಿದರು.

ಮನೆ ಕಳೆದುಕೊಂಡವರಿಗೆ ಹಣ ಬಿಡುಗಡೆ : ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಭಾರಿ ಮಳೆಯಿಂದ ಪ್ರವಾಹಕ್ಕೊಳಗಾಗಿ ಮನೆ ಕಳೆದುಕೊಂಡವರಿಗೆ 6,590 ಕೋಟಿ ರೂ. ಹಣವನ್ನು ಮನೆ ಕಟ್ಟಿಕೊಳ್ಳಲು ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಮಾಹಿತಿ ನೀಡಿದರು. ಭಾರಿ ಮಳೆಯಿಂದಾಗಿ ಒಟ್ಟು 4.57 ಲಕ್ಷ ಹೆಕ್ಟೇರ್​​ ಬೆಳೆ ಹಾನಿಯಾಗಿದೆ. 5.54 ಲಕ್ಷ ಮನೆಗಳು ಕುಸಿತಗೊಂಡಿವೆ. ಕೇಂದ್ರ ಸರ್ಕಾರದ ಎನ್‍ಡಿಆರ್​​ಎಫ್ ಮಾರ್ಗಸೂಚಿಯನ್ನು ಮೀರಿ ಹಣವನ್ನು ಸಂತ್ರಸ್ತರಿಗೆ ನೀಡಿದ್ದೇವೆ ಎಂದು ತಿಳಿಸಿದರು.

ಚಿಕ್ಕಮಗಳೂರು ಮೂಡಿಗೆರೆ ಕ್ಷೇತ್ರದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ರೈತರ ಬೆಳೆಗಳು ಹಾನಿ ಆಗಿರುವುದರ ಕುರಿತು ಮಾಹಿತಿ ನೀಡಿದ ಸಚಿವರು, ಮೂಡೆಗೆರೆ ಮತ್ತು ಕಳಸಾ ತಾಲೂಕು ವ್ಯಾಪ್ತಿಯಲ್ಲಿ ಕಾಫಿ, ಅಡಕೆ ಮತ್ತು ಭತ್ತ ಬೆಳೆ ಸೇರಿದಂತೆ ಒಟ್ಟು 13,276 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈವರೆಗೆ 14,033 ರೈತರ ಖಾತೆಗೆ ಒಟ್ಟು 46,44,61,000 ಹಣ ಬಿಡುಗಡೆಯಾಗಿದೆ. ಹವಾಮಾನ ವೈಪರೀತ್ಯದಿಂದ ಕಾಫಿ ಬೆಳೆಗಾರರಿಗೆ ಹಾನಿಯುಂಟಾಗಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.

(ಓದಿ: ಸರ್ಕಾರದ ಭ್ರಷ್ಟಾಚಾರ ವಿಷಯ ಪ್ರಸ್ತಾಪಕ್ಕೆ ಪಟ್ಟು: ಆಡಳಿತ-ಪ್ರತಿಪಕ್ಷ ಸದಸ್ಯರ ವಾಗ್ವಾದ )

ETV Bharat Logo

Copyright © 2024 Ushodaya Enterprises Pvt. Ltd., All Rights Reserved.