ETV Bharat / state

ಬೆಳಗಾವಿ ಅಧಿವೇಶನ: ₹300 ಕೋಟಿ ವೆಚ್ಚದಲ್ಲಿ ಶಾಸಕರು, ಅಧಿಕಾರಿಗಳ ವಾಸ್ತವ್ಯಕ್ಕೆ ಪಂಚತಾರಾ ಹೊಟೇಲ್​ ನಿರ್ಮಾಣಕ್ಕೆ ಚಿಂತನೆ

author img

By ETV Bharat Karnataka Team

Published : Nov 21, 2023, 9:38 AM IST

belagavi-session
ಬೆಳಗಾವಿ ಅಧಿವೇಶನ

ಪ್ರತಿ ವರ್ಷ ಬೆಳಗಾವಿ ಅಧಿವೇಶನಕ್ಕೆ ಆಗಮಿಸುವ ಅಧಿಕಾರಿಗಳು ಹಾಗೂ ಶಾಸಕರುಗಳ ವಾಸ್ತವ್ಯಕ್ಕೆ ಕೋಟಿಗಟ್ಟಲೆ ಹಣ ಖರ್ಚಾಗುವುದನ್ನು ತಡೆಯಲು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೊಸ ಯೋಜನೆಗೆ ತಯಾರಿ ನಡೆಸಿದ್ದಾರೆ.​

ಬೆಂಗಳೂರು: ಪ್ರತಿವರ್ಷ ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಶಾಸಕರು ಹಾಗೂ ಅಧಿಕಾರಿಗಳ ವಾಸ್ತವ್ಯಕ್ಕೆ ಕೋಟಿ ಕೋಟಿ ಲೆಕ್ಕದಲ್ಲಿ ಹಣ ಖರ್ಚು ಮಾಡಲಾಗುತ್ತದೆ. ಇದೀಗ ಇಂಥ ಖರ್ಚು ಕಡಿಮೆಗೊಳಿಸುವುದು, ವಾಸ್ತವ್ಯದ ಅನಾನುಕೂಲತೆ, ವೆಚ್ಚವನ್ನು ತಗ್ಗಿಸಲು ಬೆಳಗಾವಿ ಸುವರ್ಣಸೌಧದ ಸಮೀಪದಲ್ಲೇ ಪಂಚತಾರಾ ಹೊಟೇಲ್ ನಿರ್ಮಿಸಲು ಸರ್ಕಾರ ಮುಂದಾಗಿದೆ.

ಡಿ.4 ರಿಂದ ಡಿ.15 ರವರೆಗೆ 10 ದಿನಗಳ ಕಾಲ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಕಳೆದ ವರ್ಷ ನಡೆದ ಅಧಿವೇಶನಕ್ಕೆ ಅಂದಾಜು 37 ಕೋಟಿ ರೂ. ವೆಚ್ಚವಾಗಿತ್ತು.‌ 2021ರಲ್ಲಿ ಸುಮಾರು 30 ಕೋಟಿ ರೂ. ಖರ್ಚು ಮಾಡಲಾಗಿತ್ತು. 2018ರಲ್ಲಿ 17 ಕೋಟಿ ರೂ. ಖರ್ಚಾಗಿತ್ತು. ವರ್ಷಂಪ್ರತಿ ಬೆಲೆ ಏರಿಕೆಯಿಂದ ಅಧಿವೇಶನದ ವೆಚ್ಚದಲ್ಲಿ ಗಣನೀಯ ಏರಿಕೆ ಕಾಣುತ್ತಿದೆ.‌ ಒಟ್ಟು ಖರ್ಚಿನಲ್ಲಿ ಬಹುಪಾಲು ವಾಸ್ತವ್ಯದ್ದಾಗಿದೆ.

ಅಧಿವೇಶನದ ಎರಡು ವಾರಗಳ ಕಾಲ ಬೆಳಗಾವಿ ನಗರದ ಎಲ್ಲಾ ಹೊಟೇಲ್ ಹಾಗೂ ರೆಸಾರ್ಟ್​ಗಳನ್ನು ಜಿಲ್ಲಾಡಳಿತ ಶಾಸಕರು, ಅಧಿಕಾರಿಗಳು, ಗಣ್ಯರ ವಾಸ್ತವ್ಯಕ್ಕಾಗಿ ವಶಕ್ಕೆ ಪಡೆಯುತ್ತದೆ. ಅಧಿವೇಶನದ ವೇಳೆ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ, ಮಾಧ್ಯಮ ಸಿಬ್ಬಂದಿಗಳ ವಾಸ್ತವ್ಯಕ್ಕಾಗಿ ಸುಮಾರು 2,000 ಹೊಟೇಲ್ ಕೊಠಡಿಗಳನ್ನು ಬುಕ್ ಮಾಡಲಾಗುತ್ತದೆ.

2022ರಲ್ಲಿ ನಗರದ ಸುಮಾರು 80 ಹೊಟೇಲ್​ಗಳನ್ನು ವಾಸ್ತವ್ಯಕ್ಕಾಗಿ ಬಳಸಲಾಗಿತ್ತು. ಶಾಸಕರು, ವಿಐಪಿಗಳು, ಅಧಿಕಾರಿಗಳ ವಾಸ್ತವ್ಯಕ್ಕಾಗಿ 67 ಐಷಾರಾಮಿ ಹೊಟೇಲ್​ಗಳನ್ನು ಬಳಸಲಾಗುತ್ತದೆ. ಇದಕ್ಕಾಗಿ ಕಳೆದ ವರ್ಷ ಸುಮಾರು 6 ಕೋಟಿ ರೂ. ವೆಚ್ಚವಾಗಿದೆ. ಸರಾಸರಿ ಸರ್ಕಾರ ಶಾಸಕರ ವಾಸ್ತವ್ಯಕ್ಕೆ ಸುಮಾರು 10-12 ಲಕ್ಷ ರೂ. ಖರ್ಚು ಮಾಡುತ್ತದೆ. ಬೆಳಗಾವಿ ನಗರದಲ್ಲಿ‌ನ ಲಕ್ಸುರಿ ಹೊಟೇಲ್​ಗಳು ಸುಮಾರು 20 ಲಕ್ಷ ರೂ. ನಿಂದ 70 ಲಕ್ಷ ರೂ.‌ವರೆಗೆ ಬಿಲ್ ಮಾಡುತ್ತವೆ ಎಂದು ಆರ್​ಟಿಐ ಮಾಹಿತಿಯಿಂದ ತಿಳಿದುಬಂದಿದೆ.‌

ಯು.ಟಿ.ಖಾದರ್ ಹೇಳಿಕೆ: "ಸುವರ್ಣಸೌಧದ ಬಳಿ 10 ಎಕರೆ ಸರ್ಕಾರಿ ಜಮೀನಿನಲ್ಲಿ ಹೊಟೇಲ್ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಪಬ್ಲಿಕ್​-ಪ್ರೈವೇಟ್​ ಪಾರ್ಟ್ನರ್​ಶಿಪ್​ ಮಾದರಿಯಲ್ಲಿ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಜಮೀನು ಸರ್ಕಾರದ್ದಾಗಿದ್ದು, ಖಾಸಗಿಯವರು ಹೊಟೇಲ್ ನಿರ್ಮಿಸಲಿದ್ದಾರೆ. 30 ವರ್ಷಗಳ ಕಾಲ ಖಾಸಗಿಯವರಿಗೆ ಕಟ್ಟಡ​ ಗುತ್ತಿಗೆ ನೀಡುವ ಯೋಚನೆ ಇದೆ. ಅಧಿವೇಶನ ವೇಳೆ ಈ ಹೊಟೇಲ್​ ಅನ್ನು ಶಾಸಕರು, ಅಧಿಕಾರಿಗಳು, ಗಣ್ಯರ ವಾಸ್ತವ್ಯಕ್ಕೆ ಬಳಸಲಾಗುವುದು. ಉಳಿದ ಅವಧಿಗಳಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಿರಲಿದೆ. ಅಂದಾಜು 300 ಕೋಟಿ ರೂ. ವೆಚ್ಚದಲ್ಲಿ ಹೊಟೇಲ್ ನಿರ್ಮಾಣಕ್ಕೆ ಚಿಂತನೆ ನಡೆದಿದೆ" ಎಂದು ಯು.ಟಿ.ಖಾದರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಅಧಿವೇಶನ ಕೇವಲ ಪ್ರತಿಭಟನೆ ಉದ್ದೇಶಕ್ಕೆ ಆಗಬಾರದು: ಗೃಹ ಸಚಿವ ಪರಮೇಶ್ವರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.