ETV Bharat / state

ಈ ಸಲದ ಬೆಳಗಾವಿ ಅಧಿವೇಶನ ಸರ್ವರೂ ಮೆಚ್ಚುವಂತೆ ನಡೆಯಲಿದೆ: ಯು ಟಿ ಖಾದರ್

author img

By ETV Bharat Karnataka Team

Published : Nov 7, 2023, 3:16 PM IST

Updated : Nov 7, 2023, 3:45 PM IST

Etv Bharatassembly-speaker-ut-khader-reaction-on-belagavi-winter-session
ಈ ಬಾರಿಯ ಬೆಳಗಾವಿ ಅಧಿವೇಶನ ಸರ್ವರೂ ಮೆಚ್ಚುವಂತೆ ನಡೆಯಲಿದೆ: ಯು ಟಿ ಖಾದರ್

ಸುವರ್ಣ ವಿಧಾನಸೌಧದಲ್ಲಿ ಕಡಿಮೆ ಬಜೆಟ್​ನಲ್ಲಿ ಅರ್ಥಪೂರ್ಣವಾಗಿ ಚಳಿಗಾಲದ ಅಧಿವೇಶನ ನಡೆಸಲು ಎಲ್ಲ ಸಿದ್ಧತೆ ಕೈಗೊಂಡಿದ್ದೇವೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು ಟಿ ಖಾದರ್ ತಿಳಿಸಿದರು.

ಬೆಳಗಾವಿ ಅಧಿವೇಶನದ ಕುರಿತು ಪ್ರತಿಕ್ರಿಯೆ

ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ನಡೆಯುವ ಈ ಬಾರಿಯ ಚಳಿಗಾಲದ ಅಧಿವೇಶನವು ಮಾದರಿ, ಸರ್ವರೂ ಮೆಚ್ಚುವ ಹಾಗೂ ಜನಸಾಮಾನ್ಯರಿಗೆ ಹೆಚ್ಚು ಪ್ರಯೋಜ‌ನವಾಗುವಂತಹಾ ಹಾಗೂ ಬಹುತೇಕ ಉತ್ತರ ಕರ್ನಾಟಕದ ಜನರಿಗೆ ಸಮಾಧಾನ, ಸಂತೃಪ್ತಿ ತರುವ ಅಧಿವೇಶನ ಆಗಲಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು ಟಿ ಖಾದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್​ನಲ್ಲಿ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಸುವರ್ಣ ವಿಧಾನಸೌಧದಲ್ಲಿ ಸಿದ್ಧತೆ ಪರಿಶೀಲಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಸಚಿವರು, ಶಾಸಕರಿಗೆ ಹಾಗೂ ವೀಕ್ಷಣೆಗೆ ಬರುವ ಜನಸಾಮಾನ್ಯರಿಗೆ ಎಲ್ಲ ರೀತಿ ವ್ಯವಸ್ಥೆ ಮಾಡಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಪಾಸ್ ತೆಗೆದುಕೊಳ್ಳಲು ಕಷ್ಟ ಆಗಬಾರದು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಒಳಗೆ ಬರಲು ಪಾಸಿನ ವ್ಯವಸ್ಥೆ ಮಾಡಲಾಗಿದೆ‌. ಇನ್ನು ಅಧಿವೇಶನ ನಡೆಯುವ ದಿನಾಂಕವನ್ನು ಶೀಘ್ರವೇ ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. ಅಧಿವೇಶನ ಯಾವಾಗ ಬೇಕಾದರೂ ಆಗಲಿ, ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ‌. ಒಟ್ಟಾರೆ ಕಡಿಮೆ ಬಜೆಟ್​ನಲ್ಲಿ ಅರ್ಥಪೂರ್ಣ ಅಧಿವೇಶನಕ್ಕೆ ಎಲ್ಲ ಸಿದ್ಧತೆ ಕೈಗೊಂಡಿದ್ದೇವೆ. ಶಾಸಕರು ಅಧಿವೇಶನಕ್ಕೆ ಗೈರಾಗುವ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಾರಿ ಎಲ್ಲ ಶಾಸಕರು ಬರ್ತಾರೆ ಎಂದು ಹೇಳಿದರು.

ಸುವರ್ಣಸೌಧ ನಿರ್ವಹಣೆ ಸಮಸ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ, ಅಧಿವೇಶನದಲ್ಲಿ ವಿಶೇಷ ಸಭೆ ಕರೆಯುತ್ತೇವೆ. ಸ್ವಚ್ಛತೆಯ ಸಲುವಾಗಿ ಒಂದು ನಿರ್ಧಾರ ಕೈಗೊಳ್ಳುತ್ತೇವೆ. ಇನ್ನು ಬೆಳಗಾವಿ ಕೇವಲ ಸ್ಟ್ರೈಕ್ ಅಧಿವೇಶನ ಎಂಬಂತಾಗಿದೆ. ಸ್ಟ್ರೈಕ್ ಮಾಡೋದು ಕಡಿಮೆ. ಆದರೆ, ಉತ್ತಮ ಅಧಿವೇಶನ ಆಗುತ್ತದೆ. ಕೆಲ ಶಾಸಕರು ಮತ್ತು ಸಚಿವರಿಗೆ ಇದರಿಂದ ಬೇಸರ ಇದೆ. ಹಾಗಾಗಿ, ಇಲಾಖೆಯವರು ಪ್ರತಿಭಟನಾಕಾರರನ್ನು ಕರೆಸಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು. ಆದಷ್ಟು ಪ್ರತಿಭಟನೆಗಳನ್ನು ಕಡಿಮೆ ಮಾಡಿ, ಅಧಿವೇಶನ ಸುಸೂತ್ರವಾಗಿ ನಡೆಯುವಂತೆ ಮಾಡಬಹುದು ಎಂದರು.

ಬೆಂಗಳೂರಿನ ವಿಧಾನಸೌಧಕ್ಕೂ ಬೆಳಗಾವಿಯ ಸುವರ್ಣಸೌಧಕ್ಕೂ ಹೋಲಿಕೆ ಮಾಡಲಾಗುವುದಿಲ್ಲ. ಬೆಂಗಳೂರು ವಿಧಾನಸೌಧ ಎಲ್ಲ ರೀತಿಯ ವ್ಯವಸ್ಥೆ ಇದೆ. ಅದೇ ಮಾದರಿಯ ಸೌಧ ಇಲ್ಲಿಗೆ ತನ್ನಿ ಎಂದು ಹೇಳಿದ್ದೆವು. ಆದರೆ ಅದು ಇಲ್ಲಿ ಆಗಲಿಲ್ಲ. ಬೆಂಗಳೂರಿಗೂ ಇಲ್ಲಿಗೂ ಹೋಲಿಕೆ ಮಾಡಿದರೆ ಅಜಗಜಾಂತರವಿದೆ ಎಂದು ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ರಾಜ್ಯಪಾಲರನ್ನು ಕರೆತಂದು ಒಂದು ಬಾರಿ ಬೆಳಗಾವಿಯಲ್ಲಿ ಜಂಟಿ ಅಧಿವೇಶನ ಮಾಡುತ್ತೇವೆ ಎಂದ ಅವರು, ಈ ಬಗ್ಗೆ ಸಿಎಂ ಜತೆಗೆ ಮಾತಾಡಿ ಬೆಳಗಾವಿಯಲ್ಲಿ ಆದಷ್ಟು ಬೇಗ ಜಂಟಿ ಅಧಿವೇಶನ ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ನ.10 ರಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ; ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

Last Updated :Nov 7, 2023, 3:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.