ETV Bharat / state

ಬೆಂಗಳೂರು: ವೃದ್ದೆ ಬಳಿ ಮಂತ್ರ ಹಾಕಿಸಲು ಬಂದ ಯುವಕನಿಂದ ಸರಗಳ್ಳತನ

author img

By ETV Bharat Karnataka Team

Published : Nov 20, 2023, 4:09 PM IST

ವೃದ್ದೆಯ ಚಿನ್ನದ ಸರ ಕದ್ದು ಯುವಕ ಪರಾರಿ
ವೃದ್ದೆಯ ಚಿನ್ನದ ಸರ ಕದ್ದು ಯುವಕ ಪರಾರಿ

ಮಂತ್ರ ಹಾಕಿಸಿಕೊಳ್ಳಲು ಬಂದ ಯುವಕನಿಂದ ವೃದ್ದ ದಂಪತಿಗಳ ಕತ್ತಿಗೆ ಕುಡಗೋಲಿನಿಂದ ಗಾಯಗೊಳಿಸಿ ಚಿನ್ನದಸರ ಎಗರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಆನೇಕಲ್​ (ಬೆಂಗಳೂರು) : ಈವರೆಗೆ ಬೈಕ್​ನಲ್ಲಿ ಬಂದು ಒಂಟಿ ಮಹಿಳೆಯರ ಚಿನ್ನದ ಸರ ಕಳವು ಮಾಡುತ್ತಿದ್ದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಆದರೇ, ಇದನ್ನೂ ಮೀರಿಸುವ ಸರಗಳ್ಳತನ ಪ್ರಕರಣವೊಂದು ರಾಜಧಾನಿ ಬೆಂಗಳೂರಿನಲ್ಲಿ ಸದ್ದು ಮಾಡಿದೆ. ಕಾಲಿನ ನೋವಿಗೆ ಮಂತ್ರ ಹಾಕಿಸಿಕೊಳ್ಳುವ ನೆಪದಲ್ಲಿ ಬಂದಿದ್ದ ಯುವಕನೊಬ್ಬ ವೃದ್ದೆಯ ಕತ್ತುಕೊಯ್ದು ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ಆನೇಕಲ್ ಪಟ್ಟಣದ ಲಕ್ಷ್ಮಿ ಟಾಕೀಸ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ನಡೆದಿದೆ.

ಘಟನೆಯಲ್ಲಿ ಅಕ್ಕಯ್ಯಮ್ಮ ಎಂಬ ವೃದ್ದೆಯ ಕತ್ತಿಗೆ ಹಾಗೂ ವೃದ್ದೆಯ ಗಂಡ ನಾರಾಯಣಾಚಾರಿ ಅವರಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವೃದ್ದೆ ಅಕ್ಕಯ್ಯಮ್ಮ ಹಾಗೂ ಪತಿ ನಾರಾಯಾಣಾಚಾರಿ ಇಬ್ಬರೂ ಕಾಲು, ಕೈ ಉಳುಕಿದ್ದರೇ, ಮಂತ್ರ ಹಾಕುತ್ತಿದ್ದರು. ಹೀಗಾಗಿ ಮಂತ್ರ ಹಾಕಿಸಿಕೊಳ್ಳುವ ನೆಪದಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ ದುಷ್ಕರ್ಮಿ ವೃದ್ದೆ ಕತ್ತನ್ನು ಕುಡಗೋಲಿನಿಂದ ಕೊಯ್ದು ಚಿನ್ನದ ಸರ ಎಗರಿಸಿದ್ದಾನೆ.

ಕಳೆದ ಶನಿವಾರವೂ ಮಂತ್ರ ಹಾಕಿಸಿಕೊಳ್ಳಲು ಬಂದಿದ್ದ ಆರೋಪಿ ಮನೆಯಲ್ಲಿ ಇಬ್ಬರೇ ವೃದ್ದರು ಇರುವುದನ್ನು ಖಾತರಿಪಡಿಸಿಕೊಂಡು ಹೊಂಚು ಹಾಕಿದ್ದನು. ಇಂದು ಬೆಳಗ್ಗೆ ನಡೆದುಕೊಂಡೇ ಬಂದು ಹಳೆ ಪರಿಚಯದಿಂದಲೇ ಮನೆಗೆ ನುಗ್ಗಿ ಕೃತ್ಯ ಎಸಗಿ ಲಕ್ಷ್ಮಿ ಟಾಕೀಸ್ ಕಡೆಗೆ ಓಡಿ ಹೋಗಿದ್ದಾನೆ. ಈ ಸಂದರ್ಭದಲ್ಲಿ ಚೀರಾಟ ಕೇಳಿದ ಅಕ್ಕ ಪಕ್ಕದ ಮನೆಯವರು ಘಟನೆ ನಡೆದ ಸ್ಥಳಕ್ಕೆ ಬಂದಿದ್ದಾರೆ. ಬಳಿಕ ವೃದ್ದ ದಂಪತಿಯ ಮಗನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಎರಡೆಳೆ ಚಿನ್ನದ ಮಾಂಗಲ್ಯ ಸರದೊಂದಿಗೆ 120 ಗ್ರಾಂ ಚಿನ್ನಾಭರಣ ಕಳದೆಕೊಂಡಿದ್ದಾರೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಆರೋಪಿ ಗಂಗಾ ಆಸ್ಪತ್ರೆಗೆ ತೆರಳಿ ಅನಂತರ ಬಹುದ್ದೂರ್ ಪುರದ ಕಡೆ ಓಡಿದ ಮಾಹಿತಿ ಪೊಲೀಸರು ಕಲೆ ಹಾಕಿದ್ದಾರೆ. ಆರೋಪಿ ಮನೆಗೆ ಬಂದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಂಪನಿ ಚಪ್ಪಲಿಗಳ ಕಳ್ಳತನ : ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ಮನೆ ಮುಂದೆ ಬಿಡುವ ಚಪ್ಪಲಿಗಳು ಬೆಳಗಾಗುವುದರೊಳಗೆ ಕಾಣೆಯಾಗುತ್ತಿರುವ ಘಟನೆ ನಡೆಯುತ್ತಿದೆ. ಚಪ್ಪಲಿ ಕದಿಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇಲ್ಲಿನ ನಿವಾಸಿಗಳು ಉತ್ತಮವಾದ ಕಂಪನಿಯ ಹೆಚ್ಚು ದರದ ಚಪ್ಪಲಿಗಳನ್ನೇ ಧರಿಸುತ್ತಾರೆ. ಎಲ್ಲರೂ ತಮ್ಮ ಮನೆಯ ಕಾಂಪೌಂಡ್ ಒಳಗೆಯೇ ಚಪ್ಪಲಿಗಳನ್ನು ಬಿಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಚಪ್ಪಲಿ‌ ಎಗರಿಸುತ್ತಿದ್ದಾರೆ.

ಇದನ್ನೂ ಓದಿ : ಶಿವಮೊಗ್ಗ: ಮನೆ ಮುಂದಿಟ್ಟ ಚಪ್ಪಲಿಗಳು ಬೆಳಗಾಗುವಷ್ಟರಲ್ಲಿ ಮಾಯ, ಕಳ್ಳರ ಕಾಟಕ್ಕೆ ಬೇಸತ್ತ ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.