ETV Bharat / state

ಪರಿಹಾರ ಕೇಂದ್ರದಲ್ಲಿದ್ದರೂ, ಇಲ್ಲದಿದ್ದರೂ ಕಿಟ್ ವಿತರಣೆ: ಬೆಳೆ ಹಾನಿಗೂ ಪರಿಹಾರ ಘೋಷಣೆ

author img

By

Published : Aug 8, 2022, 6:22 PM IST

ಸಚಿವ ಆರ್ ಅಶೋಕ್
ಸಚಿವ ಆರ್ ಅಶೋಕ್

ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದ ಯಾರೂ ಕುಗ್ಗಬೇಕಿಲ್ಲ, ಯಾರಿಗೆ ಏನೇ ತೊಂದರೆಯಾದರೂ ಸರ್ಕಾರ ಪರಿಹಾರ ಕೇಂದ್ರಗಳ ಮೂಲಕ ಸ್ಪಂದಿಸುತ್ತದೆ ಎಂದು ಸಚಿವ ಆರ್​ ಅಶೋಕ್​ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸರ್ಕಾರ ಸ್ಥಾಪಿಸುವ ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಳ್ಳದೇ ಇರುವವರಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆಯನ್ನು ಒಳಗೊಂಡ ಕಾಳಜಿ ಕಿಟ್ ಗಳನ್ನು ವಿತರಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರವಾಹದ ಸಂದರ್ಭದಲ್ಲಿ ಸರ್ಕಾರ ಸ್ಥಾಪಿಸುವ ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಳ್ಳುವ ಬದಲು ಹಲವರು ಸ್ನೇಹಿತರು, ಬಂಧುಗಳ ಮನೆಯಲ್ಲಿ ಆಶ್ರಯ ಪಡೆಯುತ್ತಾರೆ. ಹೀಗಾಗಿ ಅಂತವರಿಗೂ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಸಕ್ಕರೆ ಸೇರಿದಂತೆ ಸಾವಿರ ರೂ. ಮೌಲ್ಯದ ಕಾಳಜಿ ಕಿಟ್ ಗಳನ್ನು ಒದಗಿಸಲಾಗುವುದು ಎಂದರು.

ಪ್ರತಿ ಕಿಟ್ ನಲ್ಲಿ ಸಾವಿರ ರೂ. ಮೌಲ್ಯದ ದಿನೋಪಯೋಗಿ ವಸ್ತುಗಳಿರುತ್ತವೆ. ನೆಂಟರು, ಸ್ನೇಹಿತರ ಮನೆಗಳಲ್ಲಿ ಉಳಿದುಕೊಂಡವರು ಅವರಿಗೂ ಭಾರವಾಗಬಾರದು ಮತ್ತು ಅ ಮೂಲಕ ಪ್ರವಾಹ ಸಂತ್ರಸ್ತರಿಗೆ ತಾವು ಅನಾಥರು ಎಂಬ ಭಾವನೆ ಬರಬಾರದು ಎಂಬುದು ಕಿಟ್ ನೀಡುವ ಉದ್ದೇಶ ಎಂದು ವಿವರಿಸಿದರು.

ಕನಿಷ್ಠ ಹತ್ತು ದಿನಗಳಿಗೆ ಆಗುವಷ್ಟು ಆಹಾರ ಪದಾರ್ಥಗಳನ್ನು ಈ ಕಿಟ್ ಗಳು ಒಳಗೊಂಡಿರುತ್ತವೆ ಎಂದ ಅವರು, ಸರ್ಕಾರದ ಪರಿಹಾರ ಕೇಂದ್ರಗಳಲ್ಲಿ ಉಳಿದುಕೊಂಡು ಮರಳಿ ಮನೆಗೆ ಹೋಗುವವರಿಗೂ ಈ ಕಿಟ್ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಪರಿಹಾರ ಕೇಂದ್ರದಲ್ಲಿದ್ದರೂ, ಇಲ್ಲದಿದ್ದರೂ ಕಿಟ್ ವಿತರಣೆ

21 ಜಿಲ್ಲೆಯಲ್ಲಿ ಪ್ರವಾಹ : ರಾಜ್ಯದ 21 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಕಂಡು ಬಂದಿದ್ದು, ಸರ್ಕಾರ ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಂಡಿದೆ. ಅದೇ ರೀತಿ ಬೆಳೆಹಾನಿಗೆ ಸಂಬಂಧಿಸಿದಂತೆ ನೀಡಲಾಗುವ ಪರಿಹಾರ ಧನದ ಪ್ರಮಾಣವನ್ನು ಈ ವರ್ಷದ ಮಟ್ಟಿಗೆ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.

ಕಳೆದ ಸಾಲಿಗೆ ಸಂಬಂಧಿಸಿದಂತೆ 2,445 ಕೋಟಿ ರೂ. ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ನಾವು ಕೂಡಾ ದೇಶದ ಎಲ್ಲ ರಾಜ್ಯಗಳಿಗಿಂತ ಹೆಚ್ಚು ಪ್ರಮಾಣದ ಪರಿಹಾರವನ್ನು ಸಂತ್ರಸ್ತರಿಗೆ ನೀಡುತ್ತೇವೆ ಎಂದು ಸಚಿವರು ತಿಳಿಸಿದರು.

ವಲಸಿಗರಿಗೆ ಹಕ್ಕುಪತ್ರ : 60 ವರ್ಷಗಳ ಹಿಂದೆ ಕೆ.ಆರ್.ಎಸ್ ಆಣೆಕಟ್ಟು ಕಟ್ಟಲು ರಾಜ್ಯಕ್ಕೆ ಬಂದ ಏಳುನೂರಕ್ಕೂ ಹೆಚ್ಚು ಮಂದಿ ಶ್ರೀರಂಗಪಟ್ಟಣ ತಾಲೂಕಿನಲ್ಲಿದ್ದು, ಅವರು ಹಾಲಿ ವಾಸವಾಗಿರುವ ಭೂಮಿಯ ಹಕ್ಕು ಪತ್ರ ನೀಡಲು ತೀರ್ಮಾನಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.

ರಾಜ್ಯದಲ್ಲಿ ಅತೀವೃಷ್ಟಿ/ಪ್ರವಾಹ ಪರಿಸ್ಥಿತಿಗಳಿಂದ ಉಂಟಾದ ನಷ್ಟದ ವಿವರ (ಜೂನ್ 1 ರಿಂದ ಆಗಸ್ಟ್ 7 ರವರಗೆ ) ಈ ಕೆಳಕಂಡಂತಿದೆ.

  • 1. ಅತಿವೃಷ್ಟಿ/ಪುವಾಹ ಪೀಡಿತ ಒಟ್ಟು ಜಿಲ್ಲೆಗಳು: 14
  • 2. ಅತಿವೃಷ್ಟಿ /ಪವಾಹ ಪೀಡಿತ ಒಟ್ಟು ಗ್ರಾಮಗಳು: 161
  • 3.ಅತಿವೃಷ್ಟಿ /ಪ್ರವಾಹ ಪೀಡಿತ ಒಟ್ಟು ಜನಸಂಖ್ಯೆ : 21727
  • 4. ಅತಿವೃಷ್ಟಿ /ಪ್ರವಾಹ ಪರಿಸ್ಥಿತಿಯಿಂದಾದ ಒಟ್ಟು ಮೃತರು : 73(ಸಿಡಿಲುಬಡಿತ- 15, ಮರಬಿದ್ದು-5, ಮನೆಕುಸಿತದಿಂದ 19, ಪ್ರವಾಹದ ಸೆಳತಕ್ಕೆ ಸಿಲುಕಿ 24, ಭೂಕುಸಿತ-9, ವಿದ್ಯುತ್‌ ಆಪಘಾತ-1)
  • 5. ಅತಿವೃಷ್ಟಿ/ ಪ್ರವಾಹ ಪೀಡಿತ ಪ್ರದೇಶಗಳಿಂದ ಸ್ಥಳಾಂತರಿಸಲಾದ ಜನಸಂಖ್ಯೆ: 8,197
  • 6. ತೆರೆಯಲಾದ ಒಟ್ಟು ಪರಿಹಾರ ಶಿಬಿರಗಳು : 75
  • 7. ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದ ಒಟ್ಟು ಸಂತ್ರಸ್ತರು: 7,386
  • 8. ಮನೆ ಹಾನಿ ವಿವರ: ಸಂಪೂರ್ಣ/ಪೂರ್ಣಹಾನಿ- 666, ತೀವ್ರ ಹಾನಿ - 2,949, ಬಾಗಶ: ಹಾನಿ - 17,750
  • 9.ದೊಡ್ಡ ಜಾನುವಾರುಗಳು- 204 ಸಣ್ಣ ಜಾನುವಾರುಗಳು- 305.
  • 10. ಬೆಳೆಹಾನಿ ಪ್ರಕರಣ : 1,37,029.
  • 11. ಮೂಲಭೂತ ಸೌಕರ್ಯ ಹಾನಿಗಳು :

ಒಟ್ಟು ರಸ್ತೆಹಾನಿ : 11,768 ಕಿ.ಮೀ.

ಹಾನಿಗೊಳಗಾದ ಸೇತುವೆ, ಕಿರು ಸೇತುವೆಗಳು : 1,152

ಹಾನಿಗೊಳಗಾದ ಶಾಲೆಗಳು : 4,561

ಹಾನಿಗೊಳಗಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳು: 122 . ಹಾನಿಗೊಳಗಾದ ಅಂಗನವಾಡಿ ಕೇಂದ್ರಗಳು : 2,249

ಹಾನಿಗೊಳಗಾದ ವಿದ್ಯುತ್ ಕಂಬಗಳು : 17,065

ಹಾನಿಗೊಳಗಾದ ವಿದ್ಯುತ್ ಟ್ರಾನ್ಸ್​​ಫಾರ್ಮರ್​ಗಳು: 1,472

ಹಾನಿಗೊಳಗಾದ ಸಣ್ಣ ನೀರಾವರಿ ಕೆರೆಗಳು: 95

ಸರ್ಕಾರ ಕೈಗೊಂಡ ಕ್ರಮಗಳು :

  • ಜುಲೈ 8 ರಂದು 26 ಜಿಲ್ಲೆಗಳಿಗೆ ಒಟ್ಟು 55 ಕೋಟಿ ರೂ. ಪ್ರವಾಹ ಪರಿಹಾರಕ್ಕಾಗಿ ಬಿಡುಗಡೆ ಮಾಡಲಾಗಿದೆ.
  • ಆಗಸ್ಟ್ 4 ರಂದು ಮನೆ ಹಾನಿ ಪರಿಹಾರಕ್ಕಾಗಿ 300 ಕೋಟಿ ರೂ. ಗಳನ್ನು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ನೆರೆ ಸಂತ್ರಸ್ತರ ಬ್ಯಾಂಕ್‌ ಖಾತೆಗೆ ಜಮಾ ಮಾಡಲು ಬಿಡುಗಡೆ ಮಾಡಲಾಗಿದೆ.
  • ಆಗಸ್ಟ್ 6 ರಂದು 21 ಜಿಲ್ಲೆಗಳಿಗೆ ಒಟ್ಟು 200 ಕೋಟಿ ರೂ.ಗಳನ್ನು ಪ್ರವಾಹ ಪರಿಹಾರಕ್ಕಾಗಿ ಬಿಡುಗಡೆ ಮಾಡಲಾಗಿದೆ.
  • ಬೆಳೆಹಾನಿ ಪರಿಕರ ಸಹಾಯಧನ : ರಾಜ್ಯದಲ್ಲಿ ಬೆಳೆಹಾನಿಗೆ NDRF/SDRF ಮಾರ್ಗ ಸೂಚಿಯು ಅಧ್ಯಯನ ನೀಡಲಾಗುವ ಪರಿಹಾರದ ಮೊತ್ತವನ್ನು ಪರಿಷ್ಕರಿಸಿ ಮಳೆಯಾಶ್ರಿತ ಪ್ರತಿ ಹೆಕ್ಟೇರ್ ಬೆಳೆ ಹಾನಿಗೆ ನೀಡಲಾಗುವ ಪರಿಹಾರ ರೂ.6,800/-ಗಳನ್ನು ಪರಿಷ್ಕರಿಸಿ ಹೆಚ್ಚುವರಿ ಪರಿಹಾರ ರೂ. 6800/- ಸೇರಿ ಒಟ್ಟು ರೂ.13,600/- ನೀರಾವರಿ ಬೆಳೆಗಳ ಹಾನಿಗೆ ಪ್ರತಿ ಹೆಕ್ಟೇರ್ ಗೆ ಪರಿಹಾರದ ರೂ.13,500/-ಗಳನ್ನು ಪರಿಷ್ಕರಿಸಿ ಹೆಚ್ಚುವರಿ ಪರಿಹಾರ ರೂ.11,500/- ಸೇರಿ ಒಟ್ಟು ರೂ.25,000/- ಹಾಗೂ ಬಹು ವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ನೀಡಲಾಗುವ ಪರಿಹಾರದರ ರೂ.18,000/-ಗಳನ್ನು ಪರಿಷ್ಕರಿಸಿ ಹಚ್ಚುವರಿ ರೂ.10,000/- ಸೇರಿ ಒಟ್ಟು ರೂ.28,000/-ಗಳನ್ನು ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಅಶೋಕ್​ ಅವರು ವಿವರಿಸಿದರು.

ಇದನ್ನೂ ಓದಿ: ಚಾಮರಾಜಪೇಟೆ ಮೈದಾನ ಕಂದಾಯ ಇಲಾಖೆ ಆಸ್ತಿ: ಸಚಿವ ಆರ್‌.ಅಶೋಕ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.