ETV Bharat / state

ಚಾಮರಾಜಪೇಟೆ ಮೈದಾನ ಕಂದಾಯ ಇಲಾಖೆ ಆಸ್ತಿ: ಸಚಿವ ಆರ್‌.ಅಶೋಕ್‌

author img

By

Published : Aug 8, 2022, 4:34 PM IST

ಚಾಮರಾಜಪೇಟೆಯ ಮೈದಾನ ಕಂದಾಯ ಇಲಾಖೆಯ ಆಸ್ತಿ ಎಂದು ಸಚಿವ ಆರ್‌.ಅಶೋಕ್​ ಹೇಳಿದ್ದಾರೆ.

Etv Bharatಸಾರ್ವಜನಿಕ ಗಣೇಶ ಉತ್ಸವಕ್ಕೆ ನಿರ್ಬಂಧ ಇಲ್ಲ... ಸಚಿವ ಅಶೋಕ್
Etv Bharatಸಾರ್ವಜನಿಕ ಗಣೇಶ ಉತ್ಸವಕ್ಕೆ ನಿರ್ಬಂಧ ಇಲ್ಲ... ಸಚಿವ ಅಶೋಕ್

ಬೆಂಗಳೂರು: ಚಾಮರಾಜಪೇಟೆಯ ಮೈದಾನ ಕಂದಾಯ ಆಸ್ತಿಯಾಗಿದೆ. ಇಲ್ಲಿ ಧಾರ್ಮಿಕ ಆಚರಣೆ ಸೇರಿದಂತೆ ವಿವಿಧ ಉತ್ಸವಗಳಿಗೆ ಅನುಮತಿ ಕೊಡುವುದು, ಬಿಡುವುದು ಕಂದಾಯ ಇಲಾಖೆಗೆ ಸೇರಿದ್ದಾಗಿದೆ. ಕಂದಾಯ ಇಲಾಖೆ ಇಲ್ಲಿ ಯಾವ ಧಾರ್ಮಿಕ ಕಾರ್ಯಕ್ರಮಗಳು, ಉತ್ಸವಗಳಿಗೆ ಅನುಮತಿ ನೀಡಬೇಕು ಎಂಬುದನ್ನು ತೀರ್ಮಾನಿಸುತ್ತದೆ ಎಂದು ಕಂದಾಯ ಇಲಾಖೆ ಸಚಿವ ಆರ್. ಅಶೋಕ್ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, "ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲು ಇದುವರೆಗೂ ಯಾವುದೇ ಮನವಿ ಬಂದಿಲ್ಲ. ಮನವಿ ಬಂದರೆ ಕಾನೂನು ಚೌಕಟ್ಟಿನಲ್ಲಿ ಪರಿಶೀಲಿಸಿ ತೀರ್ಮಾನಿಸಲಾಗುವುದು. ಸ್ವಾತಂತ್ರ್ಯೋತ್ಸವ ದಿನದಂದು ರಾಷ್ಟ್ರಧ್ವಜ ಹಾರಿಸಲು ಅನುಮತಿ ಬೇಕಿಲ್ಲ. ಕಾನೂನು ಸುವ್ಯವಸ್ಥೆ ಗೊಂದಲ ಇರುವ ಕಡೆ ಹಾಗೂ ಸರ್ಕಾರಿ ಸ್ಥಳಗಳಲ್ಲಿ ಹಾರಿಸಲು ಅನುಮತಿ ಬೇಕಾಗುತ್ತದೆ. ಹಾಗಾಗಿ ಚಾಮರಾಜಪೇಟೆ ಮೈದಾನ ಸೇರಿದಂತೆ ಸ್ವಾತಂತ್ರ್ಯ ಆಚರಣೆ ಸಂಬಂಧ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಸೂಕ್ತ ತೀರ್ಮಾನ ಮಾಡುತ್ತದೆ" ಎಂದರು.

"ಚಾಮರಾಜಪೇಟೆಯಲ್ಲಿರುವ ಮೈದಾನಕ್ಕೆ ನೀವು ಕೊಟ್ಟ ಹೆಸರೆಲ್ಲಾ ಅಲ್ಲ. ಅಲ್ಲಿ ಕುರಿ, ಮೇಕೆ ಮಾರಾಟ, ಆಟ, ದೇವಸ್ಥಾನ ಎಲ್ಲವೂ ಇದೆ. ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ದಾಖಲೆ ಕೊಡಿ ಅಂತ ಗಡುವು ನೀಡಿದ್ದರು. ದಾಖಲೆ ಕೊಡಲು ವಕ್ಫ್ ಬೋರ್ಡ್ ಟೈಮ್ ಕೇಳಿದ್ದರು. ಆದರೆ, ಅವರಿಂದ ಆಗಲಿಲ್ಲ. 1964 ರಲ್ಲಿ ಇದು ಕಂದಾಯ ಜಮೀನು ಅಂತಿದೆ, ಅದೇ ದಾಖಲೆ ಇದೆ. ಪದೇ ಪದೇ ಸುಪ್ರೀಂ ಕೋರ್ಟ್ ಆದೇಶ ಇದೆ ಅಂತಿದ್ದಾರೆ. ಇದು ನಮ್ಮದೇ ಅಂತ ಹೇಳಿರುವುದು ನೋಡಿದ್ದೇನೆ. ಶಾಲೆ ಕಟ್ಟಲು ಸರ್ಕಾರ ಮುಂದಾಗಿದೆ ಅಂತ ಕೋರ್ಟ್ ಮುಂದೆ ವಕ್ಫ್ ಬೋರ್ಡ್‌ನವರು ಹೇಳಿದ್ದಾರೆ. ಆದರೆ ನಮ್ಮದೇ ಅಂತ ಹೇಳುವ ಯಾವ ದಾಖಲೆಯೂ ಕೊಟ್ಟಿಲ್ಲ. ಕಾರ್ಪೊರೇಷನ್ ಕೂಡ ವಕ್ಫ್ ಬೋರ್ಡ್ ಬಳಿ ದಾಖಲೆ ಇಲ್ಲ ಅಂತ ನಮ್ಮ ಬಳಿ ಆಯುಕ್ತರು ಕಳಿಸಿದ್ದಾರೆ. ಇಂದಿನ ನಿರ್ಧಾರದಂತೆ ಇದು ಕಂದಾಯದ ಸ್ವತ್ತು" ಎಂದು ಮಾಹಿತಿ ನೀಡಿದರು.

ಬೆಂಗಳೂರು ನಗರದಲ್ಲಿ ವಾರ್ಡ್‌ಗೆ ಒಂದು ಗಣೇಶ ಕೂರಿಸಬೇಕು ಎಂಬ ಮಹಾನಗರ ಪಾಲಿಕೆ ನಿಯಮಗಳ ಬಗ್ಗೆ ಸ್ಪಷ್ಟನೆ ನೀಡಿ, "ಈ ಹಿಂದೆ ಕೋವಿಡ್ ಇದ್ದ ಕಾರಣ ಗಣೇಶೋತ್ಸವ ಆಚರಣೆಗೆ ಮಿತಿ ಹೇರಲಾಗಿತ್ತು. ಈಗ ಆ ರೀತಿಯ ಯಾವುದೇ ನಿಯಮಗಳು ಇಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ.‌ ಕೋವಿಡ್ ಪೂರ್ವದಲ್ಲಿ ಯಾವ ರೀತಿ ಗಣೇಶೋತ್ಸವವನ್ನು ಬೀದಿಗಳಲ್ಲಿ ಆಚರಿಸುತ್ತಿದ್ದರೋ ಆ ರೀತಿ ಆಚರಿಸಬಹುದು" ಎಂದು ಹೇಳಿದರು.

ಪ್ಲಾಸ್ಟಿಕ್ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶಮೂರ್ತಿ ಕೂರಿಸಲು ಆವಕಾಶವಿಲ್ಲ. ಪರಿಸರ ಪ್ರೇಮಿ ಮಣ್ಣಿನ ಗಣೇಶಮೂರ್ತಿಗಳನ್ನು ಕೂರಿಸುವಂತೆ ಸಾರ್ವಜನಿಕರಲ್ಲಿ ಮನವಿ ಸಚಿವರು ಮಾಡಿದರು.

ಆಗಸ್ಟ್ 15ರಂದು ಬೈಕ್ ರ್ಯಾಲಿ: ಆಗಸ್ಟ್ 15 ರಂದು ಪಕ್ಷದ ವತಿಯಿಂದ ಬೈಕ್ ರ್ಯಾಲಿ ಆಯೋಜಿಸಲಾಗಿದೆ. 28 ವಿಧಾನಸಭಾ ಕ್ಷೇತ್ರದಿಂದ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು, ಕಂಠೀರವ ಸ್ಟೇಡಿಯಂನಿಂದ ಒಂದು ಲಕ್ಷ ಬೈಕ್ ರ್ಯಾಲಿ ನಡೆಸಲಾಗುತ್ತದೆ ಎಂದು ಸಚಿವ ಅಶೋಕ್‌ ತಿಳಿಸಿದರು.

ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ಬಿಜೆಪಿ ಕೇಂದ್ರ ನಾಯಕರು ತಕ್ಕ ಉತ್ತರ ನೀಡಲಿದ್ದಾರೆ: ಯತ್ನಾಳ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.