ETV Bharat / state

ಫ್ಲ್ಯಾಟ್‌ ಖರೀದಿಸಿದ ಗ್ರಾಹಕನ ಹಣ ಕಡಿತಗೊಳಿಸಿದ ಪ್ರಕರಣ: ಬಡ್ಡಿ ಸೇರಿಸಿ ಹಣ ಹಿಂದಿರುಗಿಸಲು ಡಿ.ಕೆ.ಶಿವಕುಮಾರ್ ಕುಟುಂಬಕ್ಕೆ ಆದೇಶ

author img

By ETV Bharat Karnataka Team

Published : Oct 20, 2023, 5:09 PM IST

Updated : Oct 20, 2023, 6:31 PM IST

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೊದಲು ಕಾಯ್ದಿರಿಸಿದ್ದ ಫ್ಲಾಟ್ ಅ​ನ್ನು ಮತ್ತೋರ್ವನಿಗೆ ಮಾರಾಟ ಮಾಡಲಾಗಿದೆ. ಹೀಗಾಗಿ ಮೊದಲ ಗ್ರಾಹಕನಿಗೆ ಮರುಪಾವತಿ ಮಾಡಬೇಕಿದ್ದ ಹಣ ಕಡಿತಗೊಳಿಸಿದ್ದಕ್ಕಾಗಿ ಬಡ್ಡಿ ಸೇರಿಸಿ ಹಣ ಹಿಂದಿರುಗಿಸುವಂತೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಬೆಂಗಳೂರು: ಫ್ಲಾಟ್‌ವೊಂದನ್ನು ಮುಂಗಡವಾಗಿ ಕಾಯ್ದಿರಿಸಿ 30 ಲಕ್ಷ ಪಾವತಿಯ ಬಳಿಕ ಇನ್ನುಳಿದ ಮೊತ್ತವನ್ನು ಪಾವತಿಸಲಾಗದ ಗ್ರಾಹಕರೊಬ್ಬರಿಗೆ ಕಡಿತಗೊಳಿಸಿದ್ದ 17 ಲಕ್ಷ ರೂ.ಗಳಗಳಿಗೆ ಬಡ್ಡಿ ಸೇರಿಸಿ ಹಿಂದಿರುಗಿಸಲು ಡಿ.ಕೆ.ಶಿವಕುಮಾರ್ ಕುಟುಂಬಕ್ಕೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.

ಬೆಂಗಳೂರಿನ ಎನ್‌ಟಿವೈ ಬಡಾವಣೆಯ ಜೆ.ರಾಘವೇಂದ್ರ ಎಂಬುವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ಎಂ.ಶೋಭಾ ಮತ್ತು ಸದಸ್ಯರಾದ ಸುಮಾ ಅನಿಲ್ ಕುಮಾರ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ದೂರುದಾರರು ಪ್ರಕರಣ ಸಂಬಂಧ ನ್ಯಾಯಾಂಗ ಹೋರಾಟ ನಡಿಸಿದಕ್ಕೆ ಪರಿಹಾರವಾಗಿ 10 ಸಾವಿರ ರೂ.ಗಳನ್ನು ಪಾವತಿ ಮಾಡಬೇಕು. ಜತೆಗೆ, ಈ ಆದೇಶವನ್ನು ಮುಂದಿನ 60 ದಿನಗಳಲ್ಲಿ ಪಾಲಿಸಬೇಕು. ವಿಫಲವಾದಲ್ಲಿ ಶೇ.12 ರಷ್ಟು ಬಡ್ಡಿಯನ್ನು ಸೇರಿಸಿ ಕೊಡಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಆದೇಶದಲ್ಲೇನಿದೆ: ದೂರುದಾರರು 86,06,800 ರುಗಳಿಗೆ ಫ್ಲಾಟ್ ಖರೀದಿ ಮಾಡಲು 2017ರಲ್ಲಿ ಒಪ್ಪಂದ ಮಾಡಿಕೊಂಡಿದ್ದಾರೆ. ಮುಂಗಡವಾಗಿ 30,81,352 ರೂ.ಗಳನ್ನು ಪಾವತಿ ಮಾಡಿದ್ದಾರೆ. ಕೊರೋನಾ ಕಾರಣದಿಂದ ಇನ್ನುಳಿದ 55,25,448 ರೂ.ಗಳನ್ನು ಪಾವತಿ ಮಾಡಿಲ್ಲ. ಪ್ರತಿವಾದಿಗಳಾದ ಶಿವಕುಮಾರ್ ಕುಟುಂಬ ಮತ್ತು ಸಲಾರ್‌ಪುರಿಯಾ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್ ಅವರು 2017ರಲ್ಲಿ ಫ್ಲಾಟ್‌ನ್ನು ಹಸ್ತಾಂತರಿಸುವುದಾಗಿ ತಿಳಿಸಿದ್ದರು.

ಆದರೆ, ದೂರುದಾರರಿಗೆ ಮಂಜೂರಾಗಿದ್ದ ಫ್ಲಾಟ್‌ನ್ನು 2021ರಲ್ಲಿ ಮತ್ತೊಬ್ಬ ವ್ಯಕ್ತಿಗೆ 1,04,70,000 ರೂ. ಗಳಿಗೆ ಮಾರಾಟ ಮಾಡಿ ಲಾಭವನ್ನೂ ಗಳಿಸಿದ್ದಾರೆ. ಆದರೆ, ದೂರುದಾದರು 2017ರಲ್ಲಿ ಒಪ್ಪಂದ ಮಾಡಿಕೊಂಡು ಅದೇ ವರ್ಷ ಹಣ ಪಾವತಿ ಮಾಡದೆ ದೂರು ಉಳಿಸಿದಿರುವುದರಿಂದ ಈ ಪ್ರಕ್ರಿಯೆಯಲ್ಲಿ ಪ್ರತಿವಾದಿಗಳಿಗೆ (ಡಿಕೆಶಿ ಕುಟುಂಬ) ನಷ್ಟವುಂಟಾಗಿಲ್ಲ. ಆದರೆ, 17 ಲಕ್ಷ ರೂ.ಗಳನ್ನು ಕಡಿತಗೊಳಿಸಿರುವುದು ಅಕ್ರಮವಾಗಿದೆ. ಆದ್ದರಿಂದ ಕಡಿತಗೊಳಿಸಿರುವ 17,77,422 ರೂ.ಗಳಿಗೆ ಒಪ್ಪಂದವಾದ ದಿನದಿಂದ ಶೇ.10 ರಷ್ಟು ಬಡ್ಡಿಯೊಂದಿಗೆ ಹಿಂದಿರುಗಿಸಬೇಕು ಎಂದು ಆಯೋಗ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ದೂರುದಾರರಾದ ರಾಘವೇಂದ್ರ ಅವರು, ಡಿ.ಕೆ.ಶಿವಕುಮಾರ್, ಡಿ.ಕೆ ಮಂಜುಳಾ ಡಿ.ಕೆ ಸುರೇಶ್ ಹಾಗೂ ಸಲಾರ್‌ಪುರಿಯಾ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್‌ನ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದ ಡಿವಿನಿಟಿ ಪ್ರಾಜೆಕ್ಟ್‌ನ ಫ್ಲಾಟ್‌ವೊಂದ್ನು 86,06,800 ರೂ.ಗಳಿಗೆ ನಿರ್ಮಾಣ ಮತ್ತು ಖರೀದಿಗೆ 2017ರ ಏಪ್ರಿಲ್ 10 ರಂದು ಒಪ್ಪಂದ ಮಾಡಿಕೊಂಡಿದ್ದರು. ಅಲ್ಲದೆ, ಮುಂಗಡವಾಗಿ 30,81,352 ರೂ.ಗಳನ್ನು ಪಾವತಿಸಿದ್ದರು, ಆದರೆ ಕೊರೋನಾ ಕಾರಣದಿಂದ 55,25,448 ಲಕ್ಷ ರು.ಗಳನ್ನು ನಿಗದಿತ ಸಮಯಕ್ಕೆ ಪಾವತಿ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ, ಪ್ರತಿವಾದಿಗಗಳು ದೂರುದಾರರಿಗೆ ಯಾವುದೇ ಮಾಹಿತಿ ನೀಡದೆ ಒಪ್ಪಂದವನ್ನು ರದ್ದು ಮಾಡಿದ್ದರು.

ಜತೆಗೆ, ಇದೇ ಫ್ಲಾಟ್‌ನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದರು. ಇದಾದ ಬಳಿಕ 17,77,422 ರೂ.ಗಳನ್ನು ಕಡಿತಗೊಳಿಸಿ ಇನ್ನುಳಿದ 13,03,930 ರೂ.ಗಳನ್ನು ಮಾತ್ರ ಚೆಕ್ ಮೂಲಕ ಹಿಂದಿರುಗಿಸಿದ್ದರು. ಆದರೆ, ಹಣವನ್ನು ಕಡಿತಗೊಳಿಸಿರುವುದಕ್ಕೆ ಯಾವುದೇ ರೀತಿಯ ಸೂಕ್ತ ಕಾರಣಗಳನ್ನು ನೀಡಿರಲಿಲ್ಲ. ಅಲ್ಲದೆ, ಪ್ರತಿವಾದಿಗಳು ಅದೇ ಫ್ಲಾಟ್‌ನ್ನು ಮತ್ತೊಬ್ಬರಿಗೆ ಲಾಭಕ್ಕಾಗಿ ಮಾರಿಕೊಂಡಿದ್ದಾರೆ. ಆದರೂ, ನಮ್ಮಿಂದ 17, 77,422 ರೂ.ಗಳನ್ನು ಕಡಿತಗೊಳಿಸಿದ್ದಾರೆ. ಈ ಬೆಳವಣಿಗೆ ದೊಡ್ಡ ಮಟ್ಟದ ಲಾಭಗಳಿಸುವುದು ಮತ್ತು ಮನೆ ಖರೀದಿದಾರರನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಕ್ರಿಯೆಯಾಗಿದೆ ಎಂದು ದೂರಿನಲ್ಲಿ ದೂರಿನಲ್ಲಿ ಆರೋಪಿಸಿದ್ದರು. ಅಲ್ಲದೆ, ತಾನು ಪಾವತಿಸಿದ್ದ 30,81,325 ರೂ.ಗಳಿಗೆ ಶೇ.18 ರಷ್ಟು ಬಡ್ಡಿ ಸೇರಿಸಿ ಹಿಂದಿರುಗಿಸಬೇಕು. ಮಾನಸಿಕ ಹಿಂಸೆ ಅನುಭವಿಸಿದ್ದಕ್ಕಾಗಿ 10 ಲಕ್ಷ, ಕಾನೂನು ಹೋರಾಟ ನಡೆಸಿದ್ದರ ಪರಿಣಾಮ 1 ಲಕ್ಷ ರೂ.ಗಳನ್ನು ಪಾವತಿ ಮಾಡುವಂತೆ ಸೂಚನೆ ನೀಡಬೇಕು ಎಂದು ದೂರಿನಲ್ಲಿ ಕೋರಿದ್ದರು.

ಪ್ರತಿವಾದಿಗಳ ಹೇಳಿಕೆ: ದೂರಿನ ಸಂಬಂಧ ಆಕ್ಷೇಪಣೆ ಸಲ್ಲಿಸಿದ್ದ ಪ್ರತಿವಾದಿಗಳು, ಫ್ಲಾಟ್‌ನ್ನು 2017ರಲ್ಲಿ ದೂರುದಾರರಿಗೆ ಮಾರಾಟಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಾದ ಬಳಿಕ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಕಾಯಿದೆ ಜಾರಿ ಮಾಡಿತ್ತು. ಹೀಗಾಗಿ ಫ್ಲಾಟ್‌ನ ವೆಚ್ಚ ಪರಿಷ್ಕರಣೆಯಾಗಿದ್ದು, ಅದರ ಮೊತ್ತ1 ಕೋಟಿ 4 ಲಕ್ಷ ರೂ.ಗಳಿಗೆ ಹೆಚ್ಚಳವಾಗಿದೆ.

ಜತೆಗೆ, ದೂರುದಾರರು ಒಪ್ಪಂದಂತೆ ಬಾಕಿ ಮೊತ್ತ 55 ಲಕ್ಷ ರೂ.ಗಳನ್ನು ನಿಗದಿತ ಸಮಯದಲ್ಲಿ ಪಾವತಿ ಮಾಡುವಲ್ಲಿ ವಿಫಲರಾಗಿದ್ದಾರೆ. ಆ ಮೂಲಕ ಒಪ್ಪಂದ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಹಲವುಬಾರಿ ಇ-ಮೇಲ್ ಮತ್ತು ಕರೆಗಳನ್ನು ಮಾಡಿ ಬಾಕಿ ಮೊತ್ತವನ್ನು ಪಾವತಿ ಮಾಡುವಂತೆ ಸೂಚಿಸಿದರೂ ಸೂಕ್ತ ಪ್ರತಿಕ್ರಿಯೆ ನೀಡಿರಲಿಲ್ಲ. ಅಂತಿಮವಾಗಿ 2019ರಲ್ಲಿ ಮತ್ತೊಂದು ಬಾರಿ ಬಾಕಿ ಮೊತ್ತ ಪಾವತಿ ಮಾಡುವಂತೆ ಸೂಚನೆ ನೀಡಿದ್ದರು.

ಬಳಿಕ ಒಪ್ಪಂದವನ್ನು ರದ್ದು ಮಾಡುತ್ತಿರುವುದಾಗಿ ತಿಳಿಸಿದ್ದರು. ಜತೆಗೆ, ದೂರುದಾರರು ಪಾವತಿ ಮಾಡಿದ್ದ ಮೊತ್ತದಲ್ಲಿ ರದ್ದತಿ ಶುಲ್ಕ(ಕ್ಯಾನ್ಸಲೇಷನ್) ಹಾಗೂ ತೆರಿಗೆಯನ್ನು ಸೇರಿ 17,98,077 ರೂ.ಗಳನ್ನು ಕಡಿತಗೊಳಿಸಿ ಇನ್ನುಳಿದ 13,03,930 ರೂ.ಗಳ ಚೆಕ್‌ನ್ನು ಹಿಂದಿರುಗಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದ್ದರು.

ಅಲ್ಲದೆ, ದೂರುದಾರರ ಆರೋಪಿಸಿರುವಂತೆ ಸೂಕ್ತ ಕಾರಣ ನೀಡದೆ 17 ಲಕ್ಷ ಮೊತ್ತವನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ, ಒಪ್ಪಂದದ ಬಳಿಕವೂ ದೂರುದಾರರು ಎರಡು ವರ್ಷಗಳ ಕಾಲ ಬಾಕಿ ಪಾವತಿ ಮಾಡಿಲ್ಲ. ಆದ್ದರಿಂದ ಫ್ಲಾಟ್‌ನ್ನು ಮತ್ತೊಬ್ಬರಿಗೆ ಮಾರಾಟ ಮಾಡಲಾಗಿದೆ. ಹೀಗಾಗಿ ದೂರು ರದ್ದುಗೊಳಿಸಬೇಕು ಎಂದು ಕೋರಿದ್ದರು.

ಇದನ್ನೂ ಓದಿ: ಶರಣ್ ಪಂಪ್‌ವೆಲ್ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್​ ತಡೆ

Last Updated :Oct 20, 2023, 6:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.