ETV Bharat / state

ಶರಣ್ ಪಂಪ್‌ವೆಲ್ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್​ ತಡೆ

author img

By ETV Bharat Karnataka Team

Published : Oct 19, 2023, 10:55 PM IST

ವಿಶ್ವ ಹಿಂದೂ ಪರಿಷತ್​ ಮುಖಂಡ ಶರಣ್ ಪಂಪ್​ವೆಲ್ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್​ಐಆರ್​ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಶರಣ್ ಪಂಪ್‌ವೆಲ್
ಶರಣ್ ಪಂಪ್‌ವೆಲ್

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಮಂಗಳೂರಿನ ಮಂಗಳಾದೇವಿ ಜಾತ್ರೆಯಲ್ಲಿ ಹಿಂದೂಗಳ ಮಳಿಗೆಗಳಿಗೆ ಭಗವಾಧ್ವಜ ಕಟ್ಟಿದ ಹಾಗೂ ಭಗವಾಧ್ವಜವಿದ್ದ ಮಳಿಗೆಗಳಲ್ಲಿ ಮಾತ್ರವೇ ಹಿಂದೂಗಳು ವ್ಯಾಪಾರ ಮಾಡಬೇಕು ಎಂದು ಪ್ರಕಟಣೆ ಹೊರಡಿಸಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಚಟುವಟಿಕೆಯಲ್ಲಿ ತೊಡಗಿರುವ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿತು.

ಮಂಗಳೂರು ನಗರ ದಕ್ಷಿಣ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಶರಣ್ ಪಂಪ್‌ವೆಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರ ರಜಾಕಾಲ ನ್ಯಾಯಪೀಠ ಈ ಆದೇಶ ಮಾಡಿದೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್ ವಾದ ಮಂಡಿಸಿ, ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಪ್ರಕಟಣೆ ಹೊರಡಿಸಲಾಗಿದೆ ಎಂಬ ದೂರಿನಲ್ಲಿ ಹುರುಳಿಲ್ಲ. ಈ ಸಂಬಂಧ ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲು ಮಾಡಿಕೊಂಡಿರುವ ಪ್ರಕರಣ ರಾಜಕೀಯ ಪ್ರೇರಿತವಾಗಿದೆ ಮತ್ತು ದುರುದ್ದೇಶದಿಂದ ಕೂಡಿದೆ. ಆದ್ದರಿಂದ, ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಕೋರಿದರು.

ಪ್ರಕರಣದ ಹಿನ್ನೆಲೆ: ಶ್ರೀ ಮಂಗಳಾದೇವಿ ದೇವಸ್ಥಾನದ ಸುತ್ತಮುತ್ತಲಿನ ಹಿಂದೂಗಳು ನಡೆಸುತ್ತಿದ್ದ ಅಂಗಡಿಗಳ ಮೇಲೆ ಶರಣ್ ಪಂಪ್‌ವೆಲ್ ಅವರು ತಮ್ಮ ಕಾರ್ಯಕರ್ತರೊಂದಿಗೆ ಅ.16 ರಂದು ಭಗವಾ ಧ್ವಜ ಕಟ್ಟಿದ್ದರು. ಈ ಕ್ರಮಗಳು ಮತ್ತು ಹೇಳಿಕೆಗಳು ಧಾರ್ಮಿಕ ವೈಷಮ್ಯವನ್ನು ಕೆರಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪಿಎಸ್‌ಐ ಮನೋಹರ್ ಪ್ರಸಾದ್ ನೀಡಿದ ದೂರಿನ ಆಧಾರದ ಮೇಲೆ ಶರಣ್ ಪಂಪ್‌ವೆಲ್ ಹಾಗೂ ಇತರರ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅಂಗಡಿಗಳಿಗೆ ಕೇಸರಿ ಬಾವುಟ ನೆಟ್ಟ ಆರೋಪ: ಶರಣ್ ಪಂಪ್​ವೆಲ್ ವಿರುದ್ಧ ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.