ETV Bharat / state

ಕೋವಿಡ್ ಹೊಸ ತಳಿ ಜೆಎನ್.1 ಬಗ್ಗೆ ಆತಂಕ ಅಗತ್ಯವಿಲ್ಲ: ಸಚಿವ ಡಾ.ಶರಣ ಪ್ರಕಾಶ್​ ಪಾಟೀಲ್

author img

By ETV Bharat Karnataka Team

Published : Dec 21, 2023, 3:55 PM IST

Updated : Dec 21, 2023, 5:03 PM IST

no-need-to-worry-about-covid-jn-1-says-minister-dr-sharan-prakash-patil
ಕೋವಿಡ್ ಹೊಸ ತಳಿ ಜೆಎನ್-1 ಬಗ್ಗೆ ಆತಂಕಪಡುವ ಅಗತ್ಯವಿಲ್ಲ : ಸಚಿವ ಡಾ ಶರಣ ಪ್ರಕಾಶ್​ ಪಾಟೀಲ್

ಕೋವಿಡ್​ ರೂಪಾಂತರಿ ಜೆಎನ್.1 ಬಗ್ಗೆ ಆತಂಕಪಡುವ ಅಗತ್ಯ ಇಲ್ಲ. ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಡಾ.ಶರಣ ಪ್ರಕಾಶ್​ ಪಾಟೀಲ್ ಹೇಳಿದ್ದಾರೆ.

ಸಚಿವ ಡಾ.ಶರಣ ಪ್ರಕಾಶ್​ ಪಾಟೀಲ್ ಹೇಳಿಕೆ

ಬೆಂಗಳೂರು: ಕೋವಿಡ್ ಹೊಸ ತಳಿ ಜೆಎನ್.1 ಬಗ್ಗೆ ರಾಜ್ಯದಲ್ಲಿ ಆತಂಕ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್​ ಪಾಟೀಲ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಆರೋಗ್ಯ ಸಂಸ್ಥೆ ಈ ವೈರಾಣು ಬಗ್ಗೆ ಆತಂಕ ಬೇಡ, ಆದರೆ ಮುನ್ನೆಚ್ಚರಿಕೆ ಅಗತ್ಯ ಎಂದು ಹೇಳಿದೆ. ಆದ್ದರಿಂದ ಎಲ್ಲರೂ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು ಎಂದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿದೆ. ರಾಜ್ಯದಲ್ಲಿ 22 ಮೆಡಿಕಲ್ ಹಾಗು ಎರಡು ಇಎಸ್‍ಐ ಮೆಡಿಕಲ್ ಕಾಲೇಜುಗಳಿವೆ. 8-9 ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜುಗಳಿದ್ದು, ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಸ್ಥಾಪನೆ ಪ್ರಸ್ತಾಪವಿದೆ. ಆರ್ಥಿಕ ಸಂಪನ್ಮೂಲಕ್ಕನುಗುಣವಾಗಿ ಜಿಲ್ಲೆಗೊಂದರಂತೆ ಹಂತಹಂತವಾಗಿ ಮೆಡಿಕಲ್ ಕಾಲೇಜು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ನೇಮಕಾತಿ ನಡೆದಿಲ್ಲ. ಪಿಎಸ್‍ಐ ಸೇರಿದಂತೆ ಕೆಲವು ನೇಮಕಾತಿಗಳು ಅವ್ಯವಹಾರಗಳ ಆರೋಪದಿಂದಾಗಿ ವಿಳಂಬವಾಗಿವೆ. ಸರ್ಕಾರ ಈ ಬಾರಿ ನೇಮಕಾತಿಗೆ ವಿಶೇಷ ಆದ್ಯತೆ ನೀಡಲಿದೆ. ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೂ ಒತ್ತು ನೀಡಲಾಗುವುದು. ನೇಮಕಾತಿಯಲ್ಲಿ ಪಾರದರ್ಶಕತೆ ತರಲಾಗುವುದು ಎಂದರು.

ಯುವ ಸಮುದಾಯಕ್ಕೆ ಹೆಚ್ಚಿನ ಉದ್ಯೋಗ ಒದಗಿಸಲು ಅವರ ಕೌಶಲ್ಯ ವೃದ್ಧಿಸಿಕೊಳ್ಳಲು ಒತ್ತು ನೀಡಲಾಗುತ್ತಿದೆ. ಶಿಕ್ಷಣ ಮುಗಿಸಿದ ಶೇ.15-20 ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ. ಈ ಸಂಬಂಧ ಕಂಪನಿಗಳ ಜೊತೆ ಮಾತುಕತೆ ನಡೆಸಿ ಮನವಿ ಸ್ವೀಕರಿಸಿ ಉದ್ಯೋಗಿಗಳ ಅಗತ್ಯವಿರುವ ಕೌಶಲ್ಯವುಳ್ಳ ಮಾನವ ಸಂಘರ್ಷ ಅಭವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಹುದ್ದೆಗೆ ತಕ್ಕಂತೆ ಕೌಶಲ್ಯವಿರುವ ಮಾನವ ಸಂಪನ್ಮೂಲ ಸಿಗುತ್ತಿಲ್ಲ ಎಂಬುದು ಕಂಪನಿಗಳ ಅಭಿಪ್ರಾಯ ಎಂದು ಹೇಳಿದರು.

ಕೇರಳದಲ್ಲಿ ಮೊದಲು ಕೋವಿಡ್​ ರೂಪಾಂತರಿ ಜೆಎನ್.1 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 300 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮೂರು ಸಾವು ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೇರಳದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದರಿಂದ ರಾಜ್ಯದ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ದೇಶದಲ್ಲಿ ಸದ್ಯ ಒಟ್ಟು 2,669 ಕೋವಿಡ್​ ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ: ಯುವನಿಧಿ ಯೋಜನೆ ನೋಂದಣಿಗೆ ಡಿ.26 ರಂದು ಚಾಲನೆ; ಅರ್ಹರು ಯಾರು? ಅರ್ಜಿ ಸಲ್ಲಿಸುವುದೇಗೆ?

Last Updated :Dec 21, 2023, 5:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.