ETV Bharat / state

HIGH COURT: ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಭೂಮಿ 5 ವರ್ಷ ಕಳೆದರೂ ಆ ಯೋಜನೆ ರದ್ದಾಗುವುದಿಲ್ಲ: ಹೈಕೋರ್ಟ್​

author img

By

Published : Jun 9, 2023, 7:53 AM IST

HIGH COURT
ಹೈಕೋರ್ಟ್​

ಸಾರ್ವಜನಿಕ ಉದ್ದೇಶಕ್ಕಾಗಿ ಮಾಸ್ಟ್‌ರ್ ಪ್ಲಾನ್‌ನಲ್ಲಿ ಮೀಸಲಿಟ್ಟ ಭೂಮಿಯ ಯೋಜನೆ ಕಾರ್ಯಪ್ರವೃತ್ತಿಗೆ ಬರಲು ವರ್ಷಗಳೇ ಕಳೆದರೂ ಆ ಯೋಜನೆ ಮಾತ್ರ ರದ್ದಾಗುವುದಿಲ್ಲ ಎಂದು ಹೈಕೋರ್ಟ್​ ಅಭಿಪ್ರಾಯ ಪಟ್ಟಿದೆ.

ಬೆಂಗಳೂರು: ರಸ್ತೆಗಳು ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕಾಗಿ ಮಾಸ್ಟ್‌ರ್ ಪ್ಲಾನ್‌ನಲ್ಲಿ ಮೀಸಲಿಟ್ಟ ಭೂಮಿಯು ಯೋಜನೆ ಘೋಷಣೆ ಮಾಡಿ ಐದು ವರ್ಷದ ಕಳೆದರೂ ರದ್ದಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಪ್ರಾಧಿಕಾರದಿಂದ ರಸ್ತೆಗಾಗಿ ತಮ್ಮ ಜಮೀನುಗಳನ್ನು ಮೀಸಲಿಟ್ಟುರುವುದನ್ನು ಪ್ರಶ್ನಿಸಿ ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ತರಬನಗಳ್ಳಿಯ ಭೂ ಮಾಲೀಕರಾದ ಕೆ.ಗೋಪಾಲಗೌಡ ಮತ್ತು ಆರ್.ರವಿಚಂದ್ರನ್ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಕನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯಿದೆ (ಕೆಟಿಸಿಪಿ)1961ರ ಸೆಕ್ಷನ್ 69(2)ರ ಪ್ರಕಾರ ರಸ್ತೆ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಭವಿಷ್ಯದ ಅವಶ್ಯಕತೆಗಳನ್ನು ಪೂರೈಸುವಂತಹ ಸಾರ್ವಜನಿಕ ಉದ್ದೇಶಗಳಿಗಾಗಿ ಜಮೀನನ್ನು ಮೀಸಲಿಟ್ಟಿದ್ದಲ್ಲಿ ಐದು ವರ್ಷ ಕಳೆದರೂ ಆ ಯೋಜನೆ ಮುಂದುವರೆಯಲು ಅವಕಾಶ ನೀಡಬಹುದಾಗಿದೆ ಎಂದು ಪೀಠ ತಿಳಿಸಿದೆ.

ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಕ್ರಮವನ್ನು ಈಗಾಗಲೇ ಕಾನೂನು ಪ್ರಕಾರ ಒಪ್ಪಿಕೊಳ್ಳಲಾಗಿದೆ. ಆದ್ದರಿಂದ ಅರ್ಜಿದಾರರ ಮನವಿಯನ್ನು ಪರಿಗಣಿಸುವುದಕ್ಕೆ ಸಾಧ್ಯವಿಲ್ಲ. ಜೊತೆಗೆ, ರಸ್ತೆ ನಿರ್ಮಾಣ ಸಂಬಂಧ ಮಾಸ್ಟರ್ ಪ್ಲಾನ್ ಮೂಲಕ ಅಂತಿಮ ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿ ಆಕ್ಷೇಪಗಳನ್ನು ಸಲ್ಲಿಸಿ, ಅವುಗಳನ್ನು ಪರಿಗಣಿಸದಿದ್ದರೆ, ಯೋಜನೆಯನ್ನು ಬದಲಾವಣೆ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿರುವುದಿಲ್ಲ.

ಜೊತೆಗೆ, ಕೆಟಿಸಿಪಿ ಕಾಯಿದೆ ಸೆಕ್ಷನ್ 12 ರ ಪ್ರಕಾರ ಅಂತಿಮ ಅಧಿಸೂಚನೆ ಹೊರಡಿಸಿದ ಬಳಿಕ ಜಮೀನು ಯೋಜನಾ ಪ್ರಾಧಿಕಾರದ ವಶರಲ್ಲಿರುತ್ತದೆ. ಇದರ ಹಕ್ಕನ್ನು ಮಾಲೀಕ ಮತ್ತೆ ಪಡೆಯುವುದಕ್ಕೆ ಕಾನೂನಿಲ್ಲಿ ಅವಕಾಶವಿಲ್ಲ. ಹೀಗಾಗಿ, ಜಮೀನು ಭೂಮಾಲಿಕರಿಗೆ ಹಿಂದಿರುಗಿಸುವಂತೆ ಸೂಚನೆ ನೀಡಿದಲ್ಲಿ ಅದು ಕಾನೂನು ವಿರುದ್ಧದ ನಡೆಯಾಗಲಿದೆ ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು ?: ಅರ್ಜಿದಾರರ ಜಮೀನುಗಳಲ್ಲಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ 2004 ಪ್ರಾಥಮಿಕ ಮತ್ತು 2009 ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಜಮೀನು ಖರೀದಿ ಮಾಡುವ ಸಂದರ್ಭದಲ್ಲಿ ಈ ಅಂಶ ಅವರಿಗೆ ಗೊತ್ತಿರಲಿಲ್ಲ. ಈ ನಡುವೆ ಇಬ್ಬರೂ ಮಾಲೀಕರು ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿಕೊಳ್ಳಲು ಕೋರಿ ಮನವಿ ಸಲ್ಲಿಸಿದ್ದರು.

ಆದರೆ, ಸರ್ಕಾರ ಅರ್ಜಿದಾರರ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಇರುವುದರಿಂದ ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 2004 ರ ಮಾಸ್ಟರ್ ಪ್ಲಾನ್ ಪ್ರಕಾರ ಕೆಲ ಡೆವಲಪರ್‌ಗಳ ಸೂಚನೆ ಮೇರೆಗೆ ರಸ್ತೆಯನ್ನು ಗುರುತಿಸಲಾಗಿದೆ.

ಇದರಿಂದಾಗಿ ನಮ್ಮ ಕಕ್ಷಿದಾರರ ಜಮೀನಿಗಳಿಗೆ ತೊಂದರೆಯಾಗುತ್ತಿದೆ. 2004ರಲ್ಲಿ ಜಮೀನು ಮೀಸಲಿಟ್ಟಿದ್ದರೂ 19 ವರ್ಷ ಕಳೆದ ಬಳಿಕ ಯಾವುದೇ ರೀತಿಯಲ್ಲಿಯೂ ಅಭಿವೃತ್ತಿಯಾಗಿಲ್ಲ. ಹೀಗಾಗಿ ಮಾಸ್ಟರ್ ಪ್ಲಾನ್ ರೂಪಿಸಿದ 5 ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯ ಪ್ರಾರಂಭವಾಗದಿದ್ದಲ್ಲಿ ಯೋಜನೆ ರದ್ದಾಗಲಿದೆ ಎಂದು ವಾದ ಮಂಡಿಸಿದ್ದರು.

ಇದನ್ನೂ ಓದಿ: ಪ್ರತ್ಯೇಕ ಸ್ಮಶಾನ ಭೂಮಿ ನೀಡುವಂತೆ ಗ್ರಾಮಗಳಿಂದ ಮನವಿ ಬಂದಿದೆ: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.