ETV Bharat / state

ಲಾಕ್​​ಡೌನ್ ಬಳಿಕ ಹೆಚ್ಚಿದ ಅಪೌಷ್ಠಿಕತೆ.. ನಿವೃತ್ತ ನ್ಯಾ.ವೇಣುಗೋಪಾಲ್ ನೇತೃತ್ವದ ಸಮಿತಿ ರಚನೆ..

author img

By

Published : Jan 19, 2021, 7:09 PM IST

ಸಮಿತಿಯು ರಾಜ್ಯದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು, ಗರ್ಭಿಣಿಯರು, ಯುವತಿಯರನ್ನು ಗುರುತಿಸಿ ಅವರಿಗೆ ವೈದ್ಯಕೀಯ ತಪಾಸಣೆ ನಡೆಸುವುದು, ಪೌಷ್ಠಿಕ ಆಹಾರ ಪೂರೈಸುವ ಕುರಿತು ಶಿಫಾರಸುಗಳನ್ನು ಮಾಡಲಿದೆ. ಹಾಗೂ ಕಾರ್ಯ ಯೋಜನೆಗಳ ಕುರಿತು ಮೇಲ್ವಿಚಾರಣೆ ನಡೆಸಲಿದೆ..

High Court order
ನಿವೃತ್ತ ನ್ಯಾ.ವೇಣುಗೋಪಾಲ್ ನೇತೃತ್ವದಲಿ ಸಮಿತಿ ರಚನೆಗೆ ಹೈಕೋರ್ಟ್ ಆದೇಶ

ಬೆಂಗಳೂರು : ಲಾಕ್‌ಡೌನ್ ಬಳಿಕ ರಾಜ್ಯದಲ್ಲಿ ಹೆಚ್ಚಾಗಿರುವ ಅಪೌಷ್ಠಿಕತೆ ಸಮಸ್ಯೆ ನಿವಾರಣೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಮೇಲ್ವಿಚಾರಣೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎನ್ ವೇಣುಗೋಪಾಲ್ ಅವರ ನೇತೃತ್ವದಲಿ ಸಮಿತಿ ರಚಿಸಲಾಗಿದೆ.

ಕೊರೊನಾದಿಂದ ಸಾರ್ವಜನಿಕರಿಗೆ ಆಗಿರುವ ಅನಾನುಕೂಲಗಳನ್ನು ಸರಿಪಡಿಸಲು ಕೋರಿ ಸಲ್ಲಿಕೆಯಾಗಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಲಾಕ್‌ಡೌನ್ ಬಳಿಕ ಅಂಗನವಾಡಿಗಳು ಮುಚ್ಚಿದ ಪರಿಣಾಮವಾಗಿ ಗರ್ಭಿಣಿಯರಿಗೆ, ಮಕ್ಕಳಿಗೆ ಪೌಷ್ಠಿಕ ಆಹಾರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ರಾಜ್ಯದಲ್ಲಿ ಅಪೌಷ್ಠಿಕತೆ ಹೆಚ್ಚಾಗಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದರು.

ಇದಕ್ಕೆ ಲಿಖಿತ ಸ್ಪಷ್ಟನೆ ನೀಡಿದ್ದ ಸರ್ಕಾರ ಈ ಕುರಿತು ಮೇಲ್ವಿಚಾರಣೆ ನಡೆಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸುವುದಾಗಿ ತಿಳಿಸಿತ್ತು. ಅದರಂತೆ ಹೈಕೋರ್ಚ್ ನಿವೃತ್ತ ನ್ಯಾಯಮೂರ್ತಿ ಎ.ಎನ್ ವೇಣುಗೋಪಾಲ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.

ಓದಿ: ಆರೋಪಿ ಪರ ವಕಾಲತ್ತು ವಹಿಸದಂತೆ ನಿರ್ಬಂಧಿಸುವ ಅಧಿಕಾರ ಸಿಕ್ಕಿದ್ದೇಗೆ?: ವಕೀಲರ ಸಂಘಕ್ಕೆ ಹೈಕೋರ್ಟ್ ಪ್ರಶ್ನೆ

ಸಮಿತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರು, ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು, ವಕೀಲರಾದ ಕ್ಲಿಫ್ಟನ್ ಡಿ. ರೋಜಾರಿಯೋ, ಕೆಎಸ್ಎಲ್ಎಸ್ಎ ಸದಸ್ಯ ಕಾರ್ಯದರ್ಶಿ ಮತ್ತಿತರರು ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಸಮಿತಿಯು ರಾಜ್ಯದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು, ಗರ್ಭಿಣಿಯರು, ಯುವತಿಯರನ್ನು ಗುರುತಿಸಿ ಅವರಿಗೆ ವೈದ್ಯಕೀಯ ತಪಾಸಣೆ ನಡೆಸುವುದು, ಪೌಷ್ಠಿಕ ಆಹಾರ ಪೂರೈಸುವ ಕುರಿತು ಶಿಫಾರಸುಗಳನ್ನು ಮಾಡಲಿದೆ. ಹಾಗೂ ಕಾರ್ಯ ಯೋಜನೆಗಳ ಕುರಿತು ಮೇಲ್ವಿಚಾರಣೆ ನಡೆಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.