ETV Bharat / state

ತೆಲುಗು ಮಾತೃಭಾಷೆಯ ವಿದ್ಯಾರ್ಥಿಯನ್ನು ಭಾಷಾ ಅಲ್ಪಸಂಖ್ಯಾತ ಕೋಟಾದಲ್ಲಿ ಮೆಡಿಕಲ್ ಕೌನ್ಸಿಲಿಂಗ್​ಗೆ ಪರಿಗಣಿಸಿ: ಹೈಕೋರ್ಟ್ ಸೂಚನೆ

author img

By ETV Bharat Karnataka Team

Published : Sep 18, 2023, 5:28 PM IST

high-court-directs-telugu-mother-tongue-balija-community-student-to-be-considered-for-medical-counseling-under-language-minority-quota
ತೆಲುಗು ಮಾತೃಭಾಷೆಯ ಬಲಿಜ ಸಮುದಾಯದ ವಿದ್ಯಾರ್ಥಿಗೆ ಭಾಷಾ ಅಲ್ಪಸಂಖ್ಯಾತ ಕೋಟಾದಲ್ಲಿ ಮೆಡಿಕಲ್ ಕೌನ್ಸಿಲಿಂಗ್​ಗೆ ಪರಿಗಣಿಸಲು ಹೈಕೋರ್ಟ್ ಸೂಚನೆ

ತೆಲುಗು ಮಾತೃಭಾಷೆಯ ಬಲಿಜ ಸಮುದಾಯದ ವಿದ್ಯಾರ್ಥಿಗೆ ಭಾಷಾ ಅಲ್ಪಸಂಖ್ಯಾತ ಕೋಟಾದಲ್ಲಿ ಮೆಡಿಕಲ್ ಕೌನ್ಸಿಲಿಂಗ್​ಗೆ ಪರಿಗಣಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಬೆಂಗಳೂರು : ಬಲಿಜ ಜಾತಿಗೆ ಸೇರಿದ ತೆಲುಗು ಭಾಷೆಯನ್ನು ಮಾತೃ ಭಾಷೆಯನ್ನಾಗಿಸಿಕೊಂಡಿದ್ದ ವಿದ್ಯಾರ್ಥಿಯನ್ನು ಭಾಷಾ ಅಲ್ಪಸಂಖ್ಯಾತ ಮೀಸಲು ಕೋಟಾದಲ್ಲಿ ವೈದ್ಯಕೀಯ ಪರೀಕ್ಷೆಯ ಕೌನ್ಸಿಲಿಂಗ್​ಗೆ ಪರಿಗಣಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(ಕೆಇಎ) ಹೈಕೋರ್ಟ್ ಸೂಚನೆ ನೀಡಿದೆ. ತನ್ನನ್ನು ಭಾಷಾ ಅಲ್ಪಸಂಖ್ಯಾತ ಕೋಟಾದಲ್ಲಿ ಪರಿಗಣಿಸದ ಕೆಇಎ ಕ್ರಮವನ್ನು ಪ್ರಶ್ನಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ನಿವಾಸಿ ಅನಿರುಧ್​​ ಎಂಬುವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ ನರೇಂದರ್ ಮತ್ತು ನ್ಯಾಯಮೂರ್ತಿ ವಿಜಯ್ ಕುಮಾರ್ ಎ ಪಾಟೀಲ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ಅರ್ಜಿದಾರರು ಇತರೆ ಹಿಂದುಳಿದ ವರ್ಗಗಳ ಮೀಸಲು (ಒಬಿಸಿ) 2ಎ ಮೀಸಲು ಹೊಂದಿದ್ದಾರೆ. ಜತೆಗೆ, ಮಾತೃಭಾಷೆ ತೆಲುಗು ಆಗಿರುವುದರಿಂದ ಭಾಷಾ ಅಲ್ಪಸಂಖ್ಯಾತರು ಎಂಬುದಾಗಿ ಆಯ್ಕೆ ಮಾಡಿದ್ದಾರೆ. ಆದರೂ ಅರ್ಜಿದಾರರನ್ನು ಅಲ್ಪ ಸಂಖ್ಯಾತ ಕೋಟಾದಲ್ಲಿ ಕೌನ್ಸಿಲಿಂಗ್​ಗೆ ಪರಿಗಣಿಸದರಿರುವುದು ಸರಿಯಾದ ಕ್ರಮವಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅಷ್ಟೇ ಅಲ್ಲದೆ, ಅಧಿಕಾರಿಗಳು ಅರ್ಜಿದಾರರನ್ನು ಭಾಷಾ ಅಲ್ಪಸಂಖ್ಯಾತ ಕೋಟಾದಲ್ಲಿ ಪರಿಗಣಿಸದಿರುವ ಪ್ರಾಧಿಕಾರದ ನಡೆ ಕಾನೂನಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ. ಜತೆಗೆ, ಮೊದಲನೇ ಸುತ್ತಿನ ಕೌನ್ಸಿಲಿಂಗ್ ಮುಕ್ತಾಯಗೊಂಡಿದೆ. ಇದರಿಂದ ವಿದ್ಯಾರ್ಥಿ ತೊಂದರೆ ಅನುಭವಿಸಿದಂತಾಗಿದೆ. ಆದ್ದರಿಂದ ಎರಡನೇ ಸುತ್ತಿನ ಕೌನ್ಸಿಲಿಂಗ್​ನಲ್ಲಿ ಅರ್ಜಿದಾರರನ್ನು ಪರಿಗಣಿಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ : ಅರ್ಜಿದಾರ ಅನಿರುಧ್ ಅವರು 2023ರ ಸಾಲಿನಲ್ಲಿ ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ನೀಟ್ ಪರೀಕ್ಷೆಯ ರ್ಯಾಂಕ್ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಕೆಇಎ ಅರ್ಜಿದಾರರನ್ನು ಕೌನ್ಸಿಲಿಂಗ್​ಗೆ ಅಹ್ವಾನ ಮಾಡಿರಲಿಲ್ಲ. ತಕ್ಷಣ ಅರ್ಜಿದಾರರು ಕೆಇಎ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಮನವಿ ಪರಿಶೀಲಿಸಿದ್ದ ಕೆಇಎ, ಅರ್ಜಿದಾರರನ್ನು ಅರ್ಜಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಇದನ್ನೂ ಓದಿ : ದೊಡ್ಡ ಮಟ್ಟದ ಒಳ್ಳೆಯ ಕಾರ್ಯಗಳನ್ನು ಮಾಡುವಾಗ ಸಣ್ಣ ಕೆಡಕುಗಳು ಸಾಮಾನ್ಯ : ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.