ETV Bharat / state

ನಕಲಿ ನೋಂದಣಿ ಪತ್ರ ಸೃಷ್ಟಿ: ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್​ಗೆ ತನಿಖಾ ವರದಿ

author img

By

Published : Jul 23, 2021, 4:45 PM IST

ಬೆಂಗಳೂರಿನ ಶಿವಾಜಿ ನಗರ, ಕೆಂಗೇರಿ, ಯಲಹಂಕ ಮತ್ತಿತರೆ ಉಪನೋಂದಣಾಧಿಕಾರಿ ಕಚೇರಿಗಳ ನಕಲಿ ಸೀಲ್ ಮತ್ತು ಫ್ರಾಂಕಿಂಗ್ ಯಂತ್ರಗಳನ್ನು ಬಳಸಿ ನಕಲಿ ನೋಂದಣಿ ದಾಖಲೆ ಸೃಷ್ಟಿಸಲಾಗಿದೆ. ಈ ಬಗ್ಗೆ 2020 ರ ಡಿಸೆಂಬರ್ 21 ರಂದು ಗಾಂಧಿನಗರದ ಹಿರಿಯ ಉಪನೋಂದಣಾಧಿಕಾರಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್​ಗೆ ತನಿಖಾ ವರದಿ
ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್​ಗೆ ತನಿಖಾ ವರದಿ

ಬೆಂಗಳೂರು: ನಗರದ ವಿವಿಧ ಉಪನೋಂದಣಾಧಿಕಾರಿ ಕಚೇರಿಗಳ ನಕಲಿ ಸೀಲ್ ಮತ್ತು ಫ್ರಾಂಕಿಂಗ್ ಯಂತ್ರಗಳನ್ನು ಬಳಸಿ ನಕಲಿ ನೋಂದಣಿ ಪತ್ರಗಳನ್ನು ಸೃಷ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ಐಟಿ ತನ್ನ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದೆ.

ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಬೆಂಗಳೂರಿನ ತ್ಯಾಗರಾಜನಗರ ನಿವಾಸಿ ನಾರಾಯಣ ಎಂಬುವರು ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು, ಎಸ್‌ಐಟಿ ಮುಖ್ಯಸ್ಥ ಶರಣಪ್ಪ ಅವರ ತನಿಖಾ ವರದಿಯನ್ನು ಪೀಠಕ್ಕೆ ಸಲ್ಲಿಸಿದರು. ವರದಿ ದಾಖಲಿಸಿಕೊಂಡ ಪೀಠ, ಪ್ರಕರಣ ಆರೋಪಿಯನ್ನು ಬಂಧಿಸಿರುವ ಮಾಹಿತಿ ಕೇಳಿತು.ಆದರೆ, ವಕೀಲರು ಆರೋಪಿಗಳನ್ನು ಬಂಧಿಸಿಲ್ಲವೆಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ತನಿಖಾ ಪ್ರಗತಿ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಿತು.

ವರದಿಯಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಉಪನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ಹೇಳಿಕೆಗಳನ್ನು ದಾಖಲಿಸಲಾಗಿದೆ. ಕೆಲವು ದಾಖಲೆಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಆರೋಪಿಯೋರ್ವನಿಗೆ ಜುಲೈ 19ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರೂ ವಿಚಾರಣೆಗೆ ಹಾಜರಾಗಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಲಾಗಿದೆ.

ಪ್ರಕರಣದ ಹಿನ್ನೆಲೆ:

ಬೆಂಗಳೂರಿನ ಶಿವಾಜಿ ನಗರ, ಕೆಂಗೇರಿ, ಯಲಹಂಕ ಮತ್ತಿತರೆ ಉಪನೋಂದಣಾಧಿಕಾರಿ ಕಚೇರಿಗಳ ನಕಲಿ ಸೀಲ್ ಮತ್ತು ಫ್ರಾಂಕಿಂಗ್ ಯಂತ್ರಗಳನ್ನು ಬಳಸಿ ನಕಲಿ ನೋಂದಣಿ ದಾಖಲೆ ಸೃಷ್ಟಿಸಲಾಗಿದೆ. ಈ ಬಗ್ಗೆ 2020 ರ ಡಿಸೆಂಬರ್ 21 ರಂದು ಗಾಂಧಿನಗರದ ಹಿರಿಯ ಉಪನೋಂದಣಾಧಿಕಾರಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಮೇರೆಗೆ ಅನಾಮಧೇಯ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರೂ ಸೂಕ್ತ ತನಿಖೆ ನಡೆಸುತ್ತಿಲ್ಲ, ಒಬ್ಬ ಆರೋಪಿಯನ್ನೂ ಬಂಧಿಸಿಲ್ಲ. ಗಂಭೀರ ಸ್ವರೂಪದ ಆರ್ಥಿಕ ಅಪರಾಧದಿಂದ ರಾಜ್ಯದ ಬೊಕ್ಕಸಕ್ಕೆ ಹಾನಿಯಾಗಿದೆ. ಸ್ಥಳೀಯ ಪೊಲೀಸರು ಸಮರ್ಥವಾಗಿ ತನಿಖೆ ನಡೆಸೇ ಇರುವುದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.