ETV Bharat / state

ಮಕ್ಕಳಿಗೆ ಏನು ಕೊಡಬೇಕೆಂದು ತಾಯಿಗೆ ಗೊತ್ತಿದೆ: ನಾನೊಬ್ಬನೇ ದೆಹಲಿಗೆ ಹೋಗುತ್ತಿದ್ದೇನೆ: ಡಿಕೆಶಿ

author img

By

Published : May 16, 2023, 9:15 AM IST

Updated : May 16, 2023, 10:46 AM IST

ಇಂದು ಬೆಳಗ್ಗೆ 9 ಗಂಟೆ 50 ನಿಮಿಷಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ​ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

Etv Bharat
Etv Bharat

ಡಿಕೆ ಶಿವಕುಮಾರ್ ಪ್ರತಿಕ್ರಿಯೆ​

ಬೆಂಗಳೂರು: ಸಿಎಂ ವಿಚಾರವಾಗಿ ಕಾಂಗ್ರೆಸ್​ ಪಕ್ಷದಲ್ಲಿ ಗೊಂದಲವುಂಟಾಗಿದ್ದು, ಈ ವಿಚಾರವಾಗಿ ಅಂತಿಮ ನಿರ್ಧಾರ ಕೈಗೊಳ್ಳಲು ಎಐಸಿಸಿ ವರಿಷ್ಠರು ಸಿಎಂ ಸಿದ್ದಾರಮಯ್ಯ ಮತ್ತು ಡಿಕೆಶಿ ಅವರಿಗೆ ದೆಹಲಿಗೆ ಬರುವಂತೆ ಆಹ್ವಾನಿಸಿದ್ದರು. ಈ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಇಂದು ಬೆಳಗ್ಗೆ 9.50 ಕ್ಕೆ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಸ್ತಾರ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದರು. ನಿನ್ನೆಯೇ ದೆಹಲಿಗೆ ತರಳಬೇಕಿದ್ದ ಡಿಕೆಶಿ ಅನಾರೋಗ್ಯದ ಹಿನ್ನೆಲೆ ವಿಶ್ರಾಂತಿ ಪಡೆದು ಇಂದು ಬೆಳಗ್ಗೆ ಪ್ರಯಾಣ ಬೆಳೆಸಿದರು.

ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ’’ಕಾಂಗ್ರೆಸ್ ಪಕ್ಷ ನನ್ನ ಪಾಲಿನ ದೇವರು. ಕಾಂಗ್ರೆಸ್ ಪಕ್ಷ ನನ್ನ ಪಾಲಿನ ದೇವಾಲಯ. ಕಾಂಗ್ರೆಸ್ ಪಕ್ಷ ನನಗೆ ತಾಯಿ ಇದ್ದಂತೆ. ದೇವರು ಮತ್ತು ತಾಯಿಗೆ ಮಕ್ಕಳಿಗೆ ಏನು ನೀಡಬೇಕು ಎಂಬುದು ಗೊತ್ತಿರುತ್ತದೆ. ನಾನು ನನ್ನ ದೇವರನ್ನು ಭೇಟಿ ಮಾಡಲು ದೇವಾಲಯಕ್ಕೆ ಹೋಗುತ್ತಿದ್ದೇನೆ. ನಾನು ಒಬ್ಬನೇ ಹೋಗುತ್ತಿದ್ದೇನೆ. ಪ್ರಧಾನ ಕಾರ್ಯದರ್ಶಿ ಒಬ್ಬನೇ ಬರುವಂತೆ ಹೇಳಿದ್ದಾರೆ. ಹೀಗಾಗಿ ನಾನೊಬ್ಬನೇ ದೆಹಲಿಗೆ ಹೋಗುತ್ತಿದ್ದೇನೆ‘‘ ಎಂದರು.

’’ನನ್ನ ಆರೋಗ್ಯ ಬಹಳ ಉತ್ತಮವಾಗಿದೆ. ಕಾಂಗ್ರೆಸ್​ ಪಕ್ಷವೇ ನನಗೆ ದೊಡ್ಡ ಶಕ್ತಿ. ಕಾಂಗ್ರೆಸ್​ ಪಕ್ಷವೇ ನನಗೆ ದೇವಸ್ಥಾನ. ನನ್ನ ಕೆಲಸವನ್ನು ನಾನು ಮಾಡಿದ್ದೇನೆ. ಜನ ನಂಬಿಕೆ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ರಾಜ್ಯದ ಜನರ ನಂಬಿಕೆ ಉಳಿಸಲು ಶ್ರಮ ಪಡಬೇಕಾಗಿದೆ‘‘ ಎಂದು ಹೇಳಿದ ಡಿಕೆ ಶಿವಕುಮಾರ್​ ದೆಹಲಿಯತ್ತ ಪ್ರಯಾಣ ಬೆಳೆಸಲು ಏರ್​ಪೋರ್ಟ್​ಗೆ ತೆರಳಿದರು.

ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಇಂದು ಶಿಮ್ಲಾದಿಂದ ದೆಹಲಿಗೆ ಹಿಂದುರುಗುತ್ತಿದ್ದು ಈ ಸಂದರ್ಭ ಅವರನ್ನು ಭೇಟಿಯಾಗಲು ಡಿಕೆಶಿ ತೀರ್ಮಾನಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಗೆ ತೀವ್ರ ಕಸರತ್ತು ನಡೆಯುತ್ತಿದ್ದು, ಈ ವಿಚಾರವಾಗಿ ಇಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನವನ್ನು ಗೆದ್ದ ಕಾಂಗ್ರೆಸ್​ ಸ್ಪಷ್ಟ ಬಹುಮತ ಪಡೆದಿದೆ. ಆದರೆ, ಕಾಂಗ್ರೆಸ್​ಗೆ ಸಾರಥಿಯ ಆಯ್ಕೆ ಸಾಕಷ್ಟು ದೊಡ್ಡ ಕಗ್ಗಂಟಾಗಿದೆ. ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ತಂದಿರುವ ಹಿನ್ನೆಲೆ ತಮಗೆ ಸಿಎಂ ಸ್ಥಾನ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒತ್ತಡ ಹೇರಿದರೆ, ಹೆಚ್ಚಿನ ಶಾಸಕರ ಬೆಂಬಲವಿದ್ದು ಪಾರದರ್ಶಕ ಆಡಳಿತ ನೀಡುವ ಭರವಸೆಯನ್ನ ಸಿದ್ದರಾಮಯ್ಯ ನೀಡುತ್ತಿದ್ದಾರೆ. ಅಳೆದು ತೂಗಿ ಅಂತಿಮವಾಗಿ ಅಧಿಕಾರವನ್ನು ಇಬ್ಬರಿಗೂ ಸಮಾನವಾಗಿ ಹಂಚಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ. ಈ ವಿಚಾರವಾಗಿಯೇ ಮನವರಿಕೆ ಮಾಡಲು ರಾಜ್ಯನಾಯಕರನ್ನ ದಿಲ್ಲಿಗೆ ಆಹ್ವಾನಿಸಿದೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿನ್ನೆ ಮಧ್ಯಾಹ್ನವೇ ತಮ್ಮ ಬೆಂಬಲಿಗ ಶಾಸಕರೊಂದಿಗೆ ದೆಲ್ಲಿಗೆ ತೆರಳಿದ್ದು ಈಗಾಗಲೇ ಅವರ ಪರವಾಗಿ ಜನ ನಾಯಕರು ಮಲ್ಲಿಕಾರ್ಜುನ್ ಖರ್ಗೆ ಜೊತೆ ಸಮಾಲೋಚನೆ ಸಹ ನಡೆಸಿದ್ದಾರೆ. ಆದರೆ ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ಗೆ ತಪಾಸಣೆ ನಡೆಸಿದ ವೈದ್ಯರು ವಿಶ್ರಾಂತಿ ಸೂಚಿಸಿದ್ದರು. ಈ ಹಿನ್ನೆಲೆ ನಿನ್ನೆ ರಾತ್ರಿ ಡೆಲ್ಲಿಗೆ ಪ್ರಯಾಣ ಬೆಳೆಸದೆ ವಿಶ್ರಾಂತಿ ಪಡೆದು ಪೂರ್ಣ ಗುಣಮುಖರಾಗದಿದ್ದರೂ ಇಂದು ಬೆಳಿಗ್ಗೆ ದೆಹಲಿಗೆ ಪ್ರಯಾಣ ಬೆಳಸಲು ಸಿದ್ದರಾಗಿದ್ದಾರೆ.

ಇದನ್ನೂ ಓದಿ: ಕಾದು ನೋಡಿ, ಹೈಕಮಾಂಡ್​ ಸೂಚನೆ ಮೇರೆಗೆ ದೆಹಲಿಗೆ ಬಂದಿದ್ದೇನೆ: ಸಿದ್ದರಾಮಯ್ಯ

Last Updated :May 16, 2023, 10:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.