ETV Bharat / state

ನಮ್ಮ ರಾಜ್ಯದ ರೈತರ ಹಾಲಿ ಬೆಳೆಗಳನ್ನು ರಕ್ಷಿಸಿದ್ದೇವೆ: ಡಿಸಿಎಂ ಡಿ.ಕೆ.ಶಿವಕುಮಾರ್

author img

By ETV Bharat Karnataka Team

Published : Oct 5, 2023, 3:39 PM IST

ಕಾವೇರಿ ನದಿ ನೀರು ಬಿಡುಗಡೆ ವಿವಾದ ಹಾಗು ಇತರೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ವಿಧಾನಸೌಧದಲ್ಲಿ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.

ಡಿಸಿಎಂ ಡಿ ಕೆ ಶಿವಕುಮಾರ್
ಡಿಸಿಎಂ ಡಿ ಕೆ ಶಿವಕುಮಾರ್

ಕಾವೇರಿ ನದಿ ನೀರು ಬಿಡುಗಡೆ ವಿವಾದದ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : "ಕಾವೇರಿ ಭಾಗದ ಪ್ರದೇಶದಲ್ಲಿ ನಮಗೆ 106 ಟಿಎಂಸಿ ನೀರಿನ ಅಗತ್ಯವಿದ್ದು, ಇದೀಗ 56 ಟಿಎಂಸಿ ನೀರು ಸಂಗ್ರಹವಿದೆ. ಎರಡು ದಿನಗಳ ಕಾಲ ಮಳೆ ಬಿದ್ದ ಕಾರಣ ಅಕ್ಬೋಬರ್ 1ರಂದು 13,000, 2ರಂದು 23,000, 3ರಂದು 20,000, 4ರಂದು 15,000, 5ರಂದು 10,000 ಕ್ಯೂಸೆಕ್ ನೀರು ಒಳಹರಿವಿನ ಮೂಲಕ ಸಂಗ್ರಹವಾಗಿದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಮ್ಮ ರಾಜ್ಯದ ರೈತರ ಹಾಲಿ ಬೆಳೆಗಳನ್ನು ನಾವು ರಕ್ಷಿಸಿದ್ದೇವೆ. ಇದು ಸಮಾಧಾನದ ವಿಷಯ. ರಾಜ್ಯದಲ್ಲಿ ಬರ ಘೋಷಣೆಯಾಗಿದ್ದು, ಮುಂದೆ ಯಾವುದೇ ಬೆಳೆ ಹಾಕಬಾರದು ಎಂದು ರೈತರಿಗೆ ಸೂಚಿಸಿದ್ದೇವೆ. ಮುಂದಿನ ತಿಂಗಳು ಮತ್ತೆ ಮಳೆ ಬೀಳುವ ಸಾಧ್ಯತೆ ಇದೆ. ಈ ವರ್ಷ ಸಂಕಷ್ಟವಿದೆ. ನಾವು ದಿನನಿತ್ಯ ಮಳೆಗಾಗಿ ಪ್ರಾರ್ಥನೆ ಮಾಡುತ್ತಲೇ ಇದ್ದೇವೆ" ಎಂದರು.

ರಾಜ್ಯದಲ್ಲಿ ನೀರಾವರಿ ರಾಜಕೀಯದ ಬಗ್ಗೆ ಕೇಳಿದ ಪ್ರಶ್ನೆಗೆ, "ಮಾಡಲಿ ಬಿಡಿ. ಅವರು ಕೂಡ ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಕೆಲಸ ಬೇಕಲ್ಲವೇ?, ಅವರ ಧ್ವನಿ ನಿಲ್ಲಿಸಲು ಆಗುತ್ತದೆಯೇ?, ನಮ್ಮ ಕೆಲಸ ನಾವು ಮಾಡೋಣ" ಎಂದು ಹೇಳಿದರು. ನದಿ ನೀರಿನ ವಿವಾದವನ್ನು ನಿಮ್ಮಷ್ಟು ಮುಖ್ಯಮಂತ್ರಿಗಳು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ, "ನೀರಾವರಿ ಸಚಿವನಾಗಿ ನಾನಿದ್ದೇನೆ. ನಾನು ಸಮರ್ಥನೆ ಮಾಡಿಕೊಳ್ಳುತ್ತಿದ್ದೇನೆ" ಎಂದು ತಿಳಿಸಿದರು.

ತಮಿಳುನಾಡಿಗೆ ನೀರು ಹರಿಸುವ ಹಾಗೂ ಮೇಕೆದಾಟು ವಿಚಾರಕ್ಕೆ, "ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಬಿಡಲು ನಮ್ಮಲ್ಲಿ ನೀರಿಲ್ಲ ಎಂದು ಮೇಲ್ಮನವಿ ಸಲ್ಲಿಸಿದ್ದೇವೆ. ಮೇಕೆದಾಟು ಯೋಜನೆ ಜಾರಿ ಪ್ರಸ್ತಾವನೆ ಇಟ್ಟಿದ್ದು, ಇದಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟಕ್ಕೆ ಸಿದ್ಧತೆಯಲ್ಲಿದ್ದೇವೆ. ಹಂತಹಂತವಾಗಿ ನಾವು ಹೋಗಬೇಕು. ಕರ್ನಾಟಕ ಸರ್ಕಾರ ಎಲ್ಲರ ಅನುಭವ, ಅಭಿಪ್ರಾಯ ಪಡೆದು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ ಎಂದು ಎಸ್.ಎಂ.ಕೃಷ್ಣ ಅವರೇ ಹೇಳಿಲ್ಲವೇ?" ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಮೇಲೆ ಇಡಿ ದಾಳಿ ಸಂಬಂಧಿಸಿದಂತೆ, "ಈ ವಿಚಾರವಾಗಿ ನನಗೆ ಹೆಚ್ಚಿನ ವಿಚಾರ ಗೊತ್ತಿಲ್ಲ" ಎಂದು ತಿಳಿಸಿದರು. ಆಪರೇಷನ್ ಹಸ್ತದ ಪ್ರಶ್ನೆಗೆ, "ಇಬ್ಬರು ವೈರಿಗಳು ಒಂದಾಗಿ ಸರ್ಕಾರ ಬೀಳುತ್ತದೆ ಎಂದು ಒಂದೊಂದು ದಿನಾಂಕ ನೀಡುತ್ತಿದ್ದಾರೆ" ಎಂದು ತಿಳಿಸಿದರು.

ಇದನ್ನೂ ಓದಿ: ನಿಲ್ಲದ ಕಾವೇರಿ ಕಿಚ್ಚು : ಕೆಆರ್​ಎಸ್​ ಡ್ಯಾಂ ಮುತ್ತಿಗೆಗೆ ಹೊರಟ ಕನ್ನಡಪರ ಸಂಘಟನೆಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.