ETV Bharat / state

ನಿಮ್ಮದು ಕ್ಯಾಬಿನೆಟ್ ಆಫ್ ಕರ್ನಾಟಕ ಅಲ್ಲ, ಅದು ಕ್ಯಾಬಿನೆಟ್ ಆಫ್ ಕಾನ್ಸ್ಪಿರೆಸಿ: ಹೆಚ್​​​ಡಿಕೆ ಕಿಡಿ - HD Kumaraswamy X tweet

author img

By ETV Bharat Karnataka Team

Published : May 25, 2024, 6:58 PM IST

ಎಕ್ಸ್ ಪೋಸ್ಟ್ ಟ್ವೀಟ್​ದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಿಸಿದ್ದಾರೆ.

Former CM HD Kumaraswamy
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (ETV Bharat)

ಬೆಂಗಳೂರು: ನಿಮ್ಮದು ಕ್ಯಾಬಿನೆಟ್ ಆಫ್ ಕರ್ನಾಟಕ ಅಲ್ಲ, ಅದು ಕ್ಯಾಬಿನೆಟ್ ಆಫ್ ಕಾನ್ಸ್ಪಿರೆಸಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಎಕ್ಸ್ ಪೋಸ್ಟ್ ಮೂಲಕ ಟೀಕೆ ಮಾಡಿರುವ ಹೆಚ್​ ಡಿ ಕುಮಾರಸ್ವಾಮಿ ಅವರು, ಕ್ಷಣಕ್ಕೊಂದು ಮಾತು, ಘಳಿಗೆಗೊಂದು ಹೇಳಿಕೆ! ಕರ್ನಾಟಕದ ಮುಖ್ಯಮಂತ್ರಿ ಕುರ್ಚಿಯ ಮೇಲೆ ನೀವು ಕೂತಿದ್ದಿರೋ ಅಥವಾ ಊಸರವಳ್ಳಿ ಏನಾದರೂ ಕೂತಿದೆಯೋ? ನನಗಂತೂ ಅನುಮಾನ. ಇಷ್ಟು ಬಣ್ಣಗೇಡಿ ವರ್ತನೆಯನ್ನು ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ ನಾನು. ಅತೀವ ವಿಷಾದ ಮತ್ತು ನೋವಿನಿಂದಲೇ ಈ ಮಾತು ಹೇಳುತ್ತಿದ್ದೇನೆ ಸಿದ್ದರಾಮಯ್ಯನವರೇ.

ಮೈಸೂರಿನಲ್ಲಿ ಇವತ್ತು ಬೆಳಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೀರಿ. "ನೊಂದ ಮಹಿಳೆಯರ ವಿಡಿಯೋಗಳನ್ನು ಜಾಲತಾಣಗಳಲ್ಲಿ ಹಂಚುವುದು, ಹರಡುವುದು ಮುಖ್ಯವಲ್ಲ. ಅದು ಅಪರಾಧವೂ ಅಲ್ಲ. ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡಿದ್ದು, ದೊಡ್ಡ ಅಪರಾಧ ಎನ್ನುವುದು ಯಾವ ಸೆಕ್ಷನ್‌ನಲ್ಲಿದೆ? ಅದನ್ನು ಯಾವ ಸೆಕ್ಷನ್‌ನಲ್ಲಿ ಉಲ್ಲೇಖಿಸಿದ್ದಾರೆ? ಕುಮಾರಸ್ವಾಮಿ ಪ್ರಕಾರ ಯಾವುದಾದರೂ ಹೊಸ ಸೆಕ್ಷನ್ ಇದ್ದರೆ ಹೇಳಲಿ ಎಂದು ನನಗೆ ಪ್ರಶ್ನೆ ಮಾಡಿದ್ದೀರಿ ಎಂದಿದ್ದಾರೆ.

ನಿಜ, ನೀವು ಸ್ವಯಂಘೋಷಿತ ಸಂವಿಧಾನ ತಜ್ಞರು. ಪ್ರ(ಕು)ಖ್ಯಾತ ಮಾಜಿ ವಕೀಲರು. ಹಾಲಿ ಮುಖ್ಯಮಂತ್ರಿಗಳು. ಆದರೂ ನಿಮ್ಮ ಪ್ರಶ್ನೆಗೆ ಉತ್ತರ ಕೊಡುವುದು ನನ್ನ ಧರ್ಮ. ಆದರೆ ನಿಮಗೆ ಈ ಪರಿ ಅಜ್ಞಾನವೇ ಎನ್ನುವುದು ನನಗೆ ಸೋಜಿಗ. ಮಾತೆತ್ತಿದರೆ, 'ನಾನು ಲಾಯರ್ ಗಿರಿ ಮಾಡ್ತಾ ಇದ್ದೆ. ಸುಮ್ಕೆ ಕೂತ್ಕಳಿ' ಎಂದು ಎಲ್ಲರ ಬಾಯಿ ಮುಚ್ಚಿಸುತ್ತಿದ್ದ ನೀವು, ಈಗ ನೀವೇ ಬಾಯಿ ಮುಚ್ಚಿಕೊಳ್ಳುವ ಪರಿಸ್ಥಿತಿ ಬಂದಿದೆ. ಇದೇ ಕಾರಣಕ್ಕೆ ನಾನು ನಿಮ್ಮನ್ನು ಅತ್ಯಂತ ವಿನಮ್ರತೆಯಿಂದ ವಿನಂತಿ ಮಾಡಿಕೊಂಡಿದ್ದು, 'ದಯಮಾಡಿ ವಕೀಲಿಕೆ ಮಾಡಬೇಡಿ' ಎಂದು. ಕಾನೂನಿನ ಬಗ್ಗೆ ಸಾಸಿವೆ ಕಾಳಿನಷ್ಟು ತಿಳಿವಳಿಕೆ ಇಲ್ಲದವರೊಬ್ಬರು 'ನಾನೂ ವಕೀಲ ನಾನೂ ವಕೀಲಿಕೆ ಮಾಡ್ತಾ ಇದ್ದೆ' ಎಂದು ಹೇಳಿಕೊಳ್ಳುವುದು ಗೌರವಾನ್ವಿತ ವಕೀಲ ಸಮುದಾಯಕ್ಕೆ ಮಾಡುವ ಅಪಚಾರ. ತಮಗೆ ಇನ್ನಾದರೂ ಇರಲಿ ಶಿಷ್ಟಾಚಾರ ಎಂದು ವಾಗ್ದಾಳಿ ನಡೆಸಿದ್ದಾರೆ.

ನೊಂದ ಮಹಿಳೆಯರ ವಿಡಿಯೋಗಳನ್ನು ಹಂಚುವುದು ಅಪರಾಧ ಎಂದು ಯಾವ ಸೆಕ್ಷನ್ ನಲ್ಲಿ ಹೇಳಿದ್ದಾರೆ" ಎಂದು ಒಂದನೇ ಕ್ಲಾಸು ಮಗುವಿನಂತೆ ಕೇಳಿದ್ದೀರಿ! ನಿಮ್ಮ ಸರಕಾರದ ಅಧೀನದಲ್ಲಿರುವ, ನೀವೇ ಆದೇಶಿಸಿ ರಚನೆ ಮಾಡಿಸಿರುವ ವಿಶೇಷ ತನಿಖಾ ತಂಡ (SIT) ಹೊರಡಿಸಿರುವ ಪತ್ರಿಕಾ ಪ್ರಕಟಣೆ, ರೂಪಿಸಿರುವ ಕಾನೂನುಬದ್ಧ ನಿಯಮಗಳು 'ಸಾಕ್ಷಾತ್ ಸಿಎಂ' ಆಗಿರುವ ನಿಮ್ಮ ಗಮನಕ್ಕೇ ಬಂದಿಲ್ಲವೆಂದರೆ!!?? ತಾವು ಸರಕಾರ ನಡೆಸುತ್ತಿರುವಿರೋ ಅಥವಾ ವಿಧಾನಸೌಧವನ್ನು ಟೈಮ್ ಪಾಸ್ ಕ್ಲಬ್ ಮಾಡಿಕೊಂಡಿರುವಿರೋ ಎಂದು ಕುಟುಕಿದ್ದಾರೆ.

SIT ಹೊರಡಿಸಿರುವ ಪ್ರತಿಕಾ ಪ್ರಕಟಣೆ:ನಿಮ್ಮ ಘನತವೆತ್ತ ಅವಗಾಹನೆಗೆ SIT ಹೊರಡಿಸಿರುವ ಪ್ರತಿಕಾ ಪ್ರಕಟಣೆಯನ್ನು ಇಲ್ಲಿ ಲಗತ್ತಿಸಿದ್ದೇನೆ. ದಯಮಾಡಿ ಓದಿಕೊಳ್ಳಿ, ಅರ್ಥ ಮಾಡಿಕೊಳ್ಳಿ. ನೀವು ಕೇಳಿದ ಎಲ್ಲಾ ಸೆಕ್ಷನ್​​ಗಳು ಅದರಲ್ಲಿಯೇ ಇವೆ. ಒಂದಲ್ಲಾ.. ಹತ್ತಾರು ಸಲ ಓದಿ ಮನನ ಮಾಡಿಕೊಳ್ಳಿ. ನಿಮ್ಮನ್ನು ಅಪಮಾನಿಸುತ್ತಿದ್ದೇನೆ ಎಂದು ಅನ್ಯತಾ ಭಾವಿಸಬೇಡಿ. ವಯಸ್ಸಿನಲ್ಲಿ ಹಿರಿಯರು, ಹೆಚ್ಚು ಅನುಭಸ್ಥರು ನೀವು. ಆದರೆ, ಪೆನ್ ಡ್ರೈವ್ ಪ್ರಕರಣದಲ್ಲಿ ನಿಮ್ಮ ನಡವಳಿಕೆ ಪ್ರಶ್ನಾರ್ಹ. ಅಮಾಯಕ ಹೆಣ್ಮಕ್ಕಳ ಮಾನವನ್ನು ವೋಟಿಗೆ ಒತ್ತೆ ಇಟ್ಟ ಕ್ರಿಮಿನಲ್ ಅನ್ನು ಪಕ್ಕದಲ್ಲೇ ಕೂರಿಸಿಕೊಂಡು ಮಾತನಾಡುತ್ತಿದ್ದೀರಿ. ಸಂವಿಧಾನಬದ್ಧವಾಗಿ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿ ಸಂವಿಧಾನ ದ್ರೋಹಿ ಕೃತ್ಯ ಎಸಗಿರುವ ವ್ಯಕ್ತಿ ನಿಮ್ಮ ಸಂಪುಟದಲ್ಲಿ ಉಪ ಮುಖ್ಯಮಂತ್ರಿ!! ಇದಕ್ಕಿಂತ ನಿರ್ಲಜ್ಜತೆ ಉಂಟೇ ಎಂದು ಪ್ರಶ್ನಿಸಿದ್ದಾರೆ.

ನೀವು, ನಿಮ್ಮ ಇಡೀ ಕಾಂಗ್ರೆಸ್ ಪಕ್ಷ CD ಶಿವು ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದೀರಿ. ನಿಮ್ಮ ಇಡೀ ಕ್ಯಾಬಿನೆಟ್ ಆ ವ್ಯಕ್ತಿಯ ಹಿತಾಸಕ್ತಿಗಾಗಿ, ಆತ ರೂಪಿಸಿರುವ ಒಳಸಂಚಿನಲ್ಲಿ ಭಾಗಿಯಾಗಿದೆ. ನಿಮ್ಮದು ಕ್ಯಾಬಿನೆಟ್ ಆಫ್ ಕರ್ನಾಟಕ ಅಲ್ಲ, ಅದು ಕ್ಯಾಬಿನೆಟ್ ಆಫ್ ಕಾನ್​​ಸ್ಪಿರೆಸಿಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂಓದಿ:ಚನ್ನಗಿರಿ ಠಾಣೆ ಧ್ವಂಸ, ಉಡುಪಿ ಗ್ಯಾಂಗ್ ವಾರ್ ಪ್ರಕರಣ: ಪ್ರತಿಪಕ್ಷಗಳಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ - Criticism against Congress govt

ETV Bharat Logo

Copyright © 2024 Ushodaya Enterprises Pvt. Ltd., All Rights Reserved.