ETV Bharat / state

ಚನ್ನಗಿರಿ ಠಾಣೆ ಧ್ವಂಸ, ಉಡುಪಿ ಗ್ಯಾಂಗ್ ವಾರ್ ಪ್ರಕರಣ: ಪ್ರತಿಪಕ್ಷಗಳಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ - Criticism against Congress govt

author img

By ETV Bharat Karnataka Team

Published : May 25, 2024, 5:34 PM IST

ಚನ್ನಗಿರಿ ಪೊಲೀಸ್ ಠಾಣೆ ಧ್ವಂಸ, ಉಡುಪಿ ಗ್ಯಾಂಗ್ ವಾರ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ.

Former CM Kumaraswamy,  Opposition Leader R Ashok
ಮಾಜಿ ಸಿಎಂ ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕ ಆರ್ ಅಶೋಕ್ (ETV Bharat)

ಬೆಂಗಳೂರು: ಚನ್ನಗಿರಿ ಪೊಲೀಸ್ ಠಾಣೆ ಧ್ವಂಸ, ಉಡುಪಿ ಗ್ಯಾಂಗ್ ವಾರ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಅಶ್ವಥ್ ನಾರಾಯಣ್ ಸೇರಿ ಪ್ರತಿಪಕ್ಷ ನಾಯಕರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಅಧಿಕಾರಿಗಳಿಗೆ ನಿಯಂತ್ರಣ ಇಲ್ಲ: ಸರಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಯಾರು ಗೌರವ ಕೊಡುವ ವಾತಾವರಣವಿಲ್ಲ. ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಗೌರವವಿಲ್ಲ, ಯಾಕೆಂದರೆ ಪೊಲೀಸ್ ಅಧಿಕಾರಿಗಳನ್ನು ಆ ರೀತಿ ಬಳಕೆ ಮಾಡಿಕೊಳ್ಳುತ್ತಿದೆ ಸರಕಾರ. ಅದರಿಂದ ರಾಜ್ಯದಲ್ಲಿ ಕಾನೂನು ಸಂಪೂರ್ಣ ಕುಸಿತವಾಗಿದೆ. ಇದು ಸರಕಾರದ ಸ್ವಯಂಕೃತ ಅಪರಾಧ. ಈ ಸರಕಾರದ ಬಗ್ಗೆ ಅಧಿಕಾರಿಗಳಲ್ಲಿಯೂ ವಿಶ್ವಾಸವಿಲ್ಲ, ಜನತೆಯಲ್ಲಿಯೂ ವಿಶ್ವಾಸವಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.

ರಾಜೀನಾಮೆ ಕೊಟ್ಟು ಮನೆಗೆ ಹೋಗಿ: ಕಾಂಗ್ರೆಸ್ ಕೈಗೆ ಅಧಿಕಾರ ಕೊಟ್ಟರೆ, ರೌಡಿಗಳ ಕೈಯಲ್ಲಿ ಮಚ್ಚು ಲಾಂಗು, ಉಗ್ರರ ಕೈಯಲ್ಲಿ ಬಾಂಬು ಕೊಟ್ಟಂಗೆ. ಶಾಂತಿ, ಸುವ್ಯವಸ್ಥೆ, ಕಾನೂನು ಪರಿಪಾಲನೆಗೆ ಹೆಸರುವಾಸಿಯಾಗಿದ್ದ ಕರ್ನಾಟಕ @INCKarnataka ಆಡಳಿತದಲ್ಲಿ ಅಕ್ಷರಶಃ ರೌಡಿ ರಾಜ್ಯವಾಗಿ ಮಾರ್ಪಟ್ಟಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಸರ್ಕಾರ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದೇ ತಡ, ಭಯೋತ್ಪಾದಕರು, ರೌಡಿ ಶೀಟರ್ ಗಳು, ಕೊಲೆಗಡುಕರು, ಬಾಂಬು, ಮಚ್ಚು, ಲಾಂಗು ಹಿಡಿದು ರಾಜ್ಯದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಿದ್ದಾರೆ. ಚನ್ನಗಿರಿಯಲ್ಲಿ ಪೊಲೀಸ್ ಠಾಣೆ ಧ್ವಂಸ ಮಾಡಿರುವ ಘಟನೆ, ಉಡುಪಿಯಲ್ಲಿ ನಡುರಸ್ತೆಯಲ್ಲೇ ಗ್ಯಾಂಗ್ ವಾರ್ ನಡೆದಿರುವ ಘಟನೆ ಇವನ್ನೆಲ್ಲ ನೋಡುತ್ತಿದ್ದರೆ ರಾಜ್ಯದಲ್ಲಿ ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದ್ದಾರೆ.

ಸಿಎಂನವರೇ, ರಾಜ್ಯದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಹತ್ಯೆಗಳು, ಅತ್ಯಾಚಾರಗಳು, ಗ್ಯಾಂಗ್ ವಾರ್ ಗಳು, ಗಾಂಜಾ ಮಾರಾಟ ದಂಧೆಗಳು, ರೇವ್ ಪಾರ್ಟಿಗಳು, ಕೋಮು ಗಲಭೆಗಳು, ಗಲಾಟೆಗಳಿಂದ ಕರ್ನಾಟಕದ ಗೌರವ ಮಣ್ಣುಪಾಲಾಗುತ್ತಿದೆ. ನಿಮ್ಮ ಕೈಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಕನ್ನಡಿಗರು ನೆಮ್ಮದಿಯಿಂದ ಬದುಕಲು ಬಿಡಿ ಎಂದು ಟೀಕಿಸಿದ್ದಾರೆ.

ಇವರ ಪಾಪದ ಕೊಡ ತುಂಬಿದೆ: ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಮಾತನಾಡಿ, ರಾಜ್ಯದ ಜನ ಇವರಿಗೆ ಅಧಿಕಾರ ಕೊಟ್ಟರೂ ಆಡಳಿತ ನಿರ್ವಹಣೆಯಲ್ಲಿ ವಿಫಲ ಆಗಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಪೊಲೀಸ್ ವರ್ಗಾವಣೆಯಲ್ಲಿ ಹಸ್ತಕ್ಷೇಪ ನಡೀತಿದೆ. ಈ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬೇಕು ಅಂತ ರಾಜ್ಯಪಾಲರಿಗೆ ಆಗ್ರಹಿಸುತ್ತೇವೆ. ಇವರ ಪಾಪದ ಕೊಡ ತುಂಬಿದೆ. ಅಧಿಕಾರ ದುರ್ಬಳಕೆ, ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಜಾಸ್ತಿಯಾಗಿದೆ. ಎಲ್ಲವನ್ನೂ ರಾಜ್ಯಪಾಲರ ಗಮನಕ್ಕೆ ತರುತ್ತೇವೆ, ಸರ್ಕಾರದ ವಿರುದ್ಧ ಚಾಟಿ ಬೀಸುವಂತೆ ಮನವಿ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪದೇ ಪದೆ ವಿಫಲ ಆಗ್ತಿದ್ದಾರೆ. ಇವರ ಅವಧಿಯಲ್ಲಿ ಲಂಚ, ಕಮೀಷನ್, ತುಷ್ಟೀಕರಣವೇ ಎಲ್ಲೆಲ್ಲೂ ನಡೀತಿದೆ. ತುಷ್ಟೀಕರಣ ಮೂಲಕ ಸಮಾಜ ವಿಭಜಿಸುವ ಪ್ರಯತ್ನ ಮಾಡ್ತಿದ್ದಾರೆ. ಏನು ಮಾಡಿದರೂ ಕೇರ್ ಇಲ್ಲ ಇವರಿಗೆ. ಪೊಲೀಸ್ ಠಾಣೆ ಧ್ವಂಸ ಮಾಡಿದ್ರೂ, ಠಾಣೆಗೆ ಬೆಂಕಿ ಹಾಕಿದರೂ ನೋಡ್ಕೊಂಡು ಇರ್ತೀವಿ ಅನ್ನೋ ತರಹ ಇದ್ದಾರೆ ಇವರು. ಸಿಎಂ, ಗೃಹ ಸಚಿವರು ನಿಷ್ಕ್ರಿಯರಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ನಿಮ್ಮ ಸರ್ಕಾರಕ್ಕೆ ಪುಂಡರನ್ನು ಬಂಧಿಸುವ ಗಂಡೆದೆ ಇಲ್ಲವೇ?:ಸುನೀಲ್ ಕುಮಾರ್

ಸಣ್ಣ ಕಾರಣಕ್ಕೆ ಶಾಸಕರನ್ನು ಬಂಧಿಸಲು ದಂಡು ಕಳುಹಿಸುವ ನಿಮ್ಮ ಸರ್ಕಾರಕ್ಕೆ ಪುಂಡರನ್ನು ಬಂಧಿಸುವ ಗಂಡೆದೆ ಇಲ್ಲವೇ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಆರೋಪಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿರುವ ಅವರು, ಶಿಕ್ಷಣ ಕ್ಷೇತ್ರ ಮಣಿಪಾಲದಲ್ಲಿ ರಾಜಾರೋಷವಾಗಿ ರೌಡಿಗಳು ಗ್ಯಾಂಗ್ ವಾರ್ ನಡೆಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಕಾರುಗಳನ್ನು ಬಳಸಿ ಕಾದಾಡಿದ್ದಾರೆ. ಕ್ರಿಮಿನಲ್​ಗಳಿಗೆ ಆಳುವ ಸರ್ಕಾರದ ಕಾನೂನಿನ ಭಯ ಇಲ್ಲದಂತಾಗಿದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ.

ಉಡುಪಿ, ದಕ್ಷಿಣ ಕನ್ನಡದಂಥ‌ ಜಿಲ್ಲೆಗಳಲ್ಲಿ ಮಾತ್ರವಲ್ಲ ಇಡಿ ರಾಜ್ಯದಲ್ಲಿ ಈಗ ಕಾನೂನು - ಸುವ್ಯವಸ್ಥೆ ಕುಸಿದು ಬಿದ್ದಿದೆ. ಸಿದ್ದರಾಮಯ್ಯನವರೇ ನಿಮಗೊಂದು ನೇರ ಸವಾಲು ಈ ಘಟನೆಗೆ ಕಾರಣವಾದ ಗ್ಯಾಂಗ್ ಸ್ಟಾರ್ ಗಳನ್ನು ಎಷ್ಟು ಗಂಟೆಯೊಳಗೆ ಬಲಿ ಹಾಕುತ್ತೀರಿ? ಸಣ್ಣ ಕಾರಣಕ್ಕೆ ಶಾಸಕರನ್ನು ಬಂಧಿಸಲು ದಂಡು ಕಳುಹಿಸುವ ನಿಮ್ಮ ಸರ್ಕಾರಕ್ಕೆ ಪುಂಡರನ್ನು ಬಂದಿಸುವ ಗಂಡೆದೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂಓದಿ:ಚನ್ನಗಿರಿಯಲ್ಲಿ ಆರೋಪಿ ಸಾವು ಪ್ರಕರಣ: 5 ವಾಹನಗಳಿಗೆ ಹಾನಿ, 11 ಪೊಲೀಸ್ ಸಿಬ್ಬಂದಿಗೆ ಗಾಯ - DAVANAGERE SP REACTION

ETV Bharat Logo

Copyright © 2024 Ushodaya Enterprises Pvt. Ltd., All Rights Reserved.