ETV Bharat / state

ಸಚಿವರ ವಿರುದ್ಧ ಕೋರ್ಟಿನಲ್ಲಿನ ಕೇಸ್ ಚರ್ಚೆಗೆ ಪಟ್ಟು : ಕಾಂಗ್ರೆಸ್ ನಿಲುವಳಿ ಸೂಚನೆ ತಿರಸ್ಕರಿಸಿದ ಸಭಾಪತಿ ಹೊರಟ್ಟಿ

author img

By

Published : Dec 15, 2021, 4:36 PM IST

Updated : Dec 15, 2021, 6:39 PM IST

ಪ್ರತಿಪಕ್ಷದ ನಿಲುವಳಿ ಸೂಚನೆ ಕುರಿತು ಪರ-ವಿರುದ್ಧದ ಹೇಳಿಕೆಗಳನ್ನು ಆಲಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಕಲಾಪ ನಿಯಮಾವಳಿ ಕಲಂ 62 ರ ಪ್ರಕಾರ ನ್ಯಾಯಾಲಯದಲ್ಲಿ‌ ವಿಚಾರಣಾ ಹಂತದಲ್ಲಿರುವ ಕ್ರಿಮಿನಲ್ ಪ್ರಕರಣಗಳ ವಿಷಯದ ಮೇಲೆ‌ ಚರ್ಚೆಗೆ ಅವಕಾಶ ನೀಡುವಂತಿಲ್ಲ. ಹಾಗಾಗಿ, ಕಾಂಗ್ರೆಸ್‌ನ ನಾರಾಯಣಸ್ವಾಮಿ ಮಂಡಿಸಿದ ನಿಲುವಳಿ ಸೂಚನೆಯನ್ನು ತಿರಸ್ಕರಿಸಿ ರೂಲಿಂಗ್ ನೀಡಿ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿದರು..

Speaker Basavaraj horatti
ಸಭಾಪತಿ ಬಸವರಾಜ ಹೊರಟ್ಟಿ

ಬೆಂಗಳೂರು/ಬೆಳಗಾವಿ: ಬಿಜೆಪಿ ಸಚಿವರೊಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣದಡಿ ಎಫ್ಐಆರ್ ದಾಖಲಿಸಲು ನ್ಯಾಯಾಲಯ ಆದೇಶ ನೀಡಿದೆ. ಈ ಸಂಬಂಧ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಕಾಂಗ್ರೆಸ್ ಸಚೇತಕ ನಾರಾಯಣಸ್ವಾಮಿ ಮಂಡಿಸಿದ ನಿಲುವಳಿ ಸೂಚನೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ತಿರಸ್ಕರಿಸಿ ರೂಲಿಂಗ್ ನೀಡಿದರು.

ಪರಿಷತ್‌ನಲ್ಲಿ ನಿಲುವಳಿ ಸೂಚನೆ ಮಂಡಿಸಿದ ಕಾಂಗ್ರೆಸ್‌ ಮುಖ್ಯ ಸಚೇತಕ ನಾರಾಯಣಸ್ವಾಮಿ..

ವಿಧಾನ ಪರಿಷತ್ ಕಲಾಪದಲ್ಲಿ ಹಕ್ಕು ಬಾಧ್ಯತಾ ಸಮಿತಿಯ 98ನೇ ವರದಿ ಮಂಡನೆ ಬಳಿಕ ನಿಲುವಳಿ ಸೂಚನೆ ಮಂಡಿಸಿದ ನಾರಾಯಣಸ್ವಾಮಿ, ಸಚಿವರೊಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿ ಆರೋಪಪಟ್ಟಿ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ. ಇಂತಹ ಸಚಿವರು ಸಂಪುಟದಲ್ಲಿ ಇರಬೇಕಾ ಎನ್ನುವ ವಿಷಯ ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ಕೋರಿದರು.

ಪ್ರತಿಪಕ್ಷ ಸಚೇತಕ ನಾರಾಯಣಸ್ವಾಮಿಯವರ ಬೇಡಿಕೆಗೆ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಪ್ರಕರಣ ಕುರಿತು ಸದನದಲ್ಲಿ ಚರ್ಚಿಸಲು ಬರುವುದಿಲ್ಲ. ಹಾಗಾಗಿ, ನಿಲುವಳಿ ಸೂಚನೆ ಮಂಡನೆ ಮಾಡುವುದೇ ಸರಿಯಲ್ಲ. ಇದಕ್ಕೆ ಅವಕಾಶ ಕೊಡಬಾರದು ಎಂದರು.

ಪ್ರತಿಪಕ್ಷದ ನಿಲುವಳಿ ಸೂಚನೆ ಕುರಿತಂತೆ ನಡೆದ ಚರ್ಚೆ

ಸರ್ಕಾರದ ಆಕ್ಷೇಪಕ್ಕೆ ಕಾಂಗ್ರೆಸ್ ಹಿರಿಯ ಸದಸ್ಯ ಬಿ.ಕೆ ಹರಿಪ್ರಸಾದ್ ಕಿಡಿಕಾರಿದರು. ನಿಯಮಾವಳಿಯ ಪುಸ್ತಕದಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವಾಗಲೇ ಚರ್ಚೆಗೆ ಅವಕಾಶ ಕಲ್ಪಿಸುವ ಅವಕಾಶವಿರುವ ಪ್ರಸ್ತಾಪ ಮಾಡಿ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿದರು.

ಇದಕ್ಕೆ ಮತ್ತೆ ಆಕ್ಷೇಪ ಎತ್ತಿದ ಸಚಿವ ಮಾಧುಸ್ವಾಮಿ, ಆರೋಪಿಗಳೆಲ್ಲ ಅಪರಾಧಿಗಳಲ್ಲ, ನ್ಯಾಯಾಲಯ ಈ ಪ್ರಕರಣದಲ್ಲಿ ಯಾರನ್ನೂ ಅಪರಾಧಿ ಎಂದು ಹೇಳಿಲ್ಲ, ಪ್ರಕರಣ ದಾಖಲಾಗಿದೆ. ವಿಚಾರಣೆ ನಡೆಯುತ್ತಿದೆ. ತೀರ್ಪು ಹೊರ ಬರುವವರೆಗೂ ಯಾರೂ ಅವರನ್ನು ಅಪರಾಧಿ ಎನ್ನುವಂತಿಲ್ಲ.

ಆಪಾದಿತ ಸಚಿವರು ಮಂತ್ರಿಯಾಗಿದ್ದ ವೇಳೆ ದಾಖಲಾಗಿರುವ ಪ್ರಕರಣ ಇದಲ್ಲ. ಚುನಾವಣೆಗೆ ನಿಂತಾಗ ಎಲ್ಲಾ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಕೊಡಲಾಗಿದೆ. ಹಾಗೊಂದು ವೇಳೆ ಶಿಕ್ಷಾರ್ಹ ಅಪರಾಧದ ಆರೋಪಕ್ಕೆ ಗುರಿಯಾದವರು ಅಧಿಕಾರದಲ್ಲಿರಬಾರದು ಎಂದಿದ್ದರೆ ಸ್ಪರ್ಧೆ ಮಾಡಲು ಆಯೋಗ ಅವಕಾಶ ಕೊಡುತ್ತಿರಲಿಲ್ಲ. ಅಂದೇ ನಾಮಪತ್ರವನ್ನು ತಿರಸ್ಕಾರ ಮಾಡುತ್ತಿತ್ತು. ಹಾಗಾಗಿ, ವಿಚಾರಣಾ ಹಂತದಲ್ಲಿರುವ ವಿಷಯದ ಕುರಿತು ಚರ್ಚೆಗೆ ಅವಕಾಶ ನೀಡಬಾರದು. ನಿಲುವಳಿ ಸೂಚನೆ ತಿರಸ್ಕರಿಸಬೇಕು ಎಂದು ಸಭಾಪತಿಗಳಿಗೆ ಮನವಿ ಮಾಡಿದರು.

ಪ್ರತಿಪಕ್ಷಗಳ ನಿಲುವಳಿ ಮೇಲಿನ ಚರ್ಚೆಗೆ ಆಕ್ಷೇಪ ವ್ಯಕ್ತಪಡಿಸಿದ ಕಾನೂನು ಸಚಿವ ಮಾಧುಸ್ವಾಮಿ

ಈ ವೇಳೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಸಚಿವರೊಬ್ಬರ ವಿರುದ್ಧ ಆರೋಪವಿದೆ. ಆದರೆ, ಅವರನ್ನು ನಾವು ಯಾರೂ ಅಪರಾಧಿ ಎನ್ನಲ್ಲ. ಆರೋಪಿಯಷ್ಟೇ.. ಆದರೆ, ನ್ಯಾಯಾಧೀಶರೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಿರುವುದರಿಂದ ಸೀಮಿತ ಪರಿದಿಯಲ್ಲಿ ಸಚಿವರ ವಿರುದ್ಧದ ಆರೋಪ ಕುರಿತು ಚರ್ಚಿಸಲು ಅವಕಾಶ ನೀಡಬೇಕು. ನೈತಿಕ ಕಾರಣಕ್ಕಾಗಿ ಅವಕಾಶ ನೀಡಿ ಎಂದರು.

ಪ್ರತಿಪಕ್ಷದ ನಿಲುವಳಿ ಸೂಚನೆ ಕುರಿತು ಪರ-ವಿರುದ್ಧದ ಹೇಳಿಕೆಗಳನ್ನು ಆಲಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಕಲಾಪ ನಿಯಮಾವಳಿ ಕಲಂ 62 ರ ಪ್ರಕಾರ ನ್ಯಾಯಾಲಯದಲ್ಲಿ‌ ವಿಚಾರಣಾ ಹಂತದಲ್ಲಿರುವ ಕ್ರಿಮಿನಲ್ ಪ್ರಕರಣಗಳ ವಿಷಯದ ಮೇಲೆ‌ ಚರ್ಚೆಗೆ ಅವಕಾಶ ನೀಡುವಂತಿಲ್ಲ. ಹಾಗಾಗಿ, ಕಾಂಗ್ರೆಸ್‌ನ ನಾರಾಯಣಸ್ವಾಮಿ ಮಂಡಿಸಿದ ನಿಲುವಳಿ ಸೂಚನೆಯನ್ನು ತಿರಸ್ಕರಿಸಿ ರೂಲಿಂಗ್ ನೀಡಿ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.

ಕಲಾಪ ಮುಂದೂಡಿಕೆಯಾದ ನಂತರ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಕಾಲದಲ್ಲಿ ಬಂದು ನಮ್ಮನ್ನು ರಕ್ಷಣೆ ಮಾಡಿದಿರಿ ಧನ್ಯವಾದಗಳು ಎನ್ನುತ್ತಾ ಸಚಿವ ಮಾಧುಸ್ವಾಮಿ ಕೈಕುಲುಕಿದರು.

ಇದನ್ನೂ ಓದಿ : ಕೋಟ ಶ್ರೀನಿವಾಸ ಪೂಜಾರಿ ಗೆಲುವು ಚಿಂತಕರ ಚಾವಡಿಗೆ ಮೆರುಗು: ಪರಿಷತ್‌ನಲ್ಲಿ ಪಕ್ಷಾತೀತವಾಗಿ ಅಭಿನಂದನೆ!

Last Updated :Dec 15, 2021, 6:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.