ETV Bharat / state

ಕುಮಾರಸ್ವಾಮಿ ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ, ಯಾವಾಗಲೂ ಹಿಟ್ ಅಂಡ್ ರನ್ ಕೇಸ್: ಸಿಎಂ ಸಿದ್ದರಾಮಯ್ಯ

author img

By

Published : Aug 14, 2023, 3:55 PM IST

ಹೆಚ್​ಡಿಕಿ ವಿರುದ್ಧ ಸಿಎಂ ವಾಗ್ದಾಳಿ
ಹೆಚ್​ಡಿಕಿ ವಿರುದ್ಧ ಸಿಎಂ ವಾಗ್ದಾಳಿ

ಪೆನ್​​ಡ್ರೈವ್​ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಹೆಚ್ ​ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು: ಕುಮಾರಸ್ವಾಮಿ ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಪೆನ್​ಡ್ರೈವ್ ಇಟ್ಟುಕೊಂಡಿದ್ದೇನೆ ಅನ್ನೋದು‌ ಸುಮ್ಮನೆ ಜೋಬಲ್ಲಿ ಇಟ್ಕೊಳ್ತಾರೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಭಾರತ್ ಜೋಡೋ ಸಭಾಂಗಣದಲ್ಲಿ ಕೆಪಿಸಿಸಿ ಸರ್ವ ಸದಸ್ಯರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಯಾವಾಗಲೂ ಹಿಟ್ ಅಂಡ್ ರನ್ ಕೇಸ್. ಬರೀ ಸುಳ್ಳು ಆರೋಪ ಮಾಡ್ತಾರೆ ಎಂದಿದ್ದಾರೆ.

ಇವರ ಕಾಲದಲ್ಲಿ ವರ್ಗಾವಣೆ ಆಗಿಲ್ಲವಾ?. ಹೊಸ ಸರ್ಕಾರ ಬಂದಾಗ ಸಹಜವಾಗಿನೇ ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ಆಗುತ್ತದೆ. ಪೆನ್​ಡ್ರೈವ್ ಇಟ್ಟುಕೊಂಡಿದ್ದೇನೆ ಅನ್ನೋದು, ಅದನ್ನು ಕಿಸೆಯಿಂದ ತೆಗೆದು ತೋರಿಸುವುದು ಬೇರೆ. ಬರೀ ಸುಳ್ಳು ಆರೋಪ ಮಾಡುವುದು. ತನಿಖೆ ಶುರುವಾಗುತ್ತಿದ್ದಂತೆ ಬಿಜೆಪಿಯವರಿಗೆ ನಡುಕ ಶುರುವಾಗಿದೆ. ವರದಿ ಬರಲಿ, ಎಲ್ಲವೂ ಗೊತ್ತಾಗಲಿದೆ. ತನಿಖಾ ವರದಿ ಬರಲಿ, ಅವರ ಬಂಡವಾಳ ಎಲ್ಲ ಬಯಲಾಗುತ್ತದೆ ಎಂದು ಸಿಎಂ ವಾಗ್ದಾಳಿ ನಡೆಸಿದರು.

34 ವರ್ಷಗಳ ಬಳಿಕ‌ ದೊಡ್ಡ ಮಟ್ಟದಲ್ಲಿ ನಮಗೆ ಜನ ಆಶೀರ್ವಾದ ಮಾಡಿದ್ದಾರೆ. ಇತಿಹಾಸ ನೋಡಿದರೆ ಬಿಜೆಪಿ 35-36%ಗಿಂತ ಹೆಚ್ಚು ಮತಪಾಲು ಗಳಿಸೇ ಇಲ್ಲ.‌ ಜೆಡಿಎಸ್​ನವರು ಪಂಚ ರತ್ನ ಹೇಳಿ ಇಡೀ ರಾಜ್ಯದಲ್ಲಿ ಓಡಾಡಿ ಭ್ರಮೆ ಹುಟ್ಟಿಸುವ ಕೆಲಸ ಮಾಡಿದ್ದರು. ಅವರನ್ನು ರಾಜ್ಯದ ಜನ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಮೋದಿ ಬಂದರೆ ಗೆಲ್ಲುತ್ತೇವೆ ಎಂಬುದು ಬಿಜೆಪಿಯವರ ಆಶಾಭಾವನೆ ಆಗಿತ್ತು. ಆದರೆ ರಾಜ್ಯದ ಜನರು ಬುದ್ಧಿವಂತರು. ಅವರ ಎಲ್ಲಾ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿದ್ದಾರೆ.

ಭಾರತ್ ಜೋಡೋ ಮಾಡಿದಲ್ಲಿ ನಾವು ಗೆದ್ದಿದ್ದೇವೆ: 28 ಬಾರಿ ಪ್ರಧಾನಿ ಮೋದಿ ಪ್ರಚಾರ ಮಾಡಿದ್ದಾರೆ. ಪ್ರಧಾನಿ ಮೋದಿ ಎಲ್ಲಿ ರೋಡ್ ಶೋ, ಸಮಾವೇಶ ಮಾಡಿದ್ದರು ಅಲ್ಲು ಬಿಜೆಪಿ ಸೋತಿದೆ. ರಾಹುಲ್ ಗಾಂಧಿ ಎಲ್ಲೆಲ್ಲಿ ಭಾರತ್ ಜೋಡೋ ಮಾಡಿದ್ದಾರೆ, ಅಲ್ಲಿ ನಾವು ಬಹುತೇಕ ಕಡೆ ಗೆದ್ದಿದ್ದೇವೆ. ಇದು ಮೋದಿ ರೋಡ್ ಶೋ ಮತ್ತು ರಾಹುಲ್ ಗಾಂಧಿ ಭಾರತ್ ಜೋಡೋ ನಡುವಿನ ವ್ಯತ್ಯಾಸ ಆಗಿದೆ ಎಂದು ವಿವರಿಸಿದರು‌. ರಾಜ್ಯದ ಈ ಫಲಿತಾಂಶದಿಂದ ಇಡೀ ದೇಶದಲ್ಲಿ ಸಂಚಲನ ಆರಂಭವಾಗಿದೆ. ಎಲ್ಲರಲ್ಲೂ ಒಂದು ವಿಶ್ವಾಸ ಮೂಡಿದೆ. ಎಲ್ಲಾ ರಾಜ್ಯಗಳಲ್ಲಿ ಒಂದು ವೈಬ್ರೇಷನ್ ಆರಂಭವಾಗಿದೆ. ಆ ಕೀರ್ತಿ ನಮ್ಮ ರಾಜ್ಯದ ಜನರಿಗೆ ಸಿಗಬೇಕು. ಜನರು ಬಹಳ ನಿರೀಕ್ಷೆ ಇಟ್ಟಿದ್ದಾರೆ. ಬಿಜೆಪಿ ಸರ್ಕಾರದಿಂದ ಜನ ಬೇಸತ್ತು ಹೋಗಿದ್ದರು ಅಂತಾ ಸಿಎಂ ಟೀಕಿಸಿದರು.

ಆರ್​ಎಸ್ಎಸ್ ಹಿಡನ್ ಅಜೆಂಡಾ: ಬೆಲೆ ಏರಿಕೆ, ಭ್ರಷ್ಟಾಚಾರ, ಅಭಿವೃದ್ಧಿ ಕುಂಠಿತ, ನಿರುದ್ಯೋಗದಿಂದ ಜನರಲ್ಲಿ ಆಕ್ರೋಶ ಉಂಟಾಗಿತ್ತು. ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಧಕ್ಕೆ ತರುವ ಕೆಲಸ ಮಾಡಿದರು. ಆರ್​ಎಸ್ಎಸ್ ಹಿಡನ್ ಅಜೆಂಡಾ ಎಲ್ಲಾ ಕಡೆ ಜಾರಿಗೆ ಯತ್ನಿಸಿದರು. ಎನ್​ಇಪಿ ಕರಡು ತಯಾರಾಗಿದ್ದೇ ಆರ್​ಎಸ್ಎಸ್ ಕಚೇರಿಯಲ್ಲಿ. ಮುಂದಿನ ವರ್ಷದಿಂದ ಹೊಸ ಶಿಕ್ಷಣ ನೀತಿ ಬದಲಾವಣೆ ಮಾಡಿ ಸಂವಿಧಾನ ರೀತಿಯಲ್ಲಿ ಶಿಕ್ಷಣ ಕೊಡಲು ಪ್ರಯತ್ನ ಮಾಡುತ್ತೇವೆ ಎಂದು ಇದೇ ವೇಳೆ ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿಗರು ಮನುವಾದಿಗಳಾಗಿದ್ದಾರೆ. ಸಂವಿಧಾನ ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ‌. ಸಂವಿಧಾನ ರಕ್ಷಣೆ ಮಾಡುವಲ್ಲಿ ಕಾಂಗ್ರೆಸ್​ಗೆ ಹೆಚ್ಚಿನ ಹೊಣೆ ಇದೆ. ಪಂಚ ಗ್ಯಾರಂಟಿ ಯೋಜನೆಗಳಿಂದ ಜನರ ಆದಾಯ ಹೆಚ್ಚಾಗಲಿದೆ. ಆರ್ಥಿಕ ಚಟುವಟಿಕೆ ಹೆಚ್ಚಾಗಲಿದೆ. ಜಿಡಿಪಿ ಹೆಚ್ಚಾಗಲಿದೆ ಎಂದರು.

ಪ್ರಧಾನಿ ಮೋದಿ ಎಕ್ಸ್​ಪೋಸ್ ಆಗಿದ್ದಾರೆ: ಬಿಜೆಪಿ ದೇಶವನ್ನು ದಿವಾಳಿ ಮಾಡಿದೆ. ಲೋಕಸಭೆ ಚುನಾವಣೆಯಲ್ಲೂ ಸೋಲುತ್ತೇವೆ ಎಂಬ ಭಯ ಶುರುವಾಗಿದೆ. ಮೋದಿ ಕುರ್ಚಿ ಅಲ್ಲಾಡಲು ಶುರುವಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 100% ಸೋತೇ ಸೋಲುತ್ತದೆ. ಮೋದಿ ಎಕ್ಸ್​ಪೋಸ್ ಆಗಿದ್ದಾರೆ ಎಂದು ಟೀಕಿಸಿದರು. ಮೊನ್ನೆ ಮಣಿಪುರ ಘಟನೆ ಬಗ್ಗೆ ಮೋದಿ ಬರೇ ಚುನಾವಣೆ ಭಾಷಣ ಮಾಡಿದ್ದಾರೆ. ಮಣಿಪುರದ ವಾಸ್ತಾವಾಂಶದ ಬಗ್ಗೆ ಏನೂ ಹೇಳಿಲ್ಲ. ಲಘುವಾಗಿ ಉತ್ತರ ಕೊಟ್ಟರು.

ಜೆಡಿಎಸ್ ಜೊತೆ ಹೊಂದಾಣಿಕೆ ಮಾಡುತ್ತಿದ್ದಾರೆ: ಲೋಕಸಭೆ ಚುನಾವಣೆಯಲ್ಲಿ ಇದೇ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ವಿಧಾನಸಭೆ ಚುನಾವಣೆಯಲ್ಲಿ‌ದ್ದ ಜೋಷ್​ನಲ್ಲೇ ಇರಬೇಕು. ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗುತ್ತಿದೆ. ಕಳೆದ ಲೋಕಸಭೆ ಚುನಾವಣೆ ವೇಳೆ 25 ಸ್ಥಾನ ಪಡೆದಿದ್ದ ಬಿಜೆಪಿಯವರು ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದ್ರೆ ನೀವೇ ಅರ್ಥಮಾಡಿಕೊಳ್ಳಿ, ಅವರು ಯಾವ ಸ್ಥಿತಿಗೆ ಹೋಗಿದ್ದಾರೆ ಎಂದು. ಅವರಿಗೆ ಭಯ ಶುರುವಾಗಿದೆ ಎಂದು ವಾಗ್ದಾಳಿ ಸಿಎಂ ನಡೆಸಿದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಗ್ಯಾರಂಟಿಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ: R Ashok: ದೇಶ ವಿಭಜನೆಗೆ ಅಂದಿನ ಕಾಂಗ್ರೆಸ್ ಪಕ್ಷ ನೇರ ಕಾರಣ: ಆರ್.ಅಶೋಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.