ETV Bharat / bharat

ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಲೇ ಕುಸಿದು ಬಿದ್ದು ಬಾಲಕ ಸಾವು - BOY DIES IN GYM

author img

By ETV Bharat Karnataka Team

Published : May 15, 2024, 10:35 PM IST

ಛತ್ತೀಸ್​ಗಢದ ರಾಯಪುರದಲ್ಲಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ 17 ವರ್ಷದ ಬಾಲಕನೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

Representative image
ಸಾಂದರ್ಭಿಕ ಚಿತ್ರ (ETV Bharat)

ರಾಯಪುರ (ಛತ್ತೀಸ್​ಗಢ): ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಲೇ ಕುಸಿದು ಬಿದ್ದು 17 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಛತ್ತೀಸ್​ಗಢ ರಾಜಧಾನಿ ರಾಯಪುರದಲ್ಲಿ ಬುಧವಾರ ನಡೆದಿದೆ. ಮೃತನನ್ನು ಸತ್ಯಂ ರಹಗಡಲೆ ಎಂದು ಗುರುತಿಸಲಾಗಿದೆ.

ಇಲ್ಲಿನ ಖಮತ್ರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಭಾನ್‌ಪುರಿ ನಿವಾಸಿಯಾದ ಸತ್ಯಂ ನಿತ್ಯ ಜಿಮ್​ಗೆ ಹೋಗುತ್ತಿದ್ದ. ಎಂದಿನಂತೆ ಬುಧವಾರ ಬೆಳಗ್ಗೆ ಕೂಡ ಹೋಗಿದ್ದು, ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದಾದ ಬಳಿಕ ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಅಷ್ಟರಲ್ಲೇ, ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸ್​ ಅಧಿಕಾರಿ ಶಿವನಾರಾಯಣ್ ಸಿಂಗ್ ತಿಳಿಸಿದ್ದಾರೆ.

ಸದ್ಯ ಯುವಕ ಸತ್ಯಂ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇದರ ವೈದ್ಯಕೀಯ ವರದಿ ಬಂದ ಬಳಿಕವೇ ಸಾವಿನ ನಿಖರ ಮಾಹಿತಿ ತಿಳಿಯಲಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಒಂದು ತಿಂಗಳ ಹಿಂದೆ ಜಗದಲ್‌ಪುರದಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ತರಬೇತಿ ನಿರತ ಐಪಿಎಸ್ ಅಧಿಕಾರಿ ಉದಿತ್‌ ಪುಷ್ಕರ್‌ ಜಿಮ್‌ನಲ್ಲಿ ವರ್ಕೌಟ್‌ ಮಾಡುವಾಗ ಅವರ ಆರೋಗ್ಯ ಹದಗೆಟ್ಟಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನಂತರ ಅವರ ಆರೋಗ್ಯ ಸ್ಥಿತಿ ಸುಧಾರಿಸಿತ್ತು.

ನಿಯಮಿತವಾಗಿ ವ್ಯಾಯಾಮ ಮಾಡದ ಜನರು ಇದ್ದಕ್ಕಿದ್ದಂತೆ ವ್ಯಾಯಾಮ ಮಾಡಲು ಪ್ರಾರಂಭಿಸಿದರೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಒಳಗಾಗುವ ಅಪಾಯ ಇರುತ್ತದೆ. ಹುರುಪಿನ ವ್ಯಾಯಾಮ ಸಹ ಸಾಮಾನ್ಯವಾಗಿ ಹಾನಿ ಉಂಟುಮಾಡಬಹುದು. ತೀವ್ರವಾದ ದೈಹಿಕ ಚಟುವಟಿಕೆಯನ್ನು ಕೈಗೊಳ್ಳುವ ಮೊದಲು ಆರೋಗ್ಯ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ.

ಇದನ್ನೂ ಓದಿ: ಜಿಮ್​ನಲ್ಲಿ ವ್ಯಾಯಾಮ ಮಾಡುತ್ತಿದ್ದ ಡಾಕ್ಟರ್ ​ಹಠಾತ್​ ಹೃದಯಾಘಾತದಿಂದ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.