ETV Bharat / international

2024ರಲ್ಲಿ ಜಾಗತಿಕ ಕಚ್ಚಾ ತೈಲ ಬೇಡಿಕೆ ಕುಸಿತ ಸಾಧ್ಯತೆ: ಐಇಎ ಅಂದಾಜು - oil demand

author img

By ETV Bharat Karnataka Team

Published : May 15, 2024, 5:04 PM IST

2024ರಲ್ಲಿ ಜಾಗತಿಕವಾಗಿ ಕಚ್ಚಾ ತೈಲದ ಬೇಡಿಕೆ ಕಡಿಮೆಯಾಗಬಹುದು ಎಂದು ಐಇಎ ಅಂದಾಜು ಮಾಡಿದೆ.

global oil demand
global oil demand (ians)

ನವದೆಹಲಿ: ಅಭಿವೃದ್ಧಿ ಹೊಂದಿದ ಒಇಸಿಡಿ (Organisation for Economic Co-operation and Development) ಒಕ್ಕೂಟದ ದೇಶಗಳಲ್ಲಿ ಆರ್ಥಿಕ ಕುಸಿತದ ಸಾಧ್ಯತೆ ಇರುವುದರಿಂದ 2024 ರಲ್ಲಿ ಜಾಗತಿಕವಾಗಿ ಕಚ್ಚಾ ತೈಲದ ಬೇಡಿಕೆ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಅಂದಾಜು ಮಾಡಿದೆ. ಹಾಗೆಯೇ ವರ್ಷದ ತೈಲ ಬೇಡಿಕೆಯ ಅಂದಾಜನ್ನು ದಿನಕ್ಕೆ 14 ಲಕ್ಷ ಬ್ಯಾರೆಲ್​ಗಳಿಂದ (ಬಿಪಿಡಿ) 11 ಲಕ್ಷ ಬಿಪಿಡಿಗೆ ಐಇಎ ಇಳಿಸಿದೆ.

ಔದ್ಯೋಗಿಕ ಚಟುವಟಿಕೆಗಳಲ್ಲಿನ ನಿಧಾನಗತಿ ಮತ್ತು ಕಡಿಮೆ ತೀವ್ರತೆಯ ಚಳಿಗಾಲದ ಕಾರಣಗಳಿಂದ 2024ರಲ್ಲಿ ತೈಲ ಬಳಕೆ ಕಡಿಮೆಯಾಗಲಿದೆ ಎಂದು ಐಇಎ ತನ್ನ ಮಾಸಿಕ ತೈಲ ವರದಿಯಲ್ಲಿ ತಿಳಿಸಿದೆ. ಅಲ್ಲದೆ ಡೀಸೆಲ್ ಚಾಲಿತ ಕಾರುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಕೂಡ ತೈಲ ಬೇಡಿಕೆ ಕಡಿಮೆಯಾಗಲು ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದಾಗ್ಯೂ, ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯಾಗಿರುವ ಒಪೆಕ್ 2024 ರಲ್ಲಿ ವಿಶ್ವ ತೈಲ ಬೇಡಿಕೆ ದಿನಕ್ಕೆ 2.25 ಮಿಲಿಯನ್ ಬ್ಯಾರೆಲ್​ಗೆ (ಬಿಪಿಡಿ) ಹೆಚ್ಚಾಗಲಿದೆ ಎಂದು ನಿರೀಕ್ಷೆ ಮಾಡಿದೆ. ಬೇಡಿಕೆ ಹೆಚ್ಚಾದಲ್ಲಿ ಬೆಲೆಯೂ ಹೆಚ್ಚಾಗುವ ನಿರೀಕ್ಷೆ ಒಪೆಕ್​ನದ್ದಾಗಿದೆ. 2025 ರಲ್ಲಿ ತೈಲ ಬೇಡಿಕೆ 1.2 ಮಿಲಿಯನ್ ಬಿಪಿಡಿ ಆಗಿರಲಿದೆ ಎಂದು ಐಇಎ ಅಂದಾಜಿಸಿದೆ. ಇದು 2024 ರ ಅಂದಾಜಿಗಿಂತ ಸ್ವಲ್ಪ ಹೆಚ್ಚಾಗಿದೆ.

ಭಾರತವು ತನ್ನ ಕಚ್ಚಾ ತೈಲ ಅಗತ್ಯದ ಶೇಕಡಾ 85 ಕ್ಕಿಂತ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ಜಾಗತಿಕ ತೈಲ ಬೆಲೆಗಳು ಹೆಚ್ಚಾದಲ್ಲಿ ದೇಶದ ತೈಲ ಆಮದು ಬಿಲ್​ ಏರಿಕೆಯಾಗುತ್ತದೆ ಮತ್ತು ದೊಡ್ಡ ಪ್ರಮಾಣದಲ್ಲಿ ವಿದೇಶಿ ವಿನಿಮಯ ಹೊರಗೆ ಹೋಗುವುದರಿಂದ ಭಾರತೀಯ ರೂಪಾಯಿ ದುರ್ಬಲವಾಗುತ್ತದೆ. ಕಚ್ಚಾ ತೈಲದ ಹೊರತಾಗಿ ಎಲ್​ಪಿಜಿ ಹಾಗೂ ಇತರ 48.1 ಮಿಲಿಯನ್ ಟನ್ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಭಾರತ 23.4 ಬಿಲಿಯನ್ ಡಾಲರ್ ಖರ್ಚು ಮಾಡಿದೆ.

ಪಾಶ್ಚಿಮಾತ್ಯ ದೇಶಗಳ ಒತ್ತಡವನ್ನು ಲೆಕ್ಕಿಸದೆ ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ 2023-24ನೇ ಆರ್ಥಿಕ ವರ್ಷದಲ್ಲಿ ಭಾರತದ ತೈಲ ಆಮದು ಬಿಲ್​ನಲ್ಲಿ ಶೇ 16ರಷ್ಟು ಉಳಿತಾಯವಾಗಿದೆ. 2023-24ರಲ್ಲಿ ಭಾರತವು ಆಮದು ಮಾಡಿಕೊಂಡ ಒಟ್ಟು ತೈಲದ ಪ್ರಮಾಣ 232.5 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ಆಗಿದ್ದು, 2022-23ರಲ್ಲಿ ಆಗಿದ್ದ 232.7 ಎಂಎಂಟಿಗೆ ಹೋಲಿಸಿದರೆ ಇದು ಹೆಚ್ಚು ಕಡಿಮೆ ಅದೇ ಮಟ್ಟದಲ್ಲಿದೆ.

ಇದನ್ನೂ ಓದಿ : ಇಂಡೋನೇಷ್ಯಾದಲ್ಲಿ ಲಾವಾ ಪ್ರವಾಹದಿಂದ 58 ಜನರ ಸಾವು; ಹಲವರು ನಾಪತ್ತೆ - INDONESIA FLOODS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.