ETV Bharat / entertainment

ಅಂಬರೀಶ್ ಜನ್ಮದಿನ: ರೆಬಲ್ ಸ್ಟಾರ್ ಕುರಿತ ಆಸಕ್ತಿಕರ ವಿಚಾರಗಳಿವು - Ambareesh Birthday

author img

By ETV Bharat Karnataka Team

Published : May 29, 2024, 12:57 PM IST

ರೆಬಲ್ ಸ್ಟಾರ್ ಅಂಬರೀಶ್ ಬದುಕಿದ್ದರೆ ಇಂದು ಅಭಿಮಾನಿಗಳ ಜೊತೆ 72ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.

Ambareesh Birthday
ಅಂಬರೀಶ್ ಜನ್ಮದಿನ (ETV Bharat)

ರೆಬಲ್ ಸ್ಟಾರ್ ಅಂಬರೀಶ್, ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ನಟ. ಫುಟ್ ಪಾತ್ ಇಡ್ಲಿಯಿಂದ ಹಿಡಿದು ರಾಯಲ್​​ ಹೋಟೆಲ್​ವರೆಗೂ ಜೀವನ ಸಾಗಿಸಿದ ನಟ. ಈ ನಾಗರಹಾವು ಸಿನಿಮಾದ ಜಲೀಲಾ ಬದುಕಿದ್ದರೆ ಇಂದು ಅಭಿಮಾನಿಗಳ ಜೊತೆ 72ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಏರು ಧ್ವನಿ, ನೇರ ಮಾತುಗಳಿಂದಲೇ ಸ್ನೇಹಿತರಿಗೆ ಹಾಗೂ ಅಭಿಮಾನಿಗಳಿಗೆ ಇಷ್ಟ ಆಗುತ್ತಿದ್ದ ಅಂಬಿ ಬಗ್ಗೆ ಬಹುತೇಕರಿಗೆ ಗೊತ್ತಿರದ ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ.

ambareesh
ಅಂಬರೀಶ್ ಕುಟುಂಬ (ETV Bharat)

ರಿಯಲ್ ಲೈಫ್​ನಲ್ಲೂ ಆರತಿಯನ್ನು ಚುಡಾಯಿಸ್ತಿದ್ದ ಅಂಬಿ: ಅಂಬರೀಶ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು 'ನಾಗರಹಾವು' ಸಿನಿಮಾ ಮೂಲಕ. ವಿಷ್ಣುವರ್ಧನ್ ಅವರು ಕೂಡ ಇದೇ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್​ವುಡ್​​​​ ಪ್ರವೇಶಿಸಿದ್ರು. ಅಂಬಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಅಂಬಿಯದ್ದು ಈ ಮೂವಿಯಲ್ಲಿ ಚಿಕ್ಕ ಪಾತ್ರವಾಗಿದ್ರೂ ದೊಡ್ಡಮಟ್ಟದ ಹೆಸರು, ಅವಕಾಶಗಳನ್ನು ತಂದುಕೊಟ್ಟಿತ್ತು. ನಿಮಗೆ ಗೊತ್ತೇ ಇದೆ, ಅಂಬಿ ನಾಗರಹಾವು ಸಿನಿಮಾದಲ್ಲಿ ನಟಿ ಆರತಿ ಅವರನ್ನು ಚುಡಾಯಿಸುವ ದೃಶ್ಯವಿದೆ. ಆದರೆ ಅವರು ಈ ಸಿನಿಮಾದಲ್ಲಿ ನಟಿಸುವ ಮೊದಲೇ ಆರತಿಯನ್ನು ಚುಡಾಯಿಸುತ್ತಿದ್ದರು. ಅಂಬಿ ಮತ್ತು ಆರತಿ ಓದಿದ್ದು ಒಂದೇ ಕಾಲೇಜಿನಲ್ಲಿ. ಕಾಲೇಜು ಕ್ಯಾಂಪಸ್​​ನಲ್ಲಿ ಆರತಿ ಎದುರಾಗುವ ವೇಳೆಯಲ್ಲೆಲ್ಲಾ ಅವರನ್ನು ಚುಡಾಯಿಸುತ್ತಿದ್ದರಂತೆ. ಕಾಕತಾಳಿಯ ಎನ್ನುವಂತೆ ಅಂಬರೀಶ್​​ ತನ್ನ ಮೊದಲ ಸಿನಿಮಾದಲ್ಲಿ ಮಾಡಿದ್ದೂ ಕೂಡ ಆರತಿಯವರನ್ನು ಚುಡಾಯಿಸುವ ಪಾತ್ರ.

Ambareesh
ಅಂಬರೀಶ್ ಸಿನಿಮಾ ಸೀನ್ (ETV Bharat)

ಅಂಬಿಗೆ ಬೇಕಿತ್ತು 120 ಇಡ್ಲಿ: ಮನೆಯಲ್ಲಿ ಇಡ್ಲಿ ಮಾಡುವ ವೇಳೆ ಅಂಬಿಗೆ ಬರೋಬ್ಬರಿ 120 ಇಡ್ಲಿ ಬೇಕಿತ್ತಂತೆ. ದೋಸೆ ಮಾಡಿದ್ರೆ ಕಡಿಮೆ ಅಂದ್ರೂ 45 ದೋಸೆ ತಿನ್ನುತ್ತಿದ್ದರು. ಚಿಕ್ಕಂದಿನಲ್ಲಿ ಇದೇ ವಿಷಯಕ್ಕೆ ಅಣ್ಣ ತಮ್ಮಂದಿರಲ್ಲಿ ಗಲಾಟೆ ಆಗಿತ್ತಂತೆ.

Ambareesh
ಅಂಬರೀಶ್ ಅಪರೂಪದ ಫೋಟೋ (ETV Bharat)

ಶಾಲಾ ಸ್ಪೋರ್ಟ್ಸ್​​ನಲ್ಲಿ ಅಂಬಿಯೇ ಫಸ್ಟ್: ಶಾಲಾ ದಿನಗಳಲ್ಲಿ ಆಟ ಪಾಠ ಎರಡರಲ್ಲೂ ಅಂಬಿ ಫಸ್ಟ್. ಎಲ್ಲಾ ಆಟಗಳಲ್ಲೂ ಭಾಗವಹಿಸುತ್ತಿದ್ದ ಅಂಬಿ ಓದಿನಲ್ಲೂ ಮುಂದಿದ್ದರು.

Ambareesh
ಅಂಬರೀಶ್ (ETV Bharat)

ಪಿಯುಸಿ ಫೇಲ್: ಓದಿನಲ್ಲಿ ಸದಾ ಮುಂದಿದ ಅಂಬಿ ಪಿಯುಸಿಯಲ್ಲಿ ಮೊದಲ ಬಾರಿ ಫೇಲ್ ಆಗಿದ್ರು.

ಶಾಲೆಗೆ ಸ್ನೇಹಿತನನ್ನು 'ಅಣ್ಣ' ಅಂತಾ ಕರೆದೊಯ್ದಿದ್ದ ಅಂಬಿ: ಪಿಯುಸಿಯಲ್ಲಿ ಫೇಲ್ ಆದಾಗ ಪ್ರಾಂಶುಪಾಲರು ಪೋಷಕರನ್ನು ಕರೆದುಕೊಂಡು ಬಾ ಅಂದಾಗ ತಮ್ಮ ಸ್ನೇಹಿತನನ್ನೇ ಅಣ್ಣ ಎಂದು ಶಾಲೆಗೆ ಕರೆದೊಯ್ದಿದ್ದರು. ಒಮ್ಮೆ ಅವರ ನಿಜವಾದ ಅಣ್ಣ ಕಾಲೇಜಿಗೆ ಬಂದಾಗ ಅಂಬರೀಶ್ ಬಣ್ಣ ಬಯಲಾಗಿತ್ತು.

Ambareesh
ಅಂಬರೀಶ್ ಸಿನಿಮಾ ಸೀನ್ (ETV Bharat)

ಮಂಡ್ಯ ಮಿಠಾಯಿ, ನಾಟಿ ಕೋಳಿ ಸಾರು, ಕೈಮಾ ಸಾರು; ಮಂಡ್ಯ ನಗರದ ಕಾರೆಮನೆ ಗೇಟ್‌ನಲ್ಲಿರುವ ಮಿಠಾಯಿ ಅಂಗಡಿ ಬೆಳಕಿಗೆ ಬಂದಿದ್ದೇ ರೆಬಲ್‌ ಸ್ಟಾರ್ ಅಂಬರೀಶ್​​ ಅವರಿಂದ ಅನ್ನೋದು ಕೆಲ ಆಪ್ತರು ಮಾತು. ತೆಂಗಿನಕಾಯಿ, ಬೆಲ್ಲದ ಮಿಠಾಯಿ ಅಂದ್ರೆ ಅಂಬರೀಶ್ ಬಾಯಲ್ಲಿ ಸದಾ ನೀರು ಬರುತ್ತಿತ್ತು. ಇದರ ಜೊತೆ ನಾಟಿ ಕೋಳಿ ಸಾರು, ಮಟನ್ ಕೈಮಾ ಅವರಿಗೆ ಅಚ್ಚುಮೆಚ್ಚು.

ಕಾರು ಕೊಡಿಸದ್ದಕ್ಕೆ ಮನೆ ಬಿಟ್ಟು ಹೋಗಿದ್ದ ನಟ: ಅಪ್ಪ ಕಾರು ಕೊಡಿಸಲಿಲ್ಲ ಎನ್ನುವ ಕಾರಣಕ್ಕೆ ಅಂಬರೀಶ್ ಅವರು ಗಲಾಟೆ ಮಾಡಿ ಮನೆಬಿಟ್ಟು, ಸುಮಾರು ಏಳು ತಿಂಗಳ ಕಾಲ ಮೈಸೂರಿನ ಮನೆಯಲ್ಲಿ ಬಂದು ನೆಲೆಸಿದ್ದರು. ಕೊನೆಗೂ ಅವರ ಅಪ್ಪ ಕಾರು ಖರೀದಿಸಲು ದುಡ್ಡು ಕೊಟ್ಟ ಬಳಿಕ ಮನೆಗೆ ವಾಪಸಾಗಿದ್ದರು. ಅವರು ಮೊದಲು ಖರೀದಿಸಿದ ಕಾರು ಹೆರಾಲ್ಡ್. ಅದರ ನಂಬರ್ 1011. ಆ ಬಳಿಕ ಆರು ತಿಂಗಳಿಗೊಂದರಂತೆ ಕಾರು ಬದಲಾಯಿಸಿದ್ದರು.

ambareesh
ಅಂಬರೀಶ್ ಅಪರೂಪದ ಫೋಟೋ (ETV Bharat)

ಬ್ರ್ಯಾಂಡೆಂಡ್ ಕಾರುಗಳಂದ್ರೆ ಈ ಜಲೀಲನಿಗೆ ಬಲು ಕ್ರೇಜ್: ಅಂಬರೀಶ್​​ ಒಬ್ಬ ಸ್ಟಾರ್ ನಟ ಅಲ್ಲದೇ ಒಬ್ಬ ಸ್ಪೋರ್ಟ್ಸ್​ ಮ್ಯಾನ್ ಅನ್ನೋದು ಹೆಚ್ಚು ಜನರಿಗೆ ಗೊತ್ತಿರಕ್ಕಿರಲಿಲ್ಲ. ಬ್ರ್ಯಾಂಡೆಂಡ್ ಕಾರುಗಳಂದ್ರೂ ಅಚ್ಚುಮೆಚ್ಚು. ಡ್ರೈವಿಂಗ್​ನಲ್ಲಿ ಪರ್ಫೆಕ್ಟ್. ಅದಕ್ಕೆ ಸಾಕ್ಷಿ ಎಂಬಂತೆ ಒಂದು ಕಾಲದಲ್ಲಿ ಅಂಬಿ ಮೈಸೂರಿನಿಂದ ಬೆಂಗಳೂರಿಗೆ ಒಂದೂವರೆ ಗಂಟೆಯೊಳಗೆ ಬಂದಿದ್ದರು. ಆ ಮಟ್ಟಿನ ಕಾರ್ ಕ್ರೇಜ್ ಹೊಂದಿದ್ದರು.

ಸಿಗರೇಟ್ ಬಿಡದ ನಟ: ಅಂಬರೀಶ್​​ ಎಡಗೈನಲ್ಲಿ ಸಿಗರೇಟ್, ಬಲತೋಳಿನ ಮೇಲೆ ಒಂದು ಟವಲ್ ಸದಾ ಇರುತ್ತಿತ್ತು. ಅದ್ಯಾಕೋ ಕಣ್ಣಿನಿಂದ ಆಗಾಗ್ಗೆ ನೀರು ಬರುತ್ತಿತ್ತು. ಅದನ್ನು ಒರೆಸೋದಿಕ್ಕೆ ಟವಲ್ ಇಟ್ಟುಕೊಳ್ಳುತ್ತಿದ್ದರು. ಆರೋಗ್ಯ ಕೈ ಕೊಟ್ಟಾಗ ಡ್ರಿಂಕ್ಸ್ ಬಿಟ್ಟಿದ್ದರಂತೆ. ಆದ್ರೆ ಸಿಗರೇಟ್ ಬಿಟ್ಟಿರಲಿಲ್ಲ. ಆಗ ಯಾರೋ ಸ್ನೇಹಿತರು ಡ್ರಿಂಕ್ಸ್ ಬಿಟ್ಟಿದ್ದೀಯಾ, ಈ ಸಿಗರೇಟ್ ಅನ್ನೂ ಬಿಟ್ಟು ಬಿಡು ಎಂದು ಸಲಹೆ ಕೊಟ್ಟಿದ್ದಾರೆ. ಅದಕ್ಕೆ ಅಂಬರೀಶ್​​ ಈ ಸಿಗರೇಟ್ ಬಿಟ್ರೆ ಹೆಚ್ಚು ಬದುಕುತ್ತೇನೆ, ಇಲ್ಲಾಂದ್ರೆ ಎರಡು ದಿನ ಮೊದಲು ಹೋಗ್ತೀನಿ ಅಷ್ಟೇ ಅಂದಿದ್ದರು.

ambareesh
ಅಂಬರೀಶ್ ರಾಜಕೀಯ ಜೀವನ (ETV Bharat)

ಚೆಕ್​ ಬೌನ್ಸ್​​: ಅಂಬರೀಶ್ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಕೆಲವು ಸಿನಿಮಾಗಳಿಂದ ಅಂಬಿಗೆ ಹಣ ಬಂದಿಲ್ಲ. ಇವರಿಗೆ ಕೊಟ್ಟಿದ್ದ ಚೆಕ್​ಗಳನ್ನು ಲೆಕ್ಕ ಹಾಕಿದರೆ 10 ರಿಂದ 20 ಕೋಟಿ ರೂಪಾಯಿ ಆಗುತ್ತದೆ. ಆದರೆ ಅಂಬರೀಶ್ ಒರಟು ಮಾತು, ಹೃದಯ ಮೃದು ಅನ್ನೋದಿಕ್ಕೆ ಸಾಕಷ್ಟು ನಿರ್ಮಾಪಕರ ಹತ್ತಿರ ಹಣ ಕೇಳೋದಿಕ್ಕೆ ಹೋಗಿಲ್ಲ ಅನ್ನೋದೇ ಸಾಕ್ಷಿ.

ವಿರೋಧದ ಮಧ್ಯೆ ಸುಮಲತಾರನ್ನು ಮದುವೆಯಾದ ನಟ: ಅಂಬರೀಶ್ ಮತ್ತು ಸುಮಲತಾ ಮೊಟ್ಟ ಮೊದಲ ಬಾರಿಗೆ ಭೇಟಿಯಾಗಿದ್ದು ವುಡ್​ಲ್ಯಾಂಡ್ ಹೋಟೆಲ್​​​ನಲ್ಲಿ. ಯಾವುದೋ ಚಿತ್ರದ ಶೂಟಿಂಗ್ ನಡೆಯುತ್ತಿರುವಾಗ ಅಲ್ಲಿಗೆ ಹೋಗಿದ್ದ ಸುಮಲತಾ ಅವರು ಮೊದಲ ಬಾರಿಗೆ ಅಂಬಿ ಅವರನ್ನು ನೋಡಿದ್ದರು. ಒಬ್ಬರನ್ನೊಬ್ಬರು ನೋಡಿದ್ದರೂ ಅಂದು ಮಾತಾಡಿರಲಿಲ್ಲ. ಆದರೆ ಅವರಿಬ್ಬರನ್ನು ಮತ್ತಷ್ಟು ಹತ್ತಿರವಾಗಿಸಿದ್ದು ಆಹುತಿ ಸಿನಿಮಾ. ಸುಮಲತಾ ಸೌಂದರ್ಯಕ್ಕೆ ಮಾರು ಹೋಗಿದ್ದ ಅಂಬರೀಶ್​, ಅವರನ್ನು ಮದುವೆಯಾಗಿದ್ದು ಮಾತ್ರ ಹುಬ್ಬೇರಿಸುವ ಸಂಗತಿ. ಯಾಕಂದ್ರೆ, ಸುಮಲತಾ ತಂದೆ ತಾಯಿಗೆ ಅಂಬರೀಶ್ ಇಷ್ಟ ಇರಲಿಲ್ಲ ಅನ್ನೋದು ಅಂಬಿ ಸ್ನೇಹಿತರ ಮಾತು.

ಇದನ್ನೂ ಓದಿ: ಬಾಲಿವುಡ್​ಗೆ ಧ್ರುವ ಸರ್ಜಾ ಎಂಟ್ರಿ: 'ವಾರ್ 2'ನಲ್ಲಿ ಹೃತಿಕ್ ರೋಷನ್ ಸಹೋದರನಾಗಿ ಆ್ಯಕ್ಷನ್​ ಪ್ರಿನ್ಸ್​​ - Dhruva Sarja to Bollywood

ETV Bharat Logo

Copyright © 2024 Ushodaya Enterprises Pvt. Ltd., All Rights Reserved.