ETV Bharat / state

R Ashok: ದೇಶ ವಿಭಜನೆಗೆ ಅಂದಿನ ಕಾಂಗ್ರೆಸ್ ಪಕ್ಷ ನೇರ ಕಾರಣ: ಆರ್.ಅಶೋಕ್

author img

By

Published : Aug 14, 2023, 3:22 PM IST

congress-party-was-cause-of-the-partition-of-the-country-says-r-ashok
ದೇಶ ವಿಭಜನೆಗೆ ಅಂದಿನ ಕಾಂಗ್ರೆಸ್ ಪಕ್ಷ ನೇರ ಕಾರಣ:ಆರ್ ಅಶೋಕ್

BJP Leader R Ashok: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಲೂಟಿ, ದಂಗೆ ಕಡಿಮೆಯಾಗಿದೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿದರು.

ಬೆಂಗಳೂರು: "ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಜನರು ಹೋರಾಡಿದ್ದರು. ಅವರೆಲ್ಲ ಭಾರತ ಭಾರತವಾಗಿಯೇ ಉಳಿಯಬೇಕೆಂದು ಪಣ ತೊಟ್ಟಿದ್ದರು. ಆದರೆ, ಆಗಸ್ಟ್‌ 14ರಂದು ದೇಶ ವಿಭಜನೆಯಾಗಿದ್ದು ಇತಿಹಾಸದ ಕರಾಳ ದಿನ. ವಿಭಜನೆಗೆ ಅಂದಿನ ಕಾಂಗ್ರೆಸ್ ಪಕ್ಷವೇ ನೇರ ಕಾರಣ" ಎಂದು ಮಾಜಿ ಸಚಿವ ಆರ್.ಅಶೋಕ್ ದೂರಿದರು. ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು “ಭಾರತ ವಿಭಜನೆಯ ದುರಂತ ಕಥೆಗೆ ಸಂಬಂಧಿಸಿದ ಪ್ರದರ್ಶಿನಿ” ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

"ನರೇಂದ್ರ ಮೋದಿಜಿ ನೇತೃತ್ವದಲ್ಲಿ 76ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ, 14ರ ದೇಶ ಇಬ್ಭಾಗದ ಘಟನೆಯ ಮೂಲಕ ಸ್ವಾತಂತ್ರ್ಯ ಯೋಧರಿಗೆ ಅಪಮಾನವಾಗಿದೆ. ನೆಹರು ನೇತೃತ್ವದ ಕಾಂಗ್ರೆಸ್ ಹುನ್ನಾರದ ಪರಿಣಾಮವಾಗಿ ಜಿನ್ನಾ ಮೂಲಕ ಈ ಆಟ ಆಡಲಾಯಿತು. ಕಾಂಗ್ರೆಸ್ ಸಂಸ್ಕೃತಿಯೇ ಇದು. ಕಾಶ್ಮೀರವು ನಮ್ಮದೆನ್ನುವ ಎದೆಗಾರಿಕೆ ಅವರಿಗೆ ಇರಲಿಲ್ಲ. 370ನೇ ವಿಧಿಯನ್ನು ರದ್ದು ಮಾಡಿದ ಬಳಿಕ ಲೂಟಿ, ದಂಗೆ ಕಡಿಮೆ ಆಯಿತು" ಎಂದರು.

Congress party was  cause of the partition of the country says  R Ashok
ಭಾರತ ವಿಭಜನೆಯ ದುರಂತ ಕಥೆಗೆ ಸಂಬಂಧಿಸಿದ ಪ್ರದರ್ಶಿನಿಯ ಉದ್ಘಾಟನಾ ಕಾರ್ಯಕ್ರಮ

"ಕಾಂಗ್ರೆಸ್ ದೇಶವನ್ನು ತುಂಡರಿಸಿದೆ. ಇದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ತಿಳಿಸಬಯಸುತ್ತೇನೆ. ಕಾಂಗ್ರೆಸ್ಸಿನ ತುಷ್ಟೀಕರಣ ನೀತಿ ಇಂದಿಗೂ ಮುಂದುವರಿದಿದೆ. ವಿಭಜನೆ ವೇಳೆ ಹಿಂದೂ, ಸಿಖ್ಖರನ್ನು ಹೊಡೆದೋಡಿಸಿದ್ದಲ್ಲದೆ, ಮಾರಣ ಹೋಮವೇ ನಡೆದಿತ್ತು. ಮೋದಿ ಅವರು ದೇಶವನ್ನು ಒಟ್ಟಾಗಿ ಮುನ್ನಡೆಸುತ್ತಿದ್ದಾರೆ. ಕಾಶ್ಮೀರ, ಮಣಿಪುರ ಮತ್ತಿತರ ಕಡೆಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ" ಎಂದು ಕೊಂಡಾಡಿದರು.

ಗೋವಿಂದ ಕಾರಜೋಳ ಮಾತನಾಡುತ್ತಾ, "ದೇಶ ವಿಭಜನೆಯನ್ನು ಅತ್ಯಂತ ಕಠೋರವಾಗಿ ವಿರೋಧಿಸಿದವರು ಖಾನ್ ಅಬ್ದುಲ್ ಗಫಾರ್ ಖಾನ್. ಸ್ವಾರ್ಥಕ್ಕಾಗಿ ದೇಶ ವಿಭಜನೆ ಮಾಡದಿರಿ. ದೇಶ ವಿಭಜನೆ ಮಾಡಿದರೆ, ನಮ್ಮನ್ನು ನೀವು ಲಾಹೋರ್​ನ ಪಠಾಣರ ಕೈಗೆ ಕೊಡುತ್ತೀರಿ. ಅದಕ್ಕಾಗಿ ದೇಶ ವಿಭಜಿಸದಿರಿ ಎಂದು ‘ಗಡಿನಾಡ ಗಾಂಧಿ’ ಅಬ್ದುಲ್ ಗಫಾರ್ ಖಾನ್ ಅವರು ಹೇಳಿದ್ದರು. ಇವತ್ತೂ ಆ ಮಾತು ಪ್ರಸ್ತುತ. ಪಾಕಿಸ್ತಾನ ಆರ್ಥಿಕವಾಗಿ ದಿವಾಳಿ ಆಗಿದೆ. ವಿಭಜನೆ ಬಳಿಕ ಅಲ್ಲಿನ ಜನರ ಜೀವನ ನರಕ ಆಗಿದೆ. ಮೋದಿಜಿ ನೇತೃತ್ವದಲ್ಲಿ ಭಾರತದ ಕೀರ್ತಿ ಪ್ರಪಂಚಕ್ಕೆ ಪಸರಿಸಿದೆ" ಎಂದು ಹೇಳಿದರು.

ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ್‌ ನಾರಾಯಣ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮಾಜಿ ಶಾಸಕ ಪ್ರೀತಂ ಗೌಡ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಜಿ.ಮಂಜುನಾಥ್ ಇದ್ದರು.

ಇದನ್ನೂ ಓದಿ: ಜಗದೀಶ್ ಶೆಟ್ಟರ್ ಹೋರಾಟದ ರಾಜಕಾರಣಿಯಲ್ಲ, ಊಟದ ಸಮಯಕ್ಕೆ ಬಂದು ಊಟ ಮಾಡಿ ಹೋಗುವ ರಾಜಕಾರಣಿ: ಅಶೋಕ್ ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.