ETV Bharat / entertainment

ಈ ರಾಜ್ಯದಲ್ಲಿ 400ಕ್ಕೂ ಹೆಚ್ಚು ಸಿಂಗಲ್​ ಸ್ಕ್ರೀನ್​​​ ಥಿಯೇಟರ್​ ತಾತ್ಕಾಲಿಕ ಸ್ಥಗಿತ - Single Screen Theatres

author img

By ETV Bharat Karnataka Team

Published : May 15, 2024, 7:53 PM IST

ಮೇ 17ರಿಂದ ಮೇ 26ರವರೆಗೆ ತೆಲಂಗಾಣದಲ್ಲಿ 400ಕ್ಕೂ ಹೆಚ್ಚು ಸಿಂಗಲ್​ ಸ್ಕ್ರೀನ್​​​ ಥಿಯೇಟರ್​ಗಳನ್ನು ​ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

Single-Screen Theatres
ಸಿಂಗಲ್​ ಸ್ಕ್ರೀನ್​​​ ಥಿಯೇಟರ್​ ತಾತ್ಕಾಲಿಕ ಸ್ಥಗಿತ (ANI)

ತೆಲಂಗಾಣದಲ್ಲಿ ಸಿನಿಮಾಗಳು, ಚಿತ್ರಮಂದಿರಗಳು ಅನಿರೀಕ್ಷಿತ ಅಡೆತಡೆಗಳನ್ನು ಎದುರಿಸುತ್ತಿವೆ. ಇದು ​​ಥಿಯೇಟರ್​ಗಳನ್ನು ​ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತಹ ಕ್ರಮ ಕೈಗೊಳ್ಳಲು ಕಾರಣವಾಗಿದೆ. ಹಣಕಾಸಿನ ಒತ್ತಡವನ್ನು ತಗ್ಗಿಸುವ ನಿಟ್ಟಿನಲ್ಲಿ, ತೆಲಂಗಾಣದಾದ್ಯಂತ 400ಕ್ಕೂ ಹೆಚ್ಚು ಸಿಂಗಲ್​ ಸ್ಕ್ರೀನ್​​​ ಸಿನಿಮಾ ಹಾಲ್‌ಗಳನ್ನು ಈ ಶುಕ್ರವಾರದಿಂದ (ಮೇ 17) ಮೇ 26ರ ವರೆಗೆ ಅಂದರೆ 10 ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಟಾಲಿವುಡ್‌ನ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳು ಇಳಿಮುಖವಾಗುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಬೇಸಿಗೆಯಲ್ಲಿ ಬಹುನಿರೀಕ್ಷಿತ, ಸೂಪರ್ ಸ್ಟಾರ್ ಕಾಸ್ಟ್ ಸಿನಿಮಾಗಳು ಬಿಡುಗಡೆ ಆಗದಿರುವ ಹಿನ್ನೆಲೆ ಚಿತ್ರಮಂದಿರಗಳಿಗೆ ಪ್ರೇಕ್ಷಕರ ಸಂಖ್ಯೆ ಇಳಿಕೆ ಕಂಡಿದೆ. ಸಾಮಾನ್ಯವಾಗಿ ಈ ಋತುವಿನಲ್ಲಿ ದೊಡ್ಡ ಜನಸಂಖ್ಯೆಯನ್ನು ಸೆಳೆಯುವ ಬ್ಲಾಕ್‌ ಬಸ್ಟರ್ ಸಿನಿಮಾಗಳು ಬಿಡುಗಡೆ ಆಗುತ್ತವೆ. ಆದರೆ ಪ್ರಸ್ತುತ ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆ ಆಗದಿರುವ ಹಿನ್ನೆಲೆ, ಚಿತ್ರಮಂದಿರಗಳ ವ್ಯವಹಾರದ ಮೇಲೆ ದೊಡ್ಡ ಹೊಡೆತ ಬಿದ್ದಿದೆ.

ಪ್ರಸ್ತುತ ಎಲ್ಲೆಡೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಕ್ರೇಜ್​ ಜೋರಾಗಿದೆ. ಜೊತೆಗೆ ಚುನಾವಣೆಗಳು ಕೂಡ ನಡೆಯುತ್ತಿವೆ. ಅಲ್ಲದೇ ಬೇಸಿಗೆಯ ಬಿಸಿ ಹೊಡೆತ ಬೇರೆ. ಮೊದಲು ತಿಳಿಸಿದ ಎರಡು ಅಂಶಗಳು ಸಾರ್ವಜನಿಕರ ಗಮನವನ್ನು ಬೆಳ್ಳಿ ಪರದೆಯಿಂದ ಬೇರೆಡೆಗೆ ತಿರುಗಿಸಿವೆ. ಹಾಗಾಗಿ ಚಿತ್ರಮಂದಿರಗಳತ್ತ ಬರುವ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗಿದೆ.

ಸಿಂಗಲ್​​ ಸ್ಕ್ರೀನ್​​ ಥಿಯೇಟರ್‌ಗಳು ತಮ್ಮ ಕಾರ್ಯಾಚರಣೆಯನ್ನು ಉಳಿಸಿಕೊಳ್ಳಲು ಬ್ಲಾಕ್‌ ಬಸ್ಟರ್ ಸಿನಿಮಾ ಸೀಸನ್​​ ಮೇಲೆ ಹೆಚ್ಚು ಅವಲಂಬಿತವಾಗಿವೆ. ಆದ್ರೆ ಈ ಕುಸಿತ ಚಿತ್ರಮಂದಿರಗಳ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದೆ. ಮಲ್ಟಿಪ್ಲೆಕ್ಸ್‌ಗಳಿಗಿಂತ ಭಿನ್ನವಾಗಿ, ಈ ಸಿನಿಮಾ ಹಾಲ್‌ಗಳು ಸೀಮಿತ ಆದಾಯದ ಸ್ಟ್ರೀಮ್‌ ವ್ಯವಸ್ಥೆ ಹೊಂದಿದ್ದು, ಚಲನಚಿತ್ರ ವೇಳಾಪಟ್ಟಿ ಮತ್ತು ಪ್ರೇಕ್ಷಕರ ಸಂಖ್ಯೆಯಲ್ಲಿನ ಏರಿಳಿತಗಳಿಗೆ ಹೆಚ್ಚು ಹೊಣೆಗಾರರಾಗುತ್ತವೆ. ಕಳೆದೆರಡು ತಿಂಗಳುಗಳಲ್ಲಿ ಸಣ್ಣ ಮತ್ತು ಮಧ್ಯಮ-ಬಜೆಟ್​ನ ಸಿನಿಮಾಗಳು ಪ್ರೇಕ್ಷಕರ ಮೇಲೆ ಪ್ರಭಾವ ಬೀರಲು ವಿಫಲವಾಗಿದ್ದು, ವ್ಯವಹಾರವನ್ನು ಮತ್ತಷ್ಟು ದುರ್ಬಲಗೊಳಿಸಿವೆ.

ಇದನ್ನೂ ಓದಿ: ಜೂ.ಎನ್​ಟಿಆರ್​ ಜನ್ಮದಿನಕ್ಕೆ 'ದೇವರ' ಫಸ್ಟ್ ಸಾಂಗ್​ ರಿಲೀಸ್​​ - Jr NTR Devara

ಮತ್ತಷ್ಟು ಆರ್ಥಿಕ ಒತ್ತಡವನ್ನು ತಡೆಗಟ್ಟುವ ಪ್ರಯತ್ನದಲ್ಲಿ, ತೆಲಂಗಾಣ ಥಿಯೇಟರ್ಸ್ ಅಸೋಸಿಯೇಷನ್ ಈ ನಿರ್ಧಾರ ಕೈಗೊಂಡಿದೆ. ಕಾರ್ಯಾಚರಣೆಗೆ ಸಣ್ಣ ವಿರಾಮ ಕೊಡುವ ಮೂಲಕ, ಮಾರುಕಟ್ಟೆಯನ್ನು ಮರುಹೊಂದಿಸುವ ಪ್ರಯತ್ನ ಮಾಡಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಬಿಗ್ ಬಜೆಟ್ ಚಿತ್ರಗಳ ಬಿಡುಗಡೆಯೊಂದಿಗೆ ಮನರಂಜನಾ ವಲಯ ಪುನರುಜ್ಜೀವನಗೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ: 'ಭಾರತ ಮುನ್ನುಗ್ಗುತ್ತಿದೆ': ದೇಶದ ಅಭಿವೃದ್ಧಿ, ಅಟಲ್ ಸೇತು ಬಗ್ಗೆ ರಶ್ಮಿಕಾ ಗುಣಗಾನ - Rashmika Mandanna

ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಬಹುತಾರಾಗಣದ ಕಲ್ಕಿ 2898 ಎಡಿ, ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2: ದಿ ರೂಲ್‌, ಜೂನಿಯರ್​ ಎನ್​ಟಿಆರ್​ ನಟನೆಯ 'ದೇವರ'ದಂತಹ ಚಿತ್ರಗಳು ದೇಶಾದ್ಯಂತ ಸದ್ದು ಮಾಡಲಿವೆ. ಈ ಮೂಲಕ ಚಿತ್ರಮಂದಿರ ಉದ್ಯಮದಲ್ಲಿ ಬೆಳವಣಿಗೆ ಕಾಣುವ ನಿರೀಕ್ಷೆಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.