ETV Bharat / state

2023ರ ರಾಜ್ಯ ಚುನಾವಣೆ ಗಾಂಧಿ - ಗೋಡ್ಸೆ ಸಿದ್ದಾಂತದ ನಡುವಿನ ಹೋರಾಟ: ಬಿ ಕೆ ಹರಿಪ್ರಸಾದ್

author img

By

Published : Jan 20, 2023, 7:54 PM IST

BK Hariprasad
ಬಿ.ಕೆ ಹರಿಪ್ರಸಾದ್

ಮುಂದಿನ ಚುನಾವಣೆ ಮಹಾತ್ಮ ಗಾಂಧಿಯ ಸತ್ಯ ಹಾಗೂ ಅಹಿಂಸೆ ಸಿದ್ದಾಂತ ಹಾಗೂ ನಾಥುರಾಮ್ ಗೋಡ್ಸೆ ಹಿಂಸೆ ಮತ್ತು ಸುಳ್ಳಿನ ಸಿದ್ಧಾಂತದ ನಡುವಿನ ಹೋರಾಟವಾಗಿದೆ - ವಿಧಾನ ಪರಿಷತ್ ವಿಪಕ್ಷ ನಾಯಕ ಬಿ ಕೆ‌ ಹರಿಪ್ರಸಾದ್.

ಬೆಂಗಳೂರು: 2023ರ ರಾಜ್ಯ ಚುನಾವಣೆ ಮಹಾತ್ಮ ಗಾಂಧಿ ಹಾಗೂ ನಾಥುರಾಮ್ ಗೋಡ್ಸೆ ನಡುವಿನ ಹೋರಾಟ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ ಕೆ‌ ಹರಿಪ್ರಸಾದ್ ವ್ಯಾಖ್ಯಾನಿಸಿದ್ದಾರೆ. ಬೆಂಗಳೂರು ಪ್ರಸ್ ಕ್ಲಬ್​​ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆ ನೇರವಾಗಿ ಎರಡು ಸಿದ್ದಾಂತಗಳ ನಡುವಿನ ಹೋರಾಟವಾಗಿದೆ. ಮಹಾತ್ಮ ಗಾಂಧಿಯ ಸತ್ಯ ಹಾಗೂ ಅಹಿಂಸೆ ಸಿದ್ದಾಂತ ಹಾಗೂ ಮತ್ತೊಂದು ಕಡೆ ನಾಥುರಾಮ್ ಗೋಡ್ಸೆ ಹಿಂಸೆ ಮತ್ತು ಸುಳ್ಳಿನ ಸಿದ್ಧಾಂತದ ನಡುವಿನ ಹೋರಾಟವಾಗಿದೆ. ಕರಾವಳಿಯನ್ನು ಬಿಜೆಪಿ ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿದೆ. ಕರ್ನಾಟಕದ ಖ್ಯಾತಿ ಮರುಗಳಿಸಬೇಕಾದರೆ ಕುಖ್ಯಾತರಾಗಿರುವ ಬಿಜೆಪಿಯನ್ನು ಮನೆಗೆ ಕಳುಹಿಸಬೇಕಾಗಿದೆ ಎಂದು ಕಿಡಿ ಕಾರಿದರು.

ಶೂನ್ಯ ಸಾಧನೆ: ರಾಜ್ಯದಲ್ಲಿ ಕಳೆದ ಮೂರು ವರ್ಷದ ಬಿಜೆಪಿ ಆಡಳಿತದಲ್ಲಿ ಬಿಜೆಪಿಯದ್ದು ಶೂನ್ಯ ಸಾಧನೆ. ಇದು ಜನ ವಿರೋಧಿ ಸರ್ಕಾರವಾಗಿದೆ. ಬಿಜೆಪಿಯವರು ಏನು ಅಭಿವೃದ್ಧಿ ಮಾಡಿದ್ದಾರೆ. ಅದನ್ನ ಹೇಳೋ ಧೈರ್ಯ ಅವರಿಗಿಲ್ಲ. ಲವ್ ಜಿಹಾದ್, ಘರ್ ವಾಪಸಿ ಅಂತಾರೆ. ಅಭಿವೃದ್ಧಿ ವಿಚಾರ ಮಾತಾಡಬೇಡಿ ಎನ್ನುತ್ತಾರೆ. ಇತ್ತೀಚೆಗೆ ಕೋಮುಗಲಭೆಗಳು ಹೆಚ್ಚಾಗುತ್ತಿದೆ. ಮೂರು ವಾರಕ್ಕೊಂದು ಕೋಮುಗಲಭೆ ಆಗುತ್ತಿವೆ. ಚುನಾವಣೆಗೋಸ್ಕರವೇ ಗಲಭೆ ಮಾಡಿಸುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಇದ್ದರೂ ನಮ್ಮ ತೆರಿಗೆ ಹಣವನ್ನು ನಾವು ಪಡೆದುಕೊಳ್ಳಲು ಆಗ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ಬಿಜೆಪಿ ಕಾರ್ಯದರ್ಶಿ ಆಗಿದ್ದಾಗ ನೋಡಿದ್ದೆ.‌ ಮೋದಿ ಹಾಗೂ ಶಾ ಅವರ ಸಂಪೂರ್ಣ ಜಾತಕ ಹೇಳುವ ಧೈರ್ಯ ಇದೆ ನನಗೆ ಎಂದರು.

ರಾಜಕೀಯ ಪ್ರವಾಸ: ಕೋವಿಡ್, ನೆರೆ ಇದ್ದಾಗ ಪ್ರಧಾನಿ ಮೋದಿ ರಾಜ್ಯಕ್ಕೆ ಬರಲಿಲ್ಲ. ಈಗ ರಾಜಕೀಯ ಪ್ರವಾಸಕ್ಕೆ ಆಗಮಿಸುತ್ತಿದ್ದಾರೆ. ಗುಜರಾತ್​ನಲ್ಲಿ‌ 28 ದಿನ ಪ್ರಚಾರ ಮಾಡ್ತಾರೆ. ಅಭಿವೃದ್ಧಿ ಕೆಲಸ ಮಾಡಿದ್ದರೆ ಇಷ್ಟು ದಿನ ಮಾಡ್ತಿರಲಿಲ್ಲ. ಹುಬ್ಬಳ್ಳಿಯ ಯುವಜನೋತ್ಸವದಲ್ಲಿ ದೇಶದ ಧ್ವಜ ಇರಲಿಲ್ಲ. ಅಲ್ಲಿ ಬಿಜೆಪಿ ಧ್ವಜ ಮಾತ್ರ ಇತ್ತು. ಈದ್ಗಾದಲ್ಲಿ ತಿರಂಗ ಹಾರಿಸಲು ಹೋರಾಟ ಮಾಡಿದ್ರು. ಈಗ ಇವರ ದೇಶ ಪ್ರೇಮ ಎಲ್ಲೋಗಿದೆ.

ತಾಂಡಾಗಳಿಗೆ ಹಕ್ಕು ಪತ್ರ ವಿತರಣೆ ಮಾಡಲು ವಿರೋಧ ಪಕ್ಷವನ್ನು ಕರೆದಿಲ್ಲ. ಉತ್ತರ ಪ್ರದೇಶದಲ್ಲಿ ಆಕ್ಸಿಜನ್ ಕೊಡಲು ಆಗಿರಲಿಲ್ಲ ಅಂತಾ ಸಿಎಂ ಯೋಗಿಯನ್ನ ಆಸ್ಪತ್ರೆ ಉದ್ಘಾಟನೆ ಕರೆಯುತ್ತಾರೆ ಎಂದು ಟೀಕಿಸಿದರು. ಮೋದಿ ವಾರಕ್ಕೊಮ್ಮೆ ಬರ್ತಾರಂತೆ. ಬರಲಿ ಸಂತೋಷ. ಆದರೆ, ಗುಜರಾತ್ ಮಾಡೆಲ್ ಬೇಡ. ಗುಜರಾತಿನಲ್ಲಿ ಕರ್ನಾಟಕ ಮಾಡೆಲ್ ಮಾಡಿ. ನಾವು ಸ್ವರ್ಗದಲ್ಲಿ ಇದ್ದೇವೆ. ನಮ್ಮಲ್ಲಿ ಅಷ್ಟೊಂದು ಅಭಿವೃದ್ಧಿ ಆಗಿದೆ. ಬೇರೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಯುಪಿ, ಗುಜರಾತಿನಲ್ಲಿ ಅಭಿವೃದ್ಧಿ ಆಗಿಲ್ಲ ಎಂದರು.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ: ಮನಮೋಹನ್ ಸಿಂಗ್ ಹಸಿವು, ಶಿಕ್ಷಣ, ಕೆಲಸಕ್ಕೆ ಯೋಜನೆ ತಂದರು. ಆದರೆ, ಕೋವಿಡ್​​ ಬಂದ್ರು‌ ಮೋದಿ ಏನು ನೀಡಲಿಲ್ಲ. ಅಕ್ಕಿ‌ ಕೊಡ್ತಾ ಇದ್ದಿದ್ದನ್ನು ಡಿಸೆಂಬರ್​ನಲ್ಲಿ ನಿಲ್ಲಿಸಿದ್ದಾರೆ. ಇಂದಿರಾ ಕ್ಯಾಂಟಿನ್ ಮುಚ್ಚಿಕೊಂಡು ಬರ್ತಾ ಇದ್ದಾರೆ. ರೈತ ವಿರೋಧಿ ಕಾನೂನು ವಿರುದ್ಧ ಹೋರಾಟ ನಡೆಯಿತು. 700 ರೈತರು ಸತ್ತರು. ಮೋದಿ ಅವರ ಬಗ್ಗೆ ಮಾತನಾಡಲಿಲ್ಲ. ರಾಜ್ಯದಲ್ಲಿ ಇನ್ನೂ ಆ ಕಾನೂನು ವಾಪಸ್​ ಪಡೆದಿಲ್ಲ. ಕೋಮು ಗಲಭೆಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಬೊಮ್ಮಾಯಿ ಒಂದೇ ಧರ್ಮಕ್ಕೆ ಸಿಎಂ ಆಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ನಲ್ಲಿ ಬೀದಿ ಜಗಳ ಇಲ್ಲ: ನಮ್ಮ ಪಕ್ಷದಲ್ಲಿ ಬೀದಿ ಜಗಳವಿಲ್ಲ. ಮತಬೇಧ ಸಹಜ. ಆದರೆ ಮನ ಬೇಧವಿಲ್ಲ. ಆಸೆ ಅಮಿಷಗಳಿಗೆ ಪಕ್ಷಾಂತರ ಆಗುವನ್ನು ಒಪ್ಪಲು ಆಗಲ್ಲ. ಮಂತ್ರಿ ಆಗಲು ಹೋದವರನ್ನು ಏನಂತಾ ಕರೆಯುತ್ತೀರಿ. ಸರ್ಕಾರ, ಪಕ್ಷದ ಕಾರ್ಯಕ್ರಮ ಅವರು ನೋಡಿಕೊಂಡು ಬರಬಹುದು ಎಂದರು.

ಭೂತದ ಬಾಯಲ್ಲಿ ಭಗವದ್ಗೀತೆ: ಮುಸ್ಲಿಮರನ್ನು ದ್ವೇಷ ಮಾಡಬೇಡಿ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ. ಅವರ ರಾಜಕಾರಣವೇ ದ್ವೇಷ ಹಾಗೂ ಪ್ರತೀಕಾರವಾಗಿದೆ. ಚುನಾವಣೆ ಹತ್ತಿರ ಬಂದಿದೆ. ಲವ್ ಜಿಹಾದ್, ಹಿಜಾಬ್, ಹಲಾಲ್ ವಿವಾದ ಹೊಡೆತ ಕೊಡುತ್ತದೆ ಎಂದು ಅವರಿಗೆ ಗೊತ್ತಾಗಿದೆ.‌ ಅದಕ್ಕೆ ಯಡಿಯೂರಪ್ಪ ಅವರನ್ನು ವಾಪಸ್ ಕರೆಸಿಕೊಂಡಿದ್ದಾರೆ.

ಬಿ.ಎಸ್ ಯಡಿಯೂರಪ್ಪ ಟಿಪ್ಪು ಸುಲ್ತಾನ್ ಟೋಪಿ ಹಾಕಿದ್ದರು. ಅವರ ಮಾತನ್ನು ಮುಸ್ಲಿಮರು ಕೇಳುತ್ತಾರೆ ಎಂದು ಇವಾಗ ಅವರನ್ನು ಮುಂದೆ ಬಿಟ್ಟಿದ್ದಾರೆ. ಆದರೆ, ಮುಸ್ಲಿಮರನ್ನು ದ್ವೇಷ ಮಾಡಬೇಡಿ ಎಂದು ನರೇಂದ್ರ ಮೋದಿ ಬಾಯಲ್ಲಿ ಈ ಮಾತು ಬಂದರೆ ಯಾರೂ ನಂಬಲ್ಲ.‌ ಸುಳ್ಳೇ ದೇವರೆಂದು ನಂಬಿದವರು ಅವರು. ಹಿಂಸೆಯೇ ಅವರ ಸಿದ್ದಾಂತ ಎಂದು ವಾಗ್ದಾಳಿ ನಡೆಸಿದರು.

ಜೈಲಿಗೆ ಕಳುಹಿಸುತ್ತೇವೆ: ಗೃಹ ಮಂತ್ರಿಗಳು ಪರಪ್ಪನ ಅಗ್ರಹಾರ ಹೇಗಿದೆ ಅಂತ ಚೆಕ್ ಮಾಡಿ ಬಂದಿದ್ದಾರೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಅವರನ್ನ ಜೈಲಿಗೆ ಕಳಿಸುತ್ತೇವೆ. ಎಲ್ಲರೂ ಜೈಲಿಗೆ ಸೇರೋ ಕಾಲ ಸಮೀಪಿಸಿದೆ. ಇನ್ನೂ ಸರ್ಕಾರದಲ್ಲಿ 90 ದಿನಗಳ ಅವಧಿ ಇದೆ. ಬೊಮ್ಮಾಯಿ ಅವರ ಮಾತಿನಲ್ಲೇ ಹೇಳುವುದಾದರೆ, ತಾಕತ್ ಇದ್ರೆ, ಧಮ್ ಇದ್ರೆ ನಮ್ಮನ್ನ ಜೈಲಿಗೆ ಕಳುಹಿಸಿ ಎಂದು ಬಿ.ಕೆ ಹರಿಪ್ರಸಾದ್ ಸವಾಲು ಹಾಕಿದರು.

ಇದನ್ನೂ ಓದಿ: ಲೈಂಗಿಕ‌ ಕಾರ್ಯಕರ್ತೆಯರ ಬಗ್ಗೆ ವಿವಾದಿತ ಹೇಳಿಕೆ: ಕ್ಷಮೆ ಕೋರಿದ ಬಿ.ಕೆ.ಹರಿಪ್ರಸಾದ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.