ETV Bharat / state

ಇಎಸ್‌ಐ ಹೃದ್ರೋಗ ವಿಭಾಗದ ವೈಫಲ್ಯಕ್ಕೆ ಭ್ರಷ್ಟಾಚಾರವೇ ಕಾರಣ: ಆಪ್‌ ಅಧ್ಯಕ್ಷ ಮೋಹನ್‌ ದಾಸರಿ

author img

By

Published : Sep 15, 2021, 5:18 PM IST

Updated : Sep 15, 2021, 9:58 PM IST

AAP Protest in Bangalore
ಬೆಂಗಳೂರು ನಗರ ಎಎಪಿ ಅಧ್ಯಕ್ಷ ಮೋಹನ್‌ ದಾಸರಿ ಆಕ್ರೋಶ

ಕಾರ್ಡಿಯಾಲಜಿ ವಿಭಾಗವನ್ನು ಬನ್ನೇರುಘಟ್ಟಕ್ಕೆ ಸ್ಥಳಾಂತರ ಮಾಡುವುದನ್ನು ಖಂಡಿಸಿ ಆಮ್‌ ಆದ್ಮಿ ಪಾರ್ಟಿಯು ರಾಜಾಜಿನಗರದ ಇಎಸ್‌ಐ ಆಸ್ಪತ್ರೆ ಎದುರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿತು.

ಬೆಂಗಳೂರು: ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿರುವ ಜಯದೇವ ಹೃದ್ರೋಗ ಸಂಸ್ಥೆಯ ಕಾರ್ಡಿಯಾಲಜಿ ವಿಭಾಗದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಆಡಳಿತ ಮಂಡಳಿಯ ಹಣದಾಹಕ್ಕೆ ನೂರಾರು ರೋಗಿಗಳು ಬಲಿಯಾಗಿದ್ದಾರೆ ಎಂದು ಬೆಂಗಳೂರು ನಗರ ಆಪ್‌ ಅಧ್ಯಕ್ಷ ಮೋಹನ್‌ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಡಿಯಾಲಜಿ ವಿಭಾಗವನ್ನು ಬನ್ನೇರುಘಟ್ಟಕ್ಕೆ ಸ್ಥಳಾಂತರ ಮಾಡುವುದನ್ನು ಖಂಡಿಸಿ ಆಮ್‌ ಆದ್ಮಿ ಪಾರ್ಟಿಯು ರಾಜಾಜಿನಗರದ ಇಎಸ್‌ಐ ಆಸ್ಪತ್ರೆ ಎದುರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಮಾತನಾಡಿದ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್‌ ದಾಸರಿ, ಇಎಸ್‌ಐಯಲ್ಲಿರುವ ಹೃದ್ರೋಗ ವಿಭಾಗದಲ್ಲಿ 50ಕ್ಕೂ ಹೆಚ್ಚು ವೆಂಟಿಲೇಟರ್‌ ಬೆಡ್‌ಗಳಿವೆ. ಅತ್ಯಾಧುನಿಕ ಸೌಲಭ್ಯಗಳಿವೆ ಎಂದರು.

ಆಪ್‌ ಅಧ್ಯಕ್ಷ ಮೋಹನ್‌ ದಾಸರಿ

15 ಸರ್ಜನ್‌ಗಳು, ನೂರಾರು ಸಿಬ್ಬಂದಿ ಅಲ್ಲಿಗೆ ನೇಮಕಗೊಂಡಿದ್ದಾರೆ. ಬೇರೆಲ್ಲ ಆಸ್ಪತ್ರೆಗಳಲ್ಲಿ ಬೆಡ್‌ಗಳು ಭರ್ತಿಯಾಗಿದ್ದರೂ ಕೂಡ ಇಲ್ಲಿ ಬೆಡ್‌ಗಳು ಖಾಲಿಯಿರಲು ಕಾರಣವೇನು ಎಂದು ನಾವು ಯೋಚಿಸಬೇಕು. ಕಾರ್ಡಿಯಾಲಜಿ ವಿಭಾಗದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಖಾಸಗಿ ಆಸ್ಪತ್ರೆಗಳೊಂದಿಗೆ ಅಕ್ರಮ ಒಳ ಒಪ್ಪಂದ ಮಾಡಿಕೊಂಡಿರುವ ಇಲ್ಲಿನ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಆಸ್ಪತ್ರೆಯನ್ನು ಹಾಳುಗೆಡವುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2011-12ರಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯೊಂದಿಗೆ ಎಂಒಯು ಮಾಡಿಕೊಂಡಿದೆ. ಆ ಪ್ರಕಾರ ಇಎಸ್‌ಐ ಆಸ್ಪತ್ರೆಯಲ್ಲಿ ವಾರ್ಷಿಕ 15 ಕೋಟಿ ರೂ. ಮೊತ್ತದ ವಹಿವಾಟು ನಡೆಯಬೇಕು ಎಂದು ಗುರಿ ನಿಗದಿ ಪಡಿಸಲಾಗಿದೆ. ಈ ರೀತಿಯ ಒಪ್ಪಂದವು ಆರೋಗ್ಯ ಇಲಾಖೆಯ ವ್ಯಾಪಾರಿ ಪ್ರವೃತ್ತಿಯನ್ನು ತೋರಿಸುತ್ತದೆ. ಚಿಕಿತ್ಸೆಯನ್ನು ಸೇವೆಯನ್ನು ಪರಿಗಣಿಸುವ ಬದಲು ವ್ಯಾಪಾರವೆಂದು ಸರ್ಕಾರವೇ ಪರಿಗಣಿಸಿರುವುದು ನಾಚಿಕೆಗೇಡು ಎಂದರು.

ಜಯದೇವ ಆಸ್ಪತ್ರೆಯೊಂದಿಗಿನ ಒಪ್ಪಂದ ನವೆಂಬರ್‌ನಲ್ಲಿ ಅಂತ್ಯವಾದ ನಂತರ ಖಾಸಗಿ ಆಸ್ಪತ್ರೆ ಜೊತೆ ಒಪ್ಪಂದಕ್ಕೆ ಸಿದ್ಧತೆ ನಡೆಸಲಾಗುತ್ತಿರುವುದು ಖಂಡನೀಯ. ಇಎಸ್‌ಐ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಎಲ್ಲಾ ಅಕ್ರಮಗಳಿಗೆ ಇಲ್ಲಿನ ಆಡಳಿತ ಮಂಡಳಿ ನೇರ ಕಾರಣ. ಮಂಡಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರಧಾನಿ, ರಾಷ್ಟ್ರಪತಿ, ಸಿಬಿಐ ಹಾಗೂ ಕೇಂದ್ರ ಕಾರ್ಮಿಕ ಇಲಾಖೆಗೆ ದೂರು ನೀಡುತ್ತೇವೆ ಎಂದು ಮೋಹನ್‌ ದಾಸರಿ ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರದ ಉಪಾಧ್ಯಕ್ಷರಾದ ಬಿ.ಟಿ.ನಾಗಣ್ಣ ಮಾತನಾಡಿ, ಇಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕುವುದರ ಜೊತೆಗೆ, ಕಾರ್ಮಿಕರಿಗೆ ಮಾತ್ರ ಸೀಮಿತವಾಗಿರುವ ಹೃದ್ರೋಗ ವಿಭಾಗವನ್ನು ಎಲ್ಲಾ ಸಾರ್ವಜನಿಕರಿಗೆ ವಿಸ್ತರಿಸಬೇಕು. ರಾಜಾಜಿನಗರ, ಮಲ್ಲೇಶ್ವರ ಹಾಗೂ ಸುತ್ತಮುತ್ತಲಿನ ಜನರಿಗೆ ಇದರಿಂದ ಉಪಯೋಗವಾಗುತ್ತದೆ. ಆಸ್ಪತ್ರೆಯಲ್ಲಿರುವ ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಕೋವಿಡ್‌ ಆತಂಕವಿರುವ ಈ ಸಂದರ್ಭದಲ್ಲಿ ಆಸ್ಪತ್ರೆಗಳನ್ನು ಇನ್ನಷ್ಟು ಆಧುನೀಕರಣಗೊಳಿಸಲು ಮುಂದಾಗುವ ಬದಲು ಇರುವ ಸೌಲಭ್ಯಗಳನ್ನೂ ಕಿತ್ತುಕೊಳ್ಳುತ್ತಿರುವುದು ಖಂಡನೀಯ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ. ಸದಂ, ಪಕ್ಷದ ಮುಖಂಡರಾದ ರಾಜಶೇಖರ್‌ ದೊಡ್ಡಣ್ಣ, ದಿನೇಶ್‌ ಕುಮಾರ್‌, ಪ್ರಕಾಶ್‌ ನೆಡಂಗಡಿ, ಡಾ. ಸತೀಶ್‌ ಕುಮಾರ್‌, ಚನ್ನಬಸಪ್ಪ ಹಾಗೂ ಇತರೆ ಮುಖಂಡರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Last Updated :Sep 15, 2021, 9:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.