ETV Bharat / state

ಕಾಲುವೆ,ಕೆರೆ, ಜಲಾಶಯಗಳಿಂದ ಒದಗಿಸುವ ನೀರಿಗೆ ಪ್ರತಿ‌ ಎಂಸಿ‌ಎಫ್​ಟಿಗೆ 3 ಲಕ್ಷ ರೂ. ರಾಜಧನ ನಿಗದಿ

author img

By ETV Bharat Karnataka Team

Published : Dec 22, 2023, 6:59 AM IST

ಪ್ರತಿ ಎಂಸಿಎಫ್​ಟಿ ನೀರಿಗೆ ಮೂರು ಲಕ್ಷ ರೂಪಾಯಿ ರಾಜಧನ ನಿಗದಿ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಸಚಿವ ಎಚ್ ಕೆ ಪಾಟೀಲ್
ಸಚಿವ ಎಚ್ ಕೆ ಪಾಟೀಲ್

ಬೆಂಗಳೂರು : ನೀರಿನ ಕರ ದರ ಇನ್ನು ಮುಂದೆ ವಾರ್ಷಿಕ ಹಣದುಬ್ಬರ ಸೂಚ್ಯಂಕಕ್ಕೆ ಸಂವಾದಿಯಾಗಿ ಹೆಚ್ಚಳ ಮಾಡುವ ಷರತ್ತಿನೊಂದಿಗೆ ನೀರಿನ ಕರ ವಿಧಿಸುವಿಕೆ ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ. ಪ್ರತಿ ಎಂಸಿಎಫ್​ಟಿ ನೀರಿಗೆ ಮೂರು ಲಕ್ಷ ರೂಪಾಯಿ ರಾಜಧನ ನಿಗದಿ ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ವಿಧಾನಸೌಧದಲ್ಲಿ ನಿನ್ನೆ ನಡೆದ ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು, ಈ ಹಿಂದೆ ಎಂಸಿಎಫ್​ಟಿಗೆ ಒಂದು ಲಕ್ಷ ರೂ. ಗೂ ಕಡಿಮೆ ರಾಜಧನ ನಿಗದಿಯಾಗಿತ್ತು. ಕಾಲುವೆ, ಕೆರೆ, ಜಲಾಶಯಗಳಿಂದ ಒದಗಿಸುವ ನೀರಿಗೆ ಪ್ರತಿ‌ ಎಂಸಿ‌ಎಫ್​ಟಿ ಗೆ 3 ಲಕ್ಷ ರೂ. ರಾಜಧನ, ನೈಸರ್ಗಿಕ ಜಲಮಾರ್ಗ, ನದಿ, ಹಳ್ಳಗಳಿಂದ ಪ್ರತಿ ಎಸಿಎಫ್​ಟಿ ಗೆ 1.50 ಲಕ್ಷ ರೂ. ರಾಜಧನ ನಿಗದಿಗೊಳಿಸಲಾಗಿದೆ ಎಂದು ಹೇಳಿದರು.

ಎಡಿಬಿ ಯೋಜನೆಯಡಿ ಮಂಗಳೂರು ನಗರದಲ್ಲಿ 24/7 ನೀರು ಸರಬರಾಜು ಕಾಮಗಾರಿಯಲ್ಲಿ ಹೊಸದಾಗಿ 125 ಎಂಎಲ್​ಡಿ ನೀರು ಶುದ್ದೀಕರಣ ಘಟಕ 127.70 ಕೋಟಿ‌ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದರು. ಬಿಬಿಎಂಪಿ ಬಾಕಿ ತೆರಿಗೆ ಸಂಗ್ರಹಕ್ಕೆ ಒನ್ ಟೈಂ ಸೆಟಲ್‌ಮೆಂಟ್​ ಅವಧಿ ವಿಸ್ತರಣೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. 2024ರ ಜೂನ್ 30ರವರೆಗೆ ಒನ್ ಟೈಂ ಸೆಟಲ್‌ಮೆಂಟ್ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಸರ್ಕಾರದ ಹಣ ಬೇರೆ ಬೇರೆ ಬ್ಯಾಂಕ್​ಗಳಲ್ಲಿ ಠೇವಣಿ ಇಟ್ಟಿರುವ ವಿಚಾರವಾಗಿ ಮಾತನಾಡಿದ್ದು, ಠೇವಣಿ ಹಣ ಗುರುತಿಸಿ ವಾಪಸ್ ತರಲು ಸಂಪುಟ ಉಪಸಮಿತಿ ರಚನೆ ಮಾಡಲಾಗಿದೆ. ಕೋಟ್ಯಂತರ ಹಣ ಅಧಿಕಾರಿಗಳು ದುರುಪಯೋಗ ಮಾಡಿರುವ ಮಾಹಿತಿ ಇದೆ. ಹಿಂದೆ 680 ಕೋಟಿ ರೂ.‌ ಇದೇ ರೀತಿ ಪತ್ತೆ ಹಚ್ಚಲಾಗಿತ್ತು. ಈಗ ಮತ್ತೆ ಅಂತಹ ಪ್ರಕರಣಗಳನ್ನು ತನಿಖೆ ಮಾಡಲಾಗುವುದು ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ : ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಿನ್ನೆ ಸಚಿವ ಸಂಪುಟ ಸಭೆ ನಡೆದಿದ್ದು, ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಸರ್ಕಾರ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಸಮ್ಮೇಳನ ಸಭಾಂಗಣದಲ್ಲಿ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ: ಮಹತ್ವದ ನಿರ್ಣಯಗಳು ಹೀಗಿವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.