ETV Bharat / state

ಕೆರೆಯೂ ಇಲ್ಲ, ದಾರಿಯೂ ಇಲ್ಲ: ಕಸಾಘಟ್ಟದಲ್ಲಿ ಜಾನುವಾರುಗಳ ಸಂಕಷ್ಟಕ್ಕೆ ಕೊನೆ ಎಂದು?

author img

By

Published : Aug 4, 2021, 7:36 AM IST

ದೊಡ್ಡಬಳ್ಳಾಪುರ ತಾಲೂಕಿನ ಕಸಾಘಟ್ಟ ಗ್ರಾಮದಲ್ಲಿ 150 ಕುಟುಂಬಗಳು ವಾಸಿಸುತ್ತಿವೆ. 200ಕ್ಕೂ ಹೆಚ್ಚು ಜಾನುವಾರುಗಳಿವೆ. ಅವರೆಲ್ಲಾ ಪಶುಸಂಗೋಪನೆಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಇಲ್ಲಿನ ಕೆಲ ಜನರು ಜಾನುವಾರುಗಳಿಗಿದ್ದ ಭೂಮಿಯನ್ನು ಕಬಳಿಕೆ ಮಾಡಿದ್ದಾರೆ.

doddaballapura
ಜಾನುವಾರುಗಳ ಸಂಕಷ್ಟ

ದೊಡ್ಡಬಳ್ಳಾಪುರ: ಗ್ರಾಮದಲ್ಲಿನ ಗುಂಡುತೋಪು, ಗೋಕಟ್ಟೆಯನ್ನು ಒತ್ತುವರಿ ಮಾಡಲಾಗಿದೆ. ಈಗಾಗಲೇ ಸರ್ಕಾರಿ ಜಾಗವೆಲ್ಲ ಕಬಳಿಕೆಯಾಗಿದ್ದು ಕೆರೆಯಂಗಳ ಮಾತ್ರವೇ ಜಾನುವಾರುಗಳಿಗೆ ಮೇವಿನ ತಾಣವಾಗಿತ್ತು. ಈಗ ಆ ಕೆರೆಯಂಗಳಕ್ಕೂ ಕಾಲಿಟ್ಟಿರುವ ಭೂಗಳ್ಳರು ಕೆರೆಗೆ ಹೋಗಲು ದಾರಿ ಇಲ್ಲದಂತೆ ಒತ್ತುವರಿ ಮಾಡಿಕೊಂಡು ಬರುತ್ತಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಕಸಾಘಟ್ಟ ಗ್ರಾಮದಲ್ಲಿ 150 ಕುಟುಂಬಗಳಿವೆ. 200ಕ್ಕೂ ಹೆಚ್ಚು ಜಾನುವಾರುಗಳಿವೆ. ಪಶುಸಂಗೋಪನೆಯನ್ನೇ ನಂಬಿಕೊಂಡು ಇಲ್ಲಿನ ಜನರು ಜೀವನ ನಡೆಸುತ್ತಿದ್ದಾರೆ. ಜಾನುವಾರುಗಳಿಗೆ ಸಮೃದ್ಧವಾದ ಮೇವು ಗುಂಡುತೋಪು, ಕೆರೆಯಂಗಳದಲ್ಲಿ ಸಿಕ್ಕರೆ, ಕುಡಿಯುವ ನೀರು ಗೋಕಟ್ಟೆಗಳಿಂದ ಸಿಗುತ್ತಿತ್ತು. ಇನ್ನು ಮೇವು ಮತ್ತು ನೀರು ಸಿಗುತ್ತಿದ್ದರಿಂದ ಪಶುಸಂಗೋಪನೆ ಕಸಾಘಟ್ಟ ರೈತರ ಪ್ರಮುಖ ಉದ್ಯೋಗವಾಗಿತ್ತು.

ಸಮಸ್ಯೆ ಹೇಳುತ್ತಿರುವ ಗ್ರಾಮದ ಜನರು

ಗ್ರಾಮದಲ್ಲಿ ಸರ್ಕಾರಿ ಗುಂಡುತೋಪಿನಲ್ಲಿ 4 ಎಕರೆ, ಗೋಮಾಳದಲ್ಲಿ 184 ಎಕರೆ, ಗೋಕಟ್ಟೆಯಲ್ಲಿ 3 ಎಕರೆ, ಕೆರೆಯಂಗಳದಲ್ಲಿ 62 ಎಕರೆ, ಸರ್ಕಾರಿ ತೋಪಿನಲ್ಲಿ 8 ಎಕರೆ ಇದೆ. ಗ್ರಾಮದ ಅಭಿವೃದ್ಧಿಗಾಗಿ ಸರ್ಕಾರಿ ಜಾಗ ಬಳಕೆಯಾಗಬೇಕಿತ್ತು. ಆದರೆ ಗ್ರಾಮದ ಬಲಾಢ್ಯರು ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಜಾನುವಾರುಗಳು ಮೇಯಲು ಜಾಗವಿಲ್ಲದಂತೆ ಮಾಡಿದ್ದಾರೆ.

ಕೆರೆಯಂಗಳದ ಜೊತೆಗೆ ಕೆರೆಯ ದಾರಿಯನ್ನು ಕಬಳಿಸಿದ ಭೂಗಳ್ಳರು: ಕಸಾಘಟ್ಟ ಗ್ರಾಮದ ಸರ್ವೆ ನಂಬರ್ 36ರಲ್ಲಿ 62 ಎಕರೆ ಕೆರೆ ಇದೆ. ಸದ್ಯ ಗ್ರಾಮದಲ್ಲಿನ 200ಕ್ಕೂ ಹೆಚ್ಚು ಜಾನುವಾರುಗಳಿಗೆ ಕೆರೆಯಂಗಳ ಮೇವಿನ ತಾಣವಾಗಿದೆ. ಆದರೆ ಕೆರೆಯ ಅಂಚಿನಲ್ಲಿರುವ ರೈತರು ಕೆರೆಯಂಗಳವನ್ನು ಕ್ರಮೇಣವಾಗಿ ಒತ್ತುವರಿ ಮಾಡುತ್ತಿದ್ದಾರೆ. ಒತ್ತುವರಿ ಮಾಡಿದ ಜಾಗದಲ್ಲಿ ಅಡಿಕೆ, ಜೋಳ ಹಾಗು ತರಕಾರಿ ಬೆಳೆಯುತ್ತಿದ್ದಾರೆ. ಬೆಳೆಗಳ ರಕ್ಷಣೆಗಾಗಿ ಮುಳ್ಳಿನ ಬೇಲಿ ಅಳವಡಿಸಿದ್ದಾರೆ. ಇದರಿಂದ ಕೆರೆಗೆ ಬರಲು ದಾರಿಯೇ ಇಲ್ಲದಂತಾಗಿದೆ. ಒತ್ತುವರಿ ಜಾಗದಲ್ಲಿ ಜಾನುವಾರುಗಳು ಹೋದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾರೆ ಎಂದು ಇಲ್ಲಿನ ಜನರು ಆರೋಪಿಸಿದ್ದಾರೆ.

ಒತ್ತುವರಿ ತೆರವು ಮಾಡುವಂತೆ ತಹಶೀಲ್ದಾರ್​ ನೋಟಿಸ್: ಗ್ರಾಮದ ಮುತ್ತುರಾಯಪ್ಪ ಎಂಬವರು ಸರ್ವೆ ನಂಬರ್ 207ರ ಗೋಕಟ್ಟೆ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿದ್ದಾರೆ. ಸರ್ವೆ ನಂಬರ್ 36ರ ಕೆರೆಯಂಗಳವನ್ನು ಒತ್ತುವರಿ ಮಾಡಿಕೊಂಡು ತೋಟವನ್ನಾಗಿ ಪರಿವರ್ತಿಸಿದ್ದಾರೆ. ಈಗಾಗಲೇ ಒತ್ತುವರಿ ತೆರವು ಮಾಡುವಂತೆ ತಹಶೀಲ್ದಾರ್ ಕಚೇರಿಯಿಂದ ನೋಟಿಸ್ ನೀಡಲಾಗಿದೆ. ಇದ್ಯಾವುದಕ್ಕೂ ಕೇರ್ ಮಾಡದ ಮುತ್ತುರಾಯಪ್ಪ ಕೆರೆಯಂಗಳವನ್ನು ದಿನೇ ದಿನೇ ಒತ್ತುವರಿ ಮಾಡಿಕೊಂಡು ಗ್ರಾಮಸ್ದರ ಮೇಲೆ ತನ್ನ ದರ್ಪ ತೋರಿಸುತ್ತಿದ್ದಾನಂತೆ. ಕೆರೆಯಂಗಳದಲ್ಲಿ ಬೋರ್‌ವೆಲ್ ಕೊರೆದು ತನ್ನ ತೋಟಕ್ಕೆ ನೀರಿನ ಸೌಲಭ್ಯವನ್ನು ಕಲ್ಪಿಸಿದ್ದಾನೆ. ಈ ಬಗ್ಗೆ ಗ್ರಾಮಸ್ಥರು ಪ್ರಶ್ನೆ ಮಾಡಿದರೆ, ಧಮ್ಕಿ ಹಾಕಿ ಬೆದರಿಸುತ್ತಾನೆಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.