ETV Bharat / sports

ಪ್ರೊ ಕಬಡ್ಡಿ ಲೀಗ್‌: ಭರತ್​ ಸೂಪರ್​ 10 ವ್ಯರ್ಥ, ಪ್ಯಾಂಥರ್ಸ್ ಅಬ್ಬರಕ್ಕೆ ಮಂಕಾದ ಬುಲ್ಸ್

author img

By

Published : Dec 1, 2022, 7:58 AM IST

pro-kabaddi-league-jaipur-pink-panthers-beat-bengaluru-bulls
ಪ್ರೋ ಕಬಡ್ಡಿ ಲೀಗ್‌: ಭರತ್​ ಸೂಪರ್​ 10 ವ್ಯರ್ಥ, ಪ್ಯಾಂಥರ್ಸ್ ಅಬ್ಬರದೆದುರು ಮಂಕಾದ ಬುಲ್ಸ್

ಪ್ರೊ ಕಬಡ್ಡಿ ಲೀಗ್‌ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಬೆಂಗಳೂರು ಬುಲ್ಸ್ ವಿರುದ್ಧ 45-25 ಅಂಕಗಳ ಅಂತರದ ಬೃಹತ್​ ಗೆಲುವು ದಾಖಲಿಸಿದೆ.

ಹೈದರಾಬಾದ್: ಇಲ್ಲಿನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪ್ರೊ ಕಬಡ್ಡಿ ಲೀಗ್‌ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಬೆಂಗಳೂರು ಬುಲ್ಸ್ ವಿರುದ್ಧ 45-25 ಅಂಕಗಳ ಅಂತರದ ಭರ್ಜರಿ ಜಯ ದಾಖಲಿಸಿದೆ. ಜೈಪುರ ತಂಡದ ಪರ ಅರ್ಜುನ್ ದೇಶ್ವಾಲ್ ಮತ್ತು ವಿ ಅಜಿತ್ ಮಿಂಚಿನ ಆಟ ಪ್ರದರ್ಶಿಸಿದರು.

ಭರತ್ ಅವರ ಮತ್ತೊಂದು ಸೂಪರ್ 10 ಹೊರತಾಗಿಯೂ ಬುಲ್ಸ್​ ನಿರೀಕ್ಷಿತ ಆಟ ತೋರಲಿಲ್ಲ. ಬುಲ್ಸ್‌ ಪರ ಭರತ್ ಮೊದಲ ಅಂಕ ಗಳಿಸಿದರೆ, ನಿಧಾನಗತಿಯ ಆರಂಭ ಪಡೆದ ಜೈಪುರವು ಅಂಕಗಳಿಗಾಗಿ ರಾಹುಲ್ ಚೌಧರಿ ಮತ್ತು ಸಾಹುಲ್ ಕುಮಾರ್‌ಗೆ ಅವರನ್ನು ನೆಚ್ಚಿಕೊಂಡಿತು.

ಪಿಂಕ್ ಪ್ಯಾಂಥರ್ಸ್‌ ಡಿಫೆನ್ಸ್ ವಿಭಾಗ ಉತ್ತಮ ಫಾರ್ಮ್‌ನಲ್ಲಿದ್ದು, ಆಟ ರೋಚಕತೆ ಹೆಚ್ಚಿಸಿತು. ಪ್ಯಾಂಥರ್ಸ್‌ ಆಟಗಾರರು ಕೆಲವು ಅದ್ಭುತ ಟ್ಯಾಕಲ್‌ಗಳೊಂದಿಗೆ ಬೆಂಗಳೂರು ಬುಲ್ಸ್‌ ದಾಳಿಯನ್ನು ಹಿಮ್ಮೆಟ್ಟಿಸಿದರು. ಸಹಲ್ ಕುಮಾರ್ ಮತ್ತು ಅಂಕುಶ್ ಸೇರಿ ಎಲ್ಲರೂ ಟ್ಯಾಕಲ್ ಪಾಯಿಂಟ್‌ ದೋಚಿದರು. ಪಂದ್ಯದ ಮೊದಲ 10 ನಿಮಿಷಗಳಲ್ಲೇ ಜೈಪುರಕ್ಕೆ 4 ಪಾಯಿಂಟ್ ಮುನ್ನಡೆ ಒದಗಿಸಿದರು.

ಆಕ್ರಮಣಕಾರಿ ಆಟ ಮುಂದುವರೆಸಿದ ಅರ್ಜುನ್ ಮತ್ತು ಅಜಿತ್ ಜೈಪುರದ ಅಂಕಗಳ ಮುನ್ನಡೆಯನ್ನು ಮತ್ತಷ್ಟು ಹಿಗ್ಗಿಸಿದರು. ಮೊದಲಾರ್ಧದ ಅಂತ್ಯಕ್ಕೆ ಪ್ಯಾಂಥರ್ಸ್ ತಂಡ ಬುಲ್ಸ್ ವಿರುದ್ಧ 25-10ರಿಂದ ಮುನ್ನಡೆಯಲ್ಲಿತ್ತು.

ಬೆಂಗಳೂರು ತಂಡಕ್ಕೆ ದ್ವಿತೀಯಾರ್ಧದಲ್ಲಿ ಭರತ್‌ಗೆ ಸಹ ಆಟಗಾರರ ಬೆಂಬಲದ ಅಗತ್ಯವಿತ್ತು. ಆದರೆ ಪ್ಯಾಂಥರ್ಸ್ ತಂಡದ ಅರ್ಜುನ್ ಹಾಗೂ ಇತರರು ಮೇಲುಗೈಗೆ ಕಾರಣರಾದರು. ಭರತ್ ಏಕಾಂಗಿ ಹೋರಾಟ ನಡೆಸಿದರೂ ಕೂಡ ಎದುರಾಳಿಗಳ ಅಬ್ಬರದ ಮುಂದೆ ಬುಲ್ಸ್​ ಆಟ ಮಂಕಾಯಿತು. ಪ್ಯಾಂಥರ್ಸ್​ನ ಅಂಕುಶ್ ಮತ್ತು ರೆಜಾ ಮಿರ್ಬಘೇರಿ ರಕ್ಷಣೆಯಲ್ಲಿ ಯಶಸ್ಸು ಕಂಡರೆ, ಅರ್ಜುನ್ ಸೂಪರ್ 10 ಸಂಭ್ರಮಿಸಿದರು.

ಅಂತಿಮ 10 ನಿಮಿಷಗಳು ಸಮೀಪಿಸುತ್ತಿದ್ದಂತೆ, ಬೆಂಗಳೂರು 20 ಪಾಯಿಂಟ್‌ಗಳ ಹಿನ್ನಡೆಯಲ್ಲಿತ್ತು. ಪಂದ್ಯದುದ್ದಕ್ಕೂ ಸ್ಥಿರ ಪ್ರದರ್ಶನ ತೋರಿದ ಜೈಪುರ ತಂಡ ಅಂತಿಮ ಕ್ಷಣಗಳಲ್ಲೂ ಪಾಯಿಂಟ್ಸ್​ ಕೈಚೆಲ್ಲಲಿಲ್ಲ. ಅಂತಿಮವಾಗಿ 45-25 ಅಂಕಗಳ ನಿರಾಯಾಸ ಗೆಲುವು ಸಾಧಿಸಿತು.

ಈ ಗೆಲುವಿನೊಂದಿಗೆ ಜೈಪುರ ಪಿಂಕ್ ಪ್ಯಾಂಥರ್ಸ್ 69 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 69 ಅಂಕ ಹೊಂದಿರುವ ಪುಣೆರಿ ಪಲ್ಟಾನ್ ಎರಡನೇ ಸ್ಥಾನ ಹಾಗೂ 63 ಪಾಯಿಂಟ್ಸ್​​ನೊಂದಿಗೆ ಬೆಂಗಳೂರು ಬುಲ್ಸ್​ ಮೂರನೇ ಸ್ಥಾನದಲ್ಲಿದೆ.

ರೋಚಕ ಟೈ: ಬುಧವಾರದ ಮತ್ತೊಂದು ಹಣಾಹಣಿಯಲ್ಲಿ ದಬಾಂಗ್ ಡೆಲ್ಲಿ ಮತ್ತು ತಮಿಳ್ ತಲೈವಾಸ್ ತಂಡಗಳು 37-37ರ ರೋಚಕ ಟೈ ಸಾಧಿಸಿದವು. ದಬಾಂಗ್ ಡೆಲ್ಲಿ ಪರ ನವೀನ್ ಕುಮಾರ್ (15 ಅಂಕ) ಮತ್ತು ತಮಿಳ್ ತಲೈವಾಸ್‌ನ ಸ್ಟಾರ್ ರೈಡರ್ ನರೇಂದರ್ (14 ಅಂಕ) ಭರ್ಜರಿ ಪ್ರದರ್ಶನ ನೀಡಿದರು.

ಇದನ್ನೂ ಓದಿ: ಮ್ಯಾಚ್​ ವಿನ್ನರ್​ ಪಂತ್, ಸಂಜು ಸ್ಯಾಮ್ಸನ್ ಅವಕಾಶಕ್ಕೆ ಕಾಯುವ ಅಗತ್ಯ ಇದೆ: ಶಿಖರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.